‘ಮಗಳಿಗೆ ಅಪ್ಪ ಬರೆದ ಪತ್ರಗಳು’ ಕೃತಿಯು ಕಪಟರಾಳ ಕೃಷ್ಣರಾಯ ಅವರ ಅನುವಾದಿತ ಪತ್ರಸಂಗ್ರಹ ಕೃತಿಯಾಗಿದೆ. ಇಲ್ಲಿನ ಪತ್ರಗಳು ಜವಾಹರಲಾಲ ನೆಹರೂ ಅವರು ಮಗಳು ಇಂದಿರಾ ಅವರಿಗೆ ಬರೆದ ಜಗತ್ತಿನ ಕಾಲದ ಸಂಕ್ಷಿಪ್ತ ವೃತ್ತಾಂತಗಳಾಗಿವೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ವರ್ಷದ ಮಗಳಿಗೆ ಬರೆದ ಸಂಗ್ರಹ ಈ ಪುಸ್ತಕವಾಗಿದೆ. ಒಂದು ಶತಮಾನದ ಹಿಂದೆ ತಂದೆಯೊಬ್ಬ ಮಗಳಿಗೆ ಲೋಕದ ಬಾಗಿಲನ್ನು ತೆರೆದು ತೋರಿಸಿದ ಪರಿ ಈ ಪುಸ್ತಕದಲ್ಲಿದೆ.
ಇಂದಿರಾ ಗಾಂಧಿ ಹತ್ತು ವರ್ಷದ ಹುಡುಗಿಯಾಗಿದ್ದಾಗ ತನ್ನ ಬೇಸಿಗೆ ರಜೆಯನ್ನು ಮಸೂರಿಯಲ್ಲಿ ಕಳೆಯುತ್ತಿದ್ದರೆ, ಆಕೆಯ ತಂದೆ ನೆಹರೂ ಅಲಹಾಬಾದಿನಲ್ಲಿ ತಮ್ಮ ಕೆಲಸದಲ್ಲಿದ್ದರು. ಆ ಬೇಸಿಗೆಯ ದಿನಗಳಲ್ಲಿ ನೆಹರೂ ಆಕೆಗೆ ಭೂಮಿಯ ಹುಟ್ಟು, ಮನುಕುಲ ಮತ್ತು ಜೀವ ವಿಕಸನದ ಕುರಿತು ಹಾಗೂ ನಾಗರಿಕತೆ ಮತ್ತು ಸಮಾಜಗಳ ಬೆಳವಣಿಗೆಯ ಕತೆಯನ್ನು ಸರಣಿ ಪತ್ರಗಳ ರೂಪದಲ್ಲಿ ಬರೆದರು. 1928ರಲ್ಲಿ ಬರೆದ ಈ ಪತ್ರಗಳು ಈ ಕಾಲಕ್ಕೂ ಸ್ಪಂದಿಸುವಷ್ಟು ತಾಜಾತನದಿಂದ ಕೂಡಿದೆ. ನಮ್ಮ ಬೆರಳ ತುದಿಯಲ್ಲೇ ಜಗತ್ತಿನ ಚರಿತ್ರೆ, ವಾರ್ತೆಗಳು ಲಭ್ಯವಿದ್ದರೂ ಮಕ್ಕಳು ಅದನ್ನು ತಿಳಿದುಕೊಳ್ಳಲು ಒಂದು ಸರಿಯಾದ ಕ್ರಮ ಅಗತ್ಯವಿದ್ದು, ಆ ಕ್ರಮ ಈ ಪುಸ್ತಕದ ಓದಿನಿಂದ ಸಾಧ್ಯವಾಗಲಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಪ್ರಕೃತಿ ಮತ್ತು ಮನುಷ್ಯರ ವಿಕಸನದ ಕತೆಗಳು ನೆಹರೂವಿಗೆ ಯಾವುದೇ ಕತೆ ಕಾದಂಬರಿಗಳಿಗಿಂತ ಹೆಚ್ಚು ಆಸಕ್ತಿಪೂರ್ಣವಾಗಿತ್ತೆಂಬುದನ್ನು ಈ ಪತ್ರಗಳಲ್ಲಿ ಕಾಣಬಹುದು.
©2024 Book Brahma Private Limited.