‘ಅಂಗ ಮರ್ದನ’ ತಿರುಕ ಅವರ ಬಾಳ ಬೆಳಕು ಸಾಹಿತ್ಯ ಮಾಲೆ ಕಿರಣ- 47ರ ಅಡಿಯಲ್ಲಿ ಪ್ರಕಟವಾದ ಯೋಗ ವಿಚಾರದ ಕುರಿತ ಸಂಕಲನವಾಗಿದೆ. ಈ ಕೃತಿಯಲ್ಲಿನ ಪ್ರಕಟವಾದ ಒಂದು ವಿಚಾರ ಹೀಗಿದೆ; ಬಹು ವರ್ಷಗಳ ಹಿಂದಿನ ಮಾತು; ನಾನಾಗ ಕೊಪ್ಪದಲ್ಲಿದ್ದೆ. ನನ್ನ ಸೂರ್ಯ ನಮಸ್ಕಾರ-ತತ್ವ ಮತ್ತು ಆಚರಣೆ ಎಂಬ ಪುಸ್ತಕದಲ್ಲಿ ನಿವೇದಿಸಿದಂತೆ ಆಗಲೂ ನನಗೆ ಅಪಸ್ಮಾರ ರೋಗವಿತ್ತು; ಸಾಲದುದಕ್ಕೆ ಹೃದಯದೌರ್ಬಲ್ಯವೂ ಇತ್ತು. ಆಗೊಂದು ದಿನ ನನಗೆ ಶ್ರೀ ಪಳನೀಸ್ವಾಮೀಜಿಯವರ ಪರಿಚಯವಾಯಿತು. ಕೆಲವು ಮಂದಿ ನನ್ನ ಒಡನಾಡಿಗಳು ಶ್ರೀಸ್ವಾಮಿಗಳಿಂದ ವ್ಯಾಯಾಮ ಮತ್ತು ಪ್ರಾಣಾಯಾಮ ಕಲಿಯಲು ತೊಡಗಿದ್ದರು. ಆಗ ಅಲ್ಲೇ ಇದ್ದ ನಾನು “ಗುರೂಜೀ, ಪ್ರಾಣಾಯಾಮ ಕಲಿತರೆ ದೇವರನ್ನು ಕಾಣಬಹುದೇ?” ಎಂದು ಪ್ರಶ್ನಿಸಿದೆ. ಗುರುಗಳು ಕಪಟವಿಲ್ಲದ ನನ್ನ ಪ್ರಶ್ನೆಯನ್ನು ಕೇಳಿ; “ಓಹೋ, ಯಾಕಾಗದು? ಯೋಗಸಾಧಕನಿಗೆ ದೇವರು ಸಿಕ್ಕೇ ಸಿಕ್ಕುತ್ತಾನೆ; ಆದರೆ ಮೊದಲು ನಿಮ್ಮ ರೋಗವನ್ನು ನೀಗಿಕೊಂಡು ಆರೋಗ್ಯವಂತರಾಗಿ, ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಮಾತ್ರ ಅದು ಸಾಧ್ಯ” ಎಂದರು. ನಾನು ಮರುಮಾತಾಡದೆ ಗುರುಗಳಿಗೆ ನಮಸ್ಕರಿಸಿ ತರಗತಿಗೆ ಸೇರಿಕೊಂಡೆ. ಗುರುಗಳು ರೋಗಿಯಾದ ನನಗೆ ಎಲ್ಲರ ಜತೆಯಲ್ಲೇ ಶಿಕ್ಷಣ ನೀಡದೆ ಪ್ರತ್ಯೇಕವಾಗಿ ಪಾಠ ಹೇಳುತ್ತಿದ್ದರು. ಪ್ರಾಣಾಯಾಮ, ಗುರುನಮಸ್ಕಾರ, (ಸೂರ್ಯ ನಮಸ್ಕಾರವಲ್ಲ - ಇದೊಂದು ಬೇರೆ ಕ್ರಮ) ಧ್ಯಾನಗಳ ಜತೆಗೆ ಕೆಲವು ಅಂಗಸಾಧನೆಗಳನ್ನೂ ಅವರು ನನಗೆ ಕಲಿಸತೊಡಗಿದರು. ನನ್ನ ಜತೆಯಲ್ಲಿ ಅಭ್ಯಾಸ ಪ್ರಾರಂಭಿಸಿದವರೆಲ್ಲ ಕೆಲವು ದಿನಗಳಲ್ಲೇ ಶಿಕ್ಷಣಕ್ಕೆ ಶರಣು ಹೊಡೆದರು; ಆದರೆ ನನ್ನ ಸಾಧನೆ ಮಾತ್ರ ನಡೆದೇ ಇತ್ತು.
©2024 Book Brahma Private Limited.