’ನ್ಯೂಕ್ಲಿಯಸ್ ಒಂದು ಪರಿಚಯ’ ಡಾ. ಪಾಲಹಳ್ಳಿ ವಿಶ್ವನಾಥ್ ಅವರ ಗದ್ಯ ಬರಹವಾಗಿದೆ. ವಿಜ್ಞಾನಿಗಳು ಮತ್ತು ಅವರ ತಪಸ್ಸಿನ ಸಾಧನೆಗಳಾದ ಆವಿಷ್ಕಾರಗಳೆಲ್ಲ ಈ ಕೃತಿಯಲ್ಲಿ ತುಂಬಿಕೊಂಡಿವೆ. ಹಲವಾರು ವರ್ಷಗಳಷ್ಟು ಕಾಲ ತಾಳ್ಮೆಯಿಂದ ಕಾದು ಅಣು- ರೇಣುಗಳನ್ನೂ ಜಾಲಾಡಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಇಂಥ ಮಹತ್ಸಾಧನೆಗಳನ್ನು ವಿವರಿಸಿ ಜೊತೆಗೆ ನಮ್ಮ ಜ್ಞಾನವನ್ನೂ ಹೆಚ್ಚಿಸುವ ಬರವಣಿಗೆಯಿದು. ನ್ಯೂಕ್ಲಿಯರ್ ಫಿಸಿಕ್ಸ್ ಬಗ್ಗೆ ಪರಿಚಯಿಸುವುದು ಇಲ್ಲಿನ ಮುಖ್ಯ ಉದ್ದೇಶವಾದರೂ ಇನ್ನಿತರ ಕಣವಿಜ್ಞಾನ, ವಿಕಿರಣ, ನ್ಯೂಕ್ಲಿಯಸ್, ಬೈಜಿಕ ಪ್ರಕ್ರಿಯೆ - ಶಕ್ತಿ, ಮಹಾಸ್ಪೋಟ, ಪರಮಾಣು - ಬಾಂಬ್ ಇತ್ಯಾದಿಗಳೂ ವಿಜ್ಞಾನದಲ್ಲಿ ಒಂದಕ್ಕೊಂದು ಪೂರಕವಾಗಿರುವುದರಿಂದ ಒಂದನ್ನು ಬಿಟ್ಟು ಇನ್ನೊಂದು ಇಲ್ಲ. ಭೌತವಿಜ್ಞಾನವೇ ಎಲ್ಲಕ್ಕೂ ಮೂಲವಾದ್ದರಿಂದ ಸಹಜವಾಗಿಯೇ ಇಲ್ಲಿನ ಬರಹಗಳು ಒಂದಕ್ಕೊಂದು ಸಂಬಂಧಿಸಿವೆ. ಪತ್ತೇಕಾರಿ ಉಪಕರಣಗಳು ಅತ್ಯಂತ ಮಹತ್ವದ್ದಾಗಿದ್ದು ಅವುಗಳ ಆವಿಷ್ಕಾರದಿಂದಾಗಿ ಇಂದು ವಿಜ್ಞಾನಿಗಳು ವಿಶ್ವವನ್ನೇ ತಮ್ಮ ಸನಿಹಕ್ಕೆ ಎಳೆದುಕೊಂಡಂತಾಗಿದೆ. ಒಟ್ಟಿನಲ್ಲಿ ಶಾಲಾ ಕಾಲೇಜಿನ ವಿಜ್ಞಾನದ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಪುಸ್ತಕವಿದು.
©2024 Book Brahma Private Limited.