ಖ್ಯಾತ ಲೇಖಕ ಅರವಿಂದ ಗುಪ್ತ ಅವರು ಮೂಲ ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ಲೇಖಕ ವಿ.ಎಸ್.ಎಸ್. ಶಾಸ್ತ್ರಿ ಅವರು ಕನ್ನಡಕ್ಕೆ ಅನುವಾದಿಸಿದ್ದೇ-ಮಾಡಿ ಕಲಿ. ಪ್ರಯೋಗಗಳನ್ನು ಮಾಡಿ ಕಲಿಯುವುದರಿಂದಲೇ ವಿಜ್ಞಾನದ ಸರಳ ಸತ್ಯಗಳು ತೆರೆದುಕೊಳ್ಳುತ್ತವೆ. ಈ ಪುಸ್ತಕದಲ್ಲಿ ಅತಿ ಕುತೂಹಲಕರ ಚಟುವಟಿಕೆಗಳಾದ ಕಾಗದ ಮಡಿಕೆಗಳ ಮೂಲಕ ಜ್ಯಾಮಿತಿ, ಆಟಿಕೆಗಳು, ಪಂಪ್, ಟೋಪಿಗಳು, ಪ್ರಯೋಗಗಳು ಮತ್ತು ಸರಳ ವಿಜ್ಞಾನ ಮಾದರಿಗಳು ಇವೆ. ಅತಿ ಸರಳ ವಸ್ತುಗಳಿಂದ ವಿಜ್ಞಾನ ಅರಿಯಲು ಸಾಧ್ಯತೆಗಳನ್ನು ತೆರೆದಿಟ್ಟೆದೆ. ಸಂಪನ್ಮೂಲ ಕೊರತೆಯಿಂದ ನಮ್ಮ ದೇಶಕ್ಕೆ, ವೆಚ್ಚವಿಲ್ಲದ ವಸ್ತುಗಳಿಂದ ಪ್ರಯೋಗಗಳನ್ನು ಉತ್ತಮಪಡಿಸುವುದು ಹೆಚ್ಚು ಭರವಸೆ ಮೂಡಿಸುತ್ತದೆ. ಅತಿ ಕಡಿಮೆ ವೆಚ್ಚದಲ್ಲಿ ಮಕ್ಕಳು ವಿಜ್ಞಾನ ಅಧ್ಯಯನ ಕೈಗೊಳ್ಳಬಹುದು. ಪತ್ರಿಕೆಗಳಿಂದ ಟೋಪಿ ಮಾಡಬಹುದು. ಜ್ಯಾಮಿತಿ ಕಲಿಯಲು ಒರಿಗಾಮಿ ಕಲೆ ಅತಿಸೂಕ್ತ, ಫಿಲ್ಮ್ ಡಬ್ಬಿಗಳು, ಕುಡಿಯುವ ನೀರಿನ ಬಾಟಲು, ರಬ್ಬರ್ ಚಪ್ಪಲಿ, ಡಬ್ಬಿ ಮುಚ್ಚಳಗಳು ಸುಂದರ ಆಟಿಕೆಗಳಿಗೆ ಬಳಕೆಯಾಗುತ್ತವೆ. ಬೀಜಗಳಿಂದ, ಕಲ್ಲುಗಳಿಂದ, ಎಲೆಗಳಿಂದ ಮತ್ತು ಹೆಬ್ಬೆರಳ ಗುರುತಿನಿಂದ ವಿನ್ಯಾಸಗಳನ್ನು ರಚಿಸುವುದು ಮುದ ನೀಡುವ ಆಟವಷ್ಟೇ ಅಲ್ಲ, ಅತಿ ಸೃಜನಶೀಲ ತೃಪ್ತಿ ನೀಡುವ ಚಟುವಟಿಕೆಗಳಾಗಿವೆ. ಈ ಪುಸ್ತಕದಲ್ಲಿ ಉದಾರ ಮರ, ಗಿಣಿಗೊಂದು ತಾಲೀಮು, ಸಂಖ್ಯೆಗಳನ್ನು ಪ್ರೀತಿಸಿದವನು, ಎಚ್ಚರಿಕೆ: ಶಾಲೆಯಿದೆ! ಇನ್ನೂ ಮುಂತಾದ ಅನೇಕ ಉತ್ತೇಜಕ ಕಥೆಗಳಿವೆ. ಈ ಕಥೆಗಳು ಶಿಕ್ಷಣ, ಶಾಂತಿ, ಗಣಿತ ಮತ್ತು ಪರಿಸರದ ಕುರಿತಾಗಿವೆ. ಮಕ್ಕಳ ಮನೋವಿಕಾಸಕ್ಕೂ ಪೂರಕವಾಗಿವೆ. ಅವರ ಕಲ್ಪನಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
©2024 Book Brahma Private Limited.