ಲೇಖಕರಾದ ಕೊಳ್ಚಪ್ಪೆ ಗೋವಿಂದ ಭಟ್ ಮತ್ತು ಲಕ್ಷ್ಮೀ ವಿ ಭಟ್ ಅವರ ಕೃತಿ ‘ಹೊಸ ಬರಹಗಾರರ ಕೈಪಿಡಿ’ ಶೀರ್ಷಿಕೆ ತಿಳಿಸುವಂತೆ ಹೊಸ ಬರಹಗಾರರಿಗೆ ಮಾರ್ಗದರ್ಶಿ ಕೈಪಿಡಿಯಾಗಿದೆ.
ಇದರಲ್ಲಿ ಛಂದೋಬದ್ಧ ಕಾವ್ಯಗಳನ್ನು ರಚಿಸುವ ವಿಸ್ತೃತ ಮಾರ್ಗದರ್ಶನದ ಜೊತೆಗೆ ಪ್ರಸ್ತಾರ ಹಾಕಿದ ಉದಾಹರಣೆಗಳಿವೆ. ಷಟ್ಪದಿ, ಕಂದಪದ್ಯ, ಮುಕ್ತಕ, ಚತುಶ್ರಲಯ, ತ್ರಿಪದಿ, ಚೌಪದಿ ಇತ್ಯಾದಿ ಮುಖ್ಯ ರಚನೆಗಳ ಬಗ್ಗೆ ಟಿಪ್ಪಣಿ ಇದೆ. ಈ ಕೈಪಿಡಿಯನ್ನು ಬಳಸಿ ಛಂದೋಬದ್ಧ ರಚನೆಗಳನ್ನು ಬರೆಯುವ ಜಾಣ್ಮೆಯನ್ನು ಬೆಳೆಸಿಕೊಳ್ಳಬಹುದು. ಛಂದೋಬದ್ಧವಲ್ಲದ ಭಕ್ತಿ ಗೀತೆಗಳು,ಭಾವಗೀತೆಗಳು, ಅಷ್ಟಷಟ್ಪದಿ, ಕಿರು ಕವನಗಳು, ಮಕ್ಕಳ ಕವನಗಳು, ಆಧುನಿಕ ವಚನಗಳು, ರುಬಾಯಿ, ಹಾಯ್ಕು, ಚಿತ್ರಕವನ ಮುಂತಾದ ಉಪ ಪ್ರಕಾರಗಳ ವಿಸ್ತೃತ ವಿವರಣೆ ಇದೆ. ಎಲ್ಲೆಡೆ ಸೂಕ್ತವಾದ ಉದಾಹರಣೆ ಮತ್ತು ವಿವರಣೆ ಇದೆ.
ಗದ್ಯ ರಚನೆಯ ವಿಭಾಗದಲ್ಲಿ ಕಿರು ಲೇಖನ, ಲಲಿತ ಪ್ರಬಂಧ, ನ್ಯಾನೋ ಕಥೆ, ವಿಮರ್ಶೆ, ಪುಸ್ತಕ ಪರಿಚಯ, ಗಾದೆ ಮಾತು ವಿಸ್ತರಣೆ, ಪತ್ರ ಬರವಣಿಗೆ ಹೀಗೆ ವೈವಿಧ್ಯಮಯ ಉಪ ಪ್ರಕಾರಗಳನ್ನು ರೂಢಿಸುವ ಕ್ರಮ ಮತ್ತು ಕೌಶಲ ಬೆಳೆಸುವ ಸೂತ್ರಗಳನ್ನು ವಿವರವಾಗಿ ನೀಡಲಾಗಿದೆ. ಬರವಣಿಗೆಯಲ್ಲಿ ಸಾಮಾನ್ಯವಾಗಿ ಬರುವ ತಪ್ಪುಗಳ ಯಾದಿಯನ್ನು ಕೊಡಲಾಗಿದೆ. ಪ್ರಾಸಬದ್ಧ ಕವನಗಳನ್ನು ಬರೆಯಲು ಸುಮಾರು ಸಾವಿರದ ಇನ್ನೂರು ಪ್ರಾಸ ಪದಗಳನ್ನು ಆಯ್ದು ಕೊಡಲಾಗಿದೆ. ಈ ಪುಸ್ತಕದ ಲೇಖಕರು ಅಂತರ್ಜಾಲ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಮತ್ತು ಸ್ಪರ್ಧಿಗಳಾಗಿ ತಮ್ಮ ಸಾಹಿತ್ಯಕ ಕೌಶಲ್ಯವನ್ನು ತೋರಿದ್ದಾರೆ. ಅವರ ಅನುಭವಗಳು ಈ ಪುಸ್ತಕದಲ್ಲಿ ಚೆನ್ನಾಗಿ ಮೂಡಿಬಂದಿವೆ. ಉದಯೋನ್ಮುಖ ಲೇಖಕರಿಗೆ ಅಗತ್ಯವಾದ ಕಿವಿ ಮಾತುಗಳೆಲ್ಲ ಕೃತಿಯಲ್ಲಿ ಹಾಸುಹೊಕ್ಕಾಗಿ ಬಂದಿವೆ.
©2025 Book Brahma Private Limited.