ತಮ್ಮ ಅಂಕಣ ಬರಹಗಳಿಂದ ಪ್ರಸಿದ್ಧರಾಗಿದ್ದ ಹಾ.ಮಾ. ನಾಯಕರು (ಹಾರೋಗದ್ದೆ ಮಾನಪ್ಪನಾಯಕ) ಸಾಹಿತ್ಯ- ಸಾಂಸ್ಕೃತಿಕ ಲೋಕದ ದೊಡ್ಡ ಹೆಸರಾಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ 1931ರ ಸೆಪ್ಟೆಂಬರ್ 12ರಂದು ಜನಿಸಿದರು. ತಂದೆ ಶ್ರೀನಿವಾಸನಾಯಕ, ತಾಯಿ ರುಕ್ಮಿಣಿಯಮ್ಮ. ಶಿವಮೊಗ್ಗೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲಿಯೂ ಮಾಡಿ ಭಾಷಾವಿಜ್ಞಾನದಲ್ಲಿ ಎಂ.ಎ. (1958)ಪದವಿಯನ್ನು ಪಡೆದರು.
ತುಮಕೂರಿನಲ್ಲಿ ಕನ್ನಡ ಅಧ್ಯಾಪಕ (1955) ಆಗುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದ ಅವರು ಅನಂತರ ಪ್ರವಾಚಕ, ಪ್ರಾಧ್ಯಾಪಕ, ನಿರ್ದೇಶಕರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕುಲಪತಿ (1984) ಗಳಾಗಿ ನೇಮಕಗೊಂಡಿದ್ದ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಹೊರಬಂದರು. ನಂತರ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 1991ರವರೆಗೂ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು ಅವರಿಗೆ ಲಭ್ಯವಾಗಿವೆ. ‘ಸಲ್ಲಾಪ’ ಗ್ರಂಥಕ್ಕೆ ಮೈ.ವಿ.ವಿ ಸುವರ್ಣ ಮಹೋತ್ಸವ ಪ್ರಶಸ್ತಿ, ‘ಸಂಪ್ರತಿ’ ಗ್ರಂಥಕ್ಕೆ ಐ.ಬಿ.ಎಚ್. ಎಜುಕೇಷನ್ ಟ್ರಸ್ಟ್ ಪ್ರಶಸ್ತಿ ಲಭಿಸಿದ್ದವು. ಬೀದರ್ ನಲ್ಲಿ ನಡೆದ 57 ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನಲ್ಲಿ ನೆಲೆಸಿದ್ದ ಹಾ.ಮಾ.ನಾ ಅವರು 2000ರ ನವೆಂಬರ್ 10ರಂದು ನಿಧನರಾದರು.
ಪ್ರಮುಖ ಕೃತಿಗಳು: ಬಾಳ್ನೋಟಗಳು, ನಮ್ಮ ಮನೆಯ ದೀಪ, ಜಾನಪದ ಸ್ವರೂಪ, ಪ್ರಣಯ ವಿದ್ಯಾವಲಿ, ರವೀಂದ್ರನಾಥ್ ಠಾಕೂರ್, ಗೋರೂರು ಗೌರವ ಗ್ರಂಥ, ಎ.ಆರ್.ಕೃ ಜೀವನ ಸಾಧನೆ, ಜಾನಪದ ಗ್ರಂಥಸೂಚಿ, ಬಿಡುಗಡೆಬಳ್ಳಿ, ಗದ್ಯವಿಹಾರ, ಗಳಗನಾಥ, ಮುದ್ದಣ, ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು ಇವರಿಂದ ಸಂಪಾದಿತವಾಗಿವೆ. ಸಂಪ್ರತಿ, ಸಂಕೀರ್ಣ, ಸಮೀಕ್ಷೆ, ಸಂದರ್ಭ, ಸಂಗ್ರಹ, ಸಂಚಯ, ಸೃಜನ, ಸಂಪರ್ಕ, ಸಂವಹನ, ಮೊದಲಾದ ಅಂಕಣ ಬರಹಗಳು ಪುಸ್ತಕಗಳಾಗಿ ಹೊರಬಂದಿವೆ.