ಸೌರಶಕ್ತಿಯ ಕಥೆ-ಅರವಿಂದ ಗುಪ್ತ ಅವರ ಕೃತಿಯನ್ನು ಲೇಖಕ ಟಿ.ಆರ್. ಅನಂತರಾಮು ಅವರು ಕನ್ನಡೀಕರಿಸಿದ್ದಾರೆ. ಸೌರಶಕ್ತಿಕ ಬೆಳವಣಿಗೆಯ ಇತಿಹಾಸ ತಿಳಿಸುತ್ತದೆ. ಸೂರ್ಯ ಪೂಜ್ಯ. ಗ್ರೀಕರು ಸೌರ ರಚನೆಗಳ ನಿರ್ಮಾಣದಲ್ಲಿ ಎತ್ತಿದ ಕೈ. ಗಾಜಿನ ಕಿಟಕಿ ಬಳಸಿದವರು ರೋಮನರು. ದಕ್ಷಿಣ ಆಫ್ರಿಕದಿಂದ ದಕ್ಷಿಣಾಕಾಶದ ನಕ್ಷೆ ತಯಾರಿಸಲು ಹೋದಾಗ ಸರ್ ವಿಲಿಯಂ ಹರ್ಷಲ್ 150 ವರ್ಷಗಳ ಹಿಂದೆ ಸೌರಶಕ್ತಿ ಬಳಸಿ ಅಡುಗೆ ಮಾಡಿದ. ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು ಮತ್ತು ಅನಿಲ ತ್ವರಿತವಾಗಿ ಮುಗಿದುಹೋಗುತ್ತಿವೆ. ಅವು ಮಾಲಿನ್ಯಕಾರಕ ಕೂಡ. ಹಸುರುಮನೆ ಅನಿಲಗಳನ್ನು ವಾಯುಗೋಳಕ್ಕೆ ಸೇರಿಸುತ್ತವೆ. ಇವು ಜಾಗತಿಕ ತಾಪಮಾನ ಹೆಚ್ಚಿಸುತ್ತವೆ. ಫುಕುಶಿಮ ದುರಂತದ ನಂತರ ಜಗತ್ತು ಪರಮಾಣು ಶಕ್ತಿಯ ಬಗ್ಗೆ ಮರುಚಿಂತನೆ ನಡೆಸುತ್ತಿದೆ. ಭವಿಷ್ಯದಲ್ಲಿ ಗಾಳಿ ಮತ್ತು ಸೌರಶಕ್ತಿಗಳೇ ನಮಗೆ ಶಕ್ತಿಸಂಪನ್ಮೂಲವಾಗಿ ಒದಗಿಬರಲಿವೆ. ಭಾರತದಲ್ಲಿ ಸೂರ್ಯಶಕ್ತಿ ಸಮೃದ್ಧವಾಗಿದೆ. ಇದು ಅಕ್ಷಯ ಸಂಪನ್ಮೂಲ, ಮಾಲಿನ್ಯ ರಹಿತವಾದದ್ದು.ನಾವು ನಮ್ಮ ಬುದ್ಧಿಶಾಲಿಗಳನ್ನು ಅತಿ ಅಗ್ಗದ ಸೌರಕೋಶಗಳ ಸಂಶೋಧನೆಗೆ, ವಿನ್ಯಾಸಕ್ಕೆ, ಅತಿ ಸಮರ್ಥ ಸೌರ ಕುಕ್ಕರ್ ತಯಾರಿಕೆಗೆ ತೊಡಗಿಸಬೇಕಾಗಿದೆ. ವಿಕೇಂದ್ರೀಕೃತ ಸೌರಶಕ್ತಿ ಎಲ್ಲೋ ಮೂಲೆಯಲ್ಲಿರುವ ಹಳ್ಲಿಮನೆಯ ದೀಪಕ್ಕೆ ವಿದ್ಯುತ್ ಒದಗಿಸಬಲ್ಲದು. ಶಕ್ತಿ ನೀಡುವುದು ಎಂದರೆ ಇದೇ. ನಿಜಕ್ಕೂ ಜನರನ್ನು ಶಕ್ತಿವಂತರನ್ನಾಗಿ ಮಾಡುವುದು ಹೀಗೆಯೇ. ಗಾಂಧೀಜಿಯವರ ಕನಸು ನನಸಾಗಬೇಕಾಗಿರುವುದು ಈ ಬಗೆಯಿಂದಲೇ ಇಂತಹ ಚಿಂತನೆಗಳು ಕೃತಿಯಲ್ಲಿವೆ.
©2024 Book Brahma Private Limited.