ಡಾ. ಶಿವಾನಂದ ಬೇಕಲ್ ಅವರು ಹುಟ್ಟಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ನಲ್ಲಿ. ತಂದೆ- ಬೇಕಲ್ ಸಾಂತನಾಯಕರು, ತಾಯಿ- ಲಲಿತಾಬಾಯಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದದ್ದು ಬೇಕಲ್ನಲ್ಲಿ . ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು.
16ನೇ ವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೆ 1968ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿತು. ಇವರ ಲೇಖನ ಕೃಷಿ ಮಂಗಳೂರಿನ ನವಭಾರತ, ಕಿನ್ನಗೋಳಿಯ ಯುಗಪುರುಷ ನಂತರ ಸುಧಾ, ತರಂಗ, ಪ್ರಜಾವಾಣಿ, ತುಷಾರ, ಕರ್ಮವೀರ, ಉದಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಭಾರತೀಯ ಪ್ರಸಾರ ಸೇವೆ. ಮಂಗಳೂರು, ಗುಲಬರ್ಗಾ, ಬೆಂಗಳೂರು ಆಕಾಶವಾಣಿ ; ಬೆಂಗಳೂರು ದೂರದರ್ಶನ, ಗುಲಬರ್ಗಾ ದೂರದರ್ಶನ ಕೇಂದ್ರಗಳಲ್ಲಿ ಸೇವೆ. ಇದೀಗ ಗುಲಬರ್ಗಾ ಆಕಾಶವಾಣಿ ಕೇಂದ್ರದಲ್ಲಿ ಸಹಾಯಕ ಕೇಂದ್ರ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ಇನ್ನಾದರೂ ಅರ್ಥವಾಗೋಣ, ಮಂಗ್ಳೂರ ಮಲ್ಲಿಗೆ-ಕವನ ಸಂಕಲನ. ಮೈಲಿಗೆ, ಕಪ್ಪುಚುಕ್ಕೆ, ಮಳೆನಿಂತ ಮೇಲಿನ ಮರ-ಕಾದಂಬರಿಗಳು. ಕರಾವಳಿಯ ಕಾವ್ಯ (ದ. ಕನ್ನಡದ ನಾಲ್ಕು ಜಿಲ್ಲೆಯ 117 ಕವಿಗಳ ಪ್ರಾತಿನಿಕ ಕವನ ಸಂಕಲನ), ಕೈಂಕರ್ಯ, ರಜತೋತ್ಸವ-ಸಂಪಾದಿತ ಕೃತಿಗಳು. ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ ಕ್ಯಾಸೆಟ್, ಸಿಡಿಗಳನ್ನು ಹೊರತಂದಿದ್ದಾರೆ. ಶಿವರಾಮಕಾರಂತರು, ಡಾ. ರಾಜಕುಮಾರ್, ಕೆ.ಎಸ್. ನರಸಿಂಹಸ್ವಾಮಿ, ಪೂರ್ಣಚಂದ್ರ ತೇಜಸ್ವಿ ಒಳಗೊಂಡಂತೆ ಹಲವಾರು ಪ್ರಮುಖರ ಸಂದರ್ಶನ, ಸಾಕ್ಷ್ಯ ಚಿತ್ರಗಳನ್ನು ಆಕಾಶವಾಣಿ, ದೂರದರ್ಶನಗಳಿಗಾಗಿ ತಯಾರಿಸಿದ್ದಾರೆ. ಹಲವಾರು ಕಾರ್ಟೂನ್ ಮಾಲಿಕೆಗಳು ನಿಯತ ಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇವರೇ ಬರೆದು ಪ್ರಸ್ತುತ ಪಡಿಸಿರುವ ಹಲವಾರು ದೂರದರ್ಶನ, ರೇಡಿಯೋ ನಾಟಕ, ಪ್ರಹಸನಗಳಿಗೆ ವಿಶೇಷ ಪುರಸ್ಕಾರ ಪಡೆದಿದ್ದಾರೆ.
ಗೌರವ- ಪ್ರಶಸ್ತಿಗಳು: 2ನೇ ಹೊಸದುರ್ಗ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಗುಲಬರ್ಗಾ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ, ಬೇಕಲ್ ದಲ್ಲಿ ಜರುಗಿದ ಚುಟುಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ, ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಮುಂತಾದವು. ತಂದೆ ಹೆಸರಿನ ಶ್ರೀ ಬೇಕಲ್ ಸಾಂತನಾಯಕ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ.