ಲೇಖಕ ಮೇಟಿಕೆರೆ ಹಿರಿಯಣ್ಣ ಅವರ ತ್ರಿಪದಿಗಳ ಸಂಕಲನ-’ಬೋರನ ದರುಶನದ ಪದಗಳು’. 1090 ತ್ರಿಪದಿಗಳು ಒಳಗೊಂಡಿವೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಪ್ರೊ. ಶಿವರಾಮಯ್ಯ ಅವರು ‘ ಜನಪದರ ಬದುಕಿನ ನೋಟವನ್ನು ಒಳಗೊಂಡಿದೆ. ಕವಿ ಬೋರನ ಪಾತ್ರದಲ್ಲಿ ತಲೆಮರೆಸಿಕೊಂಡು ಸಮಾಜದ ಅಂಕುಡೊಂಕು ಗಳನ್ನು ವಿಡಂಬಿಸುವುದಲ್ಲದೆ, ತನ್ನನ್ನು ತಾನೇ ಒರೆಗೆ ಹಚ್ಚಿಕೊಂಡು ನೋಡುತ್ತಾನೆ. ಸಾಮಾಜಿಕ ಚಾರಿತ್ರಿಕ ಮತ್ತು ಪೌರಾಣಿಕ ಸಂಗತಿಗಳು; ಆಧುನಿಕ ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಪರಿಸರ ಹಾನಿ; ಆಡಂಬರದ ಭಕ್ತಿ; ಅರ್ಥವಿಲ್ಲದ ಆಚರಣೆಗಳು; ಪ್ರಣಯಿಗಳ ಪ್ರಲಾಪ-ಸಲ್ಲಾಪ, ಹೀಗೆ ಹಲವಾರು ವಿಚಾರಗಳನ್ನು ಇಲ್ಲಿ ವಿಶ್ಲೇಷಿಸುತ್ತಾರೆ. ಹಿರಿಯಣ್ಣನ ಸಾವಿರ ತ್ರಿಪದಿಗಳು ಕಟ್ಟನ್ನು ಬಿಚ್ಚಿ ಅವಲೋಕಿಸುತ್ತಾ ಹೋದರೆ ಇಲ್ಲಿ ಯುಗಯಾಶ್ರೀ ಭಾರತೀಯ ಸಂಸ್ಕೃತಿಯ ಸಿರಿತನದ ಕೆಲವು ಗಟ್ಟಿ ಕಾಳುಗಳು ಮೊಳಕೆ ಹೊಡೆಯುತ್ತಿರುವುದು ಕಂಡು ಬರುತ್ತದೆ. ಹಿರಿಯಣ್ಣನವರು ಪ್ರಥಮತಃ ಮಕ್ಕಳ ಸಾಹಿತ್ಯ ನಿರ್ಮಾಪಕರು, ವಯಸ್ಕರಿಗೆ ಬರೆಯುದಕ್ಕಿಂತ ಕಿರಿಯರಿಗೆ ಬರೆಯುವುದು ವರ್ತಮಾನದ ಅಗತ್ಯ. ಆದ್ದರಿಂದ, ಇಂಥ ಕವಿತೆ ಬರೆಯಬೇಕಾದರೆ ಮಗುವಿನ ಮನಸ್ಸು, ಅವರ ಕನಸು ಇರಬೇಕಾಗುತ್ತದೆ. ಹಿರಿಯಣ್ಣನವರಿಗೆ ಅದು ರೂಢಿಗತವಾಗಿ ಬಂದಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.