ನೀರಿನ ಮೂಲ, ಉಳಿತಾಯ, ಸದ್ಬಳಕೆ ಇತ್ಯಾದಿ ನೀರು ಸಂಬಂಧಿ ವಿಷಯಗಳ ಕಳಕಳಿಯ ಲೇಖಕ ಶ್ರೀಪಡ್ರೆ ಅವರ ಕೃತಿ-ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ. ರೈತರ ಯಾವುದೇ ಉತ್ಪಾದನೆಗಳು ಮೌಲ್ಯವರ್ಧನೆಗೊಳ್ಳದೇ ರೈತರನ್ನು ಆರ್ಥಿಕ ಆದಾಯದ ದೃಷ್ಟಿಯಿಂದ ಹಿಂದಕ್ಕೆ ತಳ್ಳುತ್ತಲೇ ಬಂದಿದೆ. ಇದಕ್ಕೆ ಕೆಲ ಕೃಷಿ -ಆರ್ಥಿಕ ನೀತಿಗಳೂ ಕಾರಣವಾಗಿವೆ. ಆದರೆ, ಕೃಷಿ ಉತ್ಪನ್ನಗಳು ವಿಶೇಷವಾಗಿ ತೋಟಗಾರಿಕಾ ಉತ್ಪನ್ನಗಳು ಮೌಲ್ಯವರ್ಧನೆಗೊಂಡರೆ ರೈತರಿಗೂ ಆರ್ಥಿಕ ಬಲ ಬರುತ್ತದೆ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಲೇಖಕರು ಈ ಕೃತಿ ರಚಿಸಿದ್ದಾರೆ.
ಕೃತಿಗೆ ಬೆನ್ನುಡಿ ಬರೆದ ಚಿಂತಕ ಬಿ. ಕೃಷ್ಣಪ್ರಸಾದ್ ‘ಕೃಷಿಕ್ಷೇತ್ರವು ಖಾಸಗಿ ಕಂಪನಿಗಳ ಪಾಲಾಗುತ್ತಿರುವ ಇಂದಿನ ಸಂಕಷ್ಟ ಕಾಲದಲ್ಲಿ ಈ ಪುಸ್ತಕ ಪ್ರಯೋಗಶೀಲ ಕೃಷಿಕರಿಗೆ ಹೊಸ ದಿಕ್ಕು ತೋರಬಲ್ಲುದು. ಮಾರುಕಟ್ಟೆಯನ್ನು ಹುಡುಕುವುದಲ್ಲ; ಹುಟ್ಟುಹಾಕುವುದು ಎಂಬ ಸತ್ಯವು ಕೃಷಿಕರಿಗೆ ಆರ್ಥವಾಗಬೇಕಿದೆ. ಅಂತಹ ಬದಲಾವಣೆಗೆ ಈ ಪುಸ್ತಕವು ದಾರಿದೀಪವಾಗಬಲ್ಲುದು’ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಹಣ್ಣುಗಳ ತಾಳಿಕೆ ಹೆಚ್ಚುಮಾಡಿದರೆ ಮಾತ್ರ ಸಾಫಲ್ಯ ------------------------------------ಡಾ. ಎಲ್.ಸಿ. ಸೋನ್ಸ್ ಅವರು ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಬಳಿ ಅಪೂರ್ವ ಜೀವವೈವಿಧ್ಯ ತಾಣವನ್ನು ರೂಪಿಸಿದ್ದಾರೆ. ದೊಡ್ಡ ಮಟ್ಟದಲ್ಲಿ ವೈವಿಧ್ಯಮಯ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದು ತಾಜಾ ಹಣ್ಣುಗಳ ಜತೆಗೆ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ಒದಗಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ತಮಗಿರುವ ಅಪಾರ ಜ್ಞಾನ ಮತ್ತು ಅನುಭವವನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದರಲ್ಲಿ ಅವರು ಸದಾ ಉತ್ಸುಕರು. ತಾವು ಮಾಡಿರುವ ವಿವಿಧ ಪ್ರಯೋಗಗಳು ಮತ್ತು ಅವುಗಳಲ್ಲಿ ಕಂಡ ಸಾಫಲ್ಯವನ್ನು ಅವರು ಹೀಗೆ ವಿವರಿಸಿದ್ದಾರೆ - ---------------------------------------------------------------- ನಾನು ಮೂಡುಬಿದ್ರೆ ಹತ್ತಿರ ಒಂದು ಕೃಷಿ ಕ್ಷೇತ್ರದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಸುತ್ತಾ ಇದ್ದೇನೆ. ನಮ್ಮ ಕುಟುಂಬ 90ಕ್ಕೂ ಹೆಚ್ಚು ವರ್ಷಗಳಿಂದ ಈ ತೋಟಗಾರಿಕಾ ಕೃಷಿಯಲ್ಲಿ ಅನುಭವ ಪಡೆದಿದೆ. ನಾವು ಬೆಳೆಯುತ್ತಿದ್ದ ಹಣ್ಣುಗಳು ಮಾರಾಟವಾಗುತ್ತಿದ್ದವು ನಿಜ. ಆದರೆ ಈ ಹಣ್ಣುಗಳು ಬೇಗನೆ ಕೆಡುವುದರಿಂದ ಅವುಗಳನ್ನು ಸಿಕ್ಕಿದ ಬೆಲೆಗೆ ಕೊಡಬೇಕಾಗ್ತಿತ್ತು. ನಾವು ಮುಖ್ಯವಾಗಿ ಬೆಳೆಯುತ್ತಿದ್ದ ಅನಾನಸನ್ನು ಮುಂಬೈ ಹಾಗೂ ಡೆಲ್ಲಿಗೆ ಕೂಡ ಕಳಿಸಿದ್ದೇವೆ. ಆದರೆ ಒಮ್ಮೆ ಮುಂಬೈಯಲ್ಲಿ ಗಲಭೆಯಾಗಿ ಲಾರಿಗಳು ಮಾರ್ಗಮಧ್ಯೆ ನಿಂತು ಎರಡು-ಮೂರು ಲೋಡು ಅನಾನಸು ಕೊಳೆತುಹೋಯಿತು. ಮಾತ್ರವಲ್ಲ ಅದನ್ನು ಖಾಲಿಮಾಡುವ ಖರ್ಚನ್ನೂ ನಾವೇ ಭರಿಸಬೇಕಾಯಿತು. ಕೈಸುಟ್ಟುಕೊಂಡ ಅನುಭವ. ಇಂತಹ ಪರಿಸ್ಥಿತಿ ಎದುರಾದಾಗ ಹಣ್ಣನ್ನು ನಮ್ಮ ಊರಿನಲ್ಲೇ ಉಳಿಸಿಕೊಳ್ಳುವಂತಹ ವಿಧಾನಗಳನ್ನು ನಾವು ಹುಡುಕುತ್ತಾ ಇದ್ದೆವು. ಆಗ ಇದ್ದ ತಂತ್ರಜ್ಞಾನ ಕ್ಯಾನ್ ಮಾಡುವಂಥದ್ದು. ನಾವು ಸ್ವಲ್ಪ ಮಟ್ಟಿಗೆ ಸ್ಥಳೀಯವಾಗಿ ಕ್ಯಾನಿಂಗ್ ಮಾಡುತ್ತಿದ್ದ ಕಂಪೆನಿಗಳಿಗೆ ಅನಾನಸು ಕೊಡುತ್ತಿದ್ದೆವು. ಆದರೆ ಅವರಿಗೆ ಮಾವಿನ ಹಣ್ಣಿನ ಪಲ್ಪಿನಲ್ಲಿ ಹೆಚ್ಚು ಲಾಭ ಸಿಕ್ತಾ ಇತ್ತು. ಹೀಗಾಗಿ ಮಾವಿನ ಹಣ್ಣಿನ ಸೀಸನ್ ಶುರುವಾದ ಕೂಡಲೆ ಇನ್ನು ಅನಾನಸು ಬೇಡ ಅಂತ ಹೇಳುವ ಪರಿಸ್ಥಿತಿ ಬಂತು. ಹಾಗಾಗಿ ನಾವೇ ಒಂದು ಸಣ್ಣ ಮಟ್ಟದ ಕ್ಯಾನಿಂಗ್ ಫ್ಯಾಕ್ಟರಿಯನ್ನು ಸ್ಥಾಪನೆ ಮಾಡುವಂತಹ ಪ್ರಯತ್ನ ಮಾಡಿದೆವು. ಅಂತಹ ಒಂದು ಫ್ಯಾಕ್ಟರಿಯನ್ನು ಆರಂಭಿಸಿದೆವು ಕೂಡ. ಇದರಲ್ಲಿ ನಮಗೆ ನಷ್ಟವೇನೋ ಆಗಲಿಲ್ಲ. ಆದರೆ ನಮ್ಮ ಅನಾನಸು ಫಸಲು ಇರುವುದು ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ. ಉಳಿದ ಸಮಯದಲ್ಲಿ ಆ ಯಂತ್ರೋಪಕರಣ ಬಳಕೆಯಾಗುತ್ತಿರಲಿಲ್ಲ. ಸಿಬ್ಬಂದಿಗೂ ಬೇರೆ ಕೆಲಸ ಹೊಂದಿಸುವುದು ಸಮಸ್ಯೆಯಾಗುತ್ತಿತ್ತು. ಈ ಮಧ್ಯೆ ಕ್ಯಾನಿಂಗ್ ಘಟಕವನ್ನು ಸ್ವಲ್ಪ ದೊಡ್ಡ ಮಟ್ಟಕ್ಕೆ ವಿಸ್ತರಿಸಿದಾಗ ನಾವು ಕೃಷಿ ಕೆಲಸ ಬಿಟ್ಟು ಉದ್ಯಮ ಕ್ಷೇತ್ರಕ್ಕೆ ಇಳಿದ ಹಾಗೆ ಅನಿಸತೊಡಗಿತು. ಏಕೆಂದರೆ ಬೇರೆ ಕಡೆ ಹೋಗಿ ಕಚ್ಚಾ ವಸ್ತು ಖರೀದಿ ಮಾಡಬೇಕಿತ್ತು. ಜತೆಗೆ ನೋಂದಣಿ, ಇನ್ಸ್ಪೆಕ್ಶನ್, ತೆರಿಗೆ ಇತ್ಯಾದಿ ಎಲ್ಲ ಹೊಸ ಅನುಭವ ಆಗಿತ್ತು. ಹೆಚ್ಚು ಸಮಯ ಇದನ್ನು ಮುಂದುವರಿಸಲು ಕಷ್ಟವಾಯಿತು. ನಾವು ಕೃಷಿಕರಾಗಿಯೇ ಮುಂದುವರಿಯಬೇಕು ಎಂಬ ಆಶಯ ಇದ್ದದ್ದರಿಂದ ಕ್ಯಾನಿಂಗ್ ಚಟುವಟಿಕೆಯನ್ನು ಕಡಿಮೆ ಮಾಡಬೇಕಾಯಿತು. ಒಣಗಿಸುವ ಸುಲಭ ತಂತ್ರಗಾರಿಕೆ ಆಗ ಹೊಳೆದ ಹೊಸ ಯೋಚನೆಯೆಂದರೆ ಹಣ್ಣುಗಳನ್ನು ಒಣಗಿಸುವುದು. ಇದು ಸುಲಭ ತಂತ್ರಗಾರಿಕೆ. ನಮ್ಮ ಹಳ್ಳಿಗಳಲ್ಲಿ ಹಪ್ಪಳ, ಸಂಡಿಗೆ ಎಲ್ಲ ಒಣಗಿಸಿ ಜೋಪಾನ ಮಾಡುವ ಕ್ರಮ ಮೊದಲೇ ಇತ್ತು. ಆದರೆ ಹಣ್ಣುಗಳನ್ನು ಬಿಸಿಲಲ್ಲಿ ಒಣಗಿಸಲು ಆರಂಭಿಸಿದರೆ ರಾತ್ರಿ ಶಾಖದ ಕೊರತೆಯಿಂದಾಗಿ ಅದು ಕೆಡತೊಡಗುತ್ತದೆ. ಇದಕ್ಕೆ ಪರಿಹಾರರೂಪದಲ್ಲಿ ನಾವು ಕಂಡುಕೊಂಡದ್ದು ಡ್ರೈಯರ್. ಸುಲಭ ಖರ್ಚಿನಲ್ಲಿ ಬಳಪದ ಕಲ್ಲು ಉಪಯೋಗಿಸಿ ನಿರ್ಮಿಸುವ ಸೌದೆ ಬಳಕೆಯ ಡ್ರೈಯರ್. ಹಣ್ಣುಗಳನ್ನು ಒಮ್ಮೆ ಒಣಗಿಸುವುದಕ್ಕೆ ಶುರುಮಾಡಿದರೆ ಆ ಪ್ರಕ್ರಿಯೆ ಕೊನೆಯ ವರೆಗೂ ನಿರಂತರ ಮುಂದುವರಿಯಬೇಕು. ನಡುವೆ ನಿಲ್ಲಿಸಬಾರದು. ಈ ಪ್ರಯೋಗ ತಕ್ಕಮಟ್ಟಿಗೆ ಯಶಕಂಡಿತು. ಅನಾನಸನ್ನು ದೊಡ್ಡಪ್ರಮಾಣದಲ್ಲಿ ಸಕ್ಕರೆ ಅಥವಾ ಉಪ್ಪು ಹಾಕಿ ಒಣಗಿಸಿ ಪ್ಯಾಕ್ ಮಾಡುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆವು. ಅದು ನಮಗೆ ಬಹಳಷ್ಟು ಸಹಕಾರಿಯಾಯಿತು. (ಪುಸ್ತಕದಿಂದ ಆಯ್ದ ಭಾಗ)
©2024 Book Brahma Private Limited.