ಹಿರಿಯ ಸಾಹಿತಿ-ಲೇಖಕ ಚಂದ್ರಗೌಡ ಕುಲಕರ್ಣಿ ಅವರ ತ್ರಿಪದಿಗಳ ಸಂಕಲನ-ಬಿಡಿಗಾಳು...ಹಿಡಿಗಾಳು. ಹಿರಿಯ ಸಾಹಿತಿ ಚಂದ್ರಶೇಖರ ನಂಗಲಿ ಅವರು ಕೃತಿಗೆ ಮುನ್ನುಡಿ ಬರೆದು ‘ತ್ರಿಪದಿಯನ್ನು ' ಮುಕ್ಕಾಗದ ಮುತ್ತು ' ಎಂದು ಕರೆದಿರುವ ಚಂದ್ರಗೌಡ ಕುಲಕರ್ಣಿ ಅವರು ಕನ್ನಡ ಜನಪದ ಭಾಷೆಯಲ್ಲಿ ಅತ್ಯಂತ ಸಹಜವೆಂಬಂತೆ ತ್ರಿಪದಿಗಳನ್ನು ಸೃಜಿಸಿದ್ದಾರೆ. ಈ ಸಂಕಲನದಲ್ಲಿ ತ್ರಿಪದಿಗಳು 'ಹುಟ್ಟು' ಪಡೆದಿವೆಯೇ ಹೊರತು 'ಕಟ್ಟು' ಗೊಂಡಿಲ್ಲ. ಜನಪದ ಭಾಷೆ ಮತ್ತು ಜನಪದ ಛಂದಸ್ಸನ್ನು ಜನಪರ ಒಲವು - ನಿಲುವುಗಳ ಪ್ರತಿಪಾದನೆಗೆ ಎತ್ತಿಕೊಂಡು ಬುದ್ಧಿ ಭಾವಗಳ ವಿದ್ಯುದಾಲಿಂಗನವನ್ನು ಈಗಲೇ ಸಾಧ್ಯವಾಗಿಸಿ ಕೊಂಡಿರುವ ಚಂದ್ರಗೌಡ ಕುಲಕರ್ಣಿ ಅವರ ಪ್ರತಿಭೆ ಪ್ರಶಂಸಾರ್ಹವಾಗಿದೆ.’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದು ಕನ್ನಡದ ಗಂಗೋತ್ರಿ ತ್ರಿಪದಿಗಳ ಸಂಕಲನ. ಪರಂಪರೆ ಮತ್ತು ಆಧುನಿಕತೆಯನ್ನು ಸಮನ್ವಯ ಗೊಳಿಸಿಕೊಂಡ ತ್ರಿಪದಿಗಳು ಗಟ್ಟಿ ನೆಲದಲ್ಲಿ ಹೆಜ್ಜೆಯೂರಿವೆ. ಬಿಡಿಬಿಡಿಯಾಗಿ,ಹಿಡಿಹಿಡಿಯಾಗಿ ಕಾಳುಗಟ್ಟಿವೆ. ಇಡಿಯಾಗುವುದರತ್ತ ಮುನ್ನಡೆದಿವೆ. ತ್ರಿಪದಿಯೆಂದರೆ ಹೊನ್ನಿನಾಭರಣ, ಸರಿಗಮದ ಸಾರ, ಬತ್ತದ ಒರತಿ, ಸುಗ್ಗಿಯ ಸೊಗಡು. ಇಲ್ಲಿ ಮೇಟಿವಿದ್ಯೆ, ಒಕ್ಕಲು ದೈವ, ಮಳೆರಾಜ, ದುಡಿಮೆ ಮತ್ತು ಶ್ರಮಜೀವಿಗಳ ಬದುಕು ಅನಾವರಣಗೊಂಡಿದೆ. ಅಲ್ಲದೆ ಆದಿಕವಿ ವಾಲ್ಮೀಕಿ, ನಾಡೋಜ ಪಂಪ, ಕವಿಕುಲಗುರು ಕುಮಾರವ್ಯಾಸ, ಅಲೆಮಾರಿ ಸರ್ವಜ್ಞ, ಕೊಡೆಕಲ್ಲ ಶರಣ, ಕಡಕೋಳ ಮಡಿವಾಳಪ್ಪ, ಶಿಶುನಾಳ ಶರೀಫ, ಡಾ.ಬಿ. ಆರ್. ಅಂಬೇಡ್ಕರ, ವರನಟ ಡಾ. ರಾಜಕುಮಾರ, ರಸ ಋಷಿ ಕುವೆಂಪು, ಕೈಲಾಸ್ ಮಲಾಲಾ ಮುಂತಾದವರ ಶಬ್ದಚಿತ್ರಗಳಿರುವುದು ಈ ಕೃತಿಯ ಹೆಚ್ಚುಗಾರಿಕೆ
©2024 Book Brahma Private Limited.