ಶ್ರೀರಾಮಚಂದ್ರರ ಪರಿವಾರದ ಒಂದು ಪರಿ, ಕನಕ ಮತ್ತು ಅವರ ಶಿಷ್ಯಂದಿರ ಇನ್ನೊಂದು ಪರಿ. ಎರಡನ್ನೂ ಗಮನಿಸಿದರೆ, ಇವೆರಡೂ ಭಿನ್ನ ಪ್ರಕೃತಿಯ ಸನ್ನಿವೇಶಗಳು ಎನ್ನುತ್ತದೆ ಲೇಖಕ ರಾಮಕೃಷ್ಣ ಮರಾಠೆ ಅವರ ‘ರಾಮಧಾನ್ಯ’ ಕೃತಿ. ‘ಕನಕದಾಸರ ರಾಮಧಾನ್ಯ ಚರಿತೆ’ ಆಧಾರಿತ ನಾಟಕವಿದು. ಮುಖ್ಯವಾಗಿ ಈ ನಾಟಕ ಎರಡು ನೆಲೆಗಳಲ್ಲಿ ನಡೆಯುತ್ತದೆ. ಒಂದು ರಾಗಿ ರಾಮಧಾನ್ಯವಾದ ಕಥೆ. ಮತ್ತೊಂದು ತಿಮ್ಮಪ್ಪನಾಯಕ ಕನಕದಾಸನಾದ ಕಥೆ. ಎರಡೂ ಒಂದಕ್ಕೊಂದು ಸೇರಿ ನಾಟಕದ ಧ್ವನಿಯನ್ನು ವಿಸ್ತರಿಸಿವೆ. ಈ ಕಾವ್ಯ ಎರಡೆರಡು ದೃಶ್ಯಾವಳಿಗಳನ್ನು, ಘಟನೆಗಳನ್ನು ತೋರಿಸುತ್ತಲೇ ಒಂದು ತಾತ್ವಿಕ ಸಿದ್ಧಾಂತದ ಕಡೆಗೆ ಕರೆದೊಯ್ಯುತ್ತದೆ. ವೈವಿಧ್ಯತೆ ಮೇಲು- ಕೀಳೆಂಬ ಭಾವನೆಗೆ ತುತ್ತಾಗಬಾರದು. ಎಲ್ಲವೂ ಪರಮಾತ್ಮನ ನಿರ್ಮಿತಿ ಎಂದ ಮೇಲೆ ಮೇಲು-ಕೀಳು ಎಂಬುದು ತಪ್ಪು. ಈ ಸಂದೇಶವನ್ನೇ ಸಾರುವ ಉದ್ದೇಶ ‘ರಾಮಧ್ಯಾನ’ ಕಾವ್ಯಕ್ಕಿದೆ. ಇಲ್ಲಿ ಭತ್ತ ಮತ್ತು ರಾಗಿಯ ವಾರ್ತಾಲಾಪ ಸ್ವಾಭಾವಿಕವಾಗಿದೆ. ಭತ್ತಕ್ಕೆ ಮಾಂಗಲ್ಯದ ಸ್ಪರ್ಶವಿದೆ. ರಾಗಿ ಅಮಂಗಲವಲ್ಲ ಎಂಬ ಮಾತು ಕೂಡ ಸ್ಪಷ್ಟವಾಗಿದೆ. ರಾಮಧಾನ್ಯ ಚರಿತೆಯು ಕನಕದಾಸರ ಅದ್ಭುತ ಪ್ರತಿಭೆಯಿಂದ ಹೊರಹೊಮ್ಮಿದ ಅನ್ಯೋಕ್ತಿಕಾವ್ಯ. ಭೂಮಿಕೆಯಲ್ಲಿ ಕಾಣಬಹುದಾದ ಪಾತ್ರಗಳು; ಕನಕದಾಸ, ದೊಡ್ಡದಾಸಯ್ಯ, ಸಣ್ಣ ದಾಸಯ್ಯ, ರಾಮ, ಲಕ್ಷಣ, ಭರತ, ಶತೃಘ್ನ, ಹನುಮ, ಸೀತೆ, ರಾಗಿ, ಭತ್ತ, ಆದಿವಾಸಿ ಹೆಂಗಸರು, ಸೂರ್ಯಕಾಂತಿ, ಜೋಳ, ಗೋಧಿ, ಮಹರ್ಷಿಗಳು, ನೃತ್ಯಗಾರ್ತಿಯರು ಇಲ್ಲಿ ಬಹು ಮುಖ್ಯವಾಗಿದ್ದಾರೆ.
©2024 Book Brahma Private Limited.