ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ.
ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ಉದ್ಯೋಗಿಯಾಗಿ ಸೇರ್ಪಡೆಯಾದರು. ಕಾರ್ಮಿಕ ಸಂಘಟನೆ ಮತ್ತು ಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾದ ಅವರು 35 ವರ್ಷಗಳ ಸೇವೆಯ ನಂತರ ಬ್ಯಾಂಕ್ ಅಧಿಕಾರಿಯಾಗಿ ಜನವರಿ 2019ರಲ್ಲಿ ನಿವೃತ್ತಿ ಪಡೆದರು. 1990ರ ದಶಕದಲ್ಲಿ ಡಂಕಲ್ ಪ್ರಸ್ತಾವನೆ ವಿರುದ್ಧ ನಡೆದ ಹೋರಾಟಗಳಲ್ಲಿ ಭಾಗಿಯಾಗುವ ಮೂಲಕ ಬರವಣಿಗೆಯ ಕ್ಷೇತ್ರಕ್ಕೂ ಪ್ರವೇಶ ಮಾಡಿದರು. ಕರಪತ್ರಗಳ ಅನುವಾದದಿಂದ ಅಕ್ಷರ ಪಯಣ ಆರಂಭಿಸಿದ ಅವರು ಇಂದು ಕನ್ನಡದ ಮುಖ್ಯ ಲೇಖಕರಲೊಬ್ಬರಾಗಿದ್ದಾರೆ.
ಶೈಕ್ಷಣಿಕವಾಗಿ ಕನ್ನಡ ಪಠ್ಯಕ್ರಮವನ್ನು ವ್ಯಾಸಂಗ ಮಾಡದಿದ್ದರೂ ಬಾಲ್ಯದಿಂದಲೇ ಸಾಹಿತ್ಯ ಮತ್ತು ಸಂಗೀತದ ಒಲವು ಬೆಳೆಸಿಕೊಂಡಿದ್ದ ದಿವಾಕರ್ ಅವರು 1994ರ ನಂತರ ಕೋಲಾರದ ಸಂಚಿಕೆ ಪತ್ರಿಕೆಯಿಂದ ಅಂಕಣ ಬರಹವನ್ನು ಆರಂಭಿಸಿದರು. ಜೊತೆಗೆ ಹಲವು ನಿಯತಕಾಲಿಕ ಪತ್ರಿಕೆಗಳಿಗೆ ಲೇಖನಗಳು ಮತ್ತು ದಿನಪತ್ರಿಕೆಗಳಿಗೆ ಸಂಪಾದಕರಿಗೆ ಪತ್ರ ಬರೆಯುವ ಮೂಲಕ ಅಂಕಣ ಬರಹದ ಮುಂದುವರಿಸಿದರು. 1998ರ ನಂತರದಲ್ಲಿ ಮೈಸೂರಿನ ಆಂದೋಲನ ಪತ್ರಿಕೆಯ ಮೂಲಕ ಬರಹ ಲೋಕದ ತವರನ್ನು ಕಂಡುಕೊಂಡರು. ಹೊಸತು, ಸಂವಾದ, ಕನ್ನಡ ಪ್ರಭ, ಹೊಸದಿಗಂತ, ಉದಯವಾಣಿ, ಪ್ರಜಾವಾಣಿ ಪತ್ರಿಕೆಗಳಲ್ಲಿ ಅವರ ಲೇಖನಗಳ ಪ್ರಕಟವಾಗಿವೆ. ನಂತರ ಬೆಂಗಳೂರಿನ ಭಾನುವಾರ ಪ್ರಾಕ್ಷಿಕ ಪತ್ರಿಕೆಗೆ ಅಂಕಣಕಾರರಾಗಿ ಪ್ರವೇಶ ಪಡೆದ ದಿವಾಕರ್ ಅವರು ಪ್ರಸ್ತುತ ಹೊಸತು, ಸಂವಾದ, ವಾರ್ತಾಭಾರತಿ, ಅಂದೋಲನ, ಭಾನುವಾರ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿದ್ದಾರೆ. ಅವರ ದಲಿತರು ವಿಮೋಚನೆಯ ಹಾದಿ ಒಂದು ಅವಲೋಕನ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಎಲ್ ಬಸವರಾಜು ದತ್ತಿ ಪ್ರಶಸ್ತಿ ಲಭಿಸಿದೆ. ಈವರೆಗೆ 20ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಹಲವಾರು ಸಂಕಲನಗಳಿಗೆ ಲೇಖನಗಳ ಅನುವಾದ. ಕವನ ಸಂಕಲನ ಬಿಡುಗಡೆಯಾಗಲಿದೆ. ಅವಧಿ, ಅನಿಕೇತನ, ಡೆಕ್ಕನ್ ನ್ಯೂಸ್ ಮುಂತಾದ ಬ್ಲಾಗ್ ಗಳಲ್ಲಿಯೂ ಲೇಖನಗಳು ಪ್ರಕಟ. ಒಟ್ಟು 1000ಕ್ಕೂ ಹೆಚ್ಚು ಲೇಖನಗಳು ನೂರಕ್ಕೂ ಹೆಚ್ಚು ಕವನಗಳು, ಐದಾರು ಕಥೆಗಳನ್ನು ಬರೆದಿದ್ದಾರೆ. 800ಕ್ಕೂ ಹೆಚ್ಚು ಲೇಖನಗಳು ಪುಸ್ತಕ ರೂಪದಲ್ಲಿ ಬರಬೇಕಿದೆ.