ಆಧುನಿಕ ವಚನಗಳು: ಭಾಗ-1- ಲೇಖಕ ಪ್ರಕಾಶ್ ಆರ್.ಕಮ್ಮಾರ್ ಅವರ ಆಧುನಿಕ ವಚನಗಳ ಸಂಕಲನ- ಕೃತಿಕಾರ ಸಮಾಜವನ್ನು ಮತ್ತು ಅಲ್ಲಿ ನಡೆಯುವ ವಿದ್ಯಮಾನಗಳಿಂದ ಪಡೆದ ಅನುಭವವನ್ನು ತನ್ನ ಅಂತರಂಗಕ್ಕೆ ಸ್ವೀಕರಿಸಿ, ಪುನಃ ಸಮಾಜಕ್ಕೆ ಸಾಹಿತ್ಯ ರೂಪದಲ್ಲಿ ಕೊಡುವಾಗ ಅನುಭವವನ್ನು ಸಾರ್ವತ್ರಿಕಗೊಳಿಸಿ ಮಾತುಗಳಿಗೊಂದು ಪ್ರಭೆಯನ್ನು ಕೊಡುತ್ತಾನೆ. ಸಹೃದಯ ಓದುಗನು ಅದರಿಂದ ತನ್ನಲ್ಲಿಯೆ ತಾನು ಅನುಭವವನ್ನು ಒರೆಗಚ್ಚಿಕೊಂಡು ಆನಂದ ರೂಪದಲ್ಲಿ ಸ್ವೀಕರಿಸಿದರೂ ವಿಚಾರದ ಒರೆಗಲ್ಲಿನಲ್ಲಿ ಪರೀಕ್ಷಿಸಿ ನೋಡಿಕೊಳ್ಳುವುದೇ ಅಲ್ಲದೆ ತಾನು ಅದರ ಫಲಾನುಭವಿಯೂ ಆಗುತ್ತಾನೆ.
ನೀತಿ ಬೋಧನೆಯ ಮಾತಿಗಿಂತಲೂ ಆಯಾ ಸಂದರ್ಭ, ಸನ್ನಿವೇಶದ ಅನುಭವಕ್ಕೆ ಅನುಭಾವದ ಪಾಕದಲ್ಲಿ ನೀಡುವ ರಸ ಪಾಕವು ಪರಿಣಾಮ ತೀವ್ರತೆ ಹೊಂದಿರುತ್ತದೆ. ಒಂದೊಂದು ವಚನವೂ ಒಂದೊಂದು ಬಿಡಿ ಬಿಡಿ ಮುಕ್ತವಾಗಿ ತನ್ನ ಮಿತಿಯಲ್ಲಿ ಪ್ರತಿಭೆಯ ಬೆಳಕನ್ನು ತೋರುತ್ತದೆ. ವಚನಗಳ ರಚನೆಯಲ್ಲಿ ಕಮ್ಮಾರರು ಬಳಸಿರುವ ಭಾಷೆ ಆ ಪ್ರಕಾರಕ್ಕೆ ಬಹಳ ಸೂಕ್ತವಾಗಿ ಹೊಂದಿಕೊಂಡಿದೆ. ಮೃದು ಮಧುರ ವಾಣಿ ವೀಣೆಯ ನಾದದೊಪಾದಿಯಲ್ಲಿ ಸಾಗುತ್ತದೆ. ಅದರೆ ಇವರು ಹೇಳುವ ಮಾತುಗಳು ಕೇವಲ ಮಾತುಗಳಾಗಿ ಉಳಿಯದೆ ಆಯಾ ಸಂದರ್ಭ ಸನ್ನಿವೇಶವನ್ನು ಕಣ್ಣೆದುರಿಗೆ ಕಟ್ಟಿಕೊಟ್ಟು ಓದುಗನ ಹೃದಯಕ್ಕೆ ತಟ್ಟನೆ ತಾಕುತ್ತದೆ, ವಿಚಾರ ಮಾಡಲು ಹಚ್ಚುತ್ತದೆ. "Face the devil, Fight to the end." - ಲೇಖಕರು ಕವಿಗಳು, ಕಥೆಗಾರರು, ಹಾಸ್ಯ ಲೇಖನ ಬರೆವವರು, ಮಕ್ಕಳಿಗೆ ಮುದ್ದು ಮುದ್ದಾದ ಚಂದದ ಶಿಶು ಗೀತೆಗಳನ್ನು ರಚಿಸಿರುವ ಇವರು ಈಗ ಆಧುನಿಕ ವಚನಕಾರರ ಸಾಲಿನಲ್ಲಿಯೂ ಸೇರಿರುವುದು ವಿಶೇಷ.
©2024 Book Brahma Private Limited.