‘ಒಂದು ಕಾಡಿನ ಪುಷ್ಪಕ ವಿಮಾನ’ ಪ್ರಸಾದ್ ಶೆಣೈ ಆರ್.ಕೆ ಅವರ ಲೇಖನಗಳ ಸಂಕಲನ. ಹಿರಿಯ ಸಾಹಿತಿ ಡಾ. ನಾ. ಡಿಸೋಜ ಅವರು ಬೆನ್ನುಡಿ ಬರೆದು ‘ಈ ಕೃತಿ ನಮಗೆ ಕಚಗುಳಿ ಇಡುತ್ತದೆ. ಕವಿಯುತ್ತಿರುವ ಶೂನ್ಯದತ್ತ ನಾವು ತಿರುಗಿ ನೋಡುವಂತೆ ಮಾಡುತ್ತದೆ. ಮನಸ್ಸನ್ನು ಅರಳಿಸುತ್ತದೆ. ಅಚ್ಚರಿ ಪಡಿಸುತ್ತದೆ. ನಾವು ಏನೆಲ್ಲವನ್ನು ಕಳೆದುಕೊಂಡೆವಲ್ಲ ಎಂದು ನಮ್ಮನ್ನು ಗಾಬರಿಗೊಳಿಸುತ್ತದೆ’ ಎನ್ನುತ್ತಾರೆ.
ಮಾಳ ‘ಪಶ್ಚಿಮ ಘಟ್ಟದ ಕೆಳಗಿನ ಹಸಿರು ತೊಟ್ಟಿಲು’. ಅಷ್ಟೇ ಅಲ್ಲ ಈ ಮಾಳವನ್ನೇ ಬಳಸಿ ಸಹ್ಯಾದ್ರಿ ತಟದ ಊರುಗಳಾದ ಕುದುರೆಮುಖ, ಹೊರನಾಡು, ಕಳಸ, ಶೃಂಗೇರಿಗಳ ದಾರಿ ಹಿಡಿದರಂತೂ ಇಷ್ಟು ದಿನ ಕಳೆದುಕೊಂಡ ಹೊಸ ಜಗತ್ತೊಂದು ಧುತ್ತನೆ ಎದಿರು ಬಂದು ಮೂಡುತ್ತದೆ. ಹೀಗೆ ಎದುರಾಗುವ ದಿವ್ಯ ಜಗತ್ತನ್ನು ನಮ್ಮ ಮುಂದೆ ಇಡುತ್ತಾರೆ ಲೇಖಕರು.
ಈ ಬೆಟ್ಟ, ಕಾಡು, ಕಣಿವೆ, ಗುಡ್ಡ, ಝರಿ, ನದಿ, ಹಳ್ಳ, ಬಳ್ಳಿ, ಕಾಡುಬಂಡೆ, ಹಕ್ಕಿ, ಪ್ರಾಣಿ, ಗಿಡ, ಎಲೆ, ಇವುಗಳೆಲ್ಲದರ ಪರಿಚಯವೂ ಇಲ್ಲಿ ಲಭ್ಯ. ಜೊತೆಗೆ, ಕಾಡನ್ನು ಆವರಿಸಿಕೊಳ್ಳುವ ಬಿಸಿಲು, ಬೆಳದಿಂಗಳು, ಮಳೆ, ಮಂಜು, ಇಬ್ಬನಿಗಳ ಪರಿಚಯ, ಬಿಸಿಲು ಮೂಡುವ ಮುನ್ನ ಒಂದು ಬೆಟ್ಟ ಇರುವ ಪರಿ, ಬಿಸಿಲು ಸರಿದು ಹೋದ ನಂತರ ಅದೇ ಬೆಟ್ಟ ಧರಿಸುವ ಅದರ ರೂಪ. ಹೀಗೆಯೇ ಮಂಜು-ಮಳೆ ಆಡುವ ವಿವಿಧ ಬಗೆಯ ಆಟಗಳ ಜೊತೆ, ನಿಗೂಢ ಅರಣ್ಯದ ನಡುವೆ ಬದುಕಿನ ಜನರ ಪರಿಚಯ ಇಲ್ಲಿದೆ. ಪರಿಸರದ ಬಗ್ಗೆ ಆಸಕ್ತಿ ಇಲ್ಲದ ಸರಕಾರಿ ವ್ಯವಸ್ಥೆ, ನಮ್ಮ ರಾಜಕಾರಣಿಗಳ ಬೇಜವಾಬ್ದಾರಿತನ ನಮ್ಮ ಜನಸಾಮಾನ್ಯರ ಹೊಣೆಗೇಡಿತನ ಪಶ್ಚಿಮ ಘಟ್ಟಗಳ ನಾಶಕ್ಕೆ ಕಾರಣವಾಗುತ್ತಿರುವಾಗ ಈ ಪುಸ್ತಕ ಅದನ್ನು ಉಳಿಸಲು ಸ್ಫೂರ್ತಿ ನೀಡಿಲಿ ಎಂದು ಡಾ.ನಾ. ಡಿಸೋಜ ಹಾರೈಸಿದ್ದಾರೆ.
©2025 Book Brahma Private Limited.