ಮುಕ್ಕಣನ ತ್ರಿಪದಿಗಳು ಫಕೀರಪ್ಪ ತಾಳಗುಂದ ಅವರ ಕೃತಿಯಾಗಿದೆ. ತ್ರಿಪದಿಯು ಹೆಸರೇ ಹೇಳುವಂತೆ ಮೂರುಸಾಲಿನ ಪದ್ಯ. ಮೊದಲ ಸಾಲಿನಲ್ಲಿ ನಾಲ್ಕು ವಿಷ್ಣು ಗಣಗಳು, ಎರಡನೆಯ ಸಾಲಿನಲ್ಲಿ ಒಂದು ವಿಷ್ಣು ಗಣ, ಒಂದು ಬ್ರಹ್ಮಗಣ ಮತ್ತೆ ಎರಡು ವಿಷ್ಣು ಗಣಗಳು, ಮೂರನೇ ಸಾಲಿನಲ್ಲಿ ವಿಷ್ಣು ಗಣ ಬ್ರಹ್ಮಗಣ ವಿಷ್ಣು ಗಣ ಕ್ರಮವಾಗಿ ಬರುತ್ತದೆ. ಸರ್ವಜ್ಞನು ತನ್ನ ತ್ರಿಪದಿಗಳಿಗೆ ತನ್ನ ಹೆಸರನ್ನೇ ಅಂಕಿತವನ್ನಾಗಿ ಇಟ್ಟುಕೊಂಡು ತ್ರಿಪದಿಯ ಕೊನೆಯಲ್ಲಿ ಬಳಸಿದನು. ಅನಂತರದ ಕಾಲದಲ್ಲಿ ಇದೇ ಪದ್ಧತಿಯಾಯಿತು. ಅವರವರು ತಮ್ಮಿಚ್ಛೆಯ ಅಂಕಿತವನ್ನು ಇಟ್ಟುಕೊಂಡು ಬಿಡಿ ಪದ್ಯಗಳ ರಚನೆಯನ್ನು ಮಾಡಿದರು. ಅಂಕಿತವು ಇಲ್ಲದ ತ್ರಿಪದಿಗಳ ಪ್ರಯೋಗವು ಆಧುನಿಕರಲ್ಲಿಯೂ ಕಂಡುಬರುತ್ತದೆ. ತ್ರಿಪದಿಗಳಲ್ಲಿ ಕಥನ ಕಾವ್ಯಗಳನ್ನು ರಚಿಸಿದವರೂ ಉಂಟು. ಸಿದ್ದಲಿಂಗಯ್ಯನವರ ಕತ್ತೆ ಮತ್ತು ಧರ್ಮ ಎಂಬ ಕವಿತೆಯು ತ್ರಿಪದಿಯ ರೂಪದಲ್ಲಿಯೇ ಇದ್ದು ಅತ್ಯುತ್ತಮವಾದ ಸಮಾಜ ವಿಡಂಬನೆಯನ್ನು ಪ್ರತಿನಿಧಿಸುತ್ತದೆ. ಅಂಶಗಣ ಘಟಿತವಾದ ತ್ರಿಪದಿಯಲ್ಲಿ ಚಿತ್ರ, ವಿಚಿತ್ರ, ಚಿತ್ರಕಲೆ ಎಂಬ ಮೂರು ವಿಧಗಳಿವೆ. ಇಲ್ಲಿ ಮೊದಲಲ್ಲಿ, ಕಡೆಯಲ್ಲಿ ಹಾಗೂ ಎರಡೂ ಕಡೆಗಳಲ್ಲಿ ಅನುಕ್ರಮವಾಗಿ ವಿಷ್ಣು ಗಣದ ಸ್ಥಾನದಲ್ಲಿ ರುದ್ರಗಣವು ಬರುತ್ತದೆ. ತ್ರಿಪದಿಯು ಮಾತ್ರಾ ಗಣವಾಗಿ ಪರಿವರ್ತನೆಯಾದ ಮೇಲೆ ಅಲ್ಲಲ್ಲಿ ಐದು ಮಾತ್ರೆಯ ಗಣಕ್ಕೆ ಬದಲಾಗಿ ನಾಲ್ಕು ಮಾತ್ರೆಗಳೂ, ಮೂರು ಮಾತ್ರೆಯ ಗಣಕ್ಕೆ ಬದಲಾಗಿ ನಾಲ್ಕು ಮಾತ್ರೆಗಳೂ ಕಂಡು ಬಂದವು. ಹೀಗೆ ವೈವಿಧ್ಯಮಯವಾಗಿ ಬೆಳೆದು ಬಂದ ತ್ರಿಪದಿಯು ಅತ್ಯಂತ ಸುಲಭವಾಗಿ ರಚಿಸಬಲ್ಲ ಛಂದೋಪ್ರಕಾರವಾಗಿ ಬೆಳೆದು ನಿಂತಿದೆ ಎಂದು ಪುಸ್ತಕದ ಮುನ್ನುಡಿಯಲ್ಲಿ ಟಿ. ಎನ್. ಶಿವಕುಮಾರ್ ತಿಳಿಸಿದ್ದಾರೆ.
©2025 Book Brahma Private Limited.