ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಚಿಂತನೆಯ ದೃಷ್ಟಿಕೋನದಲ್ಲಿ ಭಾರತದ ಪ್ರಜಾತಂತ್ರದ ನೋಟ ಕೊಡುವ ಕೃತಿ ವಿಜಯ್ ಕುಮಾರ್ ಪಿ. ಅವರ ‘ದೇಸಿ ಪ್ರಜಾತಂತ್ರ’. ಆಧ್ಯಾತ್ಮ ಮತ್ತು ಪ್ರಸ್ತುತ ನೆಲೆಗಟ್ಟಿನಲ್ಲಿ ರಚಿತಗೊಂಡಿರುವ ಈ ಕೃತಿಯು ಮೂರು ಭಾಗಗಳನ್ನು ಒಳಗೊಂಡಿದೆ. ಇದುವರೆಗಿನ ಶಿಕ್ಷಣ ಪಠ್ಯದಲ್ಲಿರುವ ಇತಿಹಾಸದ ಉಲ್ಲೇಖಗಳನ್ನೂ, ಇತರ ದೃಷ್ಟಿಕೋನದ ಇತಿಹಾಸವನ್ನೂ ಸಮತೋಲಿಸಿಕೊಂಡು ಅವಲೋಕನವನ್ನು ಇಲ್ಲಿ ಮಾಡಲಾಗಿದೆ. ವಂಶವೃಕ್ಷ, ಜಟಿಲಸಿಕ್ಕು, ಹಾಲಿ ಮತ್ತು ಭವಿಷ್ಯದ ಭಾರತದ ದೃಷ್ಟಿಯ ಅಸ್ತಿ ಭಾರ ಎಂಬ ವಿವರಗಳನ್ನು ಓದುಗರಿಗೆ ನೀಡುವ ‘ದೇಸಿ ಪ್ರಜಾತಂತ್ರ’ ಏಕಾತ್ಮಮಾನವನ ದರ್ಶನದ ಬೆಳಕಿನಲ್ಲಿ ಮೂಡಿಬಂದಿದೆ. ‘ಅಸ್ತಿಭಾರ’ ವಿಭಾಗದಲ್ಲಿ ಆಡಳಿತ ವ್ಯವಸ್ಥೆಯಿಂದ ಹಿಡಿದು ರಾಮ ರಾಜ್ಯ-ಆದರ್ಶ ರಾಜ್ಯ, ಆರ್ಥಿಕತೆಯ ವಿಚಾರವನ್ನು ಈ ಕೃತಿ ಕೇಂದ್ರೀಕರಿಸುತ್ತದೆ. ಆರ್ಥಿಕ ಸಮೃದ್ದಿಯೇ ಅಂತಿಮವಲ್ಲ ಎಂಬ ಧೋರಣೆಯನ್ನು ಹೊಂದಿಕೊಂಡಿರುವ ಕೃತಿ ಭಾರತೀಯನೊಬ್ಬ ಸ್ವಾವಲಂಬಿಯಾಗಿ ವ್ಯಕ್ತಿ ಘನತೆಯನ್ನು ಕಾಪಾಡಿಕೊಂಡು ಬಾಳುವ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಹೊಂದುವ ಪರಿಕಲ್ಪನೆಯನ್ನು ಹೊತ್ತುಕೊಂಡಿದೆ. ಆರ್.ಎಸ್.ಎಸ್ ಸಿದ್ಧಾಂತದ ವಿವರಗಳನ್ನೂ ಹೊಂದಿರುವ ಕೃತಿ ಇದಾಗಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಮುನ್ನುಡಿಯನ್ನು ಒಳಗೊಂಡು, ಹೊಸ ಆಯಾಮದ ಚರ್ಚೆಗಾಗಿ ತೆರೆದುಕೊಂಡಿದೆ.
©2025 Book Brahma Private Limited.