ಲೇಖಕ ಪ್ರೊ. ಕೆ. ಎಂ. ಸೀತಾರಾಮಯ್ಯ ಅವರ ಪುರಾಣಕ್ಕೆ ಸಂಬಂಧಪಟ್ಟಿರುವ ಕೃತಿ ʻಗ್ರೀಕ್ ಮಿಥಕಗಳುʼ. ಈ ಗ್ರಂಥದಲ್ಲಿ ವಿಜ್ಞಾನ, ಚರಿತ್ರೆ–ಭೂಗೋಳ, ಗ್ರೀಕರ ತಾತ್ವಿಕ ಚಿಂತನೆಗಳು ಹಾಗೂ ಗ್ರೀಕರ ವಿಶ್ವದ ಇತರ ದೇಶಗಳೊಂದಿಗಿನ ವಾಣಿಜ್ಯ ವ್ಯವಹಾರ ಸಂಬಂಧಗಳು, ಸಾಮಾಜಿಕ, ರಾಜಕೀಯ ಜನಜೀವನ ಸೇರಿ ಗ್ರೀಕರ ಬಗೆಗಿನ ಒಂದು ಚಿತ್ರಣವೇ ಇಲ್ಲಿದೆ. ಲೇಖಕ ಮತ್ತು ಚಿಂತಕ ಪ್ರೊ. ಅ. ರಾ. ಮಿತ್ರ (ಪ್ರೊ.ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ) ಅವರು ಪುಸ್ತಕದಲ್ಲಿ, “ಪುರಾಣ ಜಗತ್ತಿನ ಒಂದು ಸುಂದರ ಇುಣುಕು ನೋಟವನ್ನು ಲೇಖಕರು ಈ ಗ್ರಂಥದಲ್ಲಿ ಕಾಣಿಸಿದ್ದಾರೆ. ತುಂಬ ಆಳವಾದ ಅಧ್ಯಯನಶೀಲತೆ, ಸಾರವತ್ತಾದ ಅಂಶಗಳ ಸಂಗ್ರಹಣ ಮತ್ತು ತುಂಬ ಸರಳವಾದ ಆಕರ್ಷಕ ಗದ್ಯದ ಕಥನ ಕ್ರಮಗಳನ್ನು ಈ ಗ್ರಂಥದಲ್ಲಿ ಕಾಣಬಹುದಾಗಿದೆ. ಭಾರತೀಯ ಮಿಥಕಗಳಂತೆಯೇ ಗ್ರೀಕ್ ಮಿಥಕಗಳೂ ಇತಿಹಾಸವನ್ನು ತಮ್ಮ ಗರ್ಭದಲ್ಲಿರಿಸಿಕೊಂಡ ಆದಿಮ ಕಥನಗಳಾಗಿವೆ. ಪಾಶ್ಚಾತ್ಯ ಸಾಹಿತ್ಯದಲ್ಲಿ ಲೀಲಾಜಾಲವಾಗಿ ಉಲ್ಲೇಖಿತವಾಗುವ ಪುರಾಣನಾಮಗಳ ಸಮಗ್ರಕೋಶವೊಂದರ ಅಗತ್ಯ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಎಷ್ಟಿದೆಯೆಂಬುದನ್ನು ಹೇಳಬೇಕಾಗಿಲ್ಲ. ಈ ಅಗತ್ಯವನ್ನು ಶ್ರೀ ಕೆ. ಎಂ. ಸೀತಾರಾಮಯ್ಯನವರ ಗ್ರಂಥವು ಸಮರ್ಪಕವಾಗಿ ಪೂರೈಸಿಕೊಡುತ್ತದೆ. ತುಂಬ ಭಾವುಕವಾದ ಕಥೆಗಳನ್ನು ಲೇಖಕರು ಹೃದ್ಯವಾಗಿ ನಿರೂಪಿಸಿರುವುದೇ ಅಲ್ಲದೆ ಅಗತ್ಯ ಕಂಡು ಬಂದ ಸಂದರ್ಭಗಳಲ್ಲಿ ಅವುಗಳ ಸಾಂಸ್ಕೃತಿಕ ಸಂಬಂಧಗಳನ್ನೂ ಸಮಂಜಸವಾಗಿ ಜೋಡಿಸಿ ಕೊಟ್ಟಿದ್ದಾರೆ. ತುಂಬ ಮನೋರಂಜಕವೂ ಹೃದಯಂಗಮವೂ ಆದ ಇಲ್ಲಿಯ ಕಥೆಗಳು ನಮ್ಮನ್ನು ಸುಲಭವಾಗಿ ಗ್ರೀಕ್ ಸಾಂಸ್ಕೃತಿಕ ಆವರಣಕ್ಕೆ ಕರೆದುಕೊಂಡು ಹೋಗುತ್ತವೆ. ಮೂಲದ ಹೆಸರುಗಳನ್ನು ಯಾವ ರೀತಿ ಕೊಡಬೇಕು ಎಂಬಂಥ ಸಣ್ಣ ವಿಷಯದ ಬಗೆಗೂ ಲೇಖಕರು ತುಂಬ ಲಕ್ಷ್ಯ ಹರಿಸಿರುವುದನ್ನು ಗಮನಿಸಿದಾಗ ಅವರ ಅಧ್ಯಯನದ ಶಿಸ್ತು ಬೆರಗುಗೊಳಿಸುತ್ತದೆ” ಎಂದು ಹೇಳಿದ್ದಾರೆ.
©2024 Book Brahma Private Limited.