ಸರ್ಪಭೂಷಣ ಶಿವಯೋಗಿಗಳ ತತ್ವಪದಗಳು-ಲೇಖಕ ರಂಗನಾಥ ಕಂಟನಕುಂಟೆ ಅವರ ಸಂಪಾದಿತ ಕೃತಿ. ಸರ್ಪಭೂಷಣ ಶಿವಯೋಗಿಗಳು ತಮ್ಮ ತತ್ವಪದಗಳ ಸಂಕಲನವನ್ನು ‘ಕೈವಲ್ಯ ಕಲ್ಪವಲ್ಲರಿ’ ಎಂದು ಹೆಸರಿಸಿದರು. ನಿಜಗುಣ ಶಿವಯೋಗಿಗಳ ‘ಕೈವಲ್ಯ ಪದ್ಧತಿ’ ಎಂಬ ಪಾರಮಾರ್ಥಿಕ ಕೃತಿಯ ಪ್ರೇರಣೆ ಎಂದು ಹೇಳಿಕೊಂಡಿದ್ದಾರೆ. ವಿವಿಧ ರಾಗಗಳನ ಈ ಹಾಡುಗಳು, ಕೈವಲ್ಯಪದ್ಧತಿಯಂತೆಯೇ, ಶಿವಕಾರುಣ್ಯಸ್ಥಲ, ಜೀವಸಂಬೋಧನಸ್ಥಲ, ನೀತಿಕ್ರಿಯಾಚರ್ಯ ಪ್ರತಿಪಾದನಸ್ಥಲ, ಯೋಗಪ್ರತಿಪಾದನಸ್ಥಲ ಮತ್ತು ಜ್ಞಾನಪ್ರತಿಪಾದನಸ್ಥಲ ಎಂಬ ಐದು ಸ್ಥಲಗಳಲ್ಲಿ ವಿಂಗಡಣೆಯಾಗಿವೆ. ಸರ್ಪಭೂಷಣರು ‘ಜ್ಞಾನಶತಕ’ ಎಂಬ ಸಂಸ್ಕೃತ ಕೃತಿಯನ್ನೂ ಬರೆದಿದ್ದಾರೆ.
ಸರ್ಪಭೂಷಣರು ಬದುಕಿದ ಕಾಲಮಾನವು ವಸಾಹತು ಶಾಹೀ ಸಂದರ್ಭ. ಇಂತಹ ಸಂಧಿಕಾಲದಲ್ಲಿ, ಕರ್ನಾಟಕದಲ್ಲಿ ಅನೇಕ ಅನುಭಾವಿ ತತ್ವಪದಕಾರರು ಹುಟ್ಟಿಕೊಂಡು ತಮ್ಮ ಪಾರಮಾರ್ಥಿಕ ವಿಚಾರಗಳಿಂದ ಜನದ ಮನಸ್ಸನ್ನು ಒಂದು ಹದಕ್ಕೆ ನಿಲ್ಲಿಸಲು ಪ್ರಯತ್ನಪಟ್ಟರೆಂಬುದು ಸಾಂಸ್ಕೃತಿಕವಾಗಿ ಮಹತ್ವದ ಸಂಗತಿಯಾಗಿದೆ. ಬಾಲಲೀಲಾ ಮಹಾಂತ ಸ್ವಾಮಿಗಳು, ಕಡಕೋಳು ಮಡಿವಾಳೇಶ್ವರರು ; ಹುಬ್ಬಳ್ಳಿಯ ಸಿದ್ಧಾರೂಢರು, ಶಿಶುನಾಳ ಷರೀಫರು ಮತ್ತು ಇನ್ನೂ ಇಂಥವರು ಕನ್ನಡ ಸಾಹಿತ್ಯದ ನವೋದಯ ಪೂರ್ವದ ಒಂದು ಆನುಭಾವಿಕ ಪರಂಪರೆಯನ್ನೆ ಕಟ್ಟಿದರು. ಅವರು ಭಕ್ತಿ ಮತ್ತು ವಿರಕ್ತಿಗಳನ್ನು ಪ್ರತಿಪಾದಿಸಿದರು ಇಂತಹವರ ಸಾಲಿನಲ್ಲಿ ಸರ್ಪಭೂಷಣ ಶಿವಯೋಗಿಗಳು ಒಬ್ಬರು.
©2024 Book Brahma Private Limited.