‘ಸರ್ವಾಂಗ ಸುಂದರ ವ್ಯಾಯಾಮ’ ತಿ.ರು.ಕ ಕಾವ್ಯನಾಮದಲ್ಲಿ ಕೃತಿಗಳನ್ನು ರಚಿಸಿರುವ ಯೋಗಸಾಧಕ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ ಅವರ ಕೃತಿ. ಕೃತಿಯ ಕುರಿತು ಬರೆಯುತ್ತಾ ‘ಆಶ್ರಮದಲ್ಲಿ ಇಪ್ಪತ್ತೆಂಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಯೋಗಶಿಕ್ಷಣ ಶಿಬಿರದ ಪಠ್ಯಕ್ರಮದಲ್ಲಿ ಸರ್ವಾಂಗಸುಂದರ ವ್ಯಾಯಾಮ ಪದ್ದತಿಯೂ ಒಂದು. ಈ ಯೋಗಶಿಕ್ಷಣ ಶಿಬಿರವು ಪ್ರತಿವರ್ಷವಬ ಅಕ್ಟೋಬರ್ ನಾಲ್ಕನೆಯ ತಾರೀಖಿನಿಂದ ಅಕ್ಟೋಬರ್ ಇಪ್ಪತ್ತೈದನೆಯ ತಾರೀಖು ಪೂರ್ತಿ ನಡೆಯುತ್ತದೆ. ಆಗ ಸೂರ್ಯ ನಮಸ್ಕಾರ, ಯೋಗಾಸನ, ಪ್ರಾಣಾಯಾಮ, ಧ್ಯಾನ, ಸರ್ವಾಂಗಸುಂದರ ವ್ಯಾಯಾಮ ಮತ್ತು ಅಂಗಮರ್ದನ ಸಂಬಂಧವಾಗಿ ಶಿಕ್ಷಣವನ್ನು ನೀಡಲಾಗುತ್ತದೆ. ಇವುಗಳಲ್ಲಿ ಉಳಿದೆಲ್ಲ ವಿಷಯಕ್ಕೆ ಸಂಬಂಧಪಟ್ಟಂಥ ಗ್ರಂಥಗಳು ಈಗಾಗಲೇ ಆಶ್ರಮದಿಂದ ಪ್ರಕಟಿಸಲ್ಪಟ್ಟಿವೆಯಾದರೂ ಸರ್ವಾಂಗಸುಂದರ ವ್ಯಾಯಾಮದ ವಿಷಯವಾಗಿ ಗ್ರಂಥವನ್ನು ಬರೆಯಲಾಗಲಿಲ್ಲ. ಪ್ರತಿವರ್ಷವೂ ವಿದ್ಯಾರ್ಥಿಗಳಿಗೆ ಈ ವಿಷಯದಲ್ಲಿ ಪ್ರಾತ್ಯಕ್ಷಿಕವಾದ ಶಿಕ್ಷಣವನ್ನು ನೀಡಿ ಇದರ ಸಂಬಂಧವಾದ ಟಿಪ್ಪಣಿಯನ್ನಷ್ಟೇ ಬರೆಯಿಸುತ್ತಿದ್ದೆವು. ತರಗತಿಯೂ ಸುಸೂತ್ರವಾಗಿ ನಡೆಯುತ್ತಿತ್ತು. ಆದರೂ ಪ್ರಾರಂಭದಿಂದಲೂ ವಿದ್ಯಾರ್ಥಿಗಳು ಸ್ವಾಮೀಜಿ-ಯೋಗದ ಎಲ್ಲ ವಿಷಯಕ್ಕೆ ಸಂಬಂಧಪಟ್ಟಂತೆ ನೀವು ಗ್ರಂಥಗಳನ್ನು ಬರೆದಿದ್ದೀರಿ, ಆದರೆ ಸರ್ವಾಂಗಸುಂದರ ವ್ಯಾಯಾಮದ ವಿಷಯವಾಗಿ ಮಾತ್ರ ಗ್ರಂಥ ರಚನೆ ಆಗಿಲ್ಲ. ಆದುದ್ದರಿಂದ ದಯವಿಟ್ಟು ಅದನ್ನೂ ಬರೆಯಿರಿ ಎಂದು ಒತ್ತಾಯಿಸುತ್ತಲೇ ಇದ್ದರು. ಈ ಒತ್ತಾಯ, ಬೇಡಿಕೆ, ಕೇಳಿಕೆ ಎಷ್ಟು ವರ್ಷ? ಯೋಗಶಿಕ್ಷಣ ತರಗತಿ ಪ್ರಾರಂಭವಾದ ಈ ಇಪ್ಪತ್ತೆಂಟು ವರ್ಷಗಳಿಂದಷ್ಟೇ ಅಲ್ಲ- ನಾನು ಉತ್ತರ ಹಿಂದುಸ್ಥಾನದಿಂದ ಕರ್ನಾಟಕಕ್ಕೆ ಕಾಲಿಟ್ಟು ಯೋಗ ಮತ್ತು ವ್ಯಾಯಾಮ ಪ್ರಾರಂಭಿಸಿದ 1935ನೆಯ ಇಸವಿಯ ಪ್ರಾರಂಭದಿಂದ ಅಂದರೆ ಸಮೀಪ ಐದು ದಶಕಗಳ ನಂತರ ಈ ಕೃತಿ ರಚಿಸಿದ್ದೇನೆ ಎಂದಿದ್ದಾರೆ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ. ಕೃತಿಯಲ್ಲಿ ಭೂಮಿಕೆ, ವ್ಯಾಯಾಮ ಸಾಧಕರಿಗೆ ಕೆಲವು ಸಲಹೆಗಳು, ಸರ್ವಾಂಗ ಸುಂದರ ವ್ಯಾಯಾಮ ವಿಧಿ, ಹಾಥ್ ಕೀ ಕಸರತ್, ಪಾಂವ್ ಕೀ ಕಸರತ್, ಬೈಠಕ್ ಎಂಬ ಹೆಸರಿನಲ್ಲಿ ಯೋಗದ ಕುರಿತ ಮಾಹಿತಿಗಳನ್ನು ವಿಶ್ಲೇಷಿಸಿದ್ದಾರೆ.
©2024 Book Brahma Private Limited.