ಲಡಾಯಿ ಪ್ರಕಾಶನ ಕೇವಲ ಸಾಮಾಜಿಕ ಸಮಸ್ಯೆ, ಹೋರಾಟ ಕುರಿತ ಪ್ರಕಟಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೃಷಿ ಕುರಿತ ಪುಸ್ತಕವನ್ನೂ ಅದು ಹೊರತಂದಿದೆ. ಆದರೆ ಹಾಗೆ ಅದು ಬೇಸಾಯದ ಕುರಿತು ಪ್ರಕಟಿಸುವ ಪುಸ್ತಕ ಕೂಡ ಹೋರಾಟದ ಅಗತ್ಯ ಕುರಿತು ಮಾತನಾಡುತ್ತದೆ ಎನ್ನುವುದು ವಿಶೇಷ.
ಕೆ.ಪಿ.ಸುರೇಶ, ಮಂಜುನಾಥ ಹೊಳಲು ಹಾಗೂ ಪಿ. ವಾಸು ಅವರು ಬರೆದ ’ಬಿಟಿ ಹತ್ತಿ- ರೈತರ ಕೊರಳ ಕುಣಿಕೆ ಬಿಗಿಗೊಳಿಸಿದ ಬೆಳೆ ’ ಅಂತಹ ಒಂದು ಕೃತಿ.
ರಾಯಚೂರಿನ ಸ್ಥಿತಿಗತಿಯನ್ನೇ ಎತ್ತಿಕೊಂಡು ಮಾತನಾಡುವ ಕೃತಿಯ ಒಂದು ಭಾಗವನ್ನು ಗಮನಿಸಿ: ಎರಡು ಜೀವನದಿಗಳು ಹರಿದರೂ ರಾಯಚೂರು ಜಿಲ್ಲೆಯೇಕೆ ಇಷ್ಟು ಪಡಿಪಾಟಲಿನಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟವೇನಿಲ್ಲ. ಇತಿಹಾಸದಲ್ಲಿ ಸುಮಾರು ನಾಲೈದು ಶತಮಾನ ದಕ್ಷಿಣ ಭಾರತದ ಹೆಬ್ಬಾಗಿಲು ಆಗಿದ್ದ ಈ ಪ್ರಾಂತ್ಯ (ಉಳಿದ ಮೂರು ಜಿಲ್ಲೆಗಳನ್ನೂ ಸೇರಿಸಿ) ಸಮೃದ್ಧಿಯ ತಾಣವಾಗಿತ್ತು. ಆಧುನಿಕ ಕೃಷಿ ಕಾಲಿಟ್ಟ ಮೇಲೆ ಎಲ್ಲವೂ ಸಾಮಗೋಪಾಂಗವಾಗಿ ಅನುಷ್ಠಾನ ವಾಗಿದ್ದರೆ, ಅತ್ತ ಶಿಕ್ಷಣ ಆರೋಗ್ಯವೂ ದಕ್ಕದೇ ಇತ್ತ ಕೃಷಿಯಲ್ಲಿ ದಿಕ್ಕೂ ದಕ್ಕದೇ ಬೇಸಿಗೆಯಲ್ಲಿ ಗುಳೆ ಹೋಗುವ ಮಳೆ ಬಿದ್ದ ತಕ್ಷಣ ಬೀಜ ಗೊಬ್ಬರ, ಟ್ರಾಕ್ಟರ್ ಅಂತ ಹುಚ್ಚು ಹಿಡಿದಂತೆ ಅಲೆವ ರೈತ ಸಮುದಾಯ ಸೃಷ್ಟಿಯಾಗುತ್ತಿರಲಿಲ್ಲ.
ಮುಂದುವರಿದು ಪುಸ್ತಕ, ’ರಾಯಚೂರಿನ ರೈತರ ಸಂಕಷ್ಟ ಕೇವಲ ಬಿಟಿ ಕಾರಣಕ್ಕೆ ಎಂಬುದು ನಿಜ. ಆದರೆ ಇದರಿಂದಾಚೆಯ ಸಂಕೀರ್ಣ ಚಿತ್ರವನ್ನು ನಾವು ನೋಡಬೇಕಿದೆ. ಕಳೆದ ಮೂರು ದಶಕಗಳಿಂದ ಕೃಷಿ ಲೋಕದಲ್ಲಾದ ಬದಲಾವಣೆಗಳೆಲ್ಲಾ ರೈತನ ಕತ್ತಿನ ಕುಣಿಕೆಯನ್ನು ಬಿಗಿಗೊಳಿಸುತ್ತಾ ಬಂದಿದೆ. ಉಪ್ಪು ತಿನ್ನಿಸಿ ಹತ್ತು ಮೈಲಾಚೆಯ ಬಾವಿಗೆ ಉರಿಬಿಸಿಲಲ್ಲಿ ಓಡಲು ಹೇಳಿದಂತೆ ಈ ಸ್ಥಿತಿ ಇದೆ. ವ್ಯಾಪಾರೀ ಬೆಳೆಯನ್ನು ಏಕಬೆಳೆಯಾಗಿ ಬೆಳೆದು ಆರ್ಥಿಕ ಲಾಭ ಮಾಡಿಕೊಳ್ಳುವ ಒತ್ತಾಸೆಯೊಂದನ್ನು ನಮ್ಮ ಸರ್ಕಾರ ಹೆಚ್ಚಿಸುತ್ತಾ ಬಂದಂತೆ ರೈತರ ಸಂಕಷ್ಟ ಇನ್ನಷ್ಟು ದಾರುಣವಾಗಿದೆ’ ಎಂದು ಮರಗುತ್ತದೆ.
©2024 Book Brahma Private Limited.