'ಕರಪಾಲ ಮೇಳ’ ಡಿ.ಕೆ. ರಾಜೇಂದ್ರ ಅವರ ಸಂಪಾದಿತ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; 'ಕರಪಾಲ ಮೇಳ' ಯಕ್ಷಗಾನ ಬಯಲಾಟದಂತೆಯೇ ಒಂದು ಸಮ್ಮಿಶ್ರ ಕಲೆ. ಸಂಗೀತ, ಸಾಹಿತ್ಯ, ನೃತ್ಯಗಳಿಂದ ಮುಪ್ಪುರಿಗೊಂಡದ್ದು; ಬಯಲಾಟದಂತೆಯ ಬಯಲಿನಲ್ಲಿ ಆಡುವ ಸಂಪ್ರದಾಯವುಳ್ಳದ್ದು. ಬಯಲಾಟಕ್ಕೂ 'ಮೇಳ' ಎಂಬ ಹೆಸರಿದೆ. ವೇಷಭೂಷಣವೊಂದನ್ನುಳಿದು ಮಿಕ್ಕ ಅಂಶಗಳಲ್ಲಿ ಇವೆರಡರಲ್ಲಿ ಹೆಚ್ಚಿನ ಹೋಲಿಕೆಯನ್ನು ಕಾಣುತ್ತೇವೆ. ಇಲ್ಲಿಯ ಮುಖ್ಯ ಕಥೆಗಾರ ವೇಷವನ್ನು ಹಾಕುತಾನಾದರೂ ಅದೇ ಬೇರೆ ರೀತಿಯಾದುದು. ಯಕ್ಷಗಾನದಲ್ಲಿ ಒಂದೊಂದು ಪಾತ್ರವನ್ನು ಒಬ್ಬೊಬ್ಬರು ಅಭಿನಯಿಸಿದರೆ ಇಲ್ಲಿ ಎಲ್ಲಾ ಪಾತ್ರವನ್ನು ಒಬ್ಬನೇ ಅಭಿನಯಿಸುತ್ತಾನೆ. ಇವೆರಡೂ ಜನಪದ ಕಲೆಗಳೇ ಆಗಿದ್ದು ಬಹು ಹಿಂದಿನಿಂದಲೂ ಹಳ್ಳಿಗರ ಮನಸ್ಸನ್ನು ಸೂರೆಗೊಳ್ಳುತ್ತಾ ಬಂದಿವೆಯಾದರೂ, ಇವುಗಳನ್ನು ಪ್ರತ್ಯೇಕವಾಗಿಯೇ ಗುರುತಿಸಬೇಕಾಗುತ್ತದೆ. ಜನಪದ ರಂಗಭೂಮಿಗೆ ಸೇರಿದಂಥ ಯಕ್ಷಗಾನ ಬಯಲಾಟ, ಸೂತ್ರದ ಗೊಂಬೆಯಾಟ ಮತ್ತು ತೊಗಲುಗೊಂಬೆಯಾಟಗಳು ಒಂದು ವರ್ಗವಾಗಿ ನಿಂತರೆ, ಕರಪಾಲ ಮೇಳದ ಸಾಲಿಗೆ ಸೇರಿದಂಥ ಚೌಡಿಕೆ ಮೇಳ, ಕಂಸಾಳೆ ಮೇಳ ಮುಂತಾದುವು ಮತ್ತೊಂದು ಗುಂಪಾಗಿ ನಿಲ್ಲುತ್ತವೆ. ಇವುಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅಥವಾ ವಿಭಾಗಿಸಲು ಇರುವ ಒಂದು ಅಂಶವೆಂದರೆ, ಅದರ ವಸ್ತು ವಿನ್ಯಾಸದಲ್ಲಿ ಪೌರಾಣಿಕ ಪ್ರಪಂಚದ ನಿಚ್ಚಳ ಪ್ರಭಾವವನ್ನು ಸಂಸ್ಕೃತ ಭೂಯಿಷ್ಯವಾದ ಕ್ಷಿಷ್ಟಭಾಷೆಯ ಬಳಕೆಯನ್ನು ಗಮನಿಸಿದಾಗ ನೆಲದ ಕಂಪನ್ನು ಸಹಜವಾಗಿ ಬೀರುವ, ಹಳ್ಳಿಗರ ಭಾಷೆ, ಅನುಭವಗಳಿಗೆ ಸುಲಭವಾಗಿ ನಿಲುಕಬಹುದಾದ ಶುದ್ಧ ಜನಪದ ಶೈಲಿಯ ಕೋಲಾಟವೇ ಮೊದಲಾದ ಕೆಲವು ಕಲೆಗಳನ್ನು ಪ್ರತ್ಯೇಕಿಸಿಕೊಳ್ಳ ಬೇಕಾಗುತ್ತದೆ........ ಕರಪಾಲಮೇಳ ಈ ಸರಳ ಜನಪದ ಕಲೆಗಳ ಸಾಲಿನಲ್ಲಿ ಅಗ್ರಗಣ್ಯ ವೆನಿಸುತ್ತದೆ.”1 ಈ ಬಗೆಯ ವಿಭಜನೆ ಅಧ್ಯಯನ ದೃಷ್ಟಿಯಿಂದ ಗಮನಾರ್ಹವಾದ ದ್ದಾಗಿದೆ. ಆದರೆ ಜನರ ಮೇಲಿನ ಪ್ರಭಾವ ಹಾಗೂ ಪರಿಣಾಮದ ದೃಷ್ಟಿಯಿಂದ ಎರಡು ವರ್ಗಗಳೂ ಒಂದೇ. ಎರಡೂ ವರ್ಗಗಳು ಅಪೂರ್ವ ಕಲೆಯೆನಿಸಿವೆ. ಜನಮನ ವನ್ನು ಗೆದ್ದು ಕೊಂಡಿವೆ. ಅವರ ಧರ್ಮಶ್ರದ್ಧೆಯನ್ನು ಹೆಚ್ಚಿಸಿವೆ. ಮನರಂಜನೆಯನ್ನು ನೀಡುವುದರ ಮೂಲಕ ಅವರ ಮನಸ್ಸನ್ನು ಹಗುರಗೊಳಿಸಿವೆ.
©2024 Book Brahma Private Limited.