‘ಷಟ್ಕರ್ಮವಿಧಿ’ ಯೋಗ ಸಾಧಕ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಯವರ ಕೃತಿ. ಈ ಕೃತಿಯಲ್ಲಿ ಯೋಗದ ಪ್ರಾಚೀನತೆಯ ಜೊತೆಗೆ ಅದರ ಮಹತ್ವವನ್ನು ವಿವರಿಸುತ್ತಾ ಯೋಗದ ರೀತಿ ರಿವಾಜುಗಳನ್ನು ವಿಶ್ಲೇಷಿಸಿದ್ದಾರೆ. ನಾವು ನೂರು ವರ್ಷ ನೋಡುತ್ತೇವೆ: ನಾವು ನೂರು ವರ್ಷ ಜೀವಿಸುತ್ತೇವೆ. ನಾವು ನೂರು ವರ್ಷ ಕೇಳುತ್ತೇವೆ, ನಾವು ನೂರು ವರ್ಷ ಮಾತನಾಡುತ್ತೇವೆ, ನಾವು ನೂರು ವರ್ಷ ಸುಖಿಗಳಾಗಿಯೂ ಸ್ವಾವಲಂಬಿಗಳಾಗಿಯೂ ಜೀವನಸುಖವನ್ನನುಭವಿಸುತ್ತೇವೆ. ಇದು ವೇದವಾಣಿ, ನಮ್ಮ ಪ್ರಾಚೀನ ಋಷಿಮುನಿಗಳ ಅಮೃತವಾಣಿ, ಈ ಕೆಚ್ಚಿನ ಅಂತರ್ವಾಣಿಗೆ ಅವರು ತಮ್ಮ ನಿತ್ಯ ಜೀವನದಲ್ಲಿ ಅನುಷ್ಠಾನದಲ್ಲಿಟ್ಟುಕೊಂಡಿದ್ದ ಯೋಗಸಾಧನೆ, ಸದಾಚಾರ, ನಿತ್ಯ ನಿಯಮಗಳೇ ಕಾರಣ, ಆದರೆ ಇಂದು ನಮ್ಮ ಸ್ಥಿತಿ ಏನಾಗಿದೆ. ಮೂವತ್ತು ವರ್ಷ ಕಳೆದು ಮೂವತ್ತೊಂದಕ್ಕೆ ಕಾಲಿಡುವ ಮೊದಲೇ ಇನ್ನೇನು ನಮ್ಮ ಕಥೆಯೆಲ್ಲಾ ಮುಗಿದುಹೋಯಿತು ಎಂಬ ಉದ್ಗಾರವು ನಮ್ಮ ಆಧುನಿಕ ಯುವಕ-ಯುವತಿಯರ ಮುಖದಿಂದ ಹೊರಡುತ್ತದೆ. ಇದೇಕೆ ಇದಕ್ಕೆ ನಾವಿಂದು ನಿತ್ಯ ಜೀವನದಲ್ಲಿ ಅನುಸರಿಸಿಕೊಂಡು ಬರುತ್ತಿರುವ ಆಚಾರವಿಚಾರ, ಆಹಾರ ವಿಹಾರ, ನಡೆ ನುಡಿಗಳೇ ಕಾರಣ. ಇದೆಂತಹ ವಿಪರ್ಯಾಸ ಎನ್ನುತ್ತಾರೆ ರಾಘವೇಂದ್ರ ಸ್ವಾಮಿಗಳು. ಈ ಮಾತುಗಳೊಂದಿಗೆ ಎಚ್ಚರಿಕೆಯೊಂದಿಗೆ ಆರೋಗ್ಯಕ್ಕಾಗಿ ನಾವು ಮಾಡಬಹುದಾದ ಹಲವು ಯೋಗಾಸನಗಳನ್ನು ಪರಿಚಯಿಸಿದ್ದಾರೆ.
©2024 Book Brahma Private Limited.