ಲೇಖಕ, ಚಿಂತಕ, ಅಂಕಣಕಾರರಾದ ಬೇದ್ರೆ ಮಂಜುನಾಥ್ ಮೂಲತಃ ಶಿವಮೊಗ್ಗದವರು, 10-06-1967ರಲ್ಲಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ಮಂಜುನಾಥ್ ಸದಾ ಕ್ರಿಯಾಶೀಲ ವ್ಯಕ್ತಿ. ತಮ್ಮ ಸ್ವ-ಪರಿಶ್ರಮದಿಂದಲೇ ಬೆಳೆದಿರುವ ಅವರು ಈ ವರೆಗೂ 50ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ರಚಿಸಿದ್ದಾರೆ. ಸದ್ಯ ಆಕಾಶವಾಣಿ ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜುನಾಥ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ ಓದುವಾಗಲೇ ಇಂಗ್ಲೀಷ್ ಗ್ರಾಮರ್ ಬಗ್ಗೆ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕ 10 ಬಾರಿ ಮರು ಮುದ್ರಣಕಂಡು ದಾಖಲೆ ಸೃಷ್ಟಿಸಿತ್ತು. ಆನಂತರ ಕುವೆಂಪು ವಿವಿಯಲ್ಲಿ ಇತಿಹಾಸದಲ್ಲಿ ಪ್ರಥಮರಾಗಿ ಪದವಿ ಗಳಿಸಿದ್ದರು. ಇಂಗ್ಲೀಷಿನಲ್ಲಿ ಎಂ.ಎ.ಮಾಡಲು ಬಯಸಿದ್ದ ಅವರು ಮೈಸೂರಿಗೆ ತೆರಳಿದರು. ಎಂ.ಎ ಮುಗಿದ ನಂತರ ಡಿವಿಎಸ್ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು ಆ ನಂತರ ಆಲ್ ಇಂಡಿಯಾ ರೇಡಿಯೋದಲ್ಲಿ ಉದ್ಯೋಗಕ್ಕೆ ಸೇರಿದರು. 1991 ರಿಂದ ಚಿತ್ರದುರ್ಗದಲ್ಲಿ ಅವರ ಸೇವೆ ಮುಂದುವರೆಯಿತು. ಸದಾ ಕ್ರಿಯಾಶೀಲರಾಗಿರುವ ಮಂಜುನಾಥ್ ಯುವಜನರೊಟ್ಟಿಗೆ, ವಿದ್ಯಾರ್ಥಿಗಳೊಟ್ಟಿಗೆ ಹೆಚ್ಚಿನ ಕಾಲ ಕಳೆಯುತ್ತಾರೆ. ಕಂಪ್ಯೂಟರ್, ಕಥೆ ಹೇಳುವ ಸಮಯ, ಸರ್ವರಿಗು ಸಮಪಾಲು, ಸ್ಕೂಲ್ ಡೈರಿ, ಆಡಿ ಕಲಿಯೋಣ, ಇಂಗ್ಲಿಷ್ ಸಂವಹನ ಸೇರಿದಂತೆ ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ.