ಲೇಖಕ ಕೆ.ಎಚ್. ನರಸಿಂಹಮೂರ್ತಿ ಅವರ ಕೃತಿ-ಆಲೂರು ವೆಂಕಟರಾಯ. ವಿಶ್ವಮಾನ್ಯರು ಮಾಲಿಕೆಯಡಿ ಡಾ. ನಾ. ಸೋಮೇಶ್ವರ ಅವರ ಸಂಪಾದಿಸಿದ್ದಾರೆ. ಆಲೂರು ವೆಂಕಟರಾಯರನ್ನು ಕನ್ನಡದ ಕುಲಪುರೋಹಿತ ಎಂದೇ ಕರೆಯುತ್ತಾರೆ. 1906ರಲ್ಲಿ ವಾಗ್ಭೂಷಣ ಎಂಬ ಕನ್ನಡ ಪತ್ರಿಕೆಯನ್ನು ಸ್ಥಾಪಿಸಿದ್ದರು. ಕನ್ನಡದ ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಾ, ಕನ್ನಡ ಕೃತಿಗಳ ಪ್ರಕಟಣೆಯನ್ನು ಉತ್ತೇಜಿಸುತ್ತಾ, ಧಾರವಾಡ ಪರಿಸರದಲ್ಲಿದ್ದ ಮರಾಠಿ ಪ್ರಾಬಲ್ಯವನ್ನು ಮುರಿಯಲು ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು. ಆಲೂರರು ಕನ್ನಡ ಸಾಹಿತ್ಯ ಪರಿಷತ್ತಿನ ಆರಂಭಕ್ಕೆ ಹಾಗೆಯೇ ಧಾರವಾಡದ ‘ಕರ್ನಾಟಕ ಸಭೆ‘ಗೂ ಕಾರಣೀಭೂತರು. ಕರ್ನಾಟಕ ಇತಿಹಾಸ ಮಂಡಳವನ್ನು ಸ್ಥಾಪಿಸಿ, ವಿಜಯನಗರ ಮಹೋತ್ಸವ ಹಾಗೂ ನಾಡಹಬ್ಬದ ಪರಿಕಲ್ಪನೆಯನ್ನು ಜಾರಿಗೆ ತಂದರು. ಪುಸ್ತಕ ಪ್ರಕಾಶನಕ್ಕೆ ಅನುಕೂಲವಾಗುವಂತಹ ‘ಕರ್ನಾಟಕ ಗ್ರಂಥ ಮಂಡಳಿ‘ಯನ್ನು ಸ್ಥಾಪಿಸಿದರು. ಕನ್ನಡಿಗರಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಪುಸ್ತಕಗಳ ಗಂಟನ್ನು ತಲೆಯ ಮೇಲೆ ಹೊತ್ತು ಮನೆಯಿಂದ ಮನೆಗೆ, ಊರಿಂದೂರಿಗೆ ಸುತ್ತಿದರು. ತಾವು ಸ್ಥಾಪಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿಪರ ತರಬೇತಿ ನೀಡಲು ಬೆಂಕಿಪೊಟ್ಟಣ, ಪೆನ್ಸಿಲ್, ಉಡುಗೆ, ಮುದ್ರಣ, ಚಿತ್ರಕಲೆಗಳನ್ನು ಕಲಿಸಿದರು. ಕಾರ್ಖಾನೆ ತೆರೆಯಲು ನೆರವಾದರು. ಸಕ್ಕರೆ ಕಾರ್ಖಾನೆ, ಹೆಂಚಿನ ಕಾರ್ಖಾನೆ, ಹತ್ತಿಮಿಲ್ಲುಗಳನ್ನು ತೆರೆದರು. ಕೃಷಿ ಸೊಸೈಟಿಯನ್ನು ಆರಂಭಿಸಿದರು. ಮ್ಯೂಚುವಲ್ ಫಂಡ್ಸ್ ಶುರು ಮಾಡಿದರು. ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧರಾಗಿ ಶ್ರಮಿಸಿದ ಆಲೂರು ವೆಂಕಟರಾಯರ ಕುರಿತ ಜೀವನ ಚಿತ್ರಣದ ಕೃತಿ ಇದು.
©2025 Book Brahma Private Limited.