ಕೂಡಲೂರ ಬಸವಲಿಂಗ ಶರಣ (1770-1850)- ಗುಲ್ಬರ್ಗ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಬಳಿಚಕ್ರದಲ್ಲಿ ಜನಿಸಿದ ಬಸವಲಿಂಗ ಶರಣರು ರಾಯಚೂರು, ಮಾನ್ವಿ, ನೀರಮಾನ್ವಿ, ದೇವದುರ್ಗ, ಗೂಗಲ್ಲು, ಗೊಬ್ಬೂರು ಪ್ರದೇಶಗಳನ್ದನು ಕಾರ್ಯಕ್ಷೇತ್ರವಾಗಿಸಿಕೊಂಡಿದ್ದರು. ಗೊಬ್ಬೂರು ಸಮೀಪದ ಖಾನಾಪುರದಲ್ಲಿ ಬಸವಲಿಂಗ ಶರಣರ ಸಮಾಧಿಯಿದೆ. ಕೂಡಲೂರೇಶ’ ಎಂಬ ಅಂಕಿತನಾಮದಿಂದ ತತ್ವಪದಗಳನ್ನು ರಚಿಸಿದ್ದಾರೆ. ಇದುವರೆಗಿನ ಎಲ್ಲ ಸಂಗ್ರಹಗಳನ್ನು ಪರಿಶೀಲಿಸಿ 138 ತತ್ವಪದಗಳನ್ನು ಈ ಸಂಕಲನದಲ್ಲಿ ನೀಡಲಾಗಿದೆ.
ಹೆಮ್ಮಡಗಿ ಪ್ರಭುದೇವ (1785-1875)- ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಹೆಮ್ಮಡಗಿ ಪ್ರಭುದೇವ ಪ್ರಮುಖ ತತ್ವಪದಕಾರರಲ್ಲಿ ಒಬ್ಬ. ’ಪ್ರಭುಲಿಂಗ’ ಅಂಕಿತದೊಂದಿಗೆ ಪದ ರಚಿಸಿದ ಪ್ರಭುದೇವನ ಹೆಚ್ಚಿನ ಪದಗಳು ಸಿಕ್ಕಿಲ್ಲ.
ಅಮ್ಮಾಪುರ ವೀರಣ್ಣ (1848-1920)- ಸುರಪುರ ತಾಲ್ಲೂಕಿನ ಅಮ್ಮಾಪುರ ಗ್ರಾಮದಲ್ಲಿ ಜನಿಸಿದ ವೀರಣ್ಣ ಹಲವು ತತ್ವಪದಗಳನ್ನು ರಚಿಸಿದ ಬಗ್ಗೆ ತಿಳಿದು ಬರುತ್ತದೆ. ಆದರೆ, ಅವನ ಒಂದು ಪದ ಮಾತ್ರ ಲಭ್ಯವಾಗಿದೆ.
ಅಮ್ಮಾಪುರ ಹನುಮಂತಪ್ಪ (1855-1930)- ಸುರಪುರ ತಾಲ್ಲೂಕಿನ ಅಮ್ಮಾಪುರದವನಾದ ಹನುಮಂತಪ್ಪ ಅವರ ಮೂರು ತತ್ವಪದಗಳನ್ನು ಈ ಸಂಪುಟದಲ್ಲಿ ಸೇರಿಸಲಾಗಿದೆ.
ಕೌಳೂರು ಸಿದ್ಧರಾಮ ಶಿವಯೋಗಿ (1900-1974) ಯಾದಗಿರಿ ತಾಲ್ಲೂಕಿನ ಕಸಬಾ ಕೌಳೂರಿನ ಸಂಸ್ಥಾನ ಗುಡಗುಂಟಿಯ ತೋಪಿನಕಟ್ಟೆ ಮುತ್ತಿನಪೆಂಡಿ ಬೃಹನ್ಮಠದ ಪಟ್ಟಾಧ್ಯಕ್ಷರಾಗಿದ್ದ ಸಿದ್ಧರಾಮ ಶಿವಯೋಗಿಗಳು ಅನೇಕ ತತ್ವಪದಗಳನ್ನು ರಚಿಸಿದ್ದಾರೆ. ’ಸದ್ಭೋಧಾಮೃತ’ ಕೃತಿಯಲ್ಲಿ 176 ಪದಗಳಿವೆ.
ಮುಡಬೂಳ ರಂಗಲಿಂಗೇಶ್ವರ (1909-2009)- ಕೂಡಲೂರು ಬಸವಲಿಂಗ ಶರಣರ ಪರಂಪರೆಗೆ ಸೇರಿದ ರಂಗಲಿಂಗೇಶ್ವರ ಶಹಾಪುರ ತಾಲ್ಲೂಕಿನ ಮುಡಬೂಳದವನು. ಮಾರುತಿ, ಮಾರುತೇಶ್ವರ ಅಂಕಿತ ನಾಮದಿಂದ ರಚಿಸಿದ 169ಪದಗಳನ್ನು ಈ ಸಂಗ್ರಹದಲ್ಲಿ ಸೇರಿಸಲಾಗಿದೆ.
ಸುರಪುರದ ಮುದ್ದು ಬಸವಶೆಟ್ಟಿ (1910-1995)- ಸುರಪುರದ ನಿವಾಸಿಯಾಗಿದ್ದ ಬಸವಶೆಟ್ಟಿ ಅವರು ದೇವಸೂಗೂರಿನ ಸೂಗೂರೇಶ್ವರನ ಭಕ್ತನಾಗಿದ್ದ. ಮುದ್ದು ಬಸವಶೆಟ್ಟಿ ರಚಿಸಿದ ನಾಲ್ಕು ಪದಗಳು ಈ ಸಂಕಲನದಲ್ಲಿವೆ.
ಜಾಕಾ ಚನ್ನಪ್ಪ (1915-1998)- ಯಾದಗಿರಿಯಲ್ಲಿ ಜನಿಸಿದ ಜಾಕಾ ಚೆನ್ನಪ್ಪ ವೃತ್ತಿಯಿಂದ ವ್ಯಾಪಾರಿಯಾಗಿದ್ದವರು. ದೇವಸೂಗೂರು ತತ್ವಪದಕಾರರ ಪರಂಪರೆಗೆ ಸೇರಿದ ಚನ್ನಪ್ಪ ಅವರ ಮೂರು ತತ್ವಪದಗಳನ್ನು ಈ ಸಂಗ್ರಹದಲ್ಲಿ ಸೇರಿಸಲಾಗಿದೆ.
©2024 Book Brahma Private Limited.