ಜಲ ರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದೆರಡು ದಶಕಗಳಿಂದ ತೊಡಗಿಸಿಕೊಂಡಿರುವ ಶಿವಾನಂದ ಕಳವೆ ಅವರು ರಾಜ್ಯದ ನದಿಗಳ ಸ್ಥಿತಿಯ ಕುರಿತು ಜನರಿಗೆ ವಾಸ್ತವವನ್ನು ತಿಳಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಇತಿಹಾಸದ ದಾಖಲೆ, ಪರಿಸರ ಸೂಕ್ಷ್ಮತೆ, ಜನಪದ ನಂಬಿಕೆ, ಪುರಾಣ ಕಥೆ, ವರ್ತಮಾನದ ಸ್ಥಿತಿಗತಿಯ ಅವಲೋಕನದ ಮೂಲಕ ನದಿ ಸಂರಕ್ಷಣೆಯ ಮಹತ್ವ ಸಾರುವ ಕೃತಿ ಇದಾಗಿದೆ. ಕಾವೇರಿ, ತುಂಗಾ, ಅಘನಾಷಿನಿ ಸೇರಿದಂತೆ ರಾಜ್ಯದ ಹಲವು ನದಿಗಳ ಮನಕಲಕುವ ಕಥೆಗಳು ಈ ಕೃತಿಯಲ್ಲಿವೆ.
ನದಿ ನೋಡುವುದು ಹೇಗೆಂದು ಹೇಳುತ್ತ ಜಲಕ್ಷಾಮದ ನೋಟಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಕಾವೇರಿ, ತುಂಗಭದ್ರಾ, ಕೃಷ್ಣಾ, ಶರಾವತಿ, ಅಘನಾಶಿನಿ, ಬೇಡ್ತಿ, ಕಾಳಿ ಮುಂತಾದ ನದಿಗಳ ಕಥೆ ಹೇಳುತ್ತ ಪ್ರಸ್ತುತ ಸ್ಥಿತಿಗತಿಯತ್ತ ಕೃತಿ ಗಮನಹರಿಸುತ್ತದೆ. ಜಗತ್ತಿನ ಮೊಟ್ಟ ಮೊದಲ ಅಣೆಕಟ್ಟನ್ನು ಕಾವೇರಿ ನದಿಗೆ ಕಟ್ಟಿದ ಚೋಳ ಅರಸು ಕರಿಕಾಲನ ಕಲ್ಲಣೆಯಿಂದ ಆರಂಭಿಸಿ ಹಲವು ಚಾರಿತ್ರಿಕ ದಾಖಲೆಗಳನ್ನು ಇದರಲ್ಲಿ ವಿವರಿಸಲಾಗಿದೆ.
ನದಿ, ವೈಜ್ಞಾನಿಕ ಅಧ್ಯಯನ, ಮಾಲಿನ್ಯ, ಹೂಳಿನ ಸ್ಥಿತಿ, ನೀರಾವರಿ ಪರಿಣಾಮ, ಕೃಷಿ ಜನಜೀವನದಲ್ಲಿ ನದಿ ಪ್ರಾಮುಖ್ಯತೆ ಬಿಂಬಿಸುವ ನೋಟಗಳಿವೆ. ನದಿಗಳನ್ನು ನೀರಿನ ಲಭ್ಯತೆಯ ಕೃತಕ ಅಂಕಿಸಂಖ್ಯೆಗಳಲ್ಲಿ ಅಳೆಯುತ್ತಿರುವಾಗ ಕಣ್ಣಿಗೆ ಕಾಣದ ಜೀವಲೋಕದ ಅಂತರಾತ್ಮ ಅರಿಯುವ ಮಹತ್ವದ ಪ್ರಯತ್ನ ಕೃತಿಯಲ್ಲಿದೆ. ನದಿಗಳ ಸಾವಿನ ಕಾರಣಗಳು ಮತ್ತು ಪರಿಹಾರದ ಮಾರ್ಗಗಳನ್ನು ಈ ಕೃತಿಯಲ್ಲಿ ಸೂಚಿಸಿದ್ದಾರೆ.
©2024 Book Brahma Private Limited.