ಇಲ್ಲಿ ಹಲವರಿಗೆ ತಿಳಿಯದ ಅಪ್ಪನ ಮಗು ಮುಖವುಂಟು. ತೀರ ನಿಷ್ಟುರ ಸತ್ಯದ ಬನ್ನಂಜೆ ಇದ್ದಾರೆ. ಯಾವ ಲೋಕದ ದರ್ಶನಕ್ಕೂ ತೆರೆಯದ ಅಧ್ಯಾತ್ಮ ಹೇಳಿದ ಆಚಾರ್ಯರು ಇದ್ದಾರೆ. ಎಲ್ಲರನೂ ನಿಬ್ಬೆರಗು ಮಾಡಿ, ಜಾತಿ ಮತಗಳನ್ನು ಮೀರಿ, ದಲಿತ ಜನಾಂಗದೊಳಗೊಬ್ಬ ಸಂಸ್ಕೃತ ವಿದ್ವಾಂಸ ಹುಟ್ಟಲಿ ಅಂದು ನನ್ನ ಜನ್ಮ ಸಾರ್ಥಕ, ಎಂದು ಅರುವತ್ತರ ದಶಕದಲ್ಲಿ ಘೋಷಿಸಿದ ಗೋವಿಂದ ಇದ್ದಾರೆ. ನಿಜದ ನಡೆಯಲಿ ಅವಧೂತ ಪುತ್ತೂರು ಅಜ್ಜನ ಜೊತೆ ಹೆಜ್ಜೆ ಹಾಕಿದ ಪದಲೀಲೆಯನ್ನು ಸಾಕ್ಷೀಭೂತರೇ ಬಿತ್ತರಿಸಿ, ಆಚಾರ್ಯರು ನೆಲಕ್ಕೆ ಇಳಿದ ಸಂದೇಶವಾಹಕ ಎಂಬುದನು ಅರಳಿಸಿ ಕೊಟ್ಟ ಬನ್ನಂಜೆ ಗೋವಿಂದಾಚಾರ್ಯ ಇದ್ದಾರೆ. ಹದಿನೆಂಟರಿಂದ ಮೊನ್ನೆ ಆಚಾರ್ಯರು ಹೊರಡುವವರೆಗೂ ಒಡನಾಡಿಯಾಗಿ, ನಾಡಿನಾಡಿಗಳ ಬಡಿತದಲ್ಲೆಲ್ಲ ಜೊತೆ ಇದ್ದು, ಅವರನ್ನು ನೆನೆದ ಹಿರಿಯರೊಬ್ಬರು ಬರೆದ ಚಾರಿತ್ರಿಕ ದಾಖಲೆ ಇದೆ. ಈ ಪರಂಪರೆಯನ್ನು ಪರದೇಶಿಯಾಗಲು ಬಿಡದೆ, ವಿದೇಶೀಯರೆಲ್ಲ ಈ ಕಡೆ ತಿರುಗಿ ನೋಡುವಂತಾಗಿ ಆಚಾರ್ಯರಿಗೆ ಮಾರುಹೋಗಿ ಹುಡುಕಿ ಈ ನೆಲಕ್ಕೆ ಬಂದ ಅನ್ಯದೇಶೀಯರು ಕಂಡ ವಿಸ್ಮಯದ ದೇಸೀ ಬನ್ನಂಜೆ ಇದ್ದಾರೆ. ಗೊತ್ತಿರುವವರಿಗೆ ಗೊತ್ತೇ ಇಲ್ಲದ ಗೊತ್ತಿಲ್ಲದವನಿಗೆ ಗೊತ್ತಾಗಿಯೇ ಬಿಟ್ಟರು ಎಂಬಷ್ಟು ಆಪ್ತವಾಗುವ ಎಲ್ಲ ಗೊತ್ತುಗಳನ್ನು ಮತ್ತೆ ನೋಡಬೇಕು ಎನಿಸುವ, ಯಾವ ಗತ್ತೂ ಇಲ್ಲದ ಒಬ್ಬ ಸರಳಜೀವಿ ಬನ್ನಂಜೆ ಗೋವಿಂದಾಚಾರ್ಯರು, ಯಾರ ಗುತ್ತಿಗೆಗೂ ಸಿಗದೇ ಗುರಿಕಾರನಾದ ಅಪೂರ್ವ ವಿವರಗಳಿವೆ.
©2024 Book Brahma Private Limited.