ರೈತರೇ ಬದುಕಲು ಕಲಿಯಿರಿ

Author : ಚಾಮರಾಜ ಸವಡಿ

Pages 126

₹ 60.00




Year of Publication: 2006
Published by: ದರ್ಶನ ಪ್ರಕಾಶನ
Address: ಚಾಮರಾಜ ಸವಡಿ, ಕೇರಾಫ್‌ ಮಂಜುನಾಥ ಬೋರಟ್ಟಿ, 3ನೇ ಅಡ್ಡರಸ್ತೆ, ಬಿ.ಟಿ. ಪಾಟೀಲ್‌ ನಗರ, ಕೊಪ್ಪಳ - 583231
Phone: 9886317901

Synopsys

ರೈತರೇ ಬದುಕಲು ಕಲಿಯಿರಿ (ಸುಭಾಷ ಪಾಳೇಕರ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ವಿಧಾನದ ಪರಿಚಯ, ಮಳೆ ನೀರಿನ ಸದುಪಯೋಗ, ಕಡಿಮೆ ಮಳೆಯಲ್ಲಿಯೂ ಬೆಳೆಯುವ ವಿಧಾನಗಳು ಹಾಗೂ ರೈತರಿಗೆ ಬದುಕುವ ದಾರಿ ತೋರುವ ಕೈಪಿಡಿ) ಇವತ್ತು ನಮ್ಮ ರೈತ ತನ್ನ ಉಳಿವಿಗೆ ಸರ್ಕಾರದ ಮರ್ಜಿಯನ್ನೇ ಅವಲಂಬಿಸಿದ್ದಾನೆ. ಬಿತ್ತಲು ಅವನಿಗೆ ಸರ್ಕಾರವೇ ಬೀಜ ಕೊಡಬೇಕು, ಗೊಬ್ಬರ -ಕೀಟನಾಶಕ ನೀಡಬೇಕು. ಅಣೆಕಟ್ಟುಗಳ ಮೂಲಕ ಸರಿಯಾದ ಸಮಯಕ್ಕೆ ನೀರು ಬಿಡಬೇಕು. ಒಂದು ವೇಳೆ ಸರಿಯಾದ ಸಮಯದಲ್ಲಿ ಮಳೆ ಬಾರದಿದ್ದರೆ ಸರ್ಕಾರ ಮೋಡ ಬಿತ್ತನೆ ಮಾಡಿಸಿ ಮಳೆ ತರಬೇಕು. ಕಾಲಕಾಲಕ್ಕೆ ಆಕಾಶವಾಣಿ ಹಾಗೂ ಪತ್ರಿಕೆಗಳ ಮೂಲಕ ಸಲಹೆಗಳನ್ನು ನೀಡುತ್ತಿರಬೇಕು. ಬೆಳೆ ಕಟಾವಿಗೆ ಬಂದಾಗ ಬೆಂಬಲ ಬೆಲೆ ಘೋಷಿಸಬೇಕು. ಈ ಸರಣಿಯಲ್ಲಿ ಯಾವುದೇ ಒಂದು ಅಂಶ ಏರುಪೇರಾದರೂ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆಗ ಅವನ ಕುಟುಂಬಕ್ಕೆ ಸರ್ಕಾರವೇ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಅದು ರೈತ ವಿರೋಧಿ ಸರ್ಕಾರವಾಗುತ್ತದೆ.

ರೈತರ ಈ ಪರಿಯ ಅವಲಂಬನೆಗೆ ಒಂದೆಡೆ ಸರ್ಕಾರ ಕಾರಣವಾಗಿದ್ದರೆ ಇನ್ನೊಂದೆಡೆ ನಮ್ಮ ರೈತರೂ ಅದಕ್ಕೆ ಮುಖ್ಯ ಕಾರಣಕರ್ತರು. ಒಂದಾನೊಂದು ಕಾಲದಲ್ಲಿ ಸ್ವಾವಲಂಬಿಯಾಗಿದ್ದ ರೈತ , ಇಂತಹ ವ್ಯವಸ್ಥೆಯಿಂದಾಗಿ ಪೂರ್ತಿ ಅವಲಂಬಿತನಾದ. ಬೀಜ, ಗೊಬ್ಬರ, ಕೀಟನಾಶಕಗಳ ವ್ಯಾಪಾರಿಯಿಂದ ಹಿಡಿದು ಲೇವಾದೇವಿಗಾರರು, ಧಾನ್ಯ ವರ್ತಕರು, ಕಮಿಷನ್ ಏಜೆಂಟರು, ಬ್ಯಾಂಕ್‌ಗಳು, ವಿದ್ಯುಚ್ಛಕ್ತಿ ಕಂಪನಿಗಳು, ಕೊನೆಗೆ ಸರ್ಕಾರ- ಹೀಗೆ ಪ್ರತಿಯೊಬ್ಬರ ಮೇಲೆಯೂ ಅವನ ಅವಲಂಬನೆ ಬೆಳೆಯಿತು. ಪ್ರತಿಯೊಂದು ಅವಲಂಬನೆಗೂ ಆತ ಸಮರ್ಥನೆಗಳನ್ನು ಹುಡುಕಿಕೊಂಡ. ತನ್ನೆಲ್ಲ ಸಮಸ್ಯೆಗಳನ್ನು ಒಮ್ಮೆಲೇ ನಿವಾರಿಸಿಕೊಳ್ಳಬೇಕು ಎಂಬ ಆತುರ ಬೆಳೆಸಿಕೊಂಡ. ಏನಾದರೂ ಸರಿ, ಭೂಮಿಗೆ ವಿಷ ಹಾಕಿದರೂ ಸರಿ, ಹೆಚ್ಚು ಬೆಳೆದು ಎಲ್ಲರ ಸಾಲಗಳನ್ನು ತೀರಿಸಕೇಕೆಂದು ಹೊರಟ. ಅದರ ಪರಿಣಾಮ ಏನೆಂಬುದನ್ನು ನಾವೆಲ್ಲರೂ ಈಗ ಮನಗಾಣುತ್ತಿದ್ದೇವೆ.

ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದಾಗಿ ನಮ್ಮ ಭೂಮಿ ವಿಷಪೂರಿತವಾಗಿದೆ. ನಮ್ಮ ಬೆಳೆಗಳಲ್ಲಿ ಸತ್ವಕ್ಕಿಂತ ಹೆಚ್ಚು ವಿಷ ತುಂಬಿಕೊಂಡಿದೆ. ಇಂತಹ ಆಹಾರ ಸೇವಿಸಿ ನಮ್ಮ ಮಕ್ಕಳು ಬುದ್ಧಿಮಾಂದ್ಯವಾಗುತ್ತಿವೆ. ಎಳೆಯ ವಯಸ್ಸಿನಲ್ಲಿಯೇ ಡಯಾಬಿಟಿಸ್, ಹೃದಯರೋಗಗಳಿಗೆ ತುತ್ತಾಗತೊಡಗಿವೆ. ಅನಾರೋಗ್ಯ ಎಲ್ಲ ವಯಸ್ಸಿನವರನ್ನೂ ಕಾಡತೊಡಗಿದೆ. ಕಂಡು ಕೇಳರಿಯದ ಭೀಕರ ರೋಗಗಳು ಎಲ್ಲೆಡೆ ಆವರಿಸುತ್ತಿವೆ. ಒಂದೆಡೆ ಕಲುಷಿತಗೊಂಡ ಭೂಮಿ, ನೀರು ಹಾಗೂ ವಾಯು, ಇನ್ನೊಂದೆಡೆ ಅದಕ್ಕಿಂತ ಹೆಚ್ಚು ಕಲುಷಿತಗೊಂಡ ನಮ್ಮ ರೈತ- ಇವಕ್ಕೆಲ್ಲ ಒಂದೇ ಉತ್ತರ ನೈಸರ್ಗಿಕ ಕೃಷಿ. ಭೂಮಿ ತಾಯಿಗೆ ಮತ್ತೆ ಶರಣಾಗುವ ತತ್ವ ಇಲ್ಲಿದೆ. ಹಳೆಯದನ್ನೇ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿ ಬಳಸಿಕೊಳ್ಳುವ ಜ್ಞಾನವಿದೆ. ರಾಸಾಯನಿಕಗಳನ್ನು ಸುರಿಯದೇ, ಪರಿಸರದಲ್ಲಿ ದೊರೆಯುವ ವಸ್ತುಗಳನ್ನೇ ಗೊಬ್ಬರ ಮತ್ತು ಕೀಟ ನಿಯಂತ್ರಕಗಳನ್ನಾಗಿ ಬಳಸುವ ಜಾಣ್ಮೆಯಿದೆ. ಭೂಮಿಯ ಮೇಲಿರುವ ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ ಹಾಗೂ ಪ್ರತಿಯೊಂದು ಜೀವಿಯೂ ಇನ್ನೊಂದರ ಬೆಳವಣಿಗೆಗೆ ಪೂರಕ ಎಂಬ ಪ್ರಕೃತಿ ನಿಯಮವನ್ನು ಮನ್ನಿಸುವ ವಿನಯವಿದೆ. ಇಂತಹ ಉದಾತ್ತ ಕಲ್ಪನೆಯನ್ನು ಹೊಂದಿರುವ ನೈಸರ್ಗಿಕ ಕೃಷಿ ನಮ್ಮೆಲ್ಲ ನೋವುಗಳಿಗೆ ಉತ್ತರವಾಗಲಿದೆ. ಅಂತಹ ಸಾಧ್ಯತೆಗಳನ್ನು ನಿಮ್ಮ ಮುಂದೆ ತೆರೆದಿಡುವ ಸಣ್ಣ ಪ್ರಯತ್ನ ಈ ಪುಸ್ತಕ.

About the Author

ಚಾಮರಾಜ ಸವಡಿ

ಚಾಮರಾಜ ಸವಡಿ ಹುಟ್ಟಿದ್ದು ಬೆಳೆದಿದ್ದು ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿ. ಸದ್ಯ ಕೊಪ್ಪಳದಲ್ಲಿ ವಾಸ. ಶಿಕ್ಷಣ: ಬಿಎ, ಬಿ.ಲಿಬ್. ಹಾಗೂ ಎಂ.ಎ. ಇಂಗ್ಲಿಷ್. ವೃತ್ತಿಯಲ್ಲಿ ಪತ್ರಕರ್ತರು. ಭಾರತೀಯ ವಾಯುಪಡೆಯ ಕ್ಷಿಪಣಿ ವಿಭಾಗದಲ್ಲಿ ಏರ್ ಮನ್ ಎಂದು ಕೆಲಸ ಮಾಡಿದ ನಂತರ ಕೆಲ ಕಾಲ ಲೈಬ್ರೇರಿಯನ್  ಆಗಿದ್ದರು.  ಹಾಯ್ ಬೆಂಗಳೂರ್, ಓ ಮನಸೇ, ವಿಜಯ ಕರ್ನಾಟಕ, ಈಟಿವಿ ಕನ್ನಡ, ಪ್ರಜಾವಾಣಿ, ಸುವರ್ಣ ನ್ಯೂಸ್, ಸಮಯ ನ್ಯೂಸ್, ನ್ಯೂಸ್ 9, ಸಂಯುಕ್ತ ಕರ್ನಾಟಕ, ಕಸ್ತೂರಿ ನ್ಯೂಸ್, ಕನ್ನಡಪ್ರಭ, ವಿಶ್ವವಾಣಿ ಸಂಸ್ಥೆಗಳಲ್ಲಿ ಸಂಪಾದಕೀಯ ವಿಭಾಗದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಕೃತಿಗಳು: ರೈತರೇ ಬದುಕಲು ಕಲಿಯಿರಿ (ನೈಸರ್ಗಿಕ ...

READ MORE

Reviews

ರೈತರೇ ಬದುಕಲು ಕಲಿಯಿರಿ...!

ಈ ದೇಶದ ಬೆನ್ನೆಲುಬು ಎಂದು ಕರೆಯಿಸಿಕೊಳ್ಳುವ ರೈತ ನೈಸರ್ಗಿಕ ಕೃಷಿ ಅಥವಾ ದೇಸಿ ಕೃಷಿ ಪದ್ಧತಿಯಿಂದ ದೂರ ಉಳಿಯಲು ಕಾರಣ ಹಸಿರುಕ್ರಾಂತಿ. ಜೈವಿಕ ತಂತ್ರeನದ ಹೆಸರಿನಲ್ಲಿ ದೇಸಿ ಬೀಜಗಳಿಂದ ದೂರವಾಗಿದ್ದಾನೆ. ಕೃಷಿಯ ಹೆಸರಿನಲ್ಲಿ ಭೂಮಿಗೆ ವಿಷ ಉಣಿಸುತ್ತಿದ್ದಾನೆ. ಈ ಎಲ್ಲ ಪ್ರಯೋಗಗಳು ವಿಫಲವಾಗತೊಡಗಿದ್ದರಿಂದ ಈಗ ಆತ್ಮಹತ್ಯೆಗೆ ಶರಣಾಗತೊಡಗಿದ್ದಾನೆ. ಕೃಷಿ ಎಂದರೆ ಇದೇನಾ?

ಗಾಳಿ, ಚಳಿ, ಮಳೆ ಎನ್ನದೆ ಹಗಲಿರುಳು ದುಡಿದ ರೈತ ಸಮುದಾಯ ಭೂಮಿಯನ್ನು ಹಾಳಾಗಿಸಿ ತಾವೂ ಹಾಳಾಗುತ್ತಿರುವ ಈ ದಿನದಲ್ಲಿ ಗೆಳೆಯ ಪತ್ರಕರ್ತ ಚಾಮರಾಜ ಸವಡಿ ಅವರು ನೈಸರ್ಗಿಕ ಕೃಷಿ ಹರಿಕಾರ ಶ್ರೀ ಸುಭಾಷ ಪಾಳೇಕರ ಅವರ ಕೃಷಿ ವಿಧಾನಕ್ಕೆ ಮಾರುಹೋಗಿ ’ರೈತರೇ ಬದುಕಲು ಕಲಿಯಿರಿ’ ಎಂಬ ಪುಸ್ತಕ ಹೊರತರುವ ಮೂಲಕ ರೈತರಿಗೆ ಹೊಸ ಭರವಸೆ ಮೂಡಿಸಲು ಯತ್ನಿಸಿದ್ದಾರೆ.

ಭೂಮಿ, ಆಹಾರ, ಸಮಾಜ ಎಲ್ಲವೂ ವಿಷಮಯವಾಗುತ್ತಿರುವ ಸ್ಥಿತಿ ಒಂದೆಡೆ ಇದ್ದರೆ ಅಷ್ಟೇ ದುರಂತಮಯ ಸ್ಥಿತಿಯಲ್ಲಿ ನಮ್ಮ ರೈತ ಸಮುದಾಯ ಇದೆ. ಇಂತಹ ಸಂದರ್ಭದಲ್ಲಿ ಶ್ರೀ ಸುಭಾಷ ಪಾಳೇಕರ ಅವರ ಕಾರ್ಯಾಗಾರದಲ್ಲಿ ಪಾಲ್ಗೊಂಡು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಸರಳ ಭಾಷೆಯಲ್ಲಿ ಉಪಯುಕ್ತ ಪುಸ್ತಕವನ್ನು ಮಿತ್ರ ಚಾಮರಾಜ ಬರೆದಿರುವುದು ಸಂತಸದ ಸಂಗತಿ.

ಕೃಷಿ ಲಾಭದಾಯಕವಲ್ಲ ಎಂದು ರೈತರು ದೂರ ಉಳಿಯುತ್ತಿರುವ ಹಾಗೂ ನಗರಗಳಿಗೆ ವಲಸೆ ಹೋಗುತ್ತಿರುವ ಈ ಸಂದರ್ಭದಲ್ಲಿ ಎಲ್ಲ ರಂಗಗಳಿಗಿಂತ ಕೃಷಿರಂಗವೇ ಹೆಚ್ಚು ಲಾಭದಾಯಕವಾಗಬಲ್ಲದು ಎಂಬುದನ್ನು ಮನದಟ್ಟು ಮಾಡಿಸಲು ಈ ಪುಸ್ತಕದಲ್ಲಿ ಯತ್ನಿಸಲಾಗಿದೆ.

ಶ್ರೀ ಸುಭಾಷ ಪಾಳೇಕರ ಅವರ ಕಾರ್ಯಾಗಾರ ಒಂದು ಕೃಷಿ ಪದವಿಗೆ ಸಮಾನವಾದ ಸ್ಥಾನವನ್ನು ನೀಡುತ್ತದೆ. ಅದಕ್ಕೆ ಪೂರಕವಾಗಿ ’ರೈತರೇ ಬದುಕಲು ಕಲಿಯಿರಿ’ ಪುಸ್ತಕ ಹೊರಬಂದಿದೆ. ಈ ಚಿಕ್ಕ ಪುಸ್ತಕ ರೈತರಿಗೆ ಅರ್ಥವಾಗುವ ಭಾಷೆಯಲ್ಲಿ ಮೂಡಿ ಬಂದಿದ್ದು, ರೈತ ಸಮುದಾಯಕ್ಕೆ ಹೊಸ ಭರವಸೆ ಮೂಡಿಸುವಂತಿದೆ.

ಗಾಂಧಿ ಕನಸಿನ ಗ್ರಾಮಭಾರತಕ್ಕೆ ನನಸಿನ ಬುತ್ತಿ ಕಟ್ಟುತ್ತಿರುವ ಶ್ರೀ ಪಾಳೇಕರ ಅವರ ಪ್ರಯತ್ನಕ್ಕೆ ಪೂರಕವಾಗಿ ಸಂಪದ್ಭರಿತ ವಿಚಾರ ಮತ್ತು ಕೃಷಿ ವಿಧಾನಗಳಿಂದ ಮೈದುಂಬಿಕೊಂಡಿರುವ ಈ ಪುಸ್ತಕ ರೈತರಿಗೆ ಬದುಕಲು ಕಲಿಸುವ ಉತ್ತಮ ಪ್ರಯತ್ನ. ಮಾಗಿದ ಅನುಭವಗಳ ನಿರೂಪಣೆ ಪುಸ್ತಕದ ಪ್ರತಿಷ್ಠೆ ಹೆಚ್ಚಿಸಿವೆ.

ಈ ದೇಶ ನಿಜಕ್ಕೂ ಬಲಿಷ್ಠವಾಗಬೇಕೆಂದರೆ, ಬಡ ರೈತನ ಮುಖದಲ್ಲಿ ಉಲ್ಲಾಸದ ಕಳೆ ಮೂಡಿ ಬರಬೇಕೆಂದರೆ ಕೃಷಿ ಪದ್ಧತಿ ಸರಳವಾಗಬೇಕು. ಅದಕ್ಕೆ ಹಾಕುವ ಖರ್ಚು ತಗ್ಗಬೇಕು. ಇದು ಸಾಧ್ಯವಾಗುವುದು ಶ್ರೀ ಸುಭಾಷ ಪಾಳೇಕರ ಅವರ ನೈಸರ್ಗಿಕ ಕೃಷಿ ಪದ್ಧತಿಯನ್ನು ಸಂಪೂರ್ಣವಾಗಿ ಅನುಸರಿಸಿದಾಗ ಮಾತ್ರ. ಆ ವಿಧಾನಕ್ಕೆ ಚಾಮರಾಜ ಅವರ ಪುಸ್ತಕ ದಾರಿದೀಪವಾಗಬಲ್ಲದು. ಆತಂಕದಲ್ಲಿರುವ, ಸಂಕಷ್ಟಕ್ಕೆ ಸಿಲುಕಿರುವ ರೈತರು ನೆಮ್ಮದಿಯಿಂದ ಬದುಕುವುದನ್ನು ಕಲಿಸಬಲ್ಲುದು. ಅವರಲ್ಲಿ ಹೊಸ ಭರವಸೆ ಹುಟ್ಟಿಸಬಲ್ಲುದು. ಮಿತಿಮೀರಿದ ಜನಸಂಖ್ಯೆ, ಅಸಹಾಯಕತೆ, ಬಡನತ ಹಾಗೂ ನಿರುದ್ಯೋಗದಿಂದ ತತ್ತರಿಸಿ ದಿಕ್ಕುತಪ್ಪಿರುವ ರೈತ ಸಮುದಾಯಕ್ಕೆ ಈ ಪುಸ್ತಕ ಸುಗಮ ಬದುಕಿನ ದಿಕ್ಸೂಚಿಯಾಗಬಲ್ಲುದು.

ಬೆಳೆಗಳಿಗೆ ಹೊರಗಿನಿಂದ ಯಾವುದೇ ಗೊಬ್ಬರ, ಕೀಟನಾಶಕ ಹಾಕದೆ, ನೈಸರ್ಗಿಕವಾಗಿ ಲಭ್ಯವಿರುವ ಸಸ್ಯ, ಗೋಮೂತ್ರ, ಸಗಣಿ ಬಳಸಿ ಬೆಳೆಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪಾಳೇಕರ ಅವರ ಕೃಷಿ ವಿಧಾನ ಭೂಮಿಯ ಸತ್ವ ಹೆಚ್ಚಿಸುವಂತೆ, ಕಂಗೆಟ್ಟ ರೈತರಿಗೆ ಕೃಷಿಯಲ್ಲಿ ಮತ್ತೆ ಆಸಕ್ತಿ ಹುಟ್ಟಿಸುವಂತೆ ಮಾಡುವಲ್ಲಿ ಈ ಪುಸ್ತಕ ಸಮರ್ಥವಾಗಿದೆ.

ರೈತರು ಸ್ವಾವಲಂಬಿಗಳಾಗಿ, ಸ್ವಾಭಿಮಾನಿಗಳಾಗಿ, ಮತ್ತೆ ಅನ್ನದಾತರಾಗಿ ಬದುಕಬೇಕೆಂದರೆ, ನೆಮ್ಮದಿಯ ಬದುಕು ಸಾಗಿಸಬೇಕೆಂದರೆ, ಶ್ರೀ ಪಾಳೇಕರ ಅವರ ವಿಚಾರಧಾರೆಯನ್ನು ಕನ್ನಡದಲ್ಲಿ ಹೊರತಂದಿರುವ  ಶ್ರೀ ಚಾಮರಾಜ ಸವಡಿ ಅವರ ’ರೈತರೇ ಬದುಕಲು ಕಲಿಯಿರಿ’ ಪುಸ್ತಕವನ್ನು ಓದಬೇಕು. ಇದು ನಮ್ಮ ರೈತರಿಗೆ ಜೀವಾಮೃತವೂ ಹೌದು. 

Related Books