ಹೇಳೇ ಸಖಿ ಕೇಳೋ ಸಖ- ಇದು ಕಗ್ಗೆರೆ ಪ್ರಕಾಶ್ ಅವರ ಕೃತಿ. ಇದೊಂದು ರೀತಿಯ ವಿಶೇಷ ಪುಸ್ತಕ, ಇದನ್ನು ಪತ್ರ ಸಾಹಿತ್ಯವೆಂದೇ ಗುರುತಿಸಲಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪತ್ರ ಸಾಹಿತ್ಯವೂ ಪ್ರಮುಖವಾದುದೇ. ಖಾಸಗಿಯಲ್ಲದ ಸಾರ್ವತ್ರಿಕ ವಿಷಯಗಳ ಕುರಿತು ಬರೆದ ಚಿಂತನಶೀಲ ಪತ್ರಗಳನ್ನು ಪ್ರಕಟಿಸುವುದರಲ್ಲಿ ತಪ್ಪಿಲ್ಲ. ಈ ಬಗೆ ಪತ್ರಗಳು ಹಿಂದೆಯೂ ವಿಶ್ವ ಸಾಹಿತ್ಯದಲ್ಲಿ ಪ್ರಕಟವಾದದ್ದೂ ಇದೆ. ಮೌಲಿಕ ವಿಚಾರಗಳು ಯಾವ ರೂಪದಲ್ಲಿದ್ದರೂ ಸರಿಯೇ ಪ್ರಕಟಾರ್ಹವೇ. ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾ ಪ್ರಿಯದರ್ಶಿನಿಗೆ ಬರೆದ ಕಾಗದಗಳು ಕೇವಲ ಕಾಗದಗಳಲ್ಲ, ಸಾಹಿತ್ಯಿಕ ಪತ್ರಗಳು, ಚಿಂತನಶೀಲ ಬರಹ ಅಲ್ಲಿಯದು. ಪತ್ರಗಳಲ್ಲೂ ಸಾಂಸ್ಕೃತಿಕ ಸಂಗತಿಗಳ ದಾಖಲೆ ಇರಬಹುದು. ಸಾಹಿತ್ಯಕ ಮಹತ್ವಗಳಿರಬಹುದು. ಎಲ್ಲಕ್ಕಿಂತ ಮಿಗಿಲಾಗಿ ಮಾನವೀಯ ಮೌಲ್ಯಗಳು ಅಲ್ಲೆಲ್ಲಾ ಪಲ್ಲವಿಸುವ ಮೂಲಕ ಅತ್ಯಂತ ಮಹತ್ವದ ಸಾಹಿತ್ಯಕ ತುಣುಕುಗಳೂ ಅದಾಗಿರಬಹುದು. ಅಲ್ಲಿ ಕೋಲ್ಮಿಂಚುಗಳೂ ಇಣುಕಬಹುದು.
ಈ ಪತ್ರಗಳಲ್ಲಿ ಸ್ನೇಹ, ಪ್ರೀತಿ, ವಿಶ್ವಾಸ-ಪದಗಳ ವೈಶಾಲ್ಯತೆಯ ದರ್ಶನವಾಗಿದೆ ಎನ್ನುತ್ತಾರೆ ಹಿರಿಯ ಕವಿ ದೊಡ್ಡರಂಗೇಗೌಡ. ಪ್ರೀತಿ ಅನ್ನೋದು ತಾಯಿ ಇದ್ದ ಹಾಗೆ. ಸ್ನೇಹ ಅನ್ನೋದು ದೇವರಿದ್ದ ಹಾಗೆ- ಎಂಬ ಹೊಸ ಬಗೆಯ ಮಾತುಗಳು ಮೂಡುವ ಮೂಲಕ ಸಾಹಿತ್ಯಕವಾದ ಚೌಕಟ್ಟು ವಿಸ್ತಾರವಾಗಿ ಕಲಾತ್ಮಕತೆಯ ಸಾನಿಧ್ಯ ಬರಹಕ್ಕೆ ಪ್ರಾಪ್ತವಾಗಿದೆ.
ಅದಕ್ಕೂ ಮುಖ್ಯವಾಗಿ ಕಾವ್ಯಾತ್ಮಕ ಸ್ಪಂದನಗಳಿವೆ. ಅಯಾಚಿತವಾಗಿ ಇಲ್ಲಿ ಸಾಹಿತ್ಯ ಸೃಜನೆ ಸಾಧಿತವಾಗಿದೆ. ಆಶು ಕವಿತೆಗಳೂ ಸಹ ಅಂಕುರಿಸಿ ಅವಕ್ಕೊಂದು ಬೆಡಗು ಸಿಕ್ಕಿದೆ. ಮೌಲ್ಯ ದಕ್ಕಿದೆ ಎಂಬುದು ಕವಿ ದೊಡ್ಡರಂಗೇಗೌಡರ ಅಭಿಪ್ರಾಯ. ಮಮತೆ ಮಡಿಲಾದರೆ ಸ್ನೇಹ ಕಡಲು ಮುಂತಾದ ಮುತ್ತಿನಂಥ ಮಾತುಗಳು ಅಂಕುರಿಸಿದ ಬಗೆ ಸೋಜಿಗ. ಆತ್ಮೀಯತೆಯ ಜಗವೇ ಹಾಗೆ. ಆದ್ದರಿಂದಲೇ ಪ್ರೀತಿ ಹಿಡಿಯಾದರೆ ತ್ಯಾಗ ಬೊಗಸೆ ಎಂಬಂಥ ಸಾಹಿತ್ಯಿಕ ಸ್ವಾತಿಮುತ್ತುಗಳು ನಮ್ಮ ಕಣ್ಮನವನ್ನು ಕೋರೈಸಿ ಹೃದಯಕ್ಕೆ ಹತ್ತಿರವಾಗುವುದು.
ಈ ಪತ್ರಗಳಿಗೆ ಒಂದು ಬಗೆಯ ಲಲಿತ ಪ್ರಬಂಧದ ಸ್ವರೂಪ ಕೂಡಾ ಒಗ್ಗಿಕೊಂಡಿದೆ. ಹೀಗಾಗಿ ಸಾಹಿತ್ಯಿಕ ಸೆಲೆ ಹಿಗ್ಗಿದೆ. ಆತ್ಮೀಯತೆಯ ನೆಲೆ ಸುಗ್ಗಿಯಾಗಿದೆ. ಇಲ್ಲಿ ಎಷ್ಟೊಂದು ಮಾರ್ಮಿಕ ಮಾತುಗಳು ತಮನೆ ತಾವೇ ಪಲ್ಲವಿಸಿವೆ ಎಂದರೆ ಅವೇ ಒಂದು ಅಧ್ಯಯನ ಕೂಡಾ ಆಗಬಹುದು.
ಹೇಳೇ ಸಖಿ ಕೇಳೋ ಸಖ ಕೃತಿಯ ಬಗೆಗೆ ಲೇಖಕ ಕಗ್ಗೆರೆ ಪ್ರಕಾಶ್ ಅವರ ಮಾತುಗಳು.
©2024 Book Brahma Private Limited.