ಪ್ರವಾದಿ ಮುಹಮ್ಮದರು ಹುಟ್ಟುವ ಮೊದಲು ಅರೇಬಿಯದ ತುಂಬಾ ಚಿಕ್ಕ ದೊಡ್ಡ ಬುಡಕಟ್ಟುಗಳು. ಅನಕ್ಷರತೆ ಹಾಗೂ ಬಡತನ. ಕೃಷಿಯು ಅಪರಿಚಿತ. ಮೋಸ, ವಂಚನೆ, ಸುಲಿಗೆ, ಅತ್ಯಾಚಾರ, ಕುಡಿತ ಜೂಜುಗಳು ಅವ್ಯಾಹತ. ಹುಟ್ಟಿದ ಹೆಣ್ಣುಮಕ್ಕಳ ತಲೆಯನ್ನು ಉಸುಕಿನಲ್ಲಿ ಹೂತು ಕೊಲ್ಲುತ್ತಿದ್ದರು. ಇಂತಹ ಪರಿಸರದಲ್ಲಿ ಜನಿಸಿದ ಪ್ರವಾದಿ ಮುಹಮ್ಮದರು, ಇಸ್ಲಾಂ ಧರ್ಮವನ್ನು ಸ್ಥಾಪಿಸಿದರು. ಪ್ರವಾದಿ ಮುಹಮ್ಮದರು ಅನಕ್ಷರಸ್ಥರಾಗಿದ್ದರೂ ಮಹಾ ಚಾಣಾಕ್ಷರು! ಕಾಬಾ ಭವನದ ಪುನರ್ನಿರ್ಮಾಣದ ಕಾಲ. ಪವಿತ್ರ ಶಿಲೆಯನ್ನು ಯಾವ ಬುಡಕಟ್ಟಿನವರು ಸ್ಥಾಪಿಸಬೇಕು ಎಂದು ಕಲಹವೇರ್ಪಟ್ಟಿತು. ಮುಹಮ್ಮದರು ಒಂದು ಶಾಲಿನ ಮೇಲೆ ಪವಿತ್ರ ಹಜರುಲ್ ಅಸ್ವದ್ ಶಿಲೆಯನ್ನಿಟ್ಟರು. ಎಲ್ಲ ಬುಡಕಟ್ಟಿನ ನಾಯಕರು ಶಾಲಿನ ಅಂಚನ್ನು ಹಿಡಿದುಕೊಂಡು ಭವನದ ಬಳಿಗೆ ಕೊಂಡೊಯ್ದರು. ನಂತರ ತಾವೇ ಶಿಲೆಯನ್ನು ನಿಗದಿತ ಸ್ಥಾನದಲ್ಲಿ ಪ್ರತಿಷ್ಠಾಪಿಸಿದರು! ಅಂತಃಕಲಹವನ್ನು ತಪ್ಪಿಸಿದರು. ಈ ರೀತಿಯ ಹಲವು ಕಥೆಗಳು ಹಾಗೂ ದೃಷ್ಟಾಂತಗಳ ಮೂಲಕ ಪ್ರವಾದಿ ಮಹಮ್ಮದರ ಕುರಿತಾಗಿನ ಜೀವನವನ್ನು ನವಿರಾಗಿ ವರ್ಣಿಸಿದ್ದಾರೆ. ಕೇವಲ ಅವರ ತತ್ವಗಳನ್ನು ಮಾತ್ರ ಪ್ರಚುರ ಪಡಿಸದೇ, ತತ್ವಗಳನ್ನು ಜೀವನದಲ್ಲಿ ಯಾವ ರೀತಿಯಲ್ಲಿ ಅಳವಡಿಸಿಕೊಳ್ಳಬಹುದೆಂದು ತಿಳಿಸಿಕೊಡುವ ಪುಸ್ತಕವಿದು.
©2025 Book Brahma Private Limited.