ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. 1971 ಜೂನ್ 1 ರಂದು ಜನನ. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ತಮ್ಮ ಹೆಸರಿನ ಮುಂದೆ ಹುಟ್ಟೂರನ್ನು ಸೇರಿಸಿಕೊಂಡು ಕನ್ನಡ ಸಾರಸ್ವತ ಲೋಕದಲ್ಲಿ ‘ಕಗ್ಗೆರೆ ಪ್ರಕಾಶ್’ ಎಂದೇ ಚಿರಪರಿಚಿತರು. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 1994 ರಿಂದ ಹೊಸ ದಿಗಂತ, ಆಂದೋಲನ, ಪ್ರಜಾಮತ, ಕರ್ನಾಟಕ ನ್ಯೂಸ್ ನೆಟ್, ವಿಕ್ರಾಂತ ಕರ್ನಾಟಕ, ಹಾಯ್ ಬೆಂಗಳೂರು, ಚಿತ್ತಾರ, ಕರ್ನಾಟಕ ಟೀವಿ ಲೋಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದವರು. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ವಾಸವಿದ್ದು, ವೆಸ್ತಾಕ್ರಾಫ್ಟ್ ಕ್ರಿಯೇಟಿವ್ ವರ್ಲ್ಡ್ ಕಂಪನಿಯ ಸೇವೆಯಲ್ಲಿದ್ದಾರೆ. ಇವರ ಹಲವು ಕೃತಿಗಳು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿಗಳೂ ಆಗಿವೆ.
ಕೃತಿಗಳು: ಕನ್ನಡಮ್ಮನಿಗೆ ಕಿರು ಕಾಣಿಕೆ, ಹೊನಲು, ಭುವಿಬಾಲೆ (ಕಾವ್ಯಗಳು). ಅನಂತ (ಸಾಹಿತ್ಯ ಸಂಚಿಕೆಯ ಸಂಪಾದನೆ). ಬಿಡುಗಡೆ (ಬಹುಮಾನಿತ ಬರಹಗಳ ಸಂಪಾದನೆ). ಅವಳ ಮಧುರ ಅಮರ ಪತ್ರಗಳು (ಸಂಪಾದನೆ). ಭೂಮಿಕೆ (ಸಾಹಿತ್ಯ ಸಂಚಿಕೆಯ ಸಂಪಾದನೆ). ಮಾತುಕತೆ- (ಸಂದರ್ಶನಗಳು). ಕಾಡತಾವ ನೆನಪು- (ವ್ಯಕ್ತಿ ಚಿತ್ರಗಳು). ತ್ರಿವೇಣಿಗೆ ಮಿಡಿದ ಶಂಕರ್-(ಸಂಪಾದನೆ). ಉದಯ್ ಕುಮಾರ್- (ಜೀವನ ಚರಿತ್ರೆ). ಶೃತಿ ಪ್ರೇಮಾಯಣ-(ಆತ್ಮಕಥೆ). ಕಲಾವಿದರ ಕಥಾನಕ-(ಸಂದರ್ಶನಗಳು). ಭುವಿಬಾಲೆ(ಕಾವ್ಯ). ಗುಬ್ಬಿ ತೋಟದಪ್ಪ(ಜೀವನ ಚರಿತ್ರೆ). ಹೇಳೇ ಸಖಿ ಕೇಳೋ ಸಖ(ಪತ್ರ ಸಾಹಿತ್ಯ). ವೀರಭದ್ರರ ಸಮಗ್ರ ಕಥಾ ಸಾಹಿತ್ಯ(ಸಂಪಾದನೆ). ಎಂ.ಎನ್.ವ್ಯಾಸರಾವ್ ಸಮಗ್ರ ಕಾವ್ಯ(ಸಂಪಾದನೆ). ಎಂ.ಎನ್.ವ್ಯಾಸರಾವ್ ಸಮಗ್ರ ಕಥೆ.
ಪ್ರಶಸ್ತಿ ಪುರಸ್ಕಾರಗಳು: 2004ರಲ್ಲಿ ಯುವ ಪ್ರತಿಭಾ ಪುರಸ್ಕಾರ, 2006ರಲ್ಲಿ ಕುವೆಂಪುಶ್ರೀ ಪ್ರಶಸ್ತಿ, ಕನ್ನಡ ಚಲನಚಿತ್ರರಂಗದ ಅಮೃತ ಮಹೋತ್ಸದಲ್ಲಿ ಸನ್ಮಾನ, ಅತ್ತಿಮಬ್ಬೆ ವಿಶೇಷ ಪ್ರಶಸ್ತಿ, ಮಾಧ್ಯಮ ಸನ್ಮಾನ್ ಅವಾರ್ಡ್, ಆಳ್ವಾಸ್ ನುಡಿಸಿರಿಯ ಮಾಧ್ಯಮ ಪ್ರತಿನಿಧಿಯ ಗೌರವಗಳು ಲಭಿಸಿವೆ.