ಲೇಖಕ, ಕೃಷಿ ವಿಜ್ಞಾನಿ ಡಾ.ಎ.ಎಸ್. ಕುಮಾರಸ್ವಾಮಿ (ಅಬ್ಬಿಗೆರೆ ಶಿವಲಿಂಗಪ್ಪ ಕುಮಾರಸ್ವಾಮಿ) ಜನಿಸಿದ್ದು 1953 ಜನವರಿ 20 ರಂದು. ದಾವಣಗೆರೆ ಜಿಲ್ಲೆ ದೊಡ್ಡಬ್ಬೀಗೆರೆ ಗ್ರಾಮದವರು. ಸಂತೇಬೆನ್ನೂರಿನಲ್ಲಿ ಎಸ್‌ಎಸ್‌ಎಲ್‌ಸಿ ವರೆಗೂ ಶಿಕ್ಷಣ ಪಡೆದು, ಧಾರವಾಡ ಹಾಗೂ ಬೆಂಗಳೂರಿನಲ್ಲಿ ಕೃಷಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪಡೆದಿದ್ದಾರೆ. ಬೆಂಗಳೂರಿನ ಕೃಷಿ ಮಹಾವಿದ್ಯಾಲಯದಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಪ್ರಾಧ್ಯಾಪಕರಾಗಿ, ವಲಯ ಕೃಷಿ ಸಂಶೋಧನ ಕೇಂದ್ರದಲ್ಲಿ ತಂಬಾಕು ಬೆಳೆ ಬೇಸಾಯ ಶಾಸ್ತ್ರಜ್ಞರಾಗಿ, ಹಾಸನ ಕೃಷಿ ಕಾಲೇಜು ಸ್ಥಾಪಕ ನಿರ್ದೇಶಕರು ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.
ತಮ್ಮ ಅನುಭವ, ಸಂಶೋಧನಾ ವಲಯದ ಬಗ್ಗೆಯೇ ಸಾಹಿತ್ಯ ಕೃಷಿಯನ್ನು ನಡೆಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಹನಿ ನೀರಾವರಿ, ವ್ಯವಸ್ಥಿತ ಕೃಷಿಗೆ ದಾರಿ, ಆಹಾರ ಸುರಕ್ಷತೆ, ಜಾಗತಿಕ ಕೃಷಿ ವ್ಯವಸ್ಥೆ, ಕೃಷಿ ವ್ಯವಸ್ಥೆಯಲ್ಲಿ ಮಾನವ ಸಂಪನ್ಮೂಲ, ರೈತರ ಆತ್ಮಹತ್ಯೆ –ಒಂದು ಮನೋ ಸಾಮಾಜಿಕ ವಿಶ್ಲೇಷಣೆ, ಅಂತರ್ಜಲ ಬಳಕೆ, ಹನಿ ಹನಿಯಲ್ಲೂ ಕಟ್ಟಬೇಕಿದೆ ರೈತನ ಬದುಕು, ಮೋಡ, ಮಳೆ ಮತ್ತು ಬೆಳೆ, ಹನಿ ನೀರಾವರಿ, ಭವಿಷ್ಯದ ಕೃಷಿಗೆ ವ್ಯವಸ್ಥಿತ ದಾರಿ ಹಾಗೂ ಬಾರದಿರಲಿ ಬರಗಾಲ ಮುಂತಾದವು. ಇವರಿಗೆ ಶ್ರೇಷ್ಠ ಕೃಷಿ ವಿಜ್ಞಾನ ಲೇಖಕ, ಹಸೂಡಿ ವೆಂಕಟಾಚಲ ಶಾಸ್ತ್ರಿ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿಯ 2016 ನೇ ಸಾಲಿನ ವಿಜ್ಞಾನ ವಿಭಾಗದ ಶ್ರೇಷ್ಠ ಕನ್ನಡ ಪುಸ್ತಕ ಪ್ರಶಸ್ತಿ, ಶ್ರೇಷ್ಠ ಕೃಷಿ ಪುಸ್ತಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಒಲಿದು ಬಂದಿವೆ.