ಭಾರತೀಯ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ನಾಲ್ವರು ಶ್ರೇಷ್ಠ ನಾಟಕಕಾರರೆಂದು ಹೆಸರಾದವರು ಮರಾಠಿಯ ವಿಜಯ್ ತೆಂಡೂಲ್ಕರ್, ಮಹೇಶ್ ಎಲಕುಂಚವಾರ, ಹಿಂದಿಯ ಹಬೀಬ್ ತನ್ವೀರ್ ಹಾಗೂ ಕನ್ನಡದ ಗಿರೀಶ ಕಾರ್ನಾಡರು. ಮಹೇಶ್ ಎಲಕುಂಚವಾರರ ‘ಚಿರೇಬಂದಿ ವಾಡೆ’ ನಾಟಕವು ನೀನಾಸಂ ತಿರುಗಾಟದ ಭಾಗವಾಗಿ ಪ್ರದರ್ಶಿತಗೊಂಡು ಕನ್ನಡದ ರಂಗಾಸಕ್ತರ ಮನಸ್ಸಲ್ಲಿ ಮೂಡಿಸಿದ ಛಾಪು ಅಚ್ಚಳಿಯದಂಥದ್ದು. ಅದಾದ ದಶಕಗಳ ನಂತರ ಅಷ್ಟೇ ಸಶಕ್ತವಾಗಿ ಕನ್ನಡೀಕರಣಗೊಂಡು ಬಂದಿರುವ ಅವರದೇ ಮತ್ತೊಂದು ಧ್ವನಿಪೂರ್ಣ ನಾಟಕ ಈ ‘ಹೋಳಿ’.ಒಂದೇ ದಿನದಲ್ಲಿ ನಡೆಯುವ ಈ ಒಂದಂಕದ ನಾಟಕದಲ್ಲಿ- ಕಾಲೇಜು ಹಾಸ್ಟೆಲಿನಲ್ಲಿರುವ ವಿದ್ಯಾರ್ಥಿಗಳು ಹೋಳಿ ಹಬ್ಬಕ್ಕಾಗಿ ರಜೆ ಬೇಕು ಎಂಬ ಬೇಡಿಕೆಯನ್ನು ಕೇಂದ್ರವಾಗಿಟ್ಟುಕೊಂಡು ಶುರು ಮಾಡುವ ಮಾತುಕತೆಯು, ವೈಯಕ್ತಿಕ ತೇಜೋವಧೆಯತ್ತ ತಿರುಗಿದ ಪರಿಣಾಮವಾಗಿ, ಇಬ್ಬರು ಹುಡುಗರ ಜಗಳ ವಿಪರೀತಕ್ಕೆ ತಲುಪುತ್ತದೆ. ಪ್ರಿನ್ಸಿಪಾಲರು ತನ್ನ ಸಂಬಂಧಿಯಾದವನನ್ನು ಬಿಟ್ಟು, ತೇಜೋವಧೆಗೊಳಗಾದವನನ್ನೇ ಕಾಲೇಜಿನಿಂದ ರಸ್ಟಿಕೇಟ್ ಮಾಡಿ ತಾರತಮ್ಯ ಪ್ರದರ್ಶಿಸುತ್ತಾರೆ. ಕುಪಿತರಾದ ವಿದ್ಯಾರ್ಥಿಗಳು ಕಾಲೇಜಿಗೆ ಕರೆಸಲಾಗಿದ್ದ ಅತಿಥಿಗೆ ಪ್ರಿನ್ಸಿಪಾಲರೆದುರೇ ಸಭೆಯಲ್ಲೇ ಗೋಳು ಹೊಯ್ದುಕೊಂಡು, ಮೊಟ್ಟೆ ಎಸೆದು ತೀವ್ರ ಅವಮಾನ ಉಂಟು ಮಾಡುತ್ತಾರೆ. ಇವರ ಮೇಲೆ ಕ್ರಮಕ್ಕೆ ಮುಂದಾಗುವ ಪ್ರಿನ್ಸಿಪಾಲರಿಗೆ ಇವರೆಲ್ಲರ ಹೆಸರನ್ನು ಆನಂದನೆಂಬುವವನು ನೀಡಿದ್ದು ಗೊತ್ತಾದ ಮೇಲೆ ಈ ಹುಡುಗರೆಲ್ಲ ಸೇರಿ ಆನಂದನಿಗೆ ಸೀರೆ ಉಡಿಸಿ, ಕಾಡಿಸಿ ಅವಮಾನ ಮಾಡುವುದಲ್ಲದೆ ‘ನಾಳೆ ಹುಬ್ಬು ಬೋಳಿಸಿ ಕಾಲೇಜಿನಲ್ಲಿ ಮೆರವಣಿಗೆ ಮಾಡುತ್ತೇವೆ’ ಎಂದು ಹೇಳಿ, ಕೋಣೆಯಲ್ಲಿ ಕೂಡಿ ಹಾಕುತ್ತಾರೆ. ಅವಮಾನ ತಾಳಲಾಗದ ಆನಂದ ಆತ್ಮಹತ್ಯೆ ಮಾಡಿಕೊಂಡ ಪರಿಣಾಮವಾಗಿ ವಿದ್ಯಾರ್ಥಿಗಳ ‘ಪೋಲಿಸ್ ವಿಚಾರಣೆ’ ಶುರುವಾಗುವುದರೊಂದಿಗೆ ನಾಟಕ ಮುಗಿಯುತ್ತದೆ.ಕೇವಲ ಐವತ್ತು ಪುಟಗಳಲ್ಲಿ ಹರಡಿಕೊಂಡಿರುವ ಈ ನಾಟಕ ಎಷ್ಟೊಂದು ಬಗೆಯ ವ್ಯಕ್ತಿತ್ವಗಳ ಬಗ್ಗೆ, ಜೀವನಶೈಲಿಗಳ ಬಗ್ಗೆ, ಮನಸ್ಥಿತಿಗಳ ಬಗ್ಗೆ ಮಾತಾಡುತ್ತದಲ್ಲ ಎಂದು ಆಶ್ಚರ್ಯವಾಗುತ್ತದೆ. ಆರ್ಥಿಕತೆಗೂ ಐಶಾರಾಮಿ ಜೀವನಶೈಲಿಗೂ ಇರುವ ಸಂಬಂಧ (ಬ್ಯಾನರ್ಜಿಯ ತಾಯಿ), ಅನಾಥ ಬಾಲ್ಯಕ್ಕೂ ಅಪರಾಧೀ ಕೌಮಾರ್ಯಕ್ಕೂ ಇರುವ ಸಂಬಂಧ (ರಣಜಿತ್) ಮತ್ತು ಜಾತಿಗಳಿಗೂ ಮನಸ್ಥಿತಿಗಳಿಗೂ ಇರುವ ಸಂಬಂಧ (ಶ್ರೀವಾಸ್ತವ, ದೇಶಮುಖ, ಕಾಟಕರ್, ವಣಕರ್, ಠಾಕೂರ್, ಪಾಟೀಲ, ಮ್ಹಾತ್ರೆ)ಗಳ ಸ್ವರೂಪಗಳು ಬಹಳ ಸೂಚ್ಯವಾಗಿ, ಸೂಕ್ಷ್ಮ ಒಳನೋಟಗಳಲ್ಲಿ ಕೆತ್ತಲ್ಪಟ್ಟಿವೆ. ಯೌವನದ ವಯೋಸಹಜ ‘ಆವೇಶ’ವು ಹೇಗೆ ವಿದ್ಯಾರ್ಥಿಗಳ ಬದುಕನ್ನು ಆಪೋಶನ ತೆಗೆದುಕೊಂಡುಬಿಡುತ್ತದೆ ಎಂಬುದರ ಬಗ್ಗೆ ಕೊನೆಯಲ್ಲಿ ಒಂದು ವಿಷಾದ ಭಾವವು ಓದುಗನಲ್ಲಿ ಜಾಗೃತವಾಗುವಂತೆ ನಾಟಕದ ಸಂಘರ್ಷವನ್ನು ಕ್ರಮೇಣವಾಗಿ ಉತ್ಕರ್ಷಕ್ಕೇರಿಸುತ್ತ ಪರಾಕಾಷ್ಠೆಯ ಸ್ಥಿತಿಗೆ ತಲುಪಿಸುತ್ತಾರೆ ನಾಟಕಕಾರರು. ಆವೇಶ ಮತ್ತು ಆಲೋಚನೆಗಳ ಕವಲಿನಲ್ಲಿ ಸರಿ ಆಯ್ಕೆ ತೋಚದೆ ಕಂಗಾಲಾಗಿ ನಿಂತಿರುವ ಯುವಸಮೂಹಕ್ಕೆ ಸಂಬಂಧಿಸಿದಂತೆ ಕುಟುಂಬ, ಸಮಾಜ ಮತ್ತು ಶಿಕ್ಷಣ ವ್ಯವಸ್ಥೆ ವಹಿಸಬೇಕಾದ ಜವಾಬ್ದಾರಿಯತ್ತ ಮಿತ್ರಸಂಹಿತೆ ಮಾದರಿಯಲ್ಲಿ ನಮ್ಮ ಗಮನ ಸೆಳೆಯುತ್ತಿದೆ ಈ ನಾಟಕ.ಸಮೂಹಗತಿಶಾಸ್ತ್ರದ ಸ್ವಭಾವ, ರಕ್ಷಣಾತ್ಮಕ ತಂತ್ರಗಳ ಪ್ರಭಾವ, ದೂರಗಾಮಿ ಪರಿಣಾಮಗಳ ವಿವೇಚನೆಯ ಅಭಾವ ಹೀಗೆ ಅದೆಷ್ಟೋ ಅಂಶಗಳು ಇಲ್ಲಿನ ಪಾತ್ರಗಳ ಮೂಲಕ ಅನಾವರಣಗೊಂಡಿವೆ. ಇಲ್ಲಿರುವ ಅಶ್ಲೀಲ ಪದಗಳು ಎಲ್ಲೂ ಅಶ್ಲೀಲವೆನಿಸದಿರಲು ಕಾರಣ ಅವುಗಳನ್ನು ನುಡಿಯುವ ಪಾತ್ರಗಳ ವಯಸ್ಸು ಮತ್ತು ಮನಸ್ಸುಗಳಿಗೆ ಅವು ಅನುಗುಣವಾಗಿರುವುದೇ ಆಗಿದೆ. ಮುಖ್ಯವಾಗಿ ಈ ನಾಟಕದ ಶಕ್ತಿ ಅಡಗಿರುವುದೇ ಅದರ ಭಾಷೆಯ ಸೌಂದರ್ಯದಲ್ಲಿ ಮತ್ತು ಆ ಮೂಲಕ ಅದು ಹೊಮ್ಮಿಸಲು ಬಯಸುತ್ತಿರುವ ಆಳದ ಸಾಮಾಜಿಕ ಕಾಳಜಿಯಲ್ಲಿ. ಆ ವಯೋಮಾನದ, ಸ್ವಭಾವದ ಕನ್ನಡಿಯಂತಿರುವ ಭಾಷೆಯನ್ನು ಹಾಗೆ ಇಲ್ಲಿ ತುಂಬಾ ಕೌಶಲಪೂರ್ಣವಾಗಿ ಬಳಸಲಾಗಿದೆ. ಹಾಗೆಯೇ ಯೌವನವೆಂಬ ಹುದಲಿನ ಹೊಳೆಯಲ್ಲಿ ಆಡಾಡ್ತಾ ಪ್ರಾಣ ಕಳೆದುಕೊಳ್ಳುವ ವಿದ್ಯಾರ್ಥಿಗಳಿಗೆ ಸರಿಯಾದ ಒಂದು ಜೀವನಪಾಠವನ್ನೂ ಆಟದ ಮೂಲಕವೇ ಅರ್ಥಪೂರ್ಣವಾಗಿ ದಾಟಿಸಲಾಗಿದೆ.ಸೊಗಸಾದ ಧಾರವಾಡೀ ಕನ್ನಡದಲ್ಲಿ ಅನುವಾದಗೊಂಡಿರುವ ಈ ನಾಟಕವು ಪ್ರದರ್ಶನಕ್ಕೆ ಹೇಳಿ ಮಾಡಿಸಿದಂತಿದ್ದು, ಯುವಜನತೆಯನ್ನು ಸರಿದಾರಿಗೆ ಹಚ್ಚುವ ಕಾರಣಕ್ಕಾಗಿಯಾದರೂ ಹೆಚ್ಚೆಚ್ಚು ಪ್ರದರ್ಶನಗೊಳ್ಳಬೇಕು ಎಂಬ ಆಸೆ ಹುಟ್ಟಿಸುವಂತಿದೆ. ಹೇಮಾ ಪಟ್ಟಣಶೆಟ್ಟಿಯವರ ಸಾಹಿತ್ಯ ಮತ್ತು ರಂಗಭೂಮಿ ಹಿನ್ನೆಲೆಗಳು ನಿರ್ದಿಷ್ಟವಾಗಿ ಈ ನಾಟಕದ ಭಾಷೆಯಲ್ಲಿ ಮತ್ತು ಒಟ್ಟಂದದಲ್ಲಿ ಇಡೀ ಅನುವಾದದಲ್ಲಿ ಅನುರಣಗೊಂಡಿವೆ. ಮೂಲದಷ್ಟೇ ಸಶಕ್ತವಾಗಿ ಕನ್ನಡದ ಅವತರಣಿಕೆಯೂ ಮೂಡಿಬಂದಿದೆ.
https://www.prajavani.net/artculture/book-review/kannada-literature-holi-book-review-1018597.html - ಪ್ರಜಾವಾಣಿ
©2024 Book Brahma Private Limited.