ಈ ಸಂಪುಟದಲ್ಲಿ ಶಂಕರದೇವನ ತತ್ವಪದಗಳು, ಹೊನ್ನಕವಿಯ ತತ್ವಪದಗಳು, ಇಮ್ಮಡಿ ಮುರಿಗಾ ಸಿದ್ಧರ ತತ್ವಪದಗಳು, ಸೋಮೇಕಟ್ಟೆ ಕರಿವೃಷಭೇಂದ್ರರ ತತ್ವಪದಗಳು, ಮಲ್ಲೇನಹಳ್ಳಿ ಚನ್ನಬಸವಯ್ಯನವರ ತತ್ವಪದಗಳು, ಹೊನ್ನುಡಿಕೆ ಗಂಗಾಧರಸ್ವಾಮಿಗಳ ತತ್ಪಪದಗಳು, ಗುಬ್ಬಿ ಕಿಡಿಗಣ್ಣಪ್ಪನವರ ತತ್ವಪದಗಳಿವೆ.
ದೇವರಾಯಪಟ್ಟಣದ ಶಂಕರದೇವ (ಕಾಲ 1850). ಎಡೆಯೂರು ತೋಂಟದ ಸಿದ್ಧಲಿಂಗ ಯತಿಗಳ ಕಿರಿಯ ಸಮಕಾಲೀನರಾಗಿದ್ದ ಶಂಕರದೇವರು ದೇವರಾಯಪಟ್ಟಣದ ನಿವಾಸಿ.. ಹರಿಹರನ ನಂತರ ಶರಣರ ಜೀವನವನ್ನು ರಗಳೆ ರೂಪದಲ್ಲಿ ಬರೆದ ಅಪರೂಪದ ವಿದ್ವಾಂಸ. ರಗಳೆ, ಶತಕ, ಕಂದ, ದಂಡಕ, ಸ್ತೋತ್ರರೂಪದ ಕೃತಿಗಳನ್ನು ರಚಿಸಿದ್ದಾನೆ.
ಹೊನ್ನಕವಿ (1640-1730)ಯು ಗಂಗೇಶ, ಗಂಗೇಶಾ, ಶಿವಗಂಗಾಧರ, ಗಂಗಾಧರ, ಕಕೋದ್ಗಿರಿಯ ಗಂಗೇಶ ಅಂಕಿತಗಳನ್ನು ತನ್ನ ತತ್ವಪದಗಳಲ್ಲಿ ಬಳಸಿದ್ದಾನೆ. ಹೊನ್ನಕವಿಯು ವೇದ, ಉಪನಿಷತ್ತು, ಆಗಮ, ಪುರಾಣ, ವಚನ ಸಾಹಿತ್ಯವನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿದವನು.
ಇಮ್ಮಡಿ ಮುರಿಗಾ ಗುರುಸಿದ್ಧಶಿವಯೋಗಿ (1729). ಚಿತ್ರದುರ್ಗ ಬೃಹನ್ಮಠದ ಮೂಲಕರ್ತೃ ಮುರಿಗಾ ಶಾಂತವೀರ ಸ್ವಾಮಿಗಳ ಕರಸಂಜಾತ. ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದರು. ಶಿವಲಿಂಗ ಎಂಬುದು ಅವರ ಅಂಕಿತನಾಮ.
ನೊಣವಿನಕೆರೆ ಸೋಮೇಕಟ್ಟೆ ಕರಿವೃಷಭೇಂದ್ರಸ್ವಾಮಿಗಳು ಶಿವಗಂಗೆ ಕ್ಷೇತ್ರಕ್ಕೆ ದಕ್ಷಿಣದಲ್ಲಿರುವ ಅದರಂಗಿ ಗ್ರಾಮದಲ್ಲಿ ಜನಿಸಿದರು. 1879ರಲ್ಲಿ ಮಹಾಲಿಂಗದಲ್ಲಿ ಲೀನರಾದ ಅವರ ಗದ್ದುಗೆ ನೊಣವಿನಕೆರೆ ಕಾಡಸಿದ್ಧೇಶ್ವರ ಮಠದಲ್ಲಿದೆ.
ಮಲ್ಲೇನಹಳ್ಳಿ ಚೆನ್ನಬಸವಯ್ಯನವರು ನೊಣವಿನಕೆರೆ ಕರಿವೃಷಭೇಂದ್ರ ಸ್ವಾಮಿಗಳ ಶಿಷ್ಯವರ್ಗದಲ್ಲಿದ್ದವರು. ’ಸೋಮೇಕಟ್ಟೆ ಕರಿವೃಷಭ’ ಎಂಬ ಅಂಕಿತನಾಮದಲ್ಲಿ ಬರೆಯುತ್ತಿದ್ದರು.
ಹೊನ್ನುಡಿಕೆಯಲ್ಲಿದ್ದ ಗಂಗಾಧರಸ್ವಾಮಿಗಳು ಮೈಸೂರು ಜಿಲ್ಲೆಯಲ್ಲಿ ಅನೇಕ ಶಿಷ್ಯರಿಗೆ ದೀಕ್ಷೆ ನೀಡಿದ್ದರು. ಅವರ ಸಮಾಧಿ ಮಲ್ಲೇನಹಳ್ಳಿಯಲ್ಲಿದೆ.
ಗುಬ್ಬಿ ಕಿಡಿಗಣ್ಣಪ್ಪ ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಅವರ ಮಠ ಗುಬ್ಬಿ ಚನ್ನಬಸವೇಶ್ವರಸ್ವಾಮಿ ದೇವಾಲಯದ ತೇರು ಬೀದಿಯಲ್ಲಿತ್ತು ಎನ್ನಲಾಗುತ್ತದೆ.
ಸೋಮೇಕಟ್ಟೆ ಸ್ತುತಿಗೀತೆ: ಸೋಮೇಕಟ್ಟೆ ಪರಂಪರೆ ಬಹಳ ದೊಡ್ಡದು. ತುಮಕೂರು ಸೋಮೇಕಟ್ಟೆ ಚೆನ್ನವೀರ ಸ್ವಾಮಿಗಳು ಚಿತ್ರದುರ್ಗದ ಮುರಿಗಾ ಗುರುಸಿದ್ಧಸ್ವಾಮಿಗಳ ಕಿರಿಯ ಸಮಕಾಲೀನರು. ಅವರ ಕಾಲ 1860-1770.
©2024 Book Brahma Private Limited.