’ಬಂಜೆತನಕ್ಕೆ ವೈಜ್ಞಾನಿಕ ಪರಿಹಾರ ಪ್ರನಾಳ ಶಿಶು’ ಕೃತಿಯು ಎಂ.ಜೆ ಸುಂದರ್ ರಾಮ್ ಅವರ ಕೃತಿ. ಕೃತಿಗೆ ಮುನ್ನುಡಿ ಬರೆದಿರುವ ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್, ‘ಸಮಾಜದ ದೃಷ್ಟಿ ಮೂಢನಂಬಿಕೆಗಳು, ವಾಸ್ತವತೆ ಇವುಗಳ ಬಗ್ಗೆ, ಸಾಮಾನ್ಯ ಜನರಿಗೆ ಅರಿವು, ಜಾಗೃತಿ, ತಿಳಿವಳಿಕೆ ಮೂಡಿಸುವುದು ಬಹಳ ಮುಖ್ಯ. ಬಂಜೆತನವು ವೈಯುಕ್ತಿಕ, ಸಾಮಾಜಿಕ ಗೌರವ ಹಾಗೂ ಕುಟುಂಬದಲ್ಲಿನ ಸಂಬಂಧಗಳನ್ನು ಹಾಳು ಮಾಡಬಲ್ಲದಾಗಿದೆ. ಆದರೆ, ಬಂಜೆತನ ಸಂಕೋಚ ಪಡುವ, ಅಥವಾ ಅವಮಾನ ಪಡುವ ವಿಷಯವಲ್ಲ. ರಾಬರ್ಟ್ ಎಡ್‌ವರ್ಡ್ಸ್ ಇಂಗ್ಲೆಂಡ್‌ನ ಜೀವಶಾಸ್ತ್ರಜ್ಞರು. ಇಂಗಳ ಮೇಲೆ ಸಂಶೋಧನೆ ಮಾಡಿ, ಹಾರ್ಮೋನಿನ ಪ್ರಭಾವ ಹೆಚ್ಚಿನ ಅಂಡಾಣು ಉತ್ಪತ್ತಿ ಹಾಗೂ ಅವುಗಳಿಂದ ಹೆಚ್ಚಿದ ಫಲವತ್ತತೆಗಳ ಬಗ್ಗೆ ಅಧ್ಯಯನ ಮಾಡಿದರು. ನಂತರದ ಅವರ ಸಂಶೋಧನೆಗಳು, ಪ್ರಾಣಿಗಳ ಭ್ರೂಣಗಳನ್ನು ಸ್ಥಳಾಂತರಿಸುವಂತೆ, ಮಾನವ ಭ್ರೂಣಗಳನ್ನೂ ಸ್ಥಳಾಂತರಿಸುವ ಪ್ರಯತ್ನ ಮಾಡಬಹುದೆಂದು ಯೋಚಿಸಿ ಮಾನವರ ಬಂಜೆತನ ನಿವಾರಣೆಯ ಕಡೆಗೆ ತಿರುಗಿತು. ಆದರೆ ಅವರು ಸ್ವತಃ ವೈದ್ಯರಾಗಿರಲಿಲ್ಲ. ಅವರಿಗೆ ಪರಿಚಿತರಾದ ಕ್ರಿಸ್ಟೋಫರ್ ಸ್ಟಪ್ ಎಂಬ ವೈದ್ಯರ ಸಹಾಯ ಪಡೆದು ಸಂಶೋಧನೆ ಮುಂದುವರೆಸಿದರು. ಸ್ತ್ರೀಯರ ಅಂಡಾಶಯದಲ್ಲಿ ಪಕ್ವವಾದ ಅಂಡಾಣುಗಳನ್ನು ಸೂಕ್ತ ಸಮಯದಲ್ಲಿ ಹೊರ ತೆಗೆದರೆ ಅವನ್ನು ಪ್ರಯೋಗಾಲಯದಲ್ಲಿ ಯಶಸ್ವಿಯಾಗಿ ಫಲಿತಗೊಳಿಸಿ ಭ್ರೂಣವನ್ನಾಗಿಸಿ ಗರ್ಭಕೋಶದಲ್ಲಿ ನಾಟಿ ಮಾಡಿ ಬಸಿರಾಗುವಂತೆ ಮಾಡಬಹುದೆಂದು ಕಂಡುಹಿಡಿದರು. ಅನೇಕರ ಕೋಪತಾಪಗಳಿಗೆ ತುತ್ತಾದರೂ, 20 ವರ್ಷ ಕಾಲ ಛಲಬಿಡದೆ ಸಂಶೋಧನೆ ಮಾಡಿ ಬಂಜೆಯರಿಗೆ ಬಸಿರಾಗುವ ಕನಸನ್ನು ನನಸು ಮಾಡಿಕೊಟ್ಟರು.
ಡಾ. ಸುಂದರ್ ರಾಮ್ ಅವರು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಸರಳ ಕನ್ನಡ ಭಾಷೆಯಲ್ಲಿ ಬಂಜೆತನದ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಸಮಾಜದ, ಕುಟುಂಬದ ದೃಷ್ಟಿಕೋನ, ಅವುಗಳ ನಿವಾರಣೆ ಇತ್ಯಾದಿ ಕುರಿತು ತಿಳಿಸಿದ್ದಾರೆ. ಆಧುನಿಕ ವೈದ್ಯಕೀಯ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಬಂಜೆತನದಿಂದ ಬಳಲುತ್ತಿರುವ ಹಲವಾರು ಮಹಿಳೆಯರಿಗೆ ಗರ್ಭಧಾರಣೆ ಸಾಧ್ಯವಾಗುವಂತೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಸೂಕ್ತ ಮಾಹಿತಿ ಕೊಟ್ಟಿದ್ದಾರೆ.
©2024 Book Brahma Private Limited.