‘ಇಂಗ್ಲಿಶ್ ಸಂಕಥನ’ ಭಾಷಾಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿರುವ ಮೇಟಿ ಮಲ್ಲಿಕಾರ್ಜುನ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಕನ್ನಡ ಮತ್ತು ಇಂಗ್ಲಿಶ್ ಭಾಷೆಗಳ ಕುರಿತಾದ ಸಾಮಾಜಿಕ ಸಂಶೋಧನೆ, ವಿಶ್ಲೇಷಣಾ ಬರಹಗಳ ಸಂಕಲನ. ಈ ಎಲ್ಲ ಬರಹಗಳಲ್ಲೂ ಸಾಧ್ಯವಾದಷ್ಟು ಮಟ್ಟಿಗೆ 'ಎಲ್ಲರ ಕನ್ನಡ'ದ ಪದಕಟ್ಟಣೆಗಳನ್ನು ಬಳಸಲಾಗಿದೆ. ಈ ಕೃತಿಗೆ ಕಮಲಾಕರ ಕಡವೆ ಅವರ ಬೆನ್ನುಡಿ ಬರಹವಿದೆ. ಪುಸ್ತಕದ ಕುರಿತು ಬರೆಯುತ್ತಾ.. ‘ಪ್ರಜಾಸತ್ತಾತ್ಮಕವಾದ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸರವನ್ನು ನಿರ್ಮಿಸುವಲ್ಲಿ ಭಾರತೀಯ ಭಾಷೆಗಳ ಕೊಡುಗೆ ಏನು ಎಂಬ ಪ್ರಶ್ನೆ ಕೇಳಲು ಸಾಧ್ಯ ಎನ್ನುವುದು ಈ ಕೃತಿ ಓದಿದ ಮೇಲೆಯೇ ನನಗೆ ಹೊಳೆಯಿತು. ನೋಡಿ, ಭಾಷೆಯೊಂದರ ಕುರಿತಾದ ಪ್ರೀತಿ ಮತ್ತು ಹೆಮ್ಮೆ ನಮ್ಮಲ್ಲಿ ಮೂಡಿಸಬಹುದಾದ ವಿಚಾರ ಸರಣಿ ಹೀಗಿರಬೇಕೆನಿಸುತ್ತದೆ. ಜನರ ಸರ್ವಾಂಗೀಣ ಹಿತಾಸಕ್ತಿ, ಜ್ಞಾನನಿರ್ವಹಣೆಯ ಸವಾಲುಗಳನ್ನು ಎದುರಿಸಲು ಭಾರತೀಯ ಭಾಷೆಗಳನ್ನು ಸಜ್ಜುಗೊಳಿಸುವ ಕೆಲಸ ಯಾಕೆ ಆಗಿಲ್ಲ, ಆಗುತ್ತಿಲ್ಲ ಎಂಬ ಪ್ರಶ್ನೆಯನ್ನು ಮೇಟಿ ಮಲ್ಲಿಕಾರ್ಜುನ ಎತ್ತುತ್ತಾರೆ. ಶಿಕ್ಷಣದಲ್ಲಿ ಇಂಗ್ಲೀಶು ನುಡಿಗಿರುವ ಪ್ರಾಧಾನ್ಯತೆ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯ ಪಟ್ಟಭದ್ರ ಹಿತಾಸಕ್ತಿಯಿಂದಾಗಿ ಬಂದದ್ದು ಎನ್ನುವ ಲೇಖಕರು, ಶಿಕ್ಷಣ ಯಾವ ಮಾಧ್ಯಮದಲ್ಲಿರಬೇಕು ಎಂಬ ಹಳೆಯ ಪ್ರಶ್ನೆಯನ್ನು ಈ ಹಿನ್ನೆಲೆಯಲ್ಲಿ ಎತ್ತುವ ಮೂಲಕ ಹೊಸ ಹೊಳಹುಗಳ ದಾರಿ ಸೂಚಿಸಿದ್ದಾರೆ’ ಎನ್ನುತ್ತಾರೆ.
ಜೊತೆಗೆ ಕನ್ನಡದ ಸಾರ್ವಜನಿಕ ವಲಯದಲ್ಲಿ ಕನ್ನಡದ ಕುರಿತಾದ ಸಂಕಥನಗಳು ಸಾಮಾನ್ಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ದೊರೆಯಬೇಕು ಎನ್ನುವ ಬೇಡಿಕೆಯ ಸುತ್ತ ಸುತ್ತು ಹೊಡೆಯುತ್ತಿರುತ್ತವೆ. ಹಾಗಾದ ಮಾತ್ರಕ್ಕೆ ಕನ್ನಡ ನುಡಿಯ ಸಮಸ್ಯೆಗಳು ದೂರ ಆಗುವುದಿಲ್ಲ ಎಂಬ ತುಂಬ ಸರಳ, ಆದರೆ ಅತ್ಯಂತ ಗಂಭೀರ ಪ್ರಮೇಯವನ್ನು ಮಂಡಿಸುವ ಮೂಲಕ ಮೇಟೆ ಮಲ್ಲಿಕಾರ್ಜುನ ಅವರು ಕರ್ನಾಟಕದಲ್ಲಿ ಕನ್ನಡದ ಕುರಿತಾಗಿ ನಡೆಯುತ್ತಿರುವ ಚರ್ಚೆಗಳಿಗೆ ಭಿನ್ನ ಆಯಾಮಗಳನ್ನು ಸೂಚಿಸುತ್ತಾರೆ. ಕನ್ನಡ ನುಡಿಯ ಮೂಲಕವೇ ಲೋಕಗ್ರಹಿಕೆ, ಆಲೋಚನಾಕ್ರಮ ಮತ್ತು ಜ್ಞಾನನಿರ್ಮಿತಿಗಳಾಗುವ ಅವಶ್ಯಕತೆಯಿದೆಯೆಂಬ ಅವರ ವಾದ ನನ್ನ ಕಣ್ಣು ತೆರೆಸಿದ್ದಂತೂ ನಿಜ, ಕನ್ನಡದಲ್ಲಿ ಜ್ಞಾನಶಿಸ್ತುಗಳು ಬೆಳೆಯಬೇಕು ಎಂಬ ಚರ್ಚೆ ನಡೆದಿರುವ ಹಿನ್ನೆಲೆಯಲ್ಲಿ, ಲೇಖಕರ ನೋಟ ವಿಶಿಷ್ಟವಾಗಿದೆ. ಕನ್ನಡ ನುಡಿಸಮುದಾಯದ ಅಗತ್ಯಗಳಿಗನುಗುಣವಾದ ಜ್ಞಾನನಿರ್ಮಿತಿಯ ಅವಶ್ಯಕತೆ ಮತ್ತು ಅಂತಹ ಜ್ಞಾನನಿರ್ಮಿತಿಯ ಮಾರ್ಗಗಳನ್ನು ಶೋಧಿಸುವ ಅಗತ್ಯಕ್ಕೆ ಅವರು ಒತ್ತು ಕೊಡುತ್ತಾರೆ. ಕನ್ನಡವನ್ನು ಕೇವಲ ಪಡೆಯುವ ಭಾಷೆಯಾಗಿಸದೇ, ಜ್ಞಾನವನ್ನು ಒದಗಿಸುವ ನುಡಿಯಾಗಿ ಬೆಳೆಸಬೇಕು ಎನ್ನುವ ಕ್ರಾಂತಿಕಾರಿ ಯೋಚನೆಗೆ ಲೇಖಕರು ಒತ್ತು ಕೊಟ್ಟಿದ್ದಾರೆ ಎಂದು ಕಮಲಾಕರ ಕಡವೆ ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.