ಡಾ. ಟಿ. ಗೋವಿಂದರಾಜು ಕವಿಯಾಗಿ, ಪ್ರಬಂಧಕಾರರಾಗಿ, ಕತೆಗಾರರಾಗಿ ಪರಿಚಿತರು. ಇವರು ಹುಟ್ಟಿದ್ದು 15.01.1953 ದೊಡ್ಡಬಳ್ಳಾಪುರ ತಾ. ಚನ್ನಾದೇವಿ ಅಗ್ರಹಾರದಲ್ಲಿ. ಇವರ ತಂದೆ ದೊಡ್ಡೇರಿ ತಿಮ್ಮರಾಯಪ್ಪ, ತಾಯಿ ಹೊನ್ನಮ್ಮ. ಕೃಷಿಕ ಮನೆತನದವರು. ಹೊನ್ನಮ್ಮ ಅವರು ತಮ್ಮ ಅಪಾರ ದೇಸೀ ಜ್ಞಾನ ವಿಶೇಷದ ಅಭಿವ್ಯಕ್ತಿಗಾಗಿ ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದವರು. ಬೆಂಗಳೂರು ವಿಶ್ವಿ ವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ಜಾನಪದ ಅಧ್ಯಯನದಲ್ಲಿ ಪಿಎಚ್.ಡಿ. ಪಡೆದ ಟಿ. ಗೋವಿಂದರಾಜು, ಪ್ರಾರಂಭಕ್ಕೆ ಸಿನಿಮಾ ಕ್ಷೇತ್ರ, ಎಚ್. ಎಲ್. ನಾಗೇಗೌಡರೊಂದಿಗೆ ಜಾನಪದ ಟ್ರಸ್ಟ್ ಕಾರ್ಯದರ್ಶಿಯಾಗಿ, ಜಾನಪದ ಜಗತ್ತು ಪತ್ರಿಕಾ ಸಂಪಾದಕನಾಗಿ ದುಡಿದ ಹಿರಿಮೆ ಹೊಂದಿದ್ದಾರೆ.
ಸರ್ಕಾರದ ವಿವಿಧ ಪಿಯು ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕ ಆಗಿ ದುಡಿದು, ಪ್ರಿನ್ಸಿಪಾಲ್ ಆಗಿ ನಿವೃತ್ತರು(2013). ಈ ನಡುವೆ ಸಾಂದರ್ಭಿಕವಾಗಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಪತ್ರಾಗಾರ, ರಾಜ್ಯ ಗ್ಯಾಸೆಟಿಯರ್‍ಗಳಲ್ಲಿ ನಿಯೋಜನೆ ಮೇಲೆ ಸೇವೆ ಸಲ್ಲಿಸಿದ ವಿಶೇಷ ಅನುಭವ ಹೊಂದಿದ್ದಾರೆ.
ಡಾ. ಟಿ. ಗೋವಿಂದರಾಜು ಹಲವು ಬಗೆಯ ಚಟುವಟಿಕೆಗಳಲ್ಲಿ ಸಕ್ರಿಯರು. ಅವರ ಕೆಲವು ಕತೆ, ಕವನ, ಪ್ರಬಂಧಗಳು, ವ್ಯಂಗ್ಯ ಚಿತ್ರ, ಛಾಯಾಚಿತ್ರಗಳು ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಹಲವಕ್ಕೆ ಬಹುಮಾನಗಳೂ ಬಂದಿವೆ. ಜಾನಪದ ಸಂಶೋಧನೆಯಲ್ಲಿ ಹೆಚ್ಚಿನ ಗಮನ ಸೆಳೆದಿರುವ ಶ್ರೀಯುತರು ಸುಮಾರು ಇಪ್ಪತೈದಕ್ಕೂ ಹೆಚ್ಚು ಜಾನಪದ ವಿಷಯಕ ಕೃತಿಗಳನ್ನು, ಮೂರು ಮಕ್ಕಳ ಕೃತಿ ಹಾಗೂ ‘ಕಾಡ ನಡುವಿನ ದೀವಿಗೆ’ ಎಂಬ ಕವನ ಸಂಕಲನ ಪ್ರಕಟಿಸಿ ಅಧ್ಯಯನಕಾರರ ಗಮನ ಸೆಳೆದಿದ್ದಾರೆ. ಡಾ. ಶಿವರಾಮ ಕಾರಂತ ಪುರಸ್ಕಾರ(1994), ಕಣವಿ ಕಾವ್ಯ ಪುರಸ್ಕಾರ (2014),ಕರ್ನಾಟಕ ಬಾಲ ವಿಕಾಸ ಅಕಾಡಮಿ, ಕನ್ನಡಸಾಹಿತ್ಯ ಪರಿಷತ್ತು, ಮೈಸೂರು ದಸರಾ ಮತ್ತಿತರ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.