‘ಚಂದ್ರಗಿರಿ ತೀರದಲ್ಲಿ’ ಖ್ಯಾತಿಯ ಹಿರಿಯ ಸಾಹಿತಿ ನಾಡೋಜ ಸಾರಾ ಅಬೂಬಕ್ಕರ್ ಅವರ ‘ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು’ ಕತೆ ನಿಮ್ಮ ಓದಿಗಾಗಿ...
ಪಶ್ಚಿಮದ ಕಡಲ ದಂಡೆಯ ಮೇಲೆ ಉದ್ದಕ್ಕೂ ಮೈ ಚಾಚಿ ಮಲಗಿರುವ ಒಂದು ಚಿಕ್ಕ ಊರು ಕಾಸರಗೋಡು. ಉಹುಂ, ಈಗ ಮಲಗಿಲ್ಲ; ಎದ್ದಿದೆ. ಕಳ್ಳಸಾಗಾಣೆದಾರರ ಮತ್ತು ದುಬಾಯಿಯ ಹಣದಿಂದ ಕೊಬ್ಬಿ ಎಚ್ಚೆತ್ತಿದೆ ಎಂದೆ ಹೇಳಬೇಕು. ಎಚ್ಚೆತ್ತು ತಲೆ ಎತ್ತಿ ನಿಂತಿದೆ. ಈ ಊರಿನ ಮೂರು ಭಾಗವನ್ನು ಸುತ್ತುವರಿದಿದ್ದಾಳೆ ಮಂದಗಾಮಿನಿಯಾಗಿ ಹರಿಯುತ್ತಿರುವ ಚಂದ್ರಗಿರಿ ನದಿ. ಕಾಸರಗೋಡಿನ ದಕ್ಷಿಣ ಭಾಗವಾದ ತಳಂಗರೆ ಗ್ರಾಮವು ಮುಸಲ್ಮಾನರಿಂದ ತುಂಬಿದ್ದರೆ, ಉಳಿದ ಭಾಗಗಳಲ್ಲಿ ಹಿಂದೂ ಮುಸ್ಲಿಮರು ಬೆರೆತುಕೊಂಡಿದ್ದಾರೆ. ಊರಿನ ಮುಖ್ಯ ಮಸೀದಿಯಾದ ಮಾಲಿಕುದ್ದೀನಾರ್ ಮಸೀದಿ ಮತ್ತು ಮಾಲಿಕುದ್ದೀನಾರ್ ದರ್ಗ ಇರುವುದು ಈ ತಳಂಗರೆ ಗ್ರಾಮದ ಒಂದು ಗುಡ್ಡೆಯ ಮೇಲೆ. ಸಾವಿರ ವರ್ಷಗಳ ಹಿಂದೆ ಕಟ್ಟಿಸಿದ್ದೆನ್ನಲಾದ ಈ ಮಸೀದಿ ಮತ್ತು ದರ್ಗ ಊರು ಮತ್ತು ಪರ ಊರಿನ ಮುಸ್ಲಿಮರಿಗೊಂದು ಪವಿತ್ರ ಸ್ಥಳವಾಗಿದೆ. ಈ ಮಸೀದಿಯ ಪಕ್ಕದಿಂದ ನೋಡಿದರೆ ಚಂದ್ರಗಿರಿ ನದಿಯು ಅರಬ್ಬಿ ಸಮುದ್ರವನ್ನು ಸೇರುವ ಕಣ್ಮನಗಳನ್ನು ತಣಿಸುವ ನೋಟವೊಂದು ನಮಗೆದುರಾಗುತ್ತದೆ.
ಊರಿನ ಇನ್ನೊಂದು ಭಾಗದಲ್ಲಿ ಈ ಚಂದ್ರಗಿರಿಯ ತೀರದಲ್ಲೇ ಇರುವುದು ಪಿಲಿ ಕುಂಜೆ ಗುಡ್ಡೆ. ಪ್ರಯಾಣಿಕರ ಬಂಗಲೆಯಿರುವುದು ಈ ಗುಡ್ಡೆಯ ಮೇಲೆ. ಇಲ್ಲಿಂದ ಚಂದ್ರಗಿರಿಯ ಕಡೆಗೊಮ್ಮೆ ದೃಷ್ಟಿ ಹಾಯಿಸಿದರೆ, ಇಡೀ ದಕ್ಷಿಣ ಕನ್ನಡದ ರಮಣೀಯ ನೋಟಗಳಲ್ಲಿ ಒಂದೆಂದು ಹೆಸರು ಪಡೆದ ಸುಂದರವಾದ ನೋಟವೊಂದು ನಮ್ಮ ಮನವನ್ನು ಸೂರೆಗೊಳ್ಳುತ್ತದೆ. ಈ ಪಿಲಿಕುಂಜೆ ಗುಡ್ಡೆಯನ್ನು ಹತ್ತಿ ಇಳಿದು ಚಂದ್ರಗಿರಿಯನ್ನು ದಾಟಿದರೆ ಸಿಕ್ಕುವುದು ಚೆಮನಾಡು ಗ್ರಾಮ. ಇದೇ ನನ್ನ ತಂದೆಯ ಹುಟ್ಟೂರು.
ಈ ಊರಿನ ಸುಪ್ರಸಿದ್ಧ ಮನೆತನವೊಂದರಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರಾರ್ಥಿಸಿ ಸುಸ್ತಾಗಿದ್ದ ಕುಟುಂಬವೊಂದರಲ್ಲಿ ಒಂದು ರಬ್ಬಿಯುಲ್ ಅವ್ವಲ್ (ಮುಸ್ಲಿಂ ತಿಂಗಳು) 12 ನೇ ದಿನ (ಮಹಮದ್ ಪೈಗಂಬರರು ಹುಟ್ಟಿದ ದಿನ) ಸೂರ್ಯೋದಯಕ್ಕೆ ಸರಿಯಾಗಿ ನಾನು ಹುಟ್ಟಿದೆನಂತೆ. ಅಂದರೆ ನಾನು ಪೈಗಂಬರರಂತೆ ಮಹಾತ್ಮಳೆಂದೇನೂ ಅಲ್ಲ. ಹೇಳಿಕೊಳ್ಳುವಂತಹ ಉತ್ತಮ ಗುಣಗಳೇನು ನನ್ನಲ್ಲಿಲ್ಲ. ಎಲ್ಲ ಹೆಣ್ಣುಗಳಿಗಿರುವ ಭಾವನೆ, ವಿಕಾರಗಳೆಲ್ಲವೂ ನನ್ನಲ್ಲೂ ಇವೆ. ಸಮಾಜದ ಪುರುಷರು ನಮ್ಮ ಸ್ತ್ರೀಯರಿಗೆ ಮಾಡುತ್ತಿರುವ ಮೋಸ, ಅನ್ಯಾಯಗಳನ್ನು ಕಂಡು ಸಿಟ್ಟಿನಿಂದ ಕೆಂಡವಾಗುತ್ತೇನೆ. ಯಾರಾದರೂ ಹೊಗಳಿದರೆ ಉಬ್ಬಿ ಆಕಾಶದೆತ್ತರಕ್ಕೇರಿದರೆ, ತೆಗಳಿಕೆಯನ್ನು ಕೇಳಿ ಸೂಜಿ ಚುಚ್ಚಿದ ಬಲೂನಿನಂತೆ ಮುದುಡುತ್ತೇನೆ. ಅಮೃತೇಶ್ವರ ಆನಂದಳ ಅದೃಷ್ಟವನ್ನು ಕಂಡು ಕರುಬಿದ್ದೇನೆ (ಈಗಲ್ಲ). ನನಗೂ ಮೇನಕಳಂತಹ ಮಗಳೊಬ್ಬಳಿದ್ದಿದ್ದರೆ....! ಎಂದು ಯೋಚಿಸಿ ಈ "ರೆ' ರಾಜ್ಯದಲ್ಲಿ ನಾನು ವಿಹರಿಸಿದ್ದೇನೆ. ಸಂಜಯಗಾಂಧಿ ಸತ್ತಾಗ ನಾನು ಕಣ್ಣೀರು ಸುರಿಸಿದ್ದೇನೆ; ದೇಶದ ಉತ್ತರಾಧಿಕಾರಿ ರಾಜಕುಮಾರ ಸತ್ತನೆಂದೇನೂ ಅಲ್ಲ; ಬಾಳ ಹೊಸ್ತಿಲಲ್ಲಿ ಜೀವನ ಸಂಗಾತಿಯನ್ನು ಕಳೆದುಕೊಂಡ ಆ ಹೆಣ್ಣು ಮಗಳು ಮುಂದೆ ಬಾಳಿನಲ್ಲಿ ಏನೇನು ಬವಣೆಪಡಬೇಕಾಗುತ್ತದೊ ಎಂದು ನೆನೆದು. ಹೀಗೆ ಎಲ್ಲ ಹೆಂಗಸರಂತೆ ಎಲ್ಲ ರೀತಿಯ ಭಾವನೆ ವಿಕಾರಗಳಿಗೂ ನಾನೂ ಒಳಗಾಗುತ್ತೇನೆ.
ಅಂತೂ ನನ್ನ ಅಜ್ಜ ಅಜ್ಜಿಯಂದಿರ ಮುದ್ದಿನ ಮೊಮ್ಮಗಳಾಗಿ, ತಂದೆ ತಾಯಿಯರ ಪ್ರೀತಿಯ ಮಗಳಾಗಿ, 5 ಜನ ಚಿಕ್ಕಪ್ಪಂದಿರ ಕಣ್ಮಣಿಯಾಗಿ, ಮೂರು ಜನ ಅಣ್ಣಂದಿರ ಪುಟ್ಟ ತಂಗಿಯಾಗಿ, ಇಬ್ಬರು ತಮ್ಮಂದಿರ ಮಮತೆಯ ಅಕ್ಕನಾಗಿ ಬೆಳೆದೆ. ಈಗ ನಾಲ್ಕು ಜನ ಗಂಡು ಮಕ್ಕಳ ವಾತ್ಸಲ್ಯಮಯಿಯಾದ ತಾಯಿಯೂ ಆಗಿದ್ದೇನೆ. ಒಂದೇ ಒಂದು ಹೆಣ್ಣು ಕುಡಿಯಿಲ್ಲದೆ ಬಾಳು ಪೂರ್ತಿ ಈ ಗಂಡುಗಳ ಜೊತೆಯಲ್ಲೇ ಕಳೆಯಬೇಕಾಯಿತಲ್ಲ ಎಂದು ಕೆಲವೊಮ್ಮೆ ಮನವು ದುಗುಡದಿಂದ ಮುದುಡುತ್ತದೆ.
ತಂದೆಯ ಕೋರ್ಟು ಕೆಲಸಕ್ಕಾಗಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನನ್ನ ತಂದೆ ಕಾಸರಗೋಡಿನಲ್ಲಿ ಮನೆ ಮಾಡಿಕೊಂಡಿದ್ದರು. ನನ್ನ ಅಜ್ಜಿಯ ಮನೆಯಿದ್ದೆದ್ದು ನದಿಯಾಚೆಯ ಚೆಮನಾಡಿನಲ್ಲಿ. ಆದ್ದರಿಂದ ನನಗೆ ತಿಳಿವು ಮೂಡಿದಾಗಿನಿಂದಲೂ ನಾನು ವಾರಕ್ಕೆ ಒಂದೆರಡು ಬಾರಿ ಈ ಚಂದ್ರಗಿರಿ ನದಿಯನ್ನು ದೋಣಿಯಲ್ಲಿ ದಾಟಿ ಅಜ್ಜಿಯ ಮನೆಗೆ ಹೋಗುತ್ತಿದ್ದೆ. ನನ್ನ ಶೈಶವಾವಸ್ಥೆಯ ಹೆಚ್ಚಿನ ದಿನಗಳನ್ನೆಲ್ಲಾ ನಾನು ಈ ಚಂದ್ರಗಿರಿಯ ತೀರದಲ್ಲಿರುವ ನನ್ನಜ್ಜನ ಮನೆಯಲ್ಲೇ ಕಳೆಯುತ್ತಿದ್ದೆ.
ನನ್ನಜ್ಜ ಹೇಳಿಕೊಳ್ಳುವ ಸಿರಿವಂತರೇನೂ ಅಲ್ಲ. ನೆಮ್ಮದಿಯಿಂದ ಜೀವನ ಸಾಗಿಸುವಷ್ಟು ಆಸ್ತಿಯನ್ನು ಹೊಂದಿದ್ದರು. ಇವರು ಸರಳ ವ್ಯಕ್ತಿಯಾಗಿದ್ದರು. ಆ ಕಾಲದಲ್ಲಿಯೇ (ಅಂದರೆ ಸುಮಾರು 100ವರ್ಷಗಳ ಹಿಂದೆ) ಪತ್ರಿಕೆಯೋದುವಷ್ಟು, ವಿದ್ಯಾಭ್ಯಾಸ ಪಡೆದಿದ್ದರು. "ಮಾತೃಭೂಮಿ' ದಿನ ಪತ್ರಿಕೆಯನ್ನೋದದೆ, ಒಂದು ದಿನವನ್ನೂ ಕಳೆಯುತ್ತಿರಲಿಲ್ಲ. ಇಸ್ಲಾಂ ಮತಗ್ರಂಥಗಳನ್ನೆಲ್ಲಾ ಚೆನ್ನಾಗಿ ಅಧ್ಯಯನ ಮಾಡಿದ್ದರು. ಸಾಯುವವರೆಗೂ ಅಜ್ಜಿಯಾಗಲಿ ಅಜ್ಜನಾಗಲಿ ಒಂದು ಹೊತ್ತಿನ ನಮಾಜನ್ನಾಗಲಿ, ಒಂದು ದಿನದ ಉಪವಾಸವನ್ನಾಗಲಿ ತಪ್ಪಿಹಿದವರಲ್ಲ. "ಬದುಕುವುದಕ್ಕಾಗಿ ತಿನ್ನಬೇಕೇ ಹೊರತು ತಿನ್ನುವುದಕ್ಕಾಗಿ ಬದುಕಬಾರದು', "ನಮಗಿಂತ ಮೇಲಿರುವವರನ್ನು ನೋಡಬಾರದು; ಕೆಳಗಿರುವವರನ್ನು ನೋಡಬೇಕು' ಎಂದೆಲ್ಲಾ ನಮಗೆ ಆಗಾಗ ಉಪದೇಶಿಸುತ್ತಿದ್ದರು ನನ್ನಜ್ಜ.
ಆಗಿನ ಕಾಲದಲ್ಲಿ ಮಕ್ಕಳಿಗೆ ದಾಕು ಹಾಕಿಸಲು ಯಾವ ತಾಯಿಯೂ ಒಪ್ಪುತ್ತಿರಲಿಲ್ಲ. ನನ್ನ ಅಜ್ಜಿಯೂ ಇದಕ್ಕೆ ಹೊರತಾಗಿರಲಿಲ್ಲ. ಅಪರೂಪದ ಹೆಣ್ಣು ಮಗು! ದಾಕು ಹಾಕಿ ಅದಕ್ಕೇನಾದರೂ ಹೆಚ್ಚು ಕಮ್ಮಿಯಾದರೆ ? ಆಗಿನ ಕಾಲದಲ್ಲಿ ಆರೋಗ್ಯ ಇಲಾಖೆಯವರು ಮಕ್ಕಳನ್ನು ಹುಡುಕಿಕೊಂಡು ಮನೆಮನೆಗೆ ಬರುತ್ತಿದ್ದರೂ ತಾಯಂದಿರು ತಮ್ಮ ಮಕ್ಕಳನ್ನು ಒಳಕೋಣೆಯೊಳಗೆ ಬಚ್ಚಿಟ್ಟು, ಮಕ್ಕಳು ದೂರದ ಅಜ್ಜಿಯ ಮನೆಗೆ ಹೋಗಿರುವರೆಂದೊ ಅಥವಾ ತಮ್ಮ ಮನೆಯಲ್ಲಿ ಅಂತಹ ಮಕ್ಕಳೇ ಇಲ್ಲವೆಂದೊ ಹೇಳಿ ಅವರನ್ನು ಹಿಂದಕ್ಕೆ ಕಳುಹಿಸಿಬಿಡುತ್ತಿದ್ದರು. ಹೀಗಾಗಿ ನನಗೆ ಸುಮಾರು 8 ವರ್ಷಗಳವರೆಗೂ ದಾಕು ಹಾಕಿಯೇ ಇರಲಿಲ್ಲ. ಆಮೇಲೊಂದು ದಿನ ನಾನು ಮನೆಯಲ್ಲಿದ್ದಾಗ ನನಗೆ ತಿಳಿಯದಂತೆ ದಾಕು ಹಾಕುವವರನ್ನು ಮನೆಗೆ ಕರೆಸಿ ತಂದೆಯೇ ನನ್ನನ್ನು ಹಿಡಿದು ಬಲವಂತದಿಂದ ನನಗೆ ದಾಕು ಹಾಕಿಸಿದರು.
ಆಗಿನ ಕಾಲದಲ್ಲಿ ಮುಸ್ಲಿ: ಹೆಣ್ಣು ಮಕ್ಕಳ ಒಂದೊಂದು ಕಿವಿಯ ಮೇಲ್ಭಾಗದಲ್ಲೂ ಐದೊ, ಆರೊ ತೂತುಗಳನ್ನು ಮಾಡುತ್ತಿದ್ದರು. ಈ ಹುಣ್ಣು ವಾಸಿಯಾಗಲು ಸುಮಾರು ಎರಡು ತಿಂಗಳು ಹಿಡಿಯುತ್ತಿತ್ತು. ಈ ಎರಡು ತಿಂಗಳು ಈ ಹೆಣ್ಣು ಮಕ್ಕಳು ನರಕ ಯಾತನೆಯನ್ನನುಭವಿಸುತ್ತಿದ್ದವು. ಆದರೂ ಈ ತೂತುಗಳನ್ನು ಮಾಡಿಸದೆ ಯಾರೂ ಬಿಡುತ್ತಿರಲಿಲ್ಲ. ಅದು ಮಾಡದೆ ಹೋದರೆ ಮದುವೆಯಲ್ಲಿ ಚಿನ್ನದ ಅಲಿಕತ್ತ್ (ಒಂದು ವಿಧದ ಆಭರಣ) ಹಾಕುವುದು ಹೇಗೆ ? ಕಿವಿಗೆ ಚಿನ್ನ ಹಾಕದೆ ಹೋದರೆ ಯಾವನು ತಾನೇ ಹೆಣ್ಣು ಹುಡುಗಿಯನ್ನು ಮದುವೆಯಾಗುತ್ತಾನೆ ? ಹೀಗಾಗಿ ಈ ಕಾಣದ, ಕೇಳದ ಎಂದೊ ಬರುವ ಗಂಡನಿಗಾಗಿ ಈ ಚಿಕ್ಕ ಹೆಣ್ಣು ಮಕ್ಕಳು ಇಂತಹ ಶಿಕ್ಷೆಯನ್ನನುಭವಿಸುತ್ತಿದ್ದರು. ಯಾವ ರೀತಿಯ ಕ್ರಿಮಿನಾಶಕವನ್ನೂ ಚಿಮುಕಿಸದೇ ಬರೇ ಸೂಜಿದಾರದಿಂದ ಈ ತೂತುಗಳನ್ನು ಮಾಡುವಾಗ ಈ ಮಕ್ಕಳ ಕಿರಿಚಾಟವು ಮುಗಿಲು ಮುಟ್ಟುತ್ತಿತ್ತು. ಮಕ್ಕಳಿಗೆ ದಾಕು ಹಾಕಿಸಲು ಹಿಂದೇಟು ಹೊಡೆಯುತ್ತಿದ್ದ ತಾಯಂದಿರು ಈ ಕೆಲಸವನ್ನು ಸಂತೋಷದಿಂದ ಮಾಡಿಸುತ್ತಿದ್ದರು. ಪಟ್ಟಣಗಳಲ್ಲಿ ಈಗ ಈ ಪದ್ಧತಿ ನಿಂತುಹೋಗಿದ್ದರೂ ಹಳ್ಳಿಗಳಲ್ಲಿ ಇದು ಇನ್ನೂ ಅವ್ಯಾಹತವಾಗಿ ಮುಂದುವರಿಯುತ್ತಲೇ ಇದೆ.
ಏನೊ ಹೇಳ ಹೊರಟು ಎಲ್ಲಿಗೊ ಬಂದೆ. ನನ್ನ ಅಜ್ಜನಿಗೆ 6 ಜನ ಗಂಡು ಮಕ್ಕಳು. ಹೆಣ್ಣು ಮಕ್ಕಳಿಲ್ಲ. ನನ್ನ ತಂದೆಯೇ ಹಿರಿಯ ಮಗ. ನನ್ನ ತಂದೆಗೂ ಸಾಲಾಗಿ ಮೂರು ಜನ ಗಂಡು ಮಕ್ಕಳು ಹುಟ್ಟಿದರು. 'ಈ ಬಾರಿ ನಮ್ಮ ಸೊಸೆ ಹೆಣ್ಣು ಮಗುವನ್ನು ಹೆತ್ತರೆ ಮಗುವಿಗೆ ಸಾರಾ ಎಂದು ನಾಮಕರಣ ಮಾಡೋಣ. ಹಜ್ರತ್ ಇಬ್ರಾಹಿಂ ಅವರ ಪ್ರಿಯ ಪತ್ನಿಯ ಹೆಸರು' ಎಂದು ನನ್ನ ಅಜ್ಜ ಹರಕೆ ಹೊತ್ತ ಮೇಲೆ ನಾನು ಹುಟ್ಟಿದೆನಂತೆ. "ಈ ಅಜ್ಜ ಹರಕೆ ಹೊರದಿದ್ದರೆ ಎಷ್ಟು ಚೆನ್ನಾಗಿತ್ತು? ನಾನೂ ಉಳಿದವರಂತೆಯೇ ಗಂಡಾಗಿ ಹಾಯಾಗಿರುತ್ತಿದ್ದೆ' ಎಂದು ಚಿಕ್ಕವಳಿರುವಾಗ ನಾನು ಎಷ್ಟೋ ಬಾರಿ ಅಂದುಕೊಳ್ಳುತ್ತಿದ್ದೆ.
ನನ್ನ ತಾಯಿ ಮತ್ತು ಅಜ್ಜಿಯರೂ ನನ್ನ ಕಿವಿಯ ಮೇಲ್ಭಾಗ ಚುಚ್ಚಲು ಸಿದ್ದರಾದರು. ಈಗ ಮಾತ್ರ ನನ್ನ ತಂದೆ ಜಾಗೃತರಾದರು. “ಅವಳು ದೊಡ್ಡವಳಾದ ಮೇಲೆ ಅವಳಿಗೆ ಬೇಕಾದರೆ ಅವಳೇ ಚುಚ್ಚಿಸಿಕೊಳ್ಳಲಿ. ಈಗ ಮಾತ್ರ ಅವಳಿಗೆ ಯಾವ ರೀತಿಯ ಹಿಂಸೆಯನ್ನೂ ಕೊಡುವುದು ಬೇಡ'' ಎಂದು ನನ್ನ ತಂದೆ ಹಟ ಹಿಡಿದರು. ನನ್ನ ತಂದೆ ಇನ್ನೂ ಒಂದು ಮಾತೆಂದರು.
"ಅವಳಿಗೆ 16 ವರ್ಷವಾಗದೆ, ಅವಳನ್ನು ಎಸ್.ಎಸ್.ಎಲ್.ಸಿ. ವರೆಗೆ ಓದಿಸದೆ ನಾನವಳಿಗೆ ಮದುವೆ ಮಾಡುವುದಿಲ್ಲ. ''ನನ್ನ ತಾಯಿ ಮತ್ತು ಅಜ್ಜಿಗೆ ಸಿಡಿಲೆರಗಿದಂತಾದರೂ ನನ್ನ ತಂದೆಯ ನಿರ್ಧಾರದೆದುರು ಅವರೇನೂ ಮಾಡುವಂತಿರಲಿಲ್ಲ.
“ಕೊಂಚ ದೊಡ್ಡವಳಾದ ಮೇಲೆ ಅವಳೇ ಶಾಲೆ ಬಿಟ್ಟುಬಿಡುತ್ತಾಳೆ. ನಾವೇಕೆ ಸುಮ್ಮನೆ ತಲೆಕೆಡಿಸಿಕೊಳ್ಳಬೇಕು ?'' ಎಂದು ತಾಯಿ ಅಜ್ಜಿಯರು ಸುಮ್ಮನಾದರು.
ನೆನಪಿನ ಪರದೆಯ ಮೇಲೆ ಧೂಳು ಮುಚ್ಚಿದೆ. ಈ ಧೂಳು ರುನಾಡಿಸಿ ಪ್ರಯಾಸದಿಂದ ಒಂದೊಂದೇ ಪರದೆಗಳನ್ನು ಸರಿಸತೊಡಗಿದೆ.
ಮಸುಕಾಗಿದ್ದ ಚಿತ್ರಗಳು ಬರಬರುತ್ತಾ ಸ್ಪಷ್ಟವಾಗಿ ಮೂಡತೊಡಗಿದವು. ನನಗೆ ಕೊಂಚ ತಿಳಿವು ಮೂಡಿದಾಗ ಅದಾಗಲೇ ನನಗೆ ಎರಡು ವರ್ಷದ ತಮ್ಮನೊಬ್ಬನಿದ್ದನು. ನನಗೆ 6 ವರ್ಷವಾದಾಗ ನನ್ನ ತಾಯಿ ಮತ್ತೊಮ್ಮೆ ಗರ್ಭಿಣಿಯಾದರು. ಒಂದು ದಿನ ತಾಯಿ ನನ್ನನ್ನು ಕರೆದು, "ನಿನ್ನ ಜೊತೆಯಲ್ಲಿ ಆಡಲು ತಂಗಿಯೊಬ್ಬಳು ಬರುತ್ತಾಳೆ'' ಎಂದಾಗ ನಾನು ಸಂತೋಷದಿಂದ ಕುಣಿದಾಡಿದ್ದು ನನಗೆ ಚೆನ್ನಾಗಿ ನೆನಪಿದೆ. ಕೊನೆಗೂ ತಮ್ಮನೇ ಹುಟ್ಟಿದಾಗ ನನಗೆ ತುಂಬ ನಿರಾಶೆಯಾದರೂ, ಎತ್ತಿ ಆಡಿಸಲು ಮನೆಯಲ್ಲಿ ಇನ್ನೊಂದು ಮಗು ಹುಟ್ಟಿತಲ್ಲ ಎಂದು ಸಂತೋಷವಾಯಿತು. ನನ್ನ ಜೀವವಿಲ್ಲದ ಬೊಂಬೆಗಳಿಗಿಂತಲೂ ಈ ಜೀವಂತ ಬೊಂಬೆ ಎಷ್ಟೋ ಮೇಲು ಎನ್ನುವ ತೃಪ್ತಿ ನನ್ನದಾಯಿತು. ನನ್ನ ಈ ತಮ್ಮನು ತನ್ನ ಕೆಳಗಿನ ಹಲ್ಲು ಮೇಲ್ಭಾಗದ ಸಮತಟ್ಟಾಗಿಲ್ಲದ ಮೂರು ಹಲ್ಲುಗಳನ್ನು ತೋರಿಸಿ, ಜೊಲ್ಲು ಸುರಿಸುತ್ತಾ ಅಂಬೆಗಾಲಿಕ್ಕುತ್ತಾ, ನಗುತ್ತಾ ನಾನು ಕುಳಿತೆಡೆಗೆ ಬಂದು ನನ್ನ ಹಿಂದಿನಿಂದ ನನ್ನನ್ನು ಹಿಡಿದು ನಿಂತು ನನ್ನ ಮುಡಿಯಲ್ಲಿದ್ದ ಹೂವನ್ನು ಕಿತ್ತಾಗ ನನಗೆ ಅವನ ಮೇಲೆ ಸಿಟ್ಟು ಬರುತ್ತಲೇ ಇರಲಿಲ್ಲ. ಆ ಹೂವನ್ನು ಕೈಯಲ್ಲಿ ಹಿಡಿದು ಹಿಚುಕಿ ಅವನು ಕೇಕೆ ಹಾಕಿ ನಕ್ಕರೆ ನಾನು ನನ್ನ ಕೈಯಲ್ಲಿದ್ದ ತಿಂಡಿಯನ್ನು ಅವನ ಬಾಯಲ್ಲಿ ಹಾಕಿ ಅವನನ್ನಪ್ಪಿಕೊಂಡು ಮುದ್ದಾಡುತ್ತಿದ್ದೆ. ನನ್ನ ಈ ತಮ್ಮಂದಿರನ್ನು ನಾನು ಬಹುವಾಗಿ ಪ್ರೀತಿಸುತ್ತಿದ್ದೆ ಎಂದೇ ಮುಂದೆ ಅವರೇನಾದರೂ ಅಡ್ಡ ಹಾದಿ ತುಳಿದರೆ ನಾನು ಅವರನ್ನು ಕಟುವಾಗಿ ಟೀಕಿಸಲು, ಬೈದು ಬುದ್ಧಿ ಹೇಳಲು ಅಸಮರ್ಥಳಾಗುತ್ತಿದ್ದೆ.
ನನ್ನ ಮೂರು ಜನ ಅಣ್ಣಂದಿರಲ್ಲಿ ನಾನು ನನ್ನ ದೊಡ್ಡಣ್ಣನನ್ನು ಬಹುವಾಗಿ ಪ್ರೀತಿಸುತ್ತಿದ್ದೆ. ನನ್ನ ಮುಖ ಸ್ವಲ್ಪ ಬಾಡಿದರೂ ಈ ಅಣ್ಣನು ನನ್ನನ್ನೆತ್ತಿಕೊಂಡು ಸಂತ್ಸೆಸುತ್ತಿದ್ದನು. ನಾನು ಅವನ ಜೀವದ ಜೀವವಾಗಿದ್ದೆ. ಇವನು ಏನಾದರೂ ತಪ್ಪು ಮಾಡಿ ತಂದೆಯಿಂದ ಆಗಾಗ ಪೆಟ್ಟು ತಿನ್ನುತ್ತಿದ್ದನು. ಆಗ ನಾನು ಅದನ್ನು ನೋಡಲಾರದೆ ನಮ್ಮ ಹಿತ್ತಲಿನಲ್ಲಿದ್ದ ಸುರುಗಿ ಹೂವಿನ ಮರದ ಬುಡದಲ್ಲಿ ಕುಳತು ಅಳುತ್ತಿದ್ದುದು ಮಸುಕಾಗದ ನೆನಪು.
ಕಾಸರಗೋಡಿನಲ್ಲಿ ಎರಡು ಪದವಿ ಪಡೆದ ಮುಸ್ಲಿಮರಲ್ಲಿ ನನ್ನ ಜು ಮೊತ್ತಮೊದಲಿಗರೆಂಬುದು ನನ್ನ ನೆನಪು. ಬಿ.ಎಲ್. ತರಗತಿಯಲ್ಲಿ "ಮಹಮಡ ಲಾ' ದಲ್ಲಿ ಇವರು ಮದ್ರಾಸು ವಿಶ್ವವಿದ್ಯಾಲಯದ ಚಿನ್ನದ ಪದಕವನ್ನೂ ಗಳಿಸಿದ್ದಾರೆ. ಕಾಸರಗೋಡಿನಲ್ಲಿ ಈವರೆಗೆ ಚಿನ್ನದ ಪದಕ ಪಡೆದ ಮುಸ್ಲಿಮರು ಇವರೊಬ್ಬರೇ ಎಂಬುದು ನನ್ನ ಭಾವನೆ. ಆಗಿನ ಕಾಲದಲ್ಲಿ ಇಂಗ್ಲೆಂಡು ಮತ್ತು ಅಮೆರಿಕಾದಿಂದ ಬರುತ್ತಿದ್ದ ವಾರ, ಮಾಸಪಶ್ರಿಕೆಗಳಲ್ಲಿ ಹೆಚ್ಚಿನವುಗಳನ್ನು ಮನೆಗೆ ತರಿಸುತ್ತಿದ್ದರು. ಪುಸ್ತಕಗಳನ್ನು ಕೊಂಡು ಓದುವುದು ಇವರ ಅಭ್ಯಾಸವಾಗಿತ್ತು. ಆಗೆಲ್ಲಾ ನನ್ನ ತಾಯಿ ಹೇಳುವುದಿತ್ತು “ನಿನ್ನ ತಂದೆ ನಿನಗೇನೂ ಒಡವೆ ಮಾಡಿಸುವುದಿಲ್ಲ. ಅವರು ದುಡಿದಿದ್ದೆಲ್ಲಾ ಈ ಪುಸ್ತಕ, ಪತ್ರಿಕೆಗಳಿಗೇ ಮೀಸಲು,'' ಎಂದು.
ನನ್ನ ತಂದೆ ಬಯಸಿದ್ದರೆ ಎಷ್ಟೋ ಹಣ ಸಂಪಾದಿಸಬಹುದಾಗಿತ್ತು. ಆದರೆ ಹಣ ಗಳಿಸುವುದು ಮಾತ್ರ ಅವರ ಪ್ರೀತಿಯ ಹವ್ಯಾಸಗಳಲ್ಲಿ ಒಂದಾಗಿರಲಿಲ್ಲ. ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಅವರ ಕಾಲಲ್ಲಿ ಅವರನ್ನು ನಿಲ್ಲಿಸಿಬಿಟ್ಟರೆ ತಮ್ಮ ಕರ್ತವ, ಮುಗಿಯಿತು, ಎಂದು ಅವರು ತಿಳಿದಿದ್ದರು. ತುಂಬ ಪ್ರಾಮಾಣಿಕರಾಗಿ ತಮ್ಮ ಕೆಲಸವನ್ನು ನಿರ್ವಹಿಸಿ, ಹಣದ ಹುಚ್ಚು ಹೊಳೆ ಹರಿಯುತ್ತಿರುವ ನಾಡಿನಲ್ಲಿ ಕೂಡ ಸಿರಿವಂತರೆನಿಸಿಕೊಳ್ಳದೆ ಹೋದರೂ, ಇಂದಿಗೂ ಹಿಂದೂ ಮುಸ್ಲಿಮರೆಂಬ ಭೇದವಿಲ್ಲದೆ ಊರವರೆಲ್ಲರ ಆದರಕ್ಕೆ, ಗೌರವಕ್ಕೆ ಪಾತ್ರರಾಗಿದ್ದಾರೆ.
ಚಂದ್ರಗಿರಿ ನದಿಯ ದಕ್ಷಿಣ ಭಾಗದಲ್ಲಿ ಮಲಯಾಳ ಶಾಲೆಗಳಿದ್ದರೂ ಚಂದ್ರಗಿರಿಯ ಉತ್ತರ ಭಾಗವಾದ ಕಾಸರಗೋಡಿನಲ್ಲಿ ಹೆಚ್ಚಿನ ಶಾಲೆಗಳು ಕನ್ನದ ಶಾಲೆಗಳಾಗಿದ್ದವು. ನಮ್ಮ ಮಾತೃಭಾಷೆ ಮಲೆಯಾಳವಾಗಿದ್ದರೂ, ಮಾತೃಭಾಷೆಯನ್ನೇ ಕಲಿತು, ಅದನ್ನು ಉದ್ದಾರ ಮಾಡಬೇಕೆಂದು, ನನ್ನ ತಂದೆ ಅಂದವರಲ್ಲ. ವಿದ್ಯೆ ಮುಖ್ಯ. ಓದಿ ಬುದ್ಧಿವಂತರಾಗಲು, ಜ್ಞಾನ ಸಂಪಾದಿಸಲು ಭಾಷೆ ಯಾವುದಾದರೇನು ? ಮನೆಯ ಸಮೀಪವಿರುವುದು ಕನ್ನಡ ಶಾಲೆ. ನನ್ನ ತಂದೆಯೂ ಈ ಶಾಲೆಯ ಹಳೆಯ ವಿದ್ಯಾರ್ಥಿ. ಆದ್ದರಿಂದ ತಂದೆ, ನನ್ನ ಅಣ್ಣಂದಿರನ್ನು ಈ ಶಾಲೆಗೆ ಸೇರಿಸಿ, ನನ್ನನ್ನು ಹತ್ತಿರದಲ್ಲೆ ಇದ್ದ ಹೆಣ್ಣು ಮಕ್ಕಳ ಶಾಲೆಯೊಂದಕ್ಕೆ ಸೇರಿಸಿದರು.
ಮೊದಲೆಲ್ಲಾ ಶಾಲೆಗೆ ಹೋಗಲು ನನಗೆ ಅಂತಹ ಉತ್ಸಾಹವೇನೂ ಇರಲಿಲ್ಲ. ಕನ್ನಡ ಭಾಷೆ ಬರದ ಕಾರಣ ಶಾಲೆಯಲ್ಲಿ ನಾನು ಒಂಟಿಯಾಗಿರಬೇಕಾಯಿತು. ಆದರೆ ತಂದೆಯ ಕಣ್ಣೆದುರಿಗೆ ನಾನು ಶಾಲೆ ತಪ್ಪಿಸುವಂತಿರಲಿಲ್ಲ. ಅವರಿಗಿದ್ದ ಒಂದೇ ಒಂದು ಆಕಾಂಕ್ಷೆ, ತನ್ನ ಮಗಳು ಎಸ್.ಎಸ್.ಎಲ್.ಸಿ. ಮಟ್ಟದ ವಿದಾ ದ್ಯಾಭ್ಯಾಸವನ್ನಾದರೂ ಪಡೆಯಲೇಬೇಕು ಎಂಬುದು. ನನ್ನನ್ನು ನೋಡಿ ನಮ್ಮ ಸಮಾಜದ ಇತರ ಹೆಣ್ಣು ಮಕ್ಕಳೂ ಶಾಲೆಗೆ ಹೋಗಿ ವಿದ್ಯೆ ಪಡೆಯಬೇಕು; ತಮ್ಮ ಅಜ್ಞಾನದ ಕತ್ತಲೆಯ ಗುಹೆಯಿಂದ ಈ ಹೆಣ್ಣು ಮಕ್ಕಳು ಹೊರಬರಬೇಕು ಎಂಬ ಹೆಬ್ಬಯಕೆ ಅವರದಾಗಿತ್ತು. ಹೀಗಾಗಿ ನಾನು ಶಾಲೆಗೆ ಹೋಗಲು ಹಿಂಜರಿದರೆ ಅವರು ಅದನ್ನು ಸಹಿಸುವರೇ?
“ಅಯ್ಯೋ, ಮುಸ್ಲಿಂ ಹುಡುಗಿ, ಮುಟ್ಟಿಸಿಕೊಳ್ಳಬೇಡ'' ಎಂದು ಹೇಳಿ, ದೂರ ಸರಿಯುವ ಬ್ರಾಹ್ಮಣ ಮತ್ತು ಕೊಂಕಣಿ ಹುಡುಗಿಯರು ಆಗಲೂ ನನ್ನ ತರಗತಿಯಲ್ಲಿದ್ದರು. ಆದರೆ ಗಾಂಧೀಜಿಯ ಭಕ್ತಳಾದ ಓರ್ವ ಉಪಾಧ್ಯಾಯಿನಿ, ಯಾರೂ ಇಂತಹ ಭೇದ ತೋರದಂತೆ ನೋಡಿಕೊಂಡರು. ದ್ರ ಉಪಾಧ್ಯಾಯಿನಿಯವರು ಈ ಶಾಲೆಯ ಅಸ್ತಿತ್ರಕ್ಕೆ ಕಾರಣರಾದುದರಿಂದ, ಇಡೀ ಶಾಲೆಯಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಆದ್ದರಿಂದ, ಇವರ ಮಾತನ್ನು ಯಾರೂ ಮೀರುವಂತಿರಲಿಲ್ಲ. ಇಬ್ಬರು ಬ್ರಾಹ್ಮಣ ಅಥವಾ ಕೊಂಕಣಿ ಹುಡುಗಿಯರ ಮಧ್ಯದಲ್ಲಿ ಇವರು ಬೇಕೆಂದೇ ನನ್ನನ್ನು ಕೂರಿಸುತ್ತಿದ್ದರು. ಕ್ರಮೇಣ ಈ ಹುಡುಗಿಯರು ನನ್ನೊಡನೆ ಸ್ನೇಹ ಸಂಪಾದಿಸಿಕೊಂಡರು.
ಒಂದು ದಿನ ನಾನು ಈ ಹುಡುಗಿಯರ ಜೊತೆಯಲ್ಲಿ ನಮ್ಮೂರಿನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋದೆ. ಅವರೊಡಗೂಡಿ ಅವರು ಮಾಡುವಂತೆಯೇ ಮಾಡಿ ಗರ್ಭಗುಡಿಗೆ ಸುತ್ತು ಬಂದು ಪೂಜಾರಿಯಿಂದ ಪ್ರಸಾದ ತೆಗೆದುಕೊಂಡು ಬಂದು ನನ್ನ ಅಣ್ಣಂದಿರೊಡನೆ ಹೇಳಿದೆ. ಎಲ್ಲರೂ "ಇಂದಿನಿಂದ ನೀನು ಹಿಂದುವಾದೆ' ಎಂದು ನನ್ನನ್ನು ಹಾಸ್ಯ ಮಾಡಿ ನಗತೊಡಗಿದರು. ನನ್ನ ತಂದೆ ದೊಡ್ಡದಾಗಿ. ನಕ್ಕುಬಿಟ್ಟರು.
ಮೊದಲೆಲ್ಲ ನಾನು ಕಲಿಯುವುದರಲ್ಲಿ ಅಂತಹ ಪ್ರಗತಿಯನ್ನೇನೂ ತೋರಲಿಲ್ಲ. ಮನೆಯಲ್ಲಿ ಯಾರೂ ನನ್ನನ್ನು ಓದಲು, ಬರೆಯಲು ಬಲವಂತ ಮಾಡುತ್ತಲೂ ಇರಲಿಲ್ಲ. ಮನೆಗೆ ಬಂದರೆ, ಅಣ್ಣಂದಿರೊಡನೆ ಆಡುತ್ತಿದ್ದೆ ಅಥವಾ ಜಗಳವಾಡುತ್ತಿದ್ದೆ. ತಮ್ಮಂದಿರನ್ನು ಕಟ್ಟಿಕೊಂಡು ಹಿತ್ತಲನ್ನೆಲ್ಲಾ ತಿರುಗಿ ಪೇರಳೆಹಣ್ಣು ಸೀತಾಫಲ, ` ಅಂಟೆಕಾಯಿಯನ್ನೆಲ್ಲಾ ಕಿತ್ತು ತರುತ್ತಿದ್ದೆ. “ಮಹಾ ಯಾತ್ರಿಕ' ಕತೆಯಲ್ಲಿ ಬರುವ ದುರ್ಗಳಂತೆ, ನಾನು ನನ್ನ ತಮ್ಮಂದಿರನ್ನು ಕಟ್ಟಿಕೊಂಡು ಅಲೆಯುತ್ತಿದ್ದೆ. ಈ ಕತೆಯನ್ನು ಓದುವಾಗ ನನಗೆ ನನ್ನ ಬಾಲ್ಯದ ನೆನಪಾಗುತ್ತಿತ್ತು.
ಬೇಸಗೆ ಮತ್ತು ಉಳಿದ ರಜಾ ದಿನಗಳನ್ನು ನಾನು, ನನ್ನ ಅಜ್ಜಿಯ ಮನೆಯಲ್ಲೇ ಕಳೆಯುತ್ತಿದ್ದೆ. ಆಗಲೇ ಖುರಾನನ್ನು ಕಲಿಯಲು ಪ್ರಾರಂಭಿಸಿದೆ. ವಾರದ ರಜಾ ದಿನಗಳಲ್ಲೂ, ನಾನು ಅಜ್ಜಿಯ ಮನೆಗೆ ಹೋಗುತ್ತಿದ್ದ ಚಂದ್ರಗಿರಿಯನ್ನು ವಾರಕ್ಕೊಮ್ಮೆ ನೋಡದಿರಲು, ಅದರ ತೀರದಲ್ಲಿ ಆಟವಾಡದಿರಲು, ನನಗೂ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಎಂತಹ ಮಳೆಗಾಲದಲ್ಲೂ ಎಂತಹ ನೆರೆಯಲ್ಲೂ, ನಾನು ನನ್ನಜ್ಜನೊಡನೆ ಈ ಚಂದ್ರಗಿರಿಯನ್ನು ದಾಟುತ್ತಿದ್ದೆ
ಹೀಗೊಮ್ಮೆ ಮಳೆಗಾಲದಲ್ಲಿ ನಾನು ಅಜ್ಜಿಯ ಮನೆಗೆ ಹೋದಾಗ ಚಂದ್ರಗಿರಿಯಲ್ಲಿ ಬಹಳ ದೊಡ್ಡ ನೆರೆ ಬಂತು. ಇಂತಹ ನೆರೆ 25 ಅಥವಾ 30 ವರ್ಷಗಳಿಗೊಮ್ಮೆ ಬರುತ್ತದೆ. ಮೂರು ದಿನಗಳಿಂದಲೂ ಎಡೆಬಿಡದೆ ಮಳೆ ಸುರಿಯತೊಡಗಿದಾಗಲೇ ಅಜ್ಜಿ ಅನ್ನತೊಡಗಿದ್ದರು. “ಈ ಸಲ ದೊಡ್ಡ ನೆರೆ ಬಂದೇ ಬರುತ್ತದೆ. ನಾವು ಮನೆಬಿಟ್ಟು ಹೋಗಬೇಕಾಗುತ್ತದೆ'' ಎಂದು.
ಸಂಜೆಯಾಗುತ್ತಿದ್ದಂತೆ ನೀರಿನ ಮಟ್ಟ ಏರತೊಡಗಿತು. ಮಳೆ ಧಾರಾಕಾರವಾಗಿ ಸುರಿಯುತ್ತಲೇ ಇತ್ತು. ಅಜ್ಜಿಯ ಮನೆ ಅಷ್ಟೇನೂ ಎತ್ತರದಲ್ಲಿರಲಿಲ್ಲ. ಮನೆಯವರೆಗೂ ನೀರು ಎಷ್ಟು ಹೊತ್ತಿಗೆ ಬರುತ್ತದೊ ಎಂದು ಅಜ್ಜಿ ಕಾಯುತ್ತಲೇ ಇದ್ದರು. ಎಲ್ಲರೂ ಮಲಗಿದರೂ ಅಜ್ಜಿ ಎಚ್ಚರವಾಗಿಯೇ ಇದ್ದರು. ಮಧ್ಯರಾತ್ರಿಗೆಲ್ಲಾ ನೀರು ಮನೆಯ ಗೋಡೆಗೆ ಬಡಿಯತೊಡಗಿದಾಗ ಎಲ್ಲರೂ ಎಚ್ಚೆತ್ತರು. ಆದರೆ ಪ್ರಕೃತಿಯ ಪ್ರಕೋಪವನ್ನು ತಡೆಗಟ್ಟುವುದು ಯಾರಿಂದಲೂ ಸಾಧ್ಯವಿರಲಿಲ್ಲ.
ಬೆಳಿಗ್ಗೆ ಬೇಗನೆ ಒಂದು ಕೋಣೆಯಲ್ಲಿ ಚಹ ತಿಂಡಿ ತಯಾರಿಸಿ ಎಲ್ಲರೂ ಉಪಹಾರ ಮಾಡುತ್ತಿದ್ದಂತೆಯೇ ನೀರು ಮನೆಯೊಳಗೆ ನುಗ್ಗಿತು. ಮನೆಯ ಸುತ್ತಲೂ, ಇಡೀ ಊರಿನಲ್ಲಿ ಎಲ್ಲೆಲ್ಲೂ ನೀರೇ ಹೊರತು ಇನ್ನೇನೂ ಕಾಣುತ್ತಿರಲಿಲ್ಲ. ನೀರಿನ ಮಧ್ಯದಲ್ಲಿ ಅಲ್ಲಲ್ಲಿ ತೆಂಗು, ಮಾವು, ಹಲಸಿನ ಮರಗಳು ಮತ್ತು ಮನೆಗಳು ಮಾತ್ರ ಕಾಣುತ್ತಿದ್ದವು.
ನನ್ನ ಚಿಕ್ಕಪ್ಪ ಮನೆ ಬಾಗಿಲಿಗೇ ದೋಣಿಯನ್ನು ತಂದರು. ದನಕರುಗಳನ್ನು ದೋಣಿಗೆ ಹತ್ತಿಸಿದರು. ದೋಣಿಯಲ್ಲಿ ಹಿಡಿಸುವಷ್ಟು ಜನರೂ ತುಂಬಿದರು. ನಾವೆಲ್ಲರೂ ದೋಣಿ ಹತ್ತಿ ದೂರದ ಗುಡ್ಡೆಯ ಮೇಲಿದ್ದ ನನ್ನ ಚಿಕ್ಕಪ್ಪನ ಮನೆಗೆ ಹೋದೆವು. ಗದ್ದೆಯ ಪೈರಿನ ಮೇಲಿಂದ, ತೆಂಗು ಮಾವುಗಳೆಡೆಯಿಂದ ನಾವು ತೇಲಿ ಹೋಗುತ್ತಿದ್ದರೆ, ವರ್ಣಿಸಲಾರದ ಒಂದು ಆನಂದದ ಅನುಭೂತಿ ನನ್ನದಾಗಿತ್ತು. ಕೆಲವರು ಭಯದಿಂದ ಮುಖ ಮುದುಡಿಕೊಂಡು ಕುಳಿತಿದ್ದರೆ ಇನ್ನು ಕೆಲವರು ತಮ್ಮ ಕೋಳಿ, ಆಡುಗಳನ್ನು ನೆನೆದು ಅಳುತ್ತಿದ್ದರು. ನದಿಯಿಂದ ಸುಮಾರು ಅರ್ಧ ಮೈಲು ದೂರದಲ್ಲಿದ್ದ ಗುಡ್ಡೆಯವರೆಗೂ ನೀರು ಬಂದಿತ್ತು. ಈ ಗುಡ್ಡೆಯಲ್ಲಿಯೇ ನಮ್ಮ ಚಿಕ್ಕಪ್ಪನ ಮನೆಯಿರುವುದು. ಎಲ್ಲರೂ ದೋಣಿಯಿಂದಿಳಿದು ಇವರ ಮನೆಗೆ ಹೋದೆವು. ಇಲ್ಲಿಂದ ಅಂದು ನಾನು ವರ್ಣನಾತೀತವಾದ ಒಂದು ನೋಟವನ್ನು ಕಂಡೆ. ಆಮೇಲೆಂದೂ ಇಂತಹ ನೋಟವನ್ನು ನಾನು ನೋಡಿಲ್ಲ.
ಇಡೀ ಚೆಮನಾಡು ಗ್ರಾಮ ನೀರಿನಿಂದಾವೃತವಾಗಿದೆ. ಅಲ್ಲಲ್ಲಿ ಕೆಲವು ಮರಗಳ ತುದಿ ಮತ್ತು ಮನೆಗಳ ಮಾಡು ಮಾತ್ರ ಕಾಣುತ್ತಿದ್ದವು. ಕೆಲವು ಮನೆಗಳ ಅರ್ಧ ಭಾಗ ನೀರಿನಲ್ಲಿ ಮುಳುಗಿತ್ತು. ಸತ್ತು ತೇಲುತ್ತಿದ್ದ ಪ್ರಾಣಿಗಳಿಗಂತೂ ಲೆಕ್ಕವಿರಲಿಲ್ಲ. ದೊಡ್ಡ ದೊಡ್ಡ ಮರಗಳೂ, ಮರದ ದಿನ್ನೆಗಳೂ ನೀರಿನಲ್ಲಿ ತೇಲುತ್ತಿದ್ದವು. ಕೆಲವು ಗುಡಿಸಲುಗಳ ಮಾಡುಗಳು, ನೀರಿನಲ್ಲಿ ತೇಲುತ್ತಿದ್ದರೆ ಮನೆಯೇ ನೀರಿನಲ್ಲಿ ತೇಲಿಹೋಗುವಂತೆ ಕಾಣುತ್ತಿತ್ತು. ಇನ್ನೂ ಬಿಡದೆ ಸುರಿಯುತ್ತಿದ್ದ ಮಳೆ; ಎಂದೂ ಸೌಮ್ಯವಾಗಿ, ಮಂದಗಾಮಿನಿಯಾಗಿ ಕಲಕಲ ನಾದದೊಡನೆ ಹರಿದು ಜನರ ಮನವನ್ನು ತಂಪುಗೊಳಿಸುತ್ತಿದ್ದ ಚಂದ್ರಗಿರಿ ಅಂದು ಮಾತ್ರ ಮಹಾಕಾಳಿಯಂತೆ ರೌದ್ರಾವತಾರ ತಾಳಿ ಸಾಗರದಂತೆ ಭೋರ್ಗರೆಯುತ್ತಾ ಊರಿನ ವಿನಾಶದತ್ತ ಹೆಜ್ಜೆಯಿರಿಸಿದ್ದಳು.
ಕೊನೆಗೂ ಪ್ರಕೃತಿ ಮಾತೆ ಸುಸ್ತಾದಳೇನೊ. ಸಂಜೆಯಾದಂತೆ ಮಳೆ ನಿಂತು ಪಡುವಣದ ಬಾನಿನಲ್ಲಿ ಸೂರ್ಯನು ಕಾರ್ಮೋಡಗಳ ಮರೆಯಿಂದ ಆಗೊಮ್ಮೆ ಈಗೊಮ್ಮೆ ಇಣುಕತೊಡಗಿದನು. ಎಲ್ಲರ ಮುಖಗಳೂ ಕೊಂಚ ಗೆಲುವಾದವು. ಆ ರಾತ್ರಿಯನ್ನು ಅಲ್ಲೇ ಕಳೆದೆವು. ಮಾರನೆಯ ದಿನ ಬೆಳಿಗ್ಗೆ ಎದ್ದು ನೋಡಿದರೆ ನೀರಿನ ಮಟ್ಟ ತುಂಬಾ ಇಳಿದಿತ್ತು.
ಬೇಗ ಬೇಗ ದೋಣಿಯಲ್ಲಿ ಕುಳಿತೆವು. ಆದರೆ ಅರ್ಧ ದಾರಿಗೆ ಬರುವಾಗ ದೋಣಿ ನೆಲದಲ್ಲಿ ನಿಂತೇಹೋಯಿತು. ಏರಿದಷ್ಟೇ ವೇಗದಿಂದ ನೀರು ಇಳಿದಿತ್ತು. ನೀರು ಸಂಪೂರ್ಣ ಇಳಿದು ಗದ್ದೆಯ ಪೈರುಗಳೆಡೆಯಿಂದ ನಾವು ನಡೆದು ಮನೆ ಸೇರಬೇಕಾಯಿತು. ಮನೆಯಲ್ಲಿ ಸತ್ತು ಬಿದ್ದಿದ್ದ ಕೋಳಿಗಳನ್ನು, "ನೀನು ಮಾಡಿದ ಪಾಪವನ್ನು ನೀನೇ ತಿನ್ನು” ಎಂಬಂತೆ ಚಂದ್ರಗಿರಿಗೆ ಎಸೆದರು. ಮನೆಯನ್ನು ಮೊದಲಿನ ಸ್ಥಿತಿಗೆ ತರಲು ಎಂಟು ದಿನಗಳೇ ಹಿಡಿದವು. ಚಂದ್ರಗಿರಿಯು ಎರಡೇ ದಿನಗಳಲ್ಲಿ ತನ್ನ ಮೊದಲಿನ ಆಕಾರಕ್ಕೆ ಬಂದಳು. ತಾನು ಮಾಡಿದ ಪಾತಕದ ಅರಿವಿಲ್ಲದೆ ಎಂದಿನಂತೆ ಸೌಮ್ಯವಾಗಿ ಹರಿಯತೊಡಗಿದಳು.
******
ನನ್ನ ತಾಯಿ ಇಸ್ಲಾಂ ಧರ್ಮ ಗ್ರಂಥಗಳನ್ನೆಲ್ಲಾ ತಾವೇ ನನಗೆ ಕಲಿಸಿದರು. ಮುಸ್ಲಿಂ ಪುರಾಣ ಕತೆಗಳು ಅರಬ್ಬೀ ಲಿಪಿಯಲ್ಲಿ ಮಲಯಾಳ ಭಾಷೆಯಲ್ಲಿ ಕೇರಳದಲ್ಲೆಲ್ಲಾ ಪ್ರಚಾರದಲ್ಲಿದೆ. ಇಂತಹ ಕೆಲವು ಪುಸ್ತಕಗಳನ್ನು ತರಿಸಿ ಇದರ ಕತೆಗಳನ್ನೆಲ್ಲಾ ನನ್ನಿಂದ ಓದಿಸುತ್ತಿದ್ದರು. ಮಹಮದ್ ಪೈಗಂಬರರ ಜೀವನ ಚರಿತ್ರೆ, ಅವರ ಸರಳಜೀವನ, ಅವರ ಹೆಂಡತಿ ಮಗಳ ಸರಳ ಜೀವನ ಎಲ್ಲವನ್ನೂ ವಿವರಿಸುತ್ತಿದ್ದರು. ಆ ಕಾಲದಲ್ಲಿ ಸ್ತ್ರೀಯರು ಮನೆಯೊಳಗೆ ಬಂಧಿಯಾಗಿರಲಿಲ್ಲ ಎಂಬುದನ್ನು ಈ ಕತೆಗಳಿಂದ ನಾನು ತಿಳಿದುಕೊಂಡೆ. ಮುಸ್ಲಿಂ ಹೆಂಗಸರು ಕತ್ತಿ ಹಿಡಿದು ಕುದುರೆ ಹತ್ತಿ ರಣರಂಗದಲ್ಲಿ ಪುರುಷರೊಡನೆ ಯುದ್ಧ ಮಾಡಿದ ಕತೆಗಳನ್ನು ಈ ಪುಸ್ತಕಗಳಲ್ಲಿ ನಾನು ಓದಿದ್ದೇನೆ.
ನನಗೆ ಸಂಗೀತ ಕಲಿಸಬೇಕೆಂದು ನನ್ನ ತಂದೆ ತಾಯಿಗಳು ಪ್ರಯತ್ನಪಟ್ಟರೂ ಆ ದಿಸೆಯಲ್ಲಿ ನನ್ನ: ಒಲವು ಹರಿಯಲೇ ಇಲ್ಲ. ಅದಕ್ಕಿಂತಲೂ ನನ್ನ ತಾಯಿ ಹಾಡುತ್ತಿದ್ದ ಜಾನಪದ ಹಾಡುಗಳೇ ನನಗೆ ಹೆಚ್ಚು ಇಷ್ಟವಾಗುತ್ತಿದ್ದವು. "ಮಾಪ್ಟಿಳ ಪಾಟ್ಟು' ಮತ್ತು _ "ಒಪ್ಪನ ಪಾಟ್ಟು' ಎಂದು ಇಂದು ಕೇರಳದಲ್ಲಿ ಪ್ರಸಿದ್ಧವಾಗಿರುವ ಈ ಜಾನಪದ ಹಾಡುಗಳು ಮುಸ್ಲಿಂ ಪುರಾಣದ ಅನೇಕ ಸ್ತ್ರೀ ಪುರುಷರ ಪ್ರಣಯಕತೆಗಳನ್ನೊಳಗೊಂಡಿವೆ. ಮುಸ್ಲಿಮರು ಮದುವೆಯಲ್ಲಿ ಹಾಡುವ ಈ ಹಾಡುಗಳನ್ನು ನಾನು ಇಂದಿಗೂ ತುಂಬಾ ಇಷ್ಟಪಡುತ್ತೇನೆ. ದುಬೈಗೆ ಹೋದವರು ಹಿಂತಿರುಗುವಾಗ, ಅಲ್ಲಿಂದ ಈ ಹಾಡುಗಳನ್ನು ರೆಕಾರ್ಡ್ ಮಾಡಿದ ಕ್ಯಾಸೆಟ್ಟುಗಳನ್ನು ತರುತ್ತಾರೆ ಎಂದರೆ ಈ ಹಾಡಿನ ಜನಪ್ರಿಯತೆಯನ್ನು ನೀವೇ ಊಹಿಸಿಕೊಳ್ಳಬಹುದು.
ಆಗ ನಾವು ವಾಸಿಸುತ್ತಿದ್ದುದು ಪಟ್ಟಣದ ಮಧ್ಯಭಾಗದಲ್ಲಿ. ನಮ್ಮ ನೆರೆಕೆರೆಯವರೆಲ್ಲರೂ ಹಿಂದುಗಳಾಗಿದ್ದರು. ನಮ್ಮ ಮನೆಯ ಸಮೀಪದ ಒಂದೆರಡು ಮನೆಗಳಲ್ಲಿ ಒಂದೆರಡು ಮಲಯಾಳೀ ಕುಟುಂಬಗಳು ವಾಸಿಸುತ್ತಿದ್ದವು. ನಮ್ಮ ತಾಯಿ ಇವರೊಡನೆ ಸ್ನೇಹ ಬೆಳೆಸಿಕೊಂಡರು. ಇಸ್ಲಾಂ ಧರ್ಮ ಗ್ರಂಥಗಳನ್ನು ಚೆನ್ನಾಗಿ ಅಧ್ಯಯನ ಮಾಡಿ ಇಸ್ಲಾಂ ಮತದ ತತ್ವಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದ ನನ್ನ ತಾಯಿ, ಹಿಂದುಗಳನ್ನು ದ್ವೇಷಿಸಬೇಕು, ಅವರಿಂದ ದೂರವಿರಬೇಕು ಎಂದು ಒಮ್ಮೆಯೂ ಅಂದವರಲ್ಲ. ಬದಲಾಗಿ ಈ ನಾಯರ್ ಹೆಂಗಸರೊಡನೆ ಅವರು ಅಕ್ಕ ತಂಗಿಯರಂತೆ ಹೊಂದಿಕೊಂಡರು.
ಈ ನಾಯರ್ ಕುಟುಂಬವೊಂದರ ಏಕಮಾತ್ರ ಪುತ್ರಿಯೊಬ್ಬಳಿಗೆ ಬಹಳ ವರ್ಷಗಳವರೆಗೂ ಮದುವೆಯಾಗದಿದ್ದಾಗ ಆ ಹುಡುಗಿಯ ತಾಯಿಗಿಂತಲೂ ಹೆಚ್ಚು ವೇದನೆಯನ್ನನುಭವಿಸುತ್ತಿದ್ದವರು ನನ್ನ ತಾಯಿ. “ಇಷ್ಟು ದೊಡ್ಡವಳಾಗಿ ಇನ್ನೂ ಮದ್ದು ಖಾಗಿಲ್ಲವಲ್ಲ? ಈ ಹುಡುಗಿ ಹೀಗೇ ಉಳಿದುಬಿಟ್ಟರೇನು ಗತಿ?” ಎಂದು ನನ್ನ ತಾಯಿ ಯಾವಾಗಲೂ ನೊಂದುಕೊಳ್ಳುತ್ತಿದ್ದರು.
ಕೊನೆಗೂ ಆಕೆಗೆ ಮದುವೆಯಾಯಿತು. ಆಕೆ ಗರ್ಭಿಣಿಯಾಗಿ ಹೆರಿಗೆಗೆ ತನ್ನ ತಾಯಿಯ ಮನೆಗೆ ಬಂದಾಗ ನನ್ನ ತಾಯಿಯೂ ತನ್ನ ಸ್ವಂತ ಮಗಳು ಮನೆಗೆ ಬಂದಂತೆ ಸಂತೋಷಪಟ್ಟರು. ಆಕೆಗೆ ಹೆರಿಗೆಯ ನೋವು ಪ್ರಾರಂಭವಾದಾಗ ಆ ತಾಯಿ ಮಗಳಿಗೆ ಧೈರ್ಯ ನೀಡಿ ಸಂತೈಸುವವರು ಅಲ್ಲಿ ನನ್ನ ತಾಯಿಯಲ್ಲದೆ ಇನ್ಯಾರೂ ಇರಲಿಲ್ಲ. ಮೈಲಿಗೆ ಇದ್ದಲ್ಲಿಗೆ ಸ್ವಜಾತಿ ಬಾಂಧವರು ಯಾರೂ ಹೋಗಲಾರರಲ್ಲ? ಮಧ್ಯಾಹ್ನ ಮನೆಗೆ ಬಂದ ನಮ್ಮ ತಾಯಿ ಊಟವನ್ನೂ ಮಾಡದೆ, ನಮಾಜು ಮಾಡಿ ಖುರ್‌ಆನಿನ ಕೆಲವು ಶ್ಲೋಕಗಳ ಪುಸ್ತಕವೊಂದನ್ನು ತೆಗೆದುಕೊಂಡು ಆ ಮನೆಗೆ ಹೋದರು.
“ಅಮ್ಮ ನಾನು ಇದನ್ನು ಇಲ್ಲಿ ಕುಳಿತು ಓದಲೇ ? ಇದನ್ನು ಓದಿದರೆ ಬೇಗ ಹೆರಿಗೆಯಾಗುವುದೆಂದು ನಮ್ಮ ನಂಬಿಕೆ'' ಎಂದು ನನ್ನ ತಾಯಿ ಕಳಕಳಿಯಿಂದ ಕೇಳಿದಾಗ ಆ ತಾಯಿಯ ಕಣ್ಣಲ್ಲಿ ನೀರು ಸುರಿಯಿತು.
“ಅಮ್ಮ ನನಗೆ ನೀವಲ್ಲದೆ ಇನ್ಯಾರಿದ್ದಾರೆ ? ನಿಮಗೆ ಇಷ್ಟವಿದ್ದ ಹಾಗೆ ಮಾಡಿ'' ಎಂದಾಗ ನನ್ನ ತಾಯಿ ಆ ಹಿಂದುಗಳ ಮನೆಯಲ್ಲಿ ಕುಳಿತು ಖುರ್‌ಆನ್ ಓದತೊಡಗಿದ್ದುದನ್ನು ನಾನೆಂದೂ ಮರೆಯಲಾರೆ.
ಕೊನೆಗೂ ಸುಖಪ್ರಸವವಾಗದೆ ಇಬ್ಬರು ಡಾಕ್ಟರುಗಳು ಕೋಣೆಯನ್ನು ಹೊಕ್ಕು ಬಾಗಿಲಿಕ್ಕಿದಾಗ, ಆ ತಾಯಿ ನನ್ನ ತಾಯಿಯ ಹೆಗಲಲ್ಲಿ ತಲೆಯಿಟ್ಟು, “ನನ್ನ ಮಗಳಿಗೆ ಈ ವಿಧಿಯಾಯಿತಲ್ಲ? ನನ್ನ ಮಗಳು ಉಳಿಯುವಳೇ?'' ಎಂದು ಅತ್ತಾಗ,
“ಅಮ್ಮ ನಿಮ್ಮ ಮಗಳಿಗೆ ಏನೂ ಆಗುವುದಿಲ್ಲ. ಮೇಲಿರುವ ಆ ಸರ್ವಶಕ್ತನು ಅಷ್ಟು ನಿಷ್ಕರುಣಿ ಅಲ್ಲ'' ಎಂದು ತಾವೂ ಕಣ್ಣೀರು ಸುರಿಸಿಕೊಂಡು ಆ ತಾಯಿಯನ್ನು ಸಂತೈಸಿದ್ದು ನನ್ನ ನೆನಪಿನ ಭಿತ್ತಿಯಲ್ಲಿ ಎಂದೆಂದೂ ಅಳಿಸಲಾರದ ಚಿತ್ರವಾಗಿ ಉಳಿದಿದೆ. ಇಲ್ಲಿ ಇವರು ಬದ್ಧ ವೈರಿಗಳಾಗಿ, ನಾಯಿ, ಬೆಕ್ಕುಗಳಂತೆ 10 ಸಮಕಾಲೀನ ಕನ್ನಡ ಸಣ್ಣ ಕಥೆಗಳು ಕಚ್ಚಾಡುವ ಆರ್.ಎಸ್.ಎಸ್. ಮತ್ತು ಜಮಾಯತ್ ಇಸ್ಲಾಮಿನ ಸದಸ್ಯರಾದ ಹಿಂದು ಮುಸ್ಲಿಮರಾಗಿರಲಿಲ್ಲ; ಒಂದು ಅಸಹಾಯಳಾದ ಹೆಣ್ಣು ತನ್ನ ದುಃಖವನ್ನು, ನೋವನ್ನು ಇನ್ನೊಂದು ಹೆಣ್ಣಿನೊಡನೆ ತೋಡಿಕೊಂಡರೆ, ಇನ್ನೊಂದು ಹೆಣ್ಣು ಅದನ್ನು ಅರ್ಥಮಾಡಿಕೊಂಡು ತನ್ನಿಂದಾದ ರೀತಿಯಲ್ಲಿ ಆ ಹೆಣ್ಣನ್ನು ಸಂತೈ ಸುತ್ತಿದ್ದ ಮನುಷ್ಯ ಹೃದಯವನ್ನು ಹೊತ್ತ ಎರಡು ಮಾನವಜೀವಿಗಳಾಗಿದ್ದರು.
ಕೊನೆಗೊಮ್ಮೆ ಆ ಹೆಣ್ಣು ಮಗಳು ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಾಗ ಆ ತಾಯಿಗಿಂತಲೂ ಹೆಚ್ಚು ಸಂತೋಷಪಟ್ಟವರು ನನ್ನ ತಾಯಿ. ಈ ಮನೆಗಳಿಗೆಲ್ಲಾ ನನ್ನ ತಾಯಿ ನಮ್ಮ ಹಿತ್ತಲಲ್ಲಿ ಬಿಡುತ್ತಿದ್ದ ಹಲಸಿನಹಣ್ಣು ಮಾವಿನಹಣ್ಣು ಬಾಳೇಹಣ್ಣುಗಳನ್ನು ಧಾರಾಳವಾಗಿ ಹಂಚುತ್ತಿದ್ದರು. ಅವರ ಎಲ್ಲಾ ಹಬ್ಬಗಳಲ್ಲೂ ನಮ್ಮ ಮನೆಗೆ ಸಿಹಿತಿಂಡಿಗಳು ಬರುತ್ತಿದ್ದವು. ಆದರೆ ನನ್ನ ತಾಯಿ ಎಂದೂ ನಮ್ಮ ಮನೆಯಲ್ಲಿ ಮಾಡಿದ ತಿಂಡಿಗಳನ್ನು ಇವರಿಗೆ ಕೊಡುತ್ತಿರಲಿಲ್ಲ.
“ಅವರು ಹಿಂದುಗಳು ಅವರ ಶಾಸ್ತ್ರ ಏನೋ ಹೇಗೋ. ನಾವು ಮಾಂಸ ಮೀನು ತಿನ್ನುವವರು. ನಮ್ಮ ಮನೆಯಲ್ಲಿ ಮಾಡಿದ್ದನ್ನು ಕಳುಹಿಸಿ ಅವರಿಗೇಕೆ ಬೇಜಾರು ಮಾಡಬೇಕು ? ಅದಕ್ಕೆ ಬದಲು ಹಣ್ಣು ಹಂಪಲು, ತೆಂಗಿನಕಾಯಿ ಏನಾದರೂ ಕಳಿಸೋಣ'' ಎನ್ನುತ್ತಿದ್ದರು.
ನನ್ನ ತಾಯಿ ಅನೇಕ ಸಂಜೆಗಳನ್ನು ಈ ಹಿಂದೂ ಕುಟುಂಬದ ಜೊತೆಯಲ್ಲಿ ಕಳೆಯುತ್ತಿದ್ದರು. ತಾಯಿಯನ್ನು ನಾನೂ ಹಿಂಬಾಲಿಸುತ್ತಿದ್ದೆ. ನನ್ನ ತಾಯಿ ನಮ್ಮ ಪುಕಾಣದ ಅನೇಕ ವಿಷಯಗಳನ್ನು ಇವರಿಗೆ ತಿಳಿಸುತ್ತಿದ್ದರು. ಹಾಗೆಯೇ ಇವರಿಂದ ರಾಮಾಯಣ, ಮಹಾಭಾರತದ ಕಥೆಗಳನ್ನೂ ಕೇಳುತ್ತಿದ್ದರು. ಇಸ್ಲಾಂ ಧರ್ಮದ ತತ್ವಗಳೆಲ್ಲವನ್ನೂ ನಿಷ್ಠೆಯಿಂದ ಪಾಲಿಸುತ್ತಿದ್ದ ನನ್ನ ತಾಯಿ "“ನಮ್ಮ ಖುರ್‌ಆನಿನಲ್ಲಿ ಹೀಗೆ ಹೇಳಿದೆ. ನಿಮ್ಮಗೀತೆಯಲ್ಲಿ ಏನು ಹೇಳಿದೆ?'' ಎಂದೂ ಕೇಳಿ ತಿಳಿದುಕೊಂಡು, ಕೆಲವೊಮ್ಮೆ ಎರಡು ಶ್ಲೋಕಗಳ ಅರ್ಥವೂ ಒಂದೇ ಆದಾಗ, “ಅಂದ ಮೇಲೆ ನಮ್ಮ ಮತವೂ ನಿಮ್ಮ ಮತವೂ ಒಂದೇ ಆಯಿತಲ್ಲ?'' ಎಂದು ನಗುತ್ತಾ ಅನ್ನುತ್ತಿದ್ದರು.
******
ನೆನಪಿನ ಪರದೆಗಳು ಒಂದೊಂದೇ ಮೇಲೇಳತೊಡಗುತ್ತಿದೆ. 7 ವರ್ಷದ ವಿದ್ಯಾಭ್ಯಾಸವನ್ನು ಹೆಣ್ಣು ಮಕ್ಕಳ ಶಾಲೆಯಲ್ಲಿ ಮುಗಿಸಿದ ನಾನು 8ನೇ ವರ್ಷವನ್ನು ನನ್ನ ಅಣ್ಣಂದಿರು ಓದಿದ ಹೈಸ್ಕೂಲಿನಲ್ಲಿ ಮುಂದುವರಿಸತೊಡಗಿದೆ. ಇಡೀ ಶಾಲೆಯಲ್ಲಿ ಮುಸ್ಲಿಂ ಹುಡುಗಿ ನಾನೊಬ್ಬಳೇ ಆದರೂ ನನಗೆಂದೂ ಈ ಭಾವನೆ ಬರಲೇ ಇಲ್ಲ. ತರಗತಿಯಲ್ಲಿದ್ದ ಇತರ ಹುಡುಗಿಯರಂತೆ ನಾನೂ ಇದ್ದೆ. ಆದರೆ ನಮ್ಮ ಊರಿನ ಮುಸ್ಲಿಮರಿಗೆ ಇದು ಸಹಿಸುತ್ತಿರಲಿಲ್ಲ. 10 ವರ್ಷವಾದ ಮೇಲೆ ಯಾವ ಮುಸ್ಲಿಂ ಹುಡುಗಿಯೂ ಮನೆಯ ಹೊರಕೋಣೆಗೂ ಬರದಿದ್ದ ಆ ದಿನಗಳಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಘೋಷಾ ಇಲ್ಲದೆ, ಕೊನೆಯ ಪಕ್ಷ ತಲೆಯ ಮೇಲೆ ಸೆರಗೂ ಎಳೆದುಕೊಳ್ಳದೆ ಹಿಂದೂ ಹುಡುಗಿಯರಂತೆ ಶಾಲೆಗೆ ಹೋಗುತ್ತಿದ್ದುದನ್ನು ಸಹಿಸಲು ಇವರಿಂದಾಗುತ್ತಿರಲಿಲ್ಲ. ಆದರೆ ಅವರಿಗೆ ಏನೂ ಮಾಡಲಾಗಲಿಲ್ಲ. ಯಾಕೆಂದರೆ ನನ್ನ ತಂದೆ ತಾಯಿ ಇಬ್ಬರೂ ಊರವರಿಗೆಲ್ಲ ಬೇಕಾದವರಾಗಿದ್ದರು. ತಮ್ಮವರ ಕಷ್ಟ, ಆಪತ್ತುಗಳಲ್ಲಿ ನನ್ನ ತಾಯಿ ಎಂದೂ ನೆರವಾಗುತ್ತಿದ್ದರು. ಮೇಲು ಕೀಳೆಂಬ ಭೇದವಿಲ್ಲದೆ ಊರವರೆಲ್ಲರ ಪರಿಚಯವಿಟ್ಟುಕೊಂಡಿದ್ದ ನನ್ನ ತಾಯಿ ಎಷ್ಟೋ ಹೆಣ್ಣು ಮಕ್ಕಳಿಗೆ ಮದುವೆ ಕುದುರಿಸಿ, "ಮ್ಯಾರೇಜ್ ಬ್ಯೂರೋ' ಎಂದು ನನ್ನ ಅಣ್ಣಂದಿರಿಂದ ಗೇಲಿ ಮಾಡಿಸಿಕೊಳ್ಳುತ್ತಿದ್ದರು. ಬಂಗಲೆಗಳಿಗಿಂತಲೂ ಗುಡಿಸಲುಗಳ ಕಡೆಗೇ ನನ್ನ ತಾಯಿಯ ಒಲವು, ಯೋಚನೆ ಹೆಚ್ಚಾಗಿ ಹರಿಯುತ್ತಿತ್ತು.
ಇದೂ ಅಲ್ಲದೆ ನನ್ನನ್ನು ಯಾರೂ ತೊಂದರೆ ಮಾಡದಿರಲು ಇನ್ನೂ ಒಂದು ಕಾರಣವಿತ್ತು. ಇಡೀ ಉತ್ತರ ಮಲಬಾರ್ ಮತ್ತು ದಕ್ಷಿಣ ಕನ್ನಡದಲ್ಲಿ ಬಹು ದೊಡ್ಡ ಶ್ರೀಮಂತರೆನಿಸಿದವರೊಬ್ಬರು ನನ್ನ ತಾಯಿಯ ಹಿರಿಯಣ್ಣನಾಗಿದ್ದರು. ನನ್ನನ್ನು ಕೆಣಕಿ, ನನಗೆ ತೊಂದರೆ ಕೊಟ್ಟು ಆ ಸಾಹುಕಾರರ ದ್ವೇಷ ಕಟ್ಟಿಕೊಳ್ಳುವ ದೈರ್ಯ ನಮ್ಮೂರಿನ ಮುಸ್ಲಿಮರಿಗೆ ಆಗ ಇರಲಿಲ್ಲ ಎಂದೇ ನನ್ನ ಎಸ್.ಎಸ್.ಎಲ್.ಸಿ. ಮಟ್ಟದ ವಿದ್ಯಾಭ್ಯಾಸ ಯಾವ ತೊಂದರೆಯೂ ಇಲ್ಲದೆ ಮುಗಿಸಲು ಸಾಧ್ಯವಾಯಿತು. ಅಂದರೆ ಇವರು ನನ್ನ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುತ್ತಿದ್ದರೆಂದೇನೂ ಅಲ್ಲ. ಆದರೆ ನಿಷೇಧಿಸಲಿಲ್ಲ? ಆದರೂ ನನ್ನ ತಾಯಿಯೊಡನೆ ಆಗಾಗ ಯಾರಾದರೂ ಬಂದು ನಯವಾಗಿ, "ನಿಮ್ಮ ಮಗಳು ತುಂಬಾ ಬೆಳೆದುಬಿಟ್ಟಿದ್ದಾಳೆ. ಇನ್ನು ಅವಳನ್ನು ಶಾಲೆಗೆ ಕಳುಹಿಸುವುದು ಸರಿಯಲ್ಲ'' ಎಂದು ಚುಚ್ಚುತ್ತಲೇ ಇದ್ದರು. ಆಗ ನನ್ನ ತಂದೆ,
"ಹೆಣ್ಣು ಮಕ್ಕಳಿಗೆ ವಿದ್ಯೆ ಕೊಡಕೂಡದೆಂದು ಖುರ್‌ಆನಿನಲ್ಲಿ ಎಲ್ಲೂ ಹೇಳಿಲ್ಲವಲ್ಲ? ಮುಂದಿನ ಜನಾಂಗವನ್ನು ಪೋಷಿಸಿ, ಉತ್ತಮ ಪ್ರಜೆಯಾಗಿ ಮುಂದೆ ತರಬೇಕಾದವಳು ತಾಯಿಯಾದುದರಿಂದ, ಗಂಡಿಗಿಂತಲೂ ಹೆಣ್ಣಿಗೇ ವಿದ್ಯಾಭ್ಯಾಸದ ಅಗತ್ಯವಿದೆ ಎಂದು ಮಹಮದ್ ಪೈಗಂಬರರೂ ಬೋಧಿಸಿದ್ದಾರೆ. ಆದ್ದರಿಂದ ನನ್ನ ಮಗಳ ವಿದ್ಯಾಭ್ಯಾಸದ ಕುರಿತು ಯಾರು ಏನೂ ಹೇಳಬೇಕಾಗಿಲ್ಲ. ನನಗೆ ಸರಿ ಕಂಡಂತೆ ಮಾಡುತ್ತೇನೆ?” ಎನ್ನುತ್ತಿದ್ದರು. ನನ್ನ ತಂದೆಯ ದೃಢ ನಿರ್ಧಾರದೆದುರು, ನನ್ನ ಹಿರಿಯಣ್ಣನ ನಿರಂತರ ಪ್ರೋತ್ಸಾಹದೆದುರು, ನನ್ನ ತಾಯಿಯೇ ಆಗಲಿ ಇತರ | ಯಾರೇ ಆಗಲಿ ಏನೂ ಮಾಡುವಂತಿರಲಿಲ್ಲ. ಮೊದಲೆಲ್ಲಾ ನಾನು ವಿದ್ಯಾಭ್ಯಾಸದಲ್ಲಿ ಅಂತಹ ಪ್ರಗತಿ ತೋರದಿದ್ದರೂ, ಕ್ರಮೇಣ ನನಗೆ ವಿದ್ಯೆಯಲ್ಲಿ ಆಸಕ್ತಿ ಕುದುರಿತು. ಅದಕ್ಕೆ ನನ್ನ ಹಿರಿಯಣ್ಣನೇ ಬಹು ಮಟ್ಟಿಗೆ ಕಾರಣವೆನ್ನಬಹುದು. ನನ್ನ ಈ ಅಣ್ಣನ ಬಗ್ಗೆ ಒಂದೆರಡು ,ಮಾತು ಬರೆದರೆ ಚೆನ್ನಾಗಿರುತ್ತದೇನೊ.
ಈ ಹಿರಿಯಣ್ಣನಿಲ್ಲದೆ ಹೋಗಿದ್ದರೆ ನಾನಿಂದು ಹೇಗಿರುತ್ತಿದ್ದೆನೋ ಎಂದು ಕೆಲವೊಮ್ಮೆ ಯೋಚಿಸುತ್ತೇನೆ. ಇವನು ಮಹಾ ಪರೋಪಕಾರಿ. ಬೀದಿಯಲ್ಲಿ ಬೇಡುವವನೊಬ್ಬನು ತಲೆ ತಿರುಗಿ ಬಿದ್ದರೂ ಅವನನ್ನೆ ತ್ರಿಕೊಂಡು ಆಸ್ಪತ್ರೆ ಸೇರಿಸುವ ದಯಾಮಯಿಯಾಗಿದ್ದನು. ಅತ್ಯುತ್ತಮ ಕ್ರೀಡಾಪಟು. ಅಂತರ ಕಾಲೇಜು ಪಂದ್ಮಾಟಗಳಲ್ಲಿ ಯಾವಾಗಲೂ ತನ್ನ ಕಾಲೇಜನ್ನು ಪ್ರತಿನಿಧಿಸುತ್ತಿದ್ದನು. ಕಾಲೇಜಿನ ವಾರ್ಷಿಕೋತ್ಸವದಲ್ಲಿ ಒಂದು ವರ್ಷದಲ್ಲಿ 13ಕಪ್ಪುಗಳನ್ನು ಪಡೆದಿದ್ದನು. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನ ಟೆನ್ನಿಸ್ ಪಟುವಾಗಿದ್ದನು.
ಊರಿನವರೆಲ್ಲರೂ ಇವನ ಗೆಳೆಯರು. ಮದ್ರಾಸಿನಲ್ಲಿ ಓದುತ್ತಿರುವಾಗ ರಜೆಯಲ್ಲಿ ಊರಿಗೆ ಬಂದರೆ ಒಂದು ಹಿಂಡು ಹುಡುಗರು ಇವನ ಜೊತೆಯಲ್ಲಿರುತ್ತಿದ್ದರು. ಊರಿನ ಕ್ರಿಕೆಟ್ ಟೀಮಿನ ಕ್ಯಾಪ್ಟನಾಗಿದ್ದನು. ತನ್ನ ತಮ್ಮಂದಿರನ್ನೂ ಮತ್ತು ಅದರುತಹ ಇತರ ಹುಡುಗರನ್ನೂ ಕಟ್ಟಿಕೊಂಡು ಅವರಿಗೆ ಆಟ ಮತ್ತು ಈಜು ಕಲಿಸುತ್ತಿದ್ದವು. ಈ ಹುಡುಗರಲ್ಲಿ ಬ್ರಾಹ್ಮಣರು, ಹರಿಜನರು, ಮೊಗವೀರರು ಮೀನು ಹಿಡಿಯುವವರು) ಎಲ್ಲರೂ ಇರುತ್ತಿದ್ದರು. ಎಲ್ಲರಿಗೂ ಇವನೊಬ್ಬ 7ುರುವಾಗಿದ್ದನು. ಚಂದ್ರಗಿರಿ ನದಿಯನ್ನು 10-12 ಬಾರಿ ದಡದಿಂದ ದಡಕ್ಕೆ ತಾಜುತ್ತಿದ್ದರು. ಈ ಹುಡುಗರಿಗೆಲ್ಲ ಸಹನೆಯಿಂದ ಈಜು ಕಲಿಸುತ್ತಿದ್ದನು. ಎಲ್ಲರನ್ನು ತನ್ನ ಸ್ವಂತ ತಮ್ಮಂದಿರಂತೆಯೇ ನಡೆಸಿಕೊಳ್ಳುತ್ತಿದ್ದನು. ನಮ್ಮಂತೆಯೇ ಎಲ್ಲರೂ ಇಬನನ್ನು "ದೊಡ್ಡಣ್ಣ' ಎಂದೇ ಕರೆಯುತ್ತಿದ್ದರು.
“ನೀನು ಚೆನ್ನಾಗಿ ಕಲಿಯಬೇಕು. ಉತ್ತಮ ಅಂಕ ಪಡೆಯಬೇಕು. ನನ್ನ ತಂಗಿಯಾಗಿ ಉತ್ತಮ ಆಟಗಾರ್ತಿಯೂ ಆಗಬೇಕು'' ಎಂದು ಅವನು ವಾರಕ್ಕೊಂದು ಪತ್ರ ಬರೆಯುತ್ತಿದ್ದನು. ತಂದೆ ಕೊಟ್ಟ ಪಾಕೆಟ್ ಮನಿಯಲ್ಲಿ ಉಳಿತಾಯ ಮಾಡಿ ನನಗೆ ಬೇಕಾದ ಮಣಿಸರ, ಡಿಸೈನ್ ಪುಸ್ತಕಗಳನ್ನು ತರುತ್ತಿದ್ದನು. ಪ್ರತಿವರ್ಷ ಜೂನ್ ತಿಂಗಳಲ್ಲಿ ನನಗೆ ಶಾಲೆಗೆ ಬೇಕಾದ ಪುಸ್ತಕ, ಬಟ್ಟೆ, ಇತರ ಸಾಮಾನುಗಳನ್ನೆಲ್ಲಾ ತಂದುಕೊಟ್ಟು ನಾನು ಶಾಲೆಗೆ ಹೋಗಲು ಪ್ರಾರಂಭಿಸಿದ ಮೇಲೆಯೇ ಇವನು ಮದ್ರಾಸಿಗೆ ಪ್ರಯಾಣ ಮಾಡುತ್ತಿದ್ದನು. ತಾನು ಮೊದಲೇ ಹೊರಟುಬಿಟ್ಟರೆ, ಆ ಮೇಲೆ ತಾಯಿ ನನ್ನನ್ನು ಶಾಲೆಗೆ ಕಳುಹಿಸದೇ ಹೋದರೆ ? ಈ ಭಯದಿಂದಲೇ ಅವನು ಹೀಗೆ ಮಾಡುತ್ತಿದ್ದನು.
ಅವನೇನೊ ನನ್ನನ್ನು ಶಾಲೆಗೆ ಸೇರಿಸಿ ತಾನು ಸುಖವಾಗಿ ಮದ್ರಾಸಿಗೆ ಹೋಗುತ್ತಿದ್ದನು. ಆದರೆ ಹೈಸ್ಕೂಲಿಗೆ ಬಂದ ಮೇಲೆ ಶಾಲೆಗೆ ಹೋಗುವುದು ನನಗೆ ತುಂಬಾ ಕಷ್ಟವಾಗಿ ಕಾಣುತ್ತಿತ್ತು. ನನ್ನೊಡನೆ ನನ್ನ ಹಿಂದೂ ಗೆಳತಿಯರೂ ಇರುತ್ತಿದ್ದರೂ ಕೂಡ ಊರಿನ ಮುಸ್ಲಿಮರು ನನ್ನನ್ನು ಮಾತ್ರ ನಾನೊಂದು ವಿಚಿತ್ರ ಪ್ರಾಣಿ ಎಂಬಂತೆ ನೋಡುತ್ತಿದ್ದರು. ಊರಿನ ಪ್ರತಿಷ್ಠಿತ ಮುಸ್ಲಿಮರೊಬ್ಬರ ಮಗಳು ಘೋಷಾ ಇಲ್ಲದೆ, ಸೀರೆಯ ಸೆರಗನ್ನು ತಲೆಯ ಮೇಲೆ ಹಾಕಿಕೊಳ್ಳದೆ ಹಿಂದೂ ಹುಡುಗಿಯರಂತೆ ಅವರ ಜೊತೆಯಲ್ಲಿ ನಡೆದು ಹೋಗುತ್ತಿದ್ದರೆ ನೋಡಿ ಸಹಿಸುವುದು ಇವರಿಂದ ಸಾಧ್ಯವಾಗುತ್ತಿರಲಿಲ್ಲ. ನನ್ನ ಹಿಂದಿನಿಂದ ನನಗೆ ಕೇಳಿಸುವಂತೆ ಏನಾದರೊಂದು ಹೇಳುತ್ತಿದ್ದರು.
“ಇಷ್ಟು ದೊಡ್ಡವಳಾಗಿ ಇನ್ನೂ ಈ ಹುಡುಗಿ ಶಾಲೆಗೆ ಹೋಗುತ್ತಿದ್ದಾಳಲ್ಲ?''
“ಬುರ್ಕಾ ಹಾಕಿಕೊಂಡಾದರೂ ಹೋಗಬಾರದೆ ?”
“ಮುಸ್ಲಿಂ ಹುಡುಗಿಯರೆಲ್ಲಾ ಹೀಗೆ ಘೋಷಾ ಇಲ್ಲದೆ ಬೀದಿಯಲ್ಲಿ ತಿರುಗ ಹೊರಟರೆ ಇಸ್ಲಾಂ ಮತ ಉಳಿದೀತೇ?'' ಎಂದೆಲ್ಲ ಇವರು ನನಗೆ ಕೇಳಿಸುವಂತೆ ಹೇಳುತ್ತಿದ್ದರು. “ನಿಮ್ಮ ಮಗಳೊಡನೆ ಬುರ್ಕಾ ಹಾಕಲು ಹೇಳಿ,'' ಎಂದು ನನ್ನ ತಾಯಿಯೊಡನೆ ಯಾರೊ ಅಂದಾಗ ಅದನ್ನು ಕೇಳಿದ ನನ್ನ ತಂದೆ ಮತ್ತು ಅಣ್ಣಂದಿರು ಜೋರಾಗಿ ನಕ್ಕುಬಿಟ್ಟರು.
“ನನ್ನ ಮಗಳು ಹೀಗಿದ್ದರೆ ಯಾರಿಗೂ ನಷ್ಟವಿಲ್ಲ. ಅವಳೇನಾದರೂ ತಪ್ಪು ಮಾಡಿದಾಗ ಯೋಚಿಸೋಣ'' ಎಂದು ನನ್ನ ತಂದೆ ಉತ್ತರ ಕೊಟ್ಟರು. ಆದರೆ ನನ್ನ ತಾಯಿ ಕೆಲವು ವಿಷಯಗಳಲ್ಲಿ ತುಂಬಾ ಕಟುವಾಗಿಯೇ ವರ್ತಿಸುತ್ತಿದ್ದರು. ಒಬ್ಬಳೇ ಮಗಳಾಗಿದ್ದರೂ ನನಗೆಂದೂ ಬೆಲೆ ಬಾಳುವ ಸೀರೆಗಳನ್ನು ತರಿಸುತ್ತಿರಲಿಲ್ಲ. ನಾನು ಅಲಂಕಾರ ಸಾಮಗ್ರಿಗಳನ್ನು ಬಳಸುವುದೂ ಅವರಿಗೆ ಇಷ್ಟವಾಗುತ್ತಿರಲಿಲ್ಲ. '“ದೇವರು ಕೊಟ್ಟ ರೂಪ, ಬಣ್ಣವೇ ಸಾಕು. ಮದುವೆಯಾಗದ ಹುಡುಗಿಯರು ಹಾಗೆಲ್ಲ ಅಲಂಕಾರ ಮಾಡಬಾರದು'' ಎನ್ನುತ್ತಿದ್ದರು. ನನ್ನ ತರಗತಿಯ ಇತರ ಹುಡುಗಿಯರಿಗಿದ್ದ ಯಾವ ರೀತಿಯ ಸೌಲಭ್ಯವೂ, ಸ್ವಾತಂತ್ರ್ಯವೂ ನನಗಿರಲಿಲ್ಲ.
ಮುಸ್ಲಿಂ ಹುಡುಗಿಯಾದ ನನಗೆ ಇತರ ಹುಡುಗಿಯರೊಡನೆ ಒಂದು ಸಿನಿಮಾಕ್ಕೂ ಹೋಗುವ ಸ್ವಾತಂತ್ರ್ಯವಿರಲಿಲ್ಲ. ನನ್ನಣ್ಣ ಊರಿಗೆ ಬಂದಾಗೊಮ್ಮೆ ಅವನೊಡನೆ ಒಂದೊ ಎರಡೊ ಚಿತ್ರ ನೋಡುತ್ತಿದ್ದೆನೇ ಹೊರತು ಉಳಿದ ದಿನಗಳಲ್ಲಿ ಗೆಳತಿಯ ಬಾಯಿಂದ ಸಿನಿಮಾದ ಕತೆ ಕೇಳಿ ತೃಪ್ತಿಪಟ್ಟುಕೊಳ್ಳಬೇಕಾಗುತ್ತಿತ್ತು. ಎಂದೂ ಪಿಕ್‌ನಿಕ್ ಮತ್ತು ಎಕ್ಸ್‌ಕರ್ಷನ್‌ಗೆ ನಾನು ಹೋದವಳೇ ಅಲ್ಲ. ಶಾಲೆಯ ಥ್ರೋಬಾಲ್ ಟೀಮಿನ ಅತ್ಯುತ್ತಮ ಆಟಗಾರ್ತಿಯಾದ ನನಗೆ, ನಮ್ಮ ತಂಡ ಪರ ಊರಿಗೆ ಹೊರಟಾಗ ಅವರೊಡನೆ ಹೋಗುವ ಅವಕಾಶ ಸಿಗಲಿಲ್ಲ. "ಇಷ್ಟು ಒಳ್ಳೆಯ ಆಟಗಾರ್ತಿಯನ್ನು ಬಿಟ್ಟು ಹೋಗಬೇಕಾಯಿತಲ್ಲ?'' ಎಂದು ಉಪಾಧ್ಯಾಯಿನಿ ಪರಿತಪಿಸಿದಾಗ, ಮನೆಗೆ ಹೋಗಿ ಅತ್ತು ಊಟ ಬಿಟ್ಟು ಮಲಗುವ ಸರದಿ ನನ್ನದಾಗುತ್ತಿತ್ತು. ಆದರೆ ನನ್ನ ತಂದೆ ತಾಯಿಗಳು ಯಾವುದಕ್ಕೂ ಜಗ್ಗುತ್ತಿರಲಿಲ್ಲ. ತಂದೆ ನನ್ನನ್ನು ಕರೆದು,
“ನೀನು ನಮ್ಮ ಸಮಾಜದಲ್ಲಿ ಶಾಲೆಗೆ ಹೋಗಿ ಕಲಿಯುತ್ತಿರುವ ಪ್ರಥಮ ಮುಸ್ಲಿಂ ಹುಡುಗಿ. ನೀನು ಶಾಲೆಗೆ ಹೋಗುವುದೇ ಊರವರಿಗೆ ನುಂಗಲಾರದ ತುತ್ತಾಗಿರುವಾಗ ಇನ್ನು ನೀನು ಪರ ಊರಿಗೆ ಹೋಗಿ ಆಡಿದರೆ ಊರವರು ಏನಂದಾರು ? ನಿನ್ನಿಂದ ಯಾವ ತಪ್ಪು ಆಗಬಾರದು. ನೀನೇನಾದರೂ ತಪ್ಪ ಮಾಡಿದರೆ ಆಮೇಲೆ ನಮ್ಮೂರಿನ ಮುಸ್ಲಿಂ ಹೆಣ್ಣು ಮಕ್ಕಳು ಶಾಲೆಯ ಮುಖವನ್ನೇ ನೋಡಲಾರರು. ನಿನ್ನನ್ನು ನೋಡಿ ಉಳಿದವರೂ ಕಲಿಯಲಿ ಎಂದೇ ನಿನ್ನನ್ನು ಶಾಲೆಗೆ ಕಳುಹಿಸುತ್ತಿದ್ದೇನೆ. ನೀನು ಹೀಗೆಲ್ಲಾ ಹಠ ಮಾಡಿದರೆ ನಿನ್ನನ್ನು ಶಾಲೆಯಿಂದ ಬಿಡಿಸಿ ಬಿಡುತ್ತೇನೆ'' "ಎಂದು ಹೇಳಿದಾಗ ಅಲ್ಲಿ ನಾನು ಹೇಳುವುದು ಏನೂ ಉಳಿದಿರಲಿಲ್ಲ.
ಮನೆಯ ಈ ಶಿಸ್ತು ಮತ್ತು ಊರವರ ಚುಚ್ಚು ಮಾತಿನಿಂದ ಸಹನೆ ಸೋತ ನಾನು ನನ್ನಣ್ಣನಿಗೊಂದು ಪತ್ರ ಬರೆದೆ. “ನಾನು ಕಲಿತು ಉದ್ದಾರವಾಗುವುದು ಅಷ್ಟರಲ್ಲೇ ಇದೆ. ನಾನು ಶಾಲೆ ಬಿಟ್ಟುಬಿಡೋಣ ಎಂದು ಯೋಚಿಸಿದ್ದೇನೆ'' ಎಂದು. ಕೂಡಲೇ ಬಂತು ಆತನಿಂದ ನಾಲ್ಕು ಪುಟದ ಉತ್ತರ. "ಶತ ಶತಮಾನಗಳಿಂದಲೂ ನಡೆದು ಬಂದಿರುವ ಒಂದು ಸಂಪ್ರದಾಯವನ್ನು ಮುರಿದು ಮುನ್ನುಗ್ಗುವುದು ಅಷ್ಟು ಸುಲಭವಲ್ಲ ಎಂದು ನಮಗೆಲ್ಲಾ ಗೊತ್ತು. ನಮ್ಮ ಸಮಾಜದಲ್ಲಿ ಯಾರೂ ಮಾಡದ ಕೆಲಸ ನೀನು ಮಾಡುತ್ತಿದ್ದಿ. ಇತರರೂ ನಿನ್ನನ್ನು ಅನುಸರಿಸಬೇಕಾಗಿದೆ. ಸಹನೆ ತಂದುಕೊ. ಈಗ ನೀನು ಧೈರ್ಯಗೆಟ್ಟರೆ ನಮ್ಮೆಲ್ಲರ ಯೋಜನೆಗಳೂ ತಲೆಕೆಳಗಾಗುತ್ತವೆ. ಯಾರಾದರೂ ನಿನಗೆ ತೊಂದರೆ ಕೊಟ್ಟರೆ ನನಗೆ ಬರೆ. ನಾನು ಊರಿಗೆ ಬಂದು ಸರಿ ಮಾಡುತ್ತೇನೆ. ಮೂರು ಕಾಸಿನ ಜನರ ಮಾತಿಗೆ ಬೆಲೆ ಕೊಡಬಾರದು. ಇಷ್ಟು ದಿನ ನೀನು ನನ್ನ ತಂಗಿ ಎಂದು ಹೆಮ್ಮೆಪಡುತ್ತಿದ್ದೆ. ಇನ್ನು ಮುಂದೆ ಹಾಗೆ ಹೇಳಲು ನಾಚಿಕೆ ಪಡಬೇಕಾಯಿತಲ್ಲ? ನೀನಿಷ್ಟು ಹೇಡಿಯೇ? ನಿನಗೆ ರಿಂಗ್ ಬೇಕೆ ? ಬ್ಯಾಡ್‌ಮಿಂಟನ್ ಬ್ಯಾಟ್ ಬೇಕೆ? ಮನೆಯಲ್ಲಿ ಆಡಿ ಅಭ್ಯಾಸ ಮಾಡಿ ಮುಂದಿನ ವಾರ್ಷಿಕೋತ್ಸವದಲ್ಲಿ ಪ್ರೈಜ್ ಪಡೆಯಬೇಕು'' ಎಂದು ಹುರಿದುಂಬಿಸಿದನು. ಅವನಿಗೆ ಗೊತ್ತು ಆಟದ ಮೈದಾನ ನನ್ನನ್ನೆಷ್ಟು ಸೆಳೆಯುತ್ತದೆ ಎಂದು. ಒಂದೇ ನಿಮಿಷದಲ್ಲಿ ಕಾಮೋಡಗಳೆಲ್ಲಾ ಚೆದುರಿ ಆಕಾಶ ಶುಭ್ರವಾಯಿತು. ಆಮೇಲೆಂದೂ ಅವನೊಡನೆ ಶಾಲೆ ಬಿಡುವ ಮಾತೆತ್ತಲಿಲ್ಲ.
ಶಾಲೆಯ ಒಳಗೆ ಮಾತ್ರ ನನಗೆ ಯಾವ ರೀತಿಯ ತೊಂದರೆಯೂ ಆಗಲಿಲ್ಲ. ನಮ್ಮ ಉಪಾಧ್ಯಾಯರಾಗಲಿ ತರಗತಿಯಲ್ಲಿದ್ದ ಗಂಡು ಹುಡುಗರಾಗಲಿ ನನಗೆ ಯಾವ ರೀತಿಯ ತೊಂದರೆಯನ್ನೂ ಕೊಡುತ್ತಿರಲಿಲ್ಲ. ಅಲ್ಲಿ ಮಾತ್ರ ನಾನು ಮುಸ್ಲಿಂ ಎಂಬುದನ್ನು ಮರೆತು ಎಲ್ಲರಂತೆಯೇ ನಾನೂ ಮನುಷ್ಯಳು ಎಂದು ಮಾತ್ರ ಯೋಚಿಸುತ್ತಿದ್ದೆ. ನಮ್ಮನ್ನು ಸೋದರಿಯರಂತೆ ನಡೆಸಿಕೊಳ್ಳುತ್ತಿದ್ದ ಈ ನನ್ನ ಸಹಪಾಠಿಗಳೂ ಇಂದಿಗೂ ನನ್ನ ನೆನಪಿನಲ್ಲಿ ಮಾಸದೆ ಉಳಿದಿದ್ದಾರೆ.
ಕನ್ನಡ ನನ್ನ ಮೆಚ್ಚಿನ ಪಾಠವಾಗಿತ್ತು. ಖಾಯಿಲೆ ಬಿದ್ದರೂ, ಈ ಕನ್ನಡ ಪಾಠಗಳಿಗಾಗಿ ನಾನು ಶಾಲೆಗೆ ಬರುತ್ತಿದ್ದೆ. ಎಂತಹ ಹೆಡ್ಡನಿಗೂ ಅರ್ಥವಾಗುವಂತೆ ಪಾಠಗಳನ್ನು ವಿವರಿಸುತ್ತಿದ್ದ ನಮ್ಮ ಉಪಾಧ್ಯಾಯ ಶ್ರೀ ಕೆ.ಎಸ್. ಶರ್ಮ ಅವರು ಇಂದಿಗೂ ನನ್ನ ಸ್ಮರಣೆಯಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಕುಮಾರವ್ಯಾಸನ ಭಾರತವನ್ನು ಇವರಿಂದಲೇ ಕೇಳಬೇಕು. ತರಗತಿಯಲ್ಲಿ ಆತ್ಮೀಯ ಗೆಳತಿಯರ ಮಧ್ಯೆ ಕುಳಿತು ಇನ್ನೊಮ್ಮೆ ಈ ಹಾಡುಗಳನ್ನು, ಅದರ ಅರ್ಥವನ್ನು ಇವರ ಬಾಯಿಂದ ಕೇಳುವಂತಿದ್ದರೆ? ಆದರೆ ಕಾಲಚಕ್ರವನ್ನು ಹಿಂದಕ್ಕೆ ತಿರುಗಿಸುವಂತಿಲ್ಲವಲ್ಲ? ಅದು ಮುಂದಕ್ಕೆ ತಾನೇ ತಿರುಗುವುದು? ಆಗ ಉಪಾಧ್ಯಾಯ-ವಿದ್ಯಾರ್ಥಿ ಸಂಬಂಧ ಯಾವ ರೀತಿಯ ಫರ್ಷಣೆಗೂ ಒಳಗಾಗದೆ ಅಲ್ಲೊಂದು ರೀತಿಯ ಸೌಹಾರ್ದ ಸಂಬಂಧವು ಮನೆ ಮಾಡಿಕೊಂಡಿತ್ತು. ನಮಗೆ ಅರ್ಥವಾಗದ ಪಾಠಗಳನ್ನು ಬಿಡುವಿನ ವೇಳೆಯಲ್ಲಿ ಇವರ ಬಳಿ ಹೋಗ ಕೇಳಿದರೆ ಇವರಿಗೆ ಸಂತೋಷವಾಗುತ್ತಿತ್ತು. ತುಂಬಾ ಸಹನೆಯಿಂದ ಎಷ್ಟು ಹೊತ್ತು ಬೇಕಾದರೂ ಪಾಠಗಳನ್ನು ವಿವರಿಸುತ್ತಿದ್ದರು. ಈಗಿನಂತೆ ನಿಮಿಷಗಳನ್ನು ಲೆಕ್ಕ ಹಾಕಿ "ಟೂಶನ್ ಫೀಸ್ ಕೊಡಿ' ಎಂದು ಕೇಳುತ್ತಿರಲಿಲ್ಲ. ಈಗಿನಂತೆ ಎಲ್ಲವೂ ಹಣದ ಲೆಖ್ಬಾಚಾರವಾಗಿರಲಿಲ್ಲ. ನಾವು ವಿದ್ಯೆಗಾಗಿ ವಿದ್ಯೆ ಕಲಿಯುತ್ತಿದ್ದರೆ, ಚೆನ್ನಾಗಿ ಕಲಿಸಿ ನಾವು ಉತ್ತಮ ಅಂಕ ಪಡೆಯುವಂತೆ ಮಾಡುವುದು ತಮ್ಮ ಕರ್ತವ್ಯವೆಂದು ಇವರು ತಿಳಿಯುತ್ತಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಿಗೆ ತಮ್ಮ. ಶಾಲೆಯ ಫಲಿತಾಂಶದಲ್ಲಿ ಅಷ್ಟೊಂದು ಆಸಕ್ತಿ ಇತ್ತು!
ನಮ್ಮ 11ನೇ ವರ್ಷದ ತರಗತಿ ಅದೇ ತಾನೇ ಪ್ರಾರಂಭವಾಗಿತ್ತು. ಹಿಂದಿನ ರ್ಷದ ಎಸ್.ಎಸ್.ಎಲ್.ಸಿ. ಫಲಿತಾಂಶ ಅದೇ ತಾನೇ ಹೊರಬಂದಿತ್ತು. 30 ೇಕಡವನ್ನು ಮೀರದ ನಮ್ಮ ಶಾಲೆಯ ಫಲಿತಾಂಶ ಆ ವರ್ಷ 56ಶೇಕಡ ಆಗಿತ್ತು. ನಮ್ಮ ಮುಖ್ಯೋಪಾಧ್ಯಾಯರ ಆನಂದ, ಮಳೆಗಾಲದ ಚಂದ್ರಗಿರಿಯಂತೆ ದಡ ನೀರಿ ಹರಿಯುತ್ತಿತ್ತು. ಅವರು ಆ ದಿನ ನಮ್ಮೊಡನೆ ಹೇಳಿದ ಮಾತನ್ನು ಅವರ ಮಾತಿನಲ್ಲೇ ಕೇಳಿ.
ಪ್ರತಿ ವರ್ಷ ನಮ್ಮ ಶಾಲೆಯ ಫಲಿತಾಂಶ ಹೊರಬಂದಾಗ, ನಾನು ಮುಖಕ್ಕೆ ಕೊಡೆ ಅಡ್ಡ ಹಿಡಿದು, ಬೀದಿಯಲ್ಲಿ ಬೇಗ ಬೇಗನೆ ನಡೆದುಹೋಗುತ್ತಿದ್ದೆ ಆಗ ಅಂಗಡಿಯವರು ಕರೆದು ಮಾತನಾಡಿಸುತ್ತಿದ್ದರು. 'ಏನು ಮೇಷ್ಟ್ರೇ, ನಿಮ್ಮ ಶಾಲೆಯ ಫಲಿತಾಂಶ ಬಂತೆ? ರಿಸಲ್ಟ್ ಎಷ್ಟು ಪರ್ಸೆಂಟು?' ಎಂದು, ನಾನು ಮುಖ ಮುದುಡಿ 28 ಶೇಕಡ ಎಂದೊ 30 ಶೇಕಡ ಎಂದೋ ಹೇಳಿ ಬೇಗನೆ ಅಲ್ಲಿಂದ ಕಾಲ್ರೆಗೆಯುತ್ತಿದ್ದೆ. ಈ ವರ್ಷ ಬೇಕೆಂದೇ ನಾನು ಕೊಡೆ ಮಡಚಿ ಹಿಡಿದು ತಲೆ ಎತ್ತಿ ಬೀದಿಯಲ್ಲಿ ಎರಡು ಮೂರು ಸಲ ತಿರುಗಿದೆ, ಆದರೆ ಯಾರೂ ಎಷ್ಟು ಪರ್ಸೆಂಟ್ ರಿಸಲ್ಟ್ ಎಂದು ಕೇಳಲೇ ಇಲ್ಲ. ಮುಂದಿನ ವರ್ಷ 70 ಶೇಕಡ ಬರಬೇಕು. ಆಗ ನಾನೇ ನಡುಬೀದಿಯಲ್ಲಿ ನಿಂತು, ಎಲ್ಲರಿಗೂ ಕೂಗಿ ಹೇಳುತ್ತೇನೆ. ನಮ್ಮ ಶಾಲೆಯ ರಿಸಲ್ಟ್ ಇಷ್ಟು ಪರ್ಸೆಂಟ್ ಎಂದು'' ಎಂದಾಗ ನಾವೆಲ್ಲಾ ನಕ್ಕುಬಿಟ್ಟೆವು. ನಮ್ಮ ಶಾಲೆಯ ಪ್ರಗತಿಯಲ್ಲಿ ತಮ್ಮ ವಿದ್ಯಾರ್ಥಿಗಳ ಮುನ್ನಡೆಯಲ್ಲಿ ಆಗಿನ ಉಪಾಧ್ಯಾಯರುಗಳು ಎಷ್ಟೊಂದು ಆಸಕ್ತಿ ವಹಿಸುತ್ತಿದ್ದರು! ಆಗ ವಿದ್ಯಾಭ್ಯಾಸವು ಈಗಿನಂತೆ ಕೇವಲ ವ್ಯಾಪಾರವಾಗಿರಲಿಲ್ಲ, ದೇಶದ ಉನ್ನತಿಗೆ ಇದೊಂದು ಹಾದಿ ಎಂದು ಎಲ್ಲರೂ ತಿಳಿದಿದ್ದರು.
ಈ ಮುಖ್ಯೋಪಾಧ್ಯಾಯರು ನನ್ನೊಡನೆ ಹೇಳಿದ್ದರು, ದಕ್ಷಿಣ ಕನ್ನಡದಿಂದಲೇ (ಆಗ ಕಾಸರಗೋಡು ದಕ್ಷಿಣ ಕನ್ನಡದ ಭಾಗವಾಗಿತ್ತು) ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕುಳಿತುಕೊಳ್ಳುತ್ತಿರುವ ಪ್ರಥಮ ಮುಸ್ಲಿಂ ಹುಡುಗಿ ನೀನು. ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಬೇಕು. ನೀನು ನನ್ನ ಶಾಲೆಯ ವಿದ್ಯಾರ್ಥಿನಿ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತಿದೆ. ನೀನು ಮುಂದೆ ಕಾಲೇಜಿಗೂ ಹೋಗಬೇಕು.''
ಇವರು ನನ್ನಲ್ಲಿ ಇಂತಹ ಅಭಿಮಾನವನ್ನಿಟ್ಟುಕೊಳ್ಳಲು ಇನ್ನೂ ಒಂದು ಕಾರಣವಿತ್ತು. ನನ್ನ ತಂದೆ ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದುದಲ್ಲದೆ, ಆರ್ಥಿಕ ದುಃಸ್ಥಿತಿಯಿಂದ ಈ ಶಾಲೆ ಮುಚ್ಚಬೇಕಾದ ಪರಿಸ್ಥಿತಿ ಬಂದಾಗ ನನ್ನ ತಂದೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಲ್ಲದೆ ಊರವರಿಂದಲೂ ಹಣ ಕೊಡಿಸಿಕೊಟ್ಟಿದ್ದರು; ಸಿಲೋನಿನಲ್ಲಿರುವ ತಮ್ಮ ಬಂಧುಗಳಿಂದಲೂ ಈ ಶಾಲೆಗೆ ಧನಸಹಾಯ ಮಾಡಿಸಿದ್ದರು. ಇದನ್ನು ಈ ಮುಖ್ಯೋಪಾಧ್ಯಾಯರು ಎಂದೂ ಮರೆತಿರಲಿಲ್ಲ. ಮುಂದೆ ನನ್ನ ತಮ್ಮನೊಬ್ಬನು ಓದಿನಲ್ಲಿ ಹಿಂದಾದಾಗ ನನ್ನ ತಂದೆಯೇ ಹೇಳಿ ಅವನನ್ನು ಫೈಲ್ ಮಾಡಿಸಬೇಕಾಯಿತು. "ನನ್ನ ಮಗನೆಂದು ಪಾಸ್ ಮಾಡುವುದು ಬೇಡ. ಓದಿನಲ್ಲಿ ಹಿಂದಿದ್ದರೆ ಅವನನ್ನು ಫೈಲ್ ಮಾಡಿ. ಮುಂದಿನ ವರ್ಷ ಚೆನ್ನಾಗಿ ಓದುತ್ತಾನೆ '' ಎಂದರು. ತಮ್ಮ ಮಕ್ಕಳು ಫೈಲಾದಾಗ ಉಪಾಧ್ಯಾಯರೊಡನೆ ಕದನಕ್ಕಿಳಿಯುವ ಎಷ್ಟೋ ಜನ ತಂದೆ ತಾಯಿಗಳನ್ನು ಇಂದು ನಾನು ಕಂಡಿದ್ದೇನೆ.
ಶಾಲೆಯ ಪುಸ್ತಕ ಭಂಡಾರ ಮತ್ತು ಆಟದ ಮೈದಾನ ನನ್ನ ಆಕರ್ಷಣೆಯ ಕೇಂದ್ರವಾಗಿತ್ತು. ಒಂದೆರಡಾಟ ಥ್ರೋಬಾಲ್, ಟೆನ್ನಿಕ್ಕಾಟ್ ಅಥವಾ ಬ್ಯಾಸ್ಕೆಟ್ ಬಾಲ್ ಆಡದೆ ನಾನೆಂದೂ ಮನೆಗೆ ಹಿಂದಿರುಗುತ್ತಿರಲಿಲ್ಲ. ಗೆಳತಿಯರ ಮಧ್ಯ ಹಾಯಾಗಿ ಓಡಾಡಿ ಆಟವಾಡುತ್ತಿರುವಾಗ ಒಂದು ರೀತಿಯ ವರ್ಣಿಸಲಾರದ ಆನಂದ ಲಹರಿಯಲ್ಲಿ ನಾನು ತೇಲಿ ಹೋಗುತ್ತಿದ್ದೆ. ಆ ದಿನಗಳಲ್ಲಿ, ನನಗಿದ್ದ ಒಂದೇ ಒಂದು ಮನರಂಜನೆ ಇದಾಗಿತ್ತು. ಮುಸ್ಲಿಂ ಗಂಡಸರ ಕೊಂಕು ನೋಟಗಳನ್ನು, ಕುಹಕ ಮಾತುಗಳನ್ನು, ಮುಸ್ಲಿಂ ಹೆಂಗಸರು ತಮ್ಮ ಮನೆಯ ಕಿಟಕಿ ಬಾಗಿಲುಗಳೆಡೆಯಿಂದ ಇಣಿಕಿ ನೋಡಿ ನನಗೆ ಮುಜುಗರವುಂಟು ಮಾಡಿದ್ದನ್ನು, ಎಲ್ಲವನ್ನೂ ನಾನು ಮರೆಯುವ ಸ್ಮಳ, ಈ ಆಟದ ಮೈದಾನವಾಗಿತ್ತು. ಹೊತ್ತಿನ ಪರಿವೆ ಇಲ್ಲದೆ ಆಡುತ್ತಿದ್ದೆ.
ನಾನಾಗ 11ನೇ ತರಗತಿಯಲ್ಲಿದ್ದೆ. ಹೀಗೊಮ್ಮೆ ಆಟವಾಡಿ ಮನೆಗೆ ಬಂದಾಗ ಎಂದಿಗಿಂತಲೂ ತಡವಾಗಿತ್ತು. ತಮ್ಮಂದಿರಿಬ್ಬರು ನನ್ನ ಬೆಂಗಾವಲಿಗಿದ್ದರೂ ತಂದೆ ತಾಯಿಗಳು ರೌದ್ರಾವತಾರ ತಾಳಿದ್ದರು. ತಂದೆ ಚೆನ್ನಾಗಿ ಬೈದು, “ಇನ್ನು ಮುಂದೆ ನೀನು ಆಟವಾಡದೆ ಶಾಲೆ ಬಿಟ್ಟೊಡನೆ ಮನೆಗೆ ಬರಬೇಕು'' ಎಂದು ಕಟ್ಟಪ್ಪಣೆ ಮಾಡಿದ್ದಲ್ಲದೆ ನಮ್ಮ ಮುಖ್ಯೋಪಾಧ್ಯಾಯರಿಗೆ, ಶಾಲಾ ಸಮಯ ಮುಗಿದೊಡನೆ ನನ್ನನ್ನು ಮನೆಗೆ ಕಳುಹಿಸಬೇಕೆಂದು ಒಂದು ಪತ್ರವನ್ನು ಬರೆದರು.
ಹಿಕ್‌ನಿಕ್‌ಗೆ ಹೋಗಬಾರದು, ಸಿನಿಮಾಗೆ ಹೋಗಬಾರದು, ಹೆಣ್ಣು ಮಕ್ಕಳೇ ಅಭಿನಯಿಸುವ ನಾಟಕದಲ್ಲೂ ಅಭಿನಯಿಸಬಾರದು, ಶಾಲಾ ವಾರ್ಷಿಕೋತ್ಸವಕ್ಕೂ ಹೋಗಬಾರದು, ಒಳ್ಳೆಯ ಬಟ್ಟೆಯುಡಬಾರದು, ಹಾಗೆ ಮಾಡಬಾರದು, ಹೀಗೆ ಮಾಡಬಾರದು. ಈ "ಬಾರದು' ಎಂಬ ಅಸಂಖ್ಯ ನೂಲುಗಳ ಬಲೆಯಲ್ಲಿ ರಾತ್ರಿ, ಹಗಲೂ ಕಟ್ಟಿ ಹಾಕುತ್ತಿದ್ದರು ನನ್ನ ಹಿರಿಯರು. ನನ್ನ ಅಣ್ಣ ತಮ್ಮಂದಿರಿಗೆ ಯಾವ ರೀತಿಯ ನಿರ್ಬಂಧವೂ ಇಲ್ಲದಿದ್ದರೂ, ನಾನು ಮಾತ್ರ ಪಂಜರದಲ್ಲಿ ಬಂಧಿಯಾದ ಹಕ್ಕಿಯಾಗಿದ್ದೆ. ಆಗೆಲ್ಲ ನಾನು ಅಂದುಕೊಳ್ಳುತ್ತಿದ್ದೆ "ಈ ಐವರ ಜೊತೆಯಲ್ಲಿ ನಾನೂ ಗಂಡಾಗಿಯೇ ಹುಟ್ಟಬಾರದಿತ್ತೇ' ಎಂದು. ಇಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ನಾಮ ನಿರಾಳವಾಗಿ ಉಸಿರಾಡುವ ಒಂದೇ ಒಂದು ಜಾಗವಾದ ಈ ಆಟದ ಮೈದಾನಕ್ಕೂ ನಿಷೇಧ ಹೇರಿದಾಗ, ಹೃದಯದಲ್ಲಿ ಅಸಹನೆಯಿಂದ ಕುದಿಯುತ್ತಿದ್ದ ಜ್ವಾಲಾಮುಖಿಯೊಂದು ಸ್ಫೋಟಿಸಿತು. ನಾನು ಕಾಳಗದ ಕಹಳೆಯನ್ನು ಮೊಳಗಿದೆ.
"ಇಷ್ಟು ದಿನವೂ ಎಲ್ಲಕ್ಕೂ ತಲೆಬಾಗಿದೆ. ನಾನು ಶಾಲೆಗೆ ಹೋಗುವುದೇ ಆಟವಾಡುವುದಕ್ಕಾಗಿ. ನಾನೆಂದರೆ ಎಲ್ಲರ ಆಸೆ ಆಕಾಂಕ್ಸೆಗಳನ್ನು ಪೂರೈಸಬೇಕಾಗಿರುವ ಒಂದು ಬೊಂಬೆಯಾದೆನೇ ಹೊರತು ನನ್ನನ್ನು ಅರ್ಥಮಾಡಿಕೊಳ್ಳಲು ಒಬ್ಬರೂ ಇಲ್ಲವಾದರಲ್ಲ? ನಾನಿನ್ನು ಮುಂದೆ ಶಾಲೆಗೇ ಹೋಗುವುದಿಲ್ಲ. ನನ್ನ ವಿದ್ಯೆಯಿಂದ ಯಾರೂ ಉದ್ದಾರವಾಗುವುದಿಲ್ಲ'' ಎಂದು ಹೇಳಿ ಗಟ್ಟಿಯಾಗಿ ಮನೆಯಲ್ಲೇ ಕೂತು ಮುಷ್ಕರ ಹೂಡಿದೆ. ಅಣ್ಣನಿಗೆ ಪತ್ರವನ್ನು ಬರೆಯಲಿಲ್ಲ. ನೇರ ಕಾಳಗಕ್ಕೆ ನಾನೇ ಸಿದ್ಧಳಾದೆ.
ಈಗ ನನ್ನ ತಂದೆ ತಾಯಿಗಳು ಸೋತರು. ಇಷ್ಟು ವರ್ಷ ವಿದ್ಯಾಭ್ಯಾಸ ಮಾಡಿ ಈ ಪರೀಕ್ಷೆಯೊಂದನ್ನು ಮುಗಿಸದೇ ಹೋದರೆ ನನ್ನ ತಂದೆಯ ಬಹು ದಿನದ ಕನಸು ನನಸಾಗದು. ಇಷ್ಟಕ್ಕೂ ಅಮೂಲ್ಯವಾದುದೇನನ್ನೂ ತಂದುಕೊಡಬೇಕೆಂದೇನೂ ನಾನು ಕೇಳಿರಲಿಲ್ಲ, ಅಥವಾ ಯಾವನ ಜೊತೆಯಲ್ಲೂ ಓಡಿಹೋಗಬೇಕೆಂಬ ಸನ್ನಾಹವನ್ನೂ ನಾನು ಮಾಡಿರಲಿಲ್ಲ. ಇದು ನನ್ನದೊಂದು ನ್ಯಾಯವಾದ ಬೇಡಿಕೆ ಎಂದು ನನ್ನ ತಂದೆಗೆ ಮನದಟ್ಟಾಯಿತೇನೊ, ಮಾರನೆಯ ದಿನ ತಾಯಿ ನನ್ನೊಡನೆ,
"ನಾವೇನು ನಿನಗೆ ಕೆಟ್ಟದಾಗಬೇಕೆಂದು ಹೇಳುತ್ತೇವೆಯೇ? ನಿನ್ನ ಒಳ್ಳೆಯದಕ್ಕೆ ತಾನೇ ಅನ್ನುವುದು ? ಹೆಚ್ಚು ಹೊತ್ತು ನಿಲ್ಲದೆ ಸ್ವಲ್ಪ ಹೊತ್ತು ಆಡಿ ಮನೆಗೆ ಬಂದು ಬಿಡು. ಈಗ ನೀನು ಶಾಲೆ ಬಿಟ್ಟರೆ ತಂದೆಗೂ ಬೇಜಾರು. ನಿನ್ನ ದೊಡ್ಡಣ್ಣನಿಗೂ ತುಂಬಾ ನಿರಾಸೆಯಾಗದೇ ? ನಾಲ್ಕು ಜನರಿಂದ ಒಳ್ಳೆಯವಳೆನಿಸಿಕೊಳ್ಳುವುದು ತುಂಬ ಕಷ್ಟ. ಕೆಟ್ಟವಳೆಂದು ಒಂದೇ ಕ್ಷಣದಲ್ಲಿ ಅನ್ನಿಸಿಕೊಳ್ಳಬಹುದು'' ಎಂದೆಲ್ಲ ಹೇಳಿದರು. ನನ್ನ ವಿದ್ಯೆಯಲ್ಲಿ ನನ್ನ ತಾಯಿಗೆ ಯಾವ ರೀತಿಯ ಆಸಕ್ತಿ ಇಲ್ಲದೆ ಹೋದರೂ ಈಗ ಈ ಹಂತದಲ್ಲಿ ನಾನು ಶಾಲೆ ಬಿಟ್ಟುಬಿಡುವುದು ಅವರಿಗೆ ಬೇಕಾಗಿರಲಿಲ್ಲ.
“ನಾನು ನಾನೇ ಆಗದೆ, ನಾನು ಏನೂ ಆಗದೆ ಬರೆ ಮಣ್ಣಿನ ಹೆಂಟೆಯಾಗಿ ಎಲ್ಲರಿಂದಲೂ ಒಳ್ಳೆಯವಳು ಎನಿಸಿಕೊಳ್ಳುವುದಕ್ಕಿಂತ, ನನಗೆ ಸರಿ ಎಂದು ತೋಚಿದ್ದನ್ನು ಹಾಗೆಯೇ ಅಂದು, ನನಗೆ ಸರಿಕಂಡಂತೆ ಮಾಡಿ, ಎಲ್ಲರಿಂದಲೂ ಕೆಟ್ಟವಳು ಎನ್ನಿಸಿಕೊಳ್ಳುವುದೇ ನನಗೆ ಹೆಚ್ಚು ಇಷ್ಟ'' ಅಸಹನೆಯಿಂದ ನಾನೆಂದಿದ್ದೆ. ಎರಡು ದಿನ ಶಾಲೆಯ ದರ್ಶನವಿಲ್ಲದೆ, ಆತ್ಮೀಯ ಗೆಳೆಯರ ನಗು, ಹರಟೆಗಳಿಲ್ಲದೆ, ಕನ್ನಡ ಪಾಠಗಳಿಲ್ಲದೆ, ಲೈಬ್ರರಿಯ ಪುಸ್ತಕಗಳ ಸಹವಾಸವಿಲ್ಲದೆ, ರಿಂಗು ಬಾಲುಗಳ ಒಡನಾಟವಿಲ್ಲದೆ ನಾನಾಗಲೇ ಚಡಪಡಿಸತೊಡಗಿದ್ದೆ. ತಾಯಿ ದೊಡ್ಡಣ್ಣನ ಮಾತೆತ್ತಿದಾಗ ಕಣ್ಣ ಕೊನೆಯಲ್ಲಿ ನೀರು ನಿಂತರೂ, ಶಾಂತಿದೂತನ ಬಳಿ ಸಂಧಾನಕ್ಕಾಗಿ ಪತ್ರ ಬರೆಯುವ ಸಹನೆಯೂ ಇಲ್ಲದೆ, ಪ್ರತಿಭಟಿಸಿ ಹೋರಾಡಿ ಜಯಗಳಿಸಿದ ಹೆಮ್ಮೆ ನನ್ನದಾಗಿತ್ತು!
ನನ್ನ ತಂದೆ, ಊರವರಿಂದ ಯಾವ ಮಾತೂ ಬರಬಾರದೆಂದು ನನ್ನನ್ನು ಹೀಗೆ ಶಿಸ್ತಿನಿಂದ ನಡೆಸಿಕೊಳ್ಳುತ್ತಿದ್ದರೇ ವಿನಹ ಅವರು ಅಂತಹ ನಿಷ್ಕುರರಲ್ಲವೆಂದು ನನಗೆ ಗೊತ್ತು. ಅವರು ತಾವು ಮಾಡಿದ ಒಳ್ಳೆಯ ಕೆಲಸಗಳನ್ನು ಎಂದೂ ಯಾರೊಡನೆಯೂ ಕೊಚ್ಚಿಕೊಂಡವರಲ್ಲ. ಎಂದೂ ಯಾರನ್ನೂ ಯಾವುದಕ್ಕೂ ಒತ್ತಾಯಿಸಿದವರೇ ಅಲ್ಲ. ಆದರೆ ನನ್ನನ್ನು ಮಾತ್ರ ಹೀಗೆಲ್ಲಾ ನಿರ್ಬಂಧಿಸಲೇಬೇಕಾದುದು ಅನಿವಾರ್ಯವಾಗಿತ್ತು.
*****
ಎಸ್.ಎಸ್.ಎಲ್.ಸಿ. ಪರೀಕ್ಷೆಗಾಗಿ ಎಲ್ಲರೂ ಸಿದ್ಧರಾಗುತ್ತಿದ್ದರು. ಪ್ರಥಮ ರ್ಯಾಂಕು ತಾವೇ ಗಿಟ್ಟಿಸಬೇಕೆಂದು ಹುಡುಗಿಯರು ಮತ್ತು ಹುಡುಗರ ಮಧ್ಯೆ ಸ್ಪರ್ಧೆಯೇರ್ಪಟ್ಟಿತ್ತು. ನನ್ನ ಗೆಳತಿಯೊಬ್ಬಳು ರಾತ್ರಿ ಹಗಲೂ ಓದುತ್ತಿದ್ದಳು. ತಾಯಿ ತಂದೆಗಳ ಒಬ್ಬಳೇ ಮಗಳಾದ ಈಕೆ ಮೆಡಿಕಲ್ ಕಾಲೇಜಿಗೆ ಹೋಗುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಳು. “ನೀನೂ ಕಾಲೇಜಿಗೆ ಬಂದರೆ ನಾವಿಬ್ಬರೂ ಜೊತೆಯಾಗಿ ಓದಬಹುದು,'' ಎಂದು ಇವಳು ಯಾವಾಗಲೂ ಅನ್ನುತ್ತಿದ್ದಳು. ಮುಸ್ಲಿಮಳಾದ ನಾಮ ಮೆಡಿಕಲ್ ಕಾಲೇಜನ್ನು ಆಗ ಕನಸಿನಲ್ಲಿಯೂ ನೆನೆಯುವಂತಿರಲಿಲ್ಲ. ನನ್ನ ಭವಿಷ್ಯ ಎಂದೋ ನಿರ್ಧರಿಸಿಯಾಗಿತ್ತು. ಅದನ್ನು ಬದಲಾಯಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಆದ್ದರಿಂದ ನನಗೆ ಮಾತ್ರ ಈ ಪರೀಕ್ಷೆಯಲ್ಲಿ ಯಾವ ರೀತಿಯ ಉತ್ಸಾಹವೂ ಉಳಿದಿರಲಿಲ್ಲ. ಇಷ್ಟು ವರ್ಷ ಶಾಲೆಗೆ ಮಣ್ಣು ಹೊತ್ತಿದ್ದಕ್ಕೆ ತೇರ್ಗಡೆಯಾಗಬೇಕು. ಇಲ್ಲವಾದರೆ ತನ್ನ ಪ್ರಾಣಕ್ಕಿಂತ ಮಿಗಿಲಾಗಿ ನನ್ನನ್ನು ಪ್ರೀತಿಸುತ್ತಿದ್ದ ನನ್ನ ದೊಡ್ಡಣ್ಣನಿಗೆ ತುಂಬಾ ನಿರಾಶೆಯಾಗುತ್ತದೆ ಎಂದು ಮಾತ್ರ ಸ್ವಲ್ಪ ಗಮನವಿಟ್ಟು ಓದುತ್ತಿದ್ದೆ.
ನನ್ನ ತಾಯಿಗೆ ನನ್ನ ವಿದ್ಯೆಯಲ್ಲಾಗಲಿ, ಪರೀಕ್ಸೆಗಳಲ್ಲಿಯಾಗಲಿ ಯಾವ ರೀತಿಯ ಆಸಕ್ತಿಯೂ ಇರಲಿಲ್ಲ ಕಂಡದ್ದನ್ನೆಲ್ಲ ಕಲಿಯುವ ಹಂಬಲ ಹೊತ್ತಿದ್ದ ನಾನು ಶಾಲೆಯಲ್ಲಿ ಹೆಣಿಗೆ, ಕಸೂತಿ, ಕ್ರೋಶಾ ಮುಂತಾದುವನ್ನು ಕಲಿತಾಗ ಮಾತ್ರ ನನ್ನ ತಾಯಿಗೆ ಸಂತೋಷವಾಗುತ್ತಿತ್ತು. ಅವರ ದೃಷ್ಟಿಯಲ್ಲಿ ಹೆಣ್ಣು ಹುಟ್ಟುವುದೇ ಮದುವೆಯಾಗುವುದಕ್ಕಾಗಿ; ಜೀವನ ಪೂರ್ತಿ ಗಂಡೊಬ್ಬನ ಗುಲಾಮಳಾಗಿ ಕಳೆಯುವುದಕ್ಕಾಗಿ. ಹೀಗಿರುವಾಗ ತಮ್ಮ ಮಗಳು ದಿನವಿಡೀ ಕೋಣೆಯಲ್ಲಿ ಕುಳಿತು ಪುಸ್ತಕ ಓದುತ್ತಾ ಕಾಲ ಕಳೆದರೆ ಯಾವನಾದರೂ ಆಕೆಯನ್ನು ಬಾಳಿಸುತ್ತಾನೆಯೇ? ಮದುವೆಯಾದ ಎರಡೇ ದಿನಕ್ಕೆ "ನಿಮ್ಮಮಗಳು ಬೇಡ' ಎಂದು ಹಿಂದಕ್ಕೆ ಅಟ್ಟಿಬಿಟ್ಟು "ತಲಾಕ್' ಕೊಟ್ಟುಬಿಟ್ಟರೆ ? ಆದ್ದರಿಂದ ನನ್ನನ್ನೂ ಮನೆಗೆಲಸ ಮಾಡಲು ಆಗಾಗ್ಗೆ ಒತ್ತಾಯಿಸುತ್ತಿದ್ದರು. ತಮ್ಮ ಸ್ವಂತ ಆದಾಯವಿದ್ದ ಇವರು ಕೆಲಸದವರ ಜೊತೆಯಲ್ಲಿ ಕೂಲಿಯಾಳಿನಂತೆ ದುಡಿಯುತ್ತಿದ್ದುದಲ್ಲದೆ ನನ್ನನ್ನೂ "ಆ ಕೆಲಸ ಮಾಡು,' "ಈ ಕೆಲಸ ಮಾಡು,' ಎಂದು ಯಾವಾಗಲೂ ಪೀಡಿಸುತ್ತಲೇ ಇದ್ದರು. ಅಂಗಳದಲ್ಲಿ ಕೆಲಸದವರ ಜೊತೆಯಲ್ಲಿ ಭತ್ತ ಕುಟ್ಟುವುದು ಮತ್ತು ತೆಂಗಿನ ಮಡಲುಗಳನ್ನು ಹೆಣೆಯುವುದು ಆಗ ನನ್ನ ಪ್ರಿಯವಾದ ಹವ್ಯಾಸವಾಗಿತ್ತು!
ನನ್ನ ಈ ಅಂತಿಮ ಪರೀಕ್ಷೆಗೆ ನಾನು ಓದುತ್ತಿದ್ದಾಗ ನಮ್ಮ ಮನೆಯಲ್ಲಿ ಒಂದು ಘಟನೆ. ನಡೆಯಿತು. ನಮ್ಮ ಮನೆಯಲ್ಲಿ ಕೆಲಸಕ್ಕಿದ್ದ ನನ್ನದೇ ಪ್ರಾಯದ ಹುಡುಗಿಯೊಬ್ಬಳಿಗೆ 12 ನೇ ವರ್ಷದಲ್ಲಿ ಮದುವೆಯಾಗಿ 13ನೇ ವರ್ಷದಲ್ಲಿ ಅವಳ ಗಂಡನು ಅವಳ ಮೂರೂ ತಲಾಕನ್ನೂ ಹೇಳಿದ್ದನು. ಈಗ ಮುದುಕನೊಬ್ಬನು ಅವಳನ್ನು ಮದುವೆಯಾಗುವೆನೆಂದು ಮುಂದೆ ಬಂದಾಗ ಅವಳ ಮೊದಲ ಗಂಡ ತಾನೇ ಅವಳನ್ನು ವರಿಸುವೆನೆಂದನು. ಆಗ ಅವಳು ತನ್ನ ತಾಯಿಯೊಡನೆ ನಮ್ಮ ಊರಿನ ದೊಡ್ಡ ಮಸೀದಿಯ ಖಾಜೀ ಸಾಹೇಬರ ಬಳಿ ಹೋಗಿ ಅವರ ಸಲಹೆ ಕೇಳಿದಳು. ಅವಳು ತನ್ನ ಮೊದಲಿನ ಗಂಡನನ್ನು ವರಿಸಬೇಕಾದರೆ ಒಂದು ದಿನಕ್ಕಾದರೂ ಒಬ್ಬನನ್ನು ವರಿಸಬೇಕೆಂದು ಅವರು ಸಲಹೆ ಕೊಟ್ಟರು. ಅದಕ್ಕೊಪ್ಪದೆ ಅವಳು ಆ ಮುದುಕನನ್ನೇ ವಿವಾಹವಾಗಲು ತೀರ್ಮಾನಿಸಿದ್ದಳು.
ಆ ದಿನ ನಾನು ನನ್ನ ತಾಯಿಯ ಪಿರಿಪಿರಿ ಕೇಳಲಾರದೆ ಹಿತ್ತಲಿನ ಮೂಲೆಯಲ್ಲಿದ್ದ ಗೇರುಮರದ ಗೆಲ್ಲಿನಲ್ಲಿ ಕುಳಿತು ಓದುತ್ತಿದ್ದೆ. ಅಲ್ಲಿಗೆ ನಮ್ಮ ಈ ಕೆಲಸದವಳು (ನನ್ನ ಗೆಳತಿ) ಬಂದು ನನ್ನ ಬಳಿ ಕುಳಿತುಕೊಂಡು ತನ್ನ ಕಣ್ಣೀರ ಕತೆಯನ್ನು ನನ್ನೊಡನೆ ಹೇಳಿ ಕಣ್ಣೀರು ಸುರಿಸಿದಳು. ನಾನು ಅವಳಿಗೊಂದು ಸಲಹೆ ಕೊಟ್ಟೆ.
“ಒಂದು ದಿನಕ್ಕಲ್ಲವೇ? ಒಪ್ಪಿಕೊ. ಆಮೇಲೆ ನಿನ್ನ ಮೊದಲಿನ ಗಂಡನೊಡನೆ ಸುಖವಾಗಿರಬಹುದಲ್ಲ?'' ಎಂದು.
"ಈ ಒಂದು ರಾತ್ರಿ ಎಂದರೆ ನಿನಗೆ ಗೊತ್ತಿದೆಯೇ ?'' ಅವಳು ನನ್ನನ್ನು ನೇರವಾಗಿ ದಿಟ್ಟಿಸುತ್ತಾ ಕೇಳಿದಳು. ನನಗೆ ಹೇಗೆ ಹೇಗೋ ಆಯಿತು. ತಲೆ ತಗ್ಗಿಸಿ ನಕ್ಕುಬಿಟ್ಟೆ. ಈ ವಿಷಯದಲ್ಲಿ ಆಗ ನಾನು ತೀರಾ ಅಜ್ಞಳಾಗಿದ್ದೆನಲ್ಲ?
ನಾನು ಅವಳಿಗೆ ಇನ್ನೂ ಒಂದು ಸಲಹೆ ಕೊಟ್ಟೆ.
“ನಿನ್ನ ಆ ಮೊದಲಿನ ಗಂಡನ ಜೊತೆಯಲ್ಲಿ ಓಡಿ ಹೋಗು.”
ಅವನು ಓಡಲು ಸಿದ್ಧನಾಗಿದ್ದರೆ ಅವಳೂ ಅವನ ಹಿಂದೆ ಓಡುತ್ತಿದ್ದಳು. ಆದರೆ ಅವನು, ತಂದೆ ತಾಯಿ ಮನೆ ಮಠ ಎಲ್ಲ ಇದ್ದವನು. ಅದನ್ನೆಲ್ಲ ಬಿಟ್ಟು ಅವನು ಓಡಿ ಹೋಗುತ್ತಾನೆಯೇ ?
ಆಗ ಅವಳು ಮನದ ತುಂಬ ತುಂಬಿದ್ದ ಕಹಿಯನ್ನು ಹೊರಗೆಡಹಿದಳು.
“ನಿನಗೆ ಹುಚ್ಚೆ? ನಮ್ಮ ಈ ಗಂಡಸರು ಕೇವಲ ಒಂದು ಹೆಣ್ಣಿಗಾಗಿ ಅಷ್ಟೆಲ್ಲಾ ಮಾಡುತ್ತಾರೆಯೇ ? ಕಾಡಿನ ಮೃಗವನ್ನಾದರೂ ನಂಬಬಹುದು. ನಮ್ಮ ಈ ಗಂಡಸರನ್ನು ಎಂದಿಗೂ ನಂಬಬೇಡ. ಅವರ ದೃಷ್ಟಿಯಲ್ಲಿ ನಾವು ಪ್ರಾಣಿಗಳೇ ಹೊರತು ಮನುಷ್ಯರಲ್ಲ.”'
(ಪ್ರಿಯ ಓದುಗರೇ, ಕೋಪ ಬರುತ್ತಿದೆಯೇ ? "angry attack ಅನ್ನುತ್ತೀರಾ ? ಇದು ನನ್ನ ಮಾತಲ್ಲ; ನನ್ನ ಗೆಳತಿಯ ಮಾತು! ದಯವಿಟ್ಟು ಕ್ಷಮಿಸಿ).
ತನ್ನ ಮೊದಲಿನ ಗಂಡನನ್ನು, ತನ್ನನ್ನು ಈಗ ವಿವಾಹವಾಗಲು ಬಂದ ಮುದುಕನನ್ನು, ನಮ್ಮ ಖಾಜಿ ಸಾಹೇಬರನ್ನು ಎಲ್ಲರನ್ನೂ ದ್ವೇಷಿಸುತ್ತಾ ಅವಳು ಸಿಟ್ಟಿನಿಂದ ಉರಿದು ಕನಲಿ ಕೆಂಡವಾಗಿದ್ದಳು. 15ವರ್ಷಕ್ಕೆ ಜೀವನದಲ್ಲಿ ಅಷ್ಟೊಂದು ಕಹಿಯನ್ನು ಅವಳು ಉಂಡಿದ್ದಳು. ಅವಳ ಈ ಉರಿಯನ್ನು ಅವಳು ನನಗೂ ಹತ್ತಿಸಿ ಅಲ್ಲಿಂದ ಎದ್ದು ಹೋದಳು. ಮುಂದೆ ನನಗೆ ಓದಲು ಸಾಧ್ಯವಾಗದೆ ನಾನೂ ಅಲ್ಲಿಂದೆದ್ದು ಮನೆಯ ಕಡೆ ಹೆಜ್ಜೆ ಹಾಕಿದೆ.
ಮುಂದೆ ಅವಳು ಆ ಮುದುಕನನ್ನೇ ಮದುವೆಯಾಗಿ ಪಡಬಾರದ ಪಾಡುಪಟ್ಟಳು. ಅವಳಿಗೆ ತನ್ನ ಮೊದಲಿನ ಗಂಡನನ್ನೇ ಯಾವ ತೊಂದರೆಯೂ ಇಲ್ಲದೆ ಪುನಃ ಸೇರಲು ಒಂದೇ ಒಂದು ಅವಕಾಶ ಸಿಕ್ಕಿದ್ದರೆ ಅವನೊಡನೆ ಅವಳು ಸುಖವಾಗಿ ಬಾಳುತ್ತಿದ್ದಳು. ಅರಳಿ ನಳನಳಿಸಬೇಕಾಗಿದ್ದ ಹೂವೊಂದು ಧರ್ಮದ ಉರಿ ತಾಕಿ, ಬಾಡಿ ಬಸವಳಿದು ಸುಟ್ಟು ಕರಕಲಾಯಿತು.
(ಪ್ರಿಯ ಓದುಗರೇ, ನದೀಮೂಲ ಹುಡುಕಬಾರದೆಂದಿದ್ದರೂ, "ಚಂದ್ರಗಿರಿ' ಯ ಮೂಲವನ್ನು ಹುಡುಕಿದಿರಲ್ಲ? ಇದೋ ನೋಡಿ, ಇಲ್ಲಿದೆ “ಚಂದ್ರಗಿರಿ ತೀರ'ದ ಮೂಲ?) ಕೊನೆಗೂ ನನ್ನ ಪರೀಕ್ಷೆ ಮುಗಿಯಿತು. ಇಲ್ಲಿಗೆ ನನ್ನ ವಿದ್ಯೆಯ ಕೊನೆಯಾಯಿತು.
ಮನೆಯ ಹಿರಿಯರೆಲ್ಲರೂ ನಿಟ್ಟುಸಿರು ಬಿಟ್ಟರು. ಎಲ್ಲ ತಾಯಂದಿರೂ, ತಮ್ಮ ಮಕ್ಕಳು ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಲಿ ಎಂದು ಪ್ರಾರ್ಥಿಸುತ್ತಿದ್ದರೆ, ನನ್ನ ತಾಯಿ ಮಾತ್ರ ತನ್ನ ಮಗಳು ಫೈಲಾಗಿ ಮನೆಯಲ್ಲೇ ಕುಳಿತುಕೊಳ್ಳುವಂತಾಗಲಿ ಎಂದು ಮೊದಲೆಲ್ಲಾ ಪ್ರಾರ್ಥಿಸಿದ್ದರೂ ಏನೊ. ಆದರೆ ಈ ವರ್ಷ ಅವರು ಹಾಗೆ ಪ್ರಾರ್ಥಿಸಬೇಕಾದ ಅಗತ್ಯವಿರಲಿಲ್ಲ. ಅಂತೂ ಇನ್ನು ನಾನು ಬೀದಿಯಲ್ಲಿ ಘೋಷಾ ಇಲ್ಲದೆ ತಿರುಗಾಡಬೇಕಾಗಿಲ್ಲ ಎಂಬುದು ನನ್ನ ತಾಯಿಯ ಸಮಾಧಾನವಾಗಿತ್ತು ಇನ್ನು ತನ್ನ ಜನರ ಮಧ್ಯದಲ್ಲಿ ನಾನು ತಲೆ ಎತ್ತಿ ನಡೆಯುವಂತಾದೆನಲ್ಲ ಎಂಬ ಅರಿವಿನಿಂದ ಅವರು ತೃಪ್ತಿಯ ನಿಟ್ಟುಸಿರುಬಿಟ್ಟರು. .
ಅಜ್ಜ ಅಜ್ಜಿಯರಂತೂ ಹೆಣ್ಣು ಮಕ್ಕಳಿಲ್ಲದವರು. ನನ್ನ ಮದುವೆ ನೋಡದೆ ಸಾಯುವಂತಿಲ್ಲ. ಹೀಗಾಗಿ ಎಲ್ಲರೂ ನನ್ನ ವಿದ್ಯಾಭ್ಯಾಸದ ಈ ನಿಲುಗಡೆಗಾಗಿ ಕಾಯುತ್ತಿದ್ದರೇ ಹೊರತು, ಯಾರಿಗೂ ನನ್ನ ಪರೀಕ್ಷೆಯ ಫಲಿತಾಂಶದಲ್ಲಿಯಾಗಲಿ, ನಾನು ಪಡೆಯುವ ಅಂಕಗಳಲ್ಲಿಯಾಗಲಿ ಯಾವ ರೀತಿಯ ಆಸಕ್ತಿಯೂ ಇರಲಿಲ್ಲ. ನನ್ನ ತಂದೆಯ ಬಹು ದಿನದ ಕನಸೂ ನನಸಾಗಿತ್ತು. ತಮಗೆ ಮಗಳೊಬ್ಬಳು ಹುಟ್ಟಿ ಬೆಳೆದು ಮನೆತನದ ಹೆಸರಿಗೆ ಅಪಕೀರ್ತಿ ತರದೆ ಎಸ್.ಎಸ್.ಎಲ್.ಸಿ. ವರೆಗಿನ ಓದನ್ನು ಮುಗಿಸಿದ್ದಳು. ಮುಸ್ಲಿಂ ಸಮಾಜದ ಹೆಣ್ಣು ಮಕ್ಕಳು ವಿದ್ಯೆ ಕಲಿಯಲು ಇನ್ನು ಮುಂದೆ ಯಾವ ತೊಡಕೂ ಇಲ್ಲ. ನಿರಾತಂಕವಾಗಿ ಎಲ್ಲ ಹೆಣ್ಣು ಮಕ್ಕಳೂ ಇನ್ನು ವಿದ್ಯಾಭ್ಯಾಸ ಮಾಡುವರೆಂದೇ ಇವರು ತಿಳಿದಿದ್ದರು. ಹೆಣ್ಣು ಮಕ್ಕಳು ಮನೆಯಿಂದ ಹೊರಡಬಾರದು; ಗಂಡು ಮಕ್ಕಳಂತೆ ವಿದ್ಯೆ ಪಡೆಯಬಾರದೆಂದಿದ್ದ ಆ ಹಳೆಯ ಸಂಪ್ರದಾಯವನ್ನು ಮುರಿದು ಹೊಸತೊಂದು ಸಂಪ್ರದಾಯವನ್ನು ಸೃಷ್ಟಿಸಿದ ಹರ್ಷ, ತೃಪ್ತಿ ಅವರದಾಗಿತ್ತು.
ಆದರೆ ನಾನು ಶಾಲೆ ಬಿಟ್ಟ ಮೇಲೆ ನಮ್ಮ ಸಮಾಜದ ಒಂದಿಬ್ಬರು ಹೆಣ್ಣು ಮಕ್ಕಳು ತಮ್ಮ ವಿದ್ಯೆ ಮುಂದುವರಿಸುವ ಪ್ರಯತ್ನ ಮಾಡಿದರೂ, ಊರಿನ ಮುಸ್ಲಿಮರ ಕಿತಾಪತಿಯಿಂದ ತಮ್ಮ ವಿದ್ಯೆಯನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು. ಮುಂದಿನ 10 ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ.ಯನ್ನು ದಾಟಿದವಳು ಕೇವಲ ಒಬ್ಬಳು. ಇಂದು ಕೂಡಾ ಕಾಸರಗೋಡಿನಲ್ಲಿ ಪದವೀಧರರಾದ ಮುಸ್ಲಿಂ ಹೆಣ್ಣು ಮಕ್ಕಳು ಒಬ್ಬರೊ ಇಬ್ಬರೊ ಇರಬಹುದು. ಇವರೂ ಕೂಡಾ ನಮ್ಮೂರಿನ ಕಾಲೇಜಿನಲ್ಲಿ ಕಲಿಯುವಷ್ಟು ಧೈರ್ಯ ವಹಿಸಿಲ್ಲ. ಮಂಗಳೂರಿನ ಹಾಸ್ಟೆಲಿನಲ್ಲಿದ್ದು ಕಾಲೇಜಿನಲ್ಲಿ ಓದುವಂತಹ ಸಿರಿವಂತರಾಗಿದ್ದುದರಿಂದ ಮಾತ್ರ ಇವರು ಪದವಿ ಪಡೆಯಲು ಸಾಧ್ಯವಾಯಿತು.
ಊರಿನ ಮುಸ್ಲಿಂ ಪ್ರದೇಶದಲ್ಲಿ ಮುಸ್ಲಿಂ ಹೈಸ್ಕೂಲೊಂದಿದೆ. ಎರಡು ವರ್ಷದ ಕೆಳಗೆ, ಅಂದರೆ ಈ ಹೈಸ್ಕೂಲು ಸ್ಥಾಪನೆಯಾದ ಸುಮಾರು 35 ವರ್ಷಗಳ ಬಳಿಕ ಈ ಹೈಸ್ಕೂಲಿನಿಂದ ಮುಸ್ಲಿಂ ಹುಡುಗಿಯೊಬ್ಬಳು ಪ್ರಪ್ರಥಮ ಬಾರಿಗೆ ಎಸ್.ಎಸ್.ಎಲ್.ಸಿ. ತೇರ್ಗಡೆಯಾದಳು. ಸ್ಕೂಲಿಗೆಲ್ಲಾ ಪ್ರಥಮ ರ್ಯಾಂಕನ್ನೂ ಪಡೆದಿದ್ದಳು. ಆದರೆ ಫಲಿತಾಂಶ ಪ್ರಕಟವಾದಾಗ ಈ ಹೆಣ್ಣುಮಗಳು ತನ್ನ ಗಂಡನ ಜೊತೆಯಲ್ಲಿ ದುಬಾಯಿಯಲ್ಲಿದ್ದಳು ! 28 ವರ್ಷಗಳ ಕೆಳಗೆ ನಾನನುಭವಿಸಿದ ಆ ಪರಿಸ್ಥಿತಿ ಬದಲಾಗಿಯೇ ಇಲ್ಲ. ಹೆಣ್ಣುಮಕ್ಕಳಿಗೆ 18 ವರ್ಷವಾಗದೆ ಮದುವೆ ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು 21, ಆದರೆ ನಾನು ಶಾಲೆ ಬಿಟ್ಟ ಮೇಲೆ ನಮ್ಮ ಸಮಾಜದ ಒಂದಿಬ್ಬರು ಹೆಣ್ಣು ಮಕ್ಕಳು ತಮ್ಮ ವಿದ್ಯೆ ಮುಂದುವರಿಸುವ ಪ್ರಯತ್ನ ಮಾಡಿದರೂ, ಊರಿನ ಮುಸ್ಲಿಮರ ಕಿತಾಪತಿಯಿಂದ ತಮ್ಮ ವಿದ್ಯೆಯನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು. ಮುಂದಿನ 10 ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ.ಯನ್ನು ದಾಟಿದವಳು ಕೇವಲ ಒಬ್ಬಳು. ಇಂದು ಕೂಡಾ ಕಾಸರಗೋಡಿನಲ್ಲಿ ಪದವೀಧರರಾದ ಮುಸ್ಲಿಂ ಹೆಣ್ಣು ಮಕ್ಕಳು ಒಬ್ಬರೊ ಇಬ್ಬರೊ ಇರಬಹುದು. ಇವರೂ ಕೂಡಾ ನಮ್ಮೂರಿನ ಕಾಲೇಜಿನಲ್ಲಿ ಕಲಿಯುವಷ್ಟು ಧೈರ್ಯ ವಹಿಸಿಲ್ಲ. ಮಂಗಳೂರಿನ ಹಾಸ್ಟೆಲಿನಲ್ಲಿದ್ದು ಕಾಲೇಜಿನಲ್ಲಿ ಓದುವಂತಹ ಸಿರಿವಂತರಾಗಿದ್ದುದರಿಂದ ಮಾತ್ರ ಇವರು ಪದವಿ ಪಡೆಯಲು ಸಾಧ್ಯವಾಯಿತು.
ಊರಿನ ಮುಸ್ಲಿಂ ಪ್ರದೇಶದಲ್ಲಿ ಮುಸ್ಲಿಂ ಹೈಸ್ಕೂಲೊಂದಿದೆ. ಎರಡು ವರ್ಷದ ಕೆಳಗೆ, ಅಂದರೆ ಈ ಹೈಸ್ಕೂಲು ಸ್ಥಾಪನೆಯಾದ ಸುಮಾರು 35 ವರ್ಷಗಳ ಬಳಿಕ ಈ ಹೈಸ್ಕೂಲಿನಿಂದ ಮುಸ್ಲಿಂ ಹುಡುಗಿಯೊಬ್ಬಳು ಪ್ರಪ್ರಥಮ ಬಾರಿಗೆ ಎಸ್.ಎಸ್.ಎಲ್.ಸಿ. ತೇರ್ಗಡೆಯಾದಳು. ಸ್ಕೂಲಿಗೆಲ್ಲಾ ಪ್ರಥಮ ರ್ಯಾಂಕನ್ನೂ ಪಡೆದಿದ್ದಳು. ಆದರೆ ಫಲಿತಾಂಶ ಪ್ರಕಟವಾದಾಗ ಈ ಹೆಣ್ಣುಮಗಳು ತನ್ನ ಗಂಡನ ಜೊತೆಯಲ್ಲಿ ದುಬಾಯಿಯಲ್ಲಿದ್ದಳು ! 28 ವರ್ಷಗಳ ಕೆಳಗೆ ನಾನನುಭವಿಸಿದ ಆ ಪರಿಸ್ಥಿತಿ ಬದಲಾಗಿಯೇ ಇಲ್ಲ. ಹೆಣ್ಣುಮಕ್ಕಳಿಗೆ 18 ವರ್ಷವಾಗದೆ ಮದುವೆ ಮಾಡಬಾರದು ಎಂದು ಸರಕಾರ ಕಾನೂನು ಮಾಡಿದ್ದರೂ ಕಾಸರಗೋಡಿನಲ್ಲಿ ಈ ಕಾನೂನಿಗೆ ಯಾವ ಬೆಲೆಯೂ ಇಲ್ಲ. ಇಲ್ಲಿಯ ಮುಸ್ಲಿಂ ಸಮಾಜದ ಹೆಣ್ಣುಮಕ್ಕಳ ಮದುವೆಯ ವಯಸ್ಸು 14 ಅಥವಾ 15. ದೀಪ ಹಿಡಿದು ಹುಡುಕಿದರೂ ಮದುವೆಯಾಗದೆ, 18 ವರ್ಷದ ಮುಸ್ಲಿಂ ಹುಡುಗಿ ನಮ್ಮೂರಿನಲ್ಲಿ ಇರಲಾರಳು! ಮದುವೆಯೊಂದೇ ಅಂತಿಮ ಗುರಿಯಲ್ಲವೆಂದು ನಮ್ಮ ಈ ಹೆಣ್ಣುಮಕ್ಕಳ ಹೆತ್ತವರು ತಿಳಿಯುವ ಕಾಲ ಎಂದಾದರೂ ಬರಬಹುದೇ? ತಮ್ಮ ಹೆಂಗಸರಿಗೆ ಖಾಯಿಲೆಯಾದರೆ ಮಹಿಳಾ *ವೈದ್ಯೆಯರನ್ನೇ ಹುಡುಕಿಕೊಂಡು ಹೋಗುವ ನಮ್ಮ ಗಂಡಸರು ತಮ್ಮ ಹೆಣ್ಣು ಮಕ್ಕಳನ್ನು ಹೈಸ್ಕೂಲಿಗೂ ಕಳುಹಿಸಲು ಒಪ್ಪವುದಿಲ್ಲ! ಮ್ಯಾಡಂ ಕ್ಯೂರಿ, ಕ್ರಿಸ್ ಎವರ್ಟ್ ಅಥವಾ ವ್ಯಾಲೆಂಟೀನಾ ಆಗದಿದ್ದರೆ ಹೋಗಲಿ, "ಮಿಲ್ಸ್ ಎಂಡ್ ಬೂನ್' ಲೇಖಕಿಯರಂತಾದರೂ ಆಗಲು ನಮ್ಮ ಈ ಹೆಣ್ಣು ಮಕ್ಕಳು ಎಂದಾದರೂ ಪ್ರಯತ್ನಿಸುವರೇ ? ಅಜ್ಞಾನದ ಕತ್ತಲ ಗುಹೆಯಿಂದ ಅವರು ಎಂದಾದರೂ ಹೊರಬರಲು ಸಾಧ್ಯವೇ? ನಾನು ಕೆಲವೊಮ್ಮೆ ದೀರ್ಫವಾಗಿ ಯೋಚಿಸುತ್ತೇನೆ.
ನನ್ನ ಭವಿಷ್ಯವೇನೆಂದು ನನಗೆ ಮನದಟ್ಟಾಗಿದ್ದುದರಿಂದ ನಾನು ಪರೀಕ್ಷೆಗಾಗಿ ಅಂತಹ ವಿಶೇಷ ಶ್ರಮವನ್ನೇನೂ ವಹಿಸಲಿಲ್ಲ. ಶಾಲೆಯ ಕೊನೆಯ ದಿನದವರೆಗೂ ಆಟದ ಮೈದಾನ ನನ್ನನ್ನಾಕರ್ಷಿಸುತ್ತಿತ್ತು. ಪುಸ್ತಕ ಭಂಡಾರ ನನ್ನನ್ನು ಸೆಳೆಯುತ್ತಿತ್ತು. ಆದರೂ ಫಲಿತಾಂಶ ಬಂದಾಗ ನಮ್ಮ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಕೆಲವರಲ್ಲಿ ನಾನೂ ಒಬ್ಬಳಾಗಿದ್ದೆ. ಆದರೆ ಇದನ್ನು ತಿಳಿದು ನನಗೇನೂ ಸಂತೋಷವಾಗಲಿಲ್ಲ. ನನ್ನ ಮುಂದಿನ ಜೀವನದಲ್ಲಿ ಈ ತೇರ್ಗಡೆಗಾಗಲಿ, ಈ ಅಂಕಗಳಿಗಾಗಲಿ ಯಾವ ಬೆಲೆಯೂ ಇಲ್ಲವೆಂದು ನನಗೆ ಗೊತ್ತಿತ್ತು. ಎಷ್ಟು ಮುಡಿ ಅಕ್ಕಿಯ ಆಸ್ಲಿ ಅಥವಾ ಎಷ್ಟು ಎಕರೆ ಅಡಿಕೆ ತೋಟ ನನ್ನ ಹೆಸರಿನಲ್ಲಿದೆ ಎಂದು ಕೇಳುವರೇ ಹೊರತು ಕನ್ನಡದಲ್ಲಿ ಅಥವಾ ಲೆಕ್ಕದಲ್ಲಿ ಎಷ್ಟು ಅಂಕ ಪಡೆದಿದ್ದಾಳೆ ಎಂದು ಯಾರೂ ಕೇಳಲಾರರು ಎಂದು ನನಗೆ ಚೆನ್ನಾಗಿ ಗೊತ್ತು. ನನ್ನ ಎಸ್.ಎಸ್.ಎಲ್.ಸಿ. ಸರ್ಟಿಫಿಕೇಟನ್ನು ನನ್ನಣ್ಣ ತಂದು ನನ್ನ ಕೈಯಲ್ಲಿಟ್ಟು ನನ್ನೊಡನೆ, “ಯಾಕಮ್ಮ ಇಷ್ಟು ಮಾರ್ಕು ಪಡೆದೆ?'' ಎಂದು ಕೇಳಿ ಮುಂದೆ ಮಾತಿಗವಕಾಶ ಕೊಡದೆ ಮುಖ ತಿರುಗಿಸಿಕೊಂಡು ಅಲ್ಲಿಂದ ಹೋದಾಗ ನನಗೆ ಗೊತ್ತಿತ್ತು. ಆತನ ಕಣ್ಣ ಕೊನೆಯಲ್ಲಿ ನೀರು ನಿಂತಿತ್ತು ಎಂದು. ನಾನು ಅದನ್ನು ತೆಗೆದು ಪುಟಗಳನ್ನು ತಿರುಗಿಸಿ ನೋಡಿ ವಿಷಾದದಿಂದ ಒಂದು ಮೂಲೆಯಲ್ಲಿಟ್ಟೆ.
ಮುಂದೆ ಕೆಲವೇ ತಿಂಗಳುಗಳಲ್ಲಿ ನನ್ನ ದೊಡ್ಡಣ್ಣನನ್ನು ನಾನು ಎಂದೆಂದಿಗೂ ಕಳೆದುಕೊಂಡಾಗ - ನಮಗೆ ಕೊನೆಯ ವಿದಾಯವನ್ನೂ ಹೇಳದೆ ಇವನು ನಮ್ಮನ್ನಗಲಿ ಕಣದರೆಯಾದಾಗ, ತಾಯಿಹಸುವನ್ನು ಕಳೆದುಕೊಂಡ ತಬ್ಬಲಿ ಕರು ನಾನಾಗಿದ್ದೆ. ದೊಡ್ಡಣ್ಣನನ್ನು ಕಳೆದುಕೊಂಡೆವೆಂದು ಊರಿಗೆ ಊರೇ ಗೋಳಿಟ್ಟಿತು; ಮುಸ್ಲಿಮರಿಗಿಂತ ಹೆಚ್ಚು ಕಣ್ಣೀರು ಸುರಿಸಿದವರು ಹಿಂದುಗಳಾಗಿದ್ದರು. ನನ್ನ ಬಾಳಿನ ಧ್ರುವತಾರೆಯಾಗಿ ಮಿನುಗಿ, ದಿಕ್ಕುತಪ್ಪಿದಾಗ ನನಗೆ ದಿಕ್ಕು ತೋರಿಸುತ್ತಿದ್ದ ನಕ್ಟತ್ರವೊಂದು ಕೊನೆಯ ಬಾರಿಗೆ ಅಸ್ತಮಿಸಿ, ನನ್ನನ್ನು ಅನಾಥಳನ್ನಾಗಿ ಮಾಡಿತ್ತು. ಊರಿನಲ್ಲಿದ್ದಾಗ ಒಂದು ಕ್ಷಣವೂ ನನ್ನನ್ನಗಲಿರಲಾರದ ಅಣ್ಣ ನನಗೊಂದು ಕೊನೆಯ ವಿದಾಯವನ್ನೂ ಹೇಳದೆ ಅಗಲಿದನಲ್ಲ ಎಂದು ಕಣ್ಣೊರೆಸಿಕೊಳ್ಳುತ್ತೇನೆ. ನನ್ನ ಬಾಳಿನಲ್ಲಿ, ಅದೇ ಆಗ, ಹೊಸಬರೊಬ್ಬರ ಪ್ರವೇಶವಾಗಿತ್ತು. ಎಂದೇ ನಾನಾಗ ಈ ದುಃಖವನ್ನು, ನೋವನ್ನು, ನುಂಗಿಕೊಳ್ಳುವುದು ಸಾಧ್ಯವಾಯಿತು. ಹೃದಯದ ಮಧ್ಯಭಾಗದಲ್ಲಿ ತೂಗು ಹಾಕಿದ ಈ ದೊಡ್ಡಣ್ಣನ ಚಿತ್ರದೊಡನೆ ಒಮ್ಮೊಮ್ಮೆ ಕೇಳುತ್ತೇನೆ.
“ಯಾಕಣ್ಣ ಹೀಗೆ ಮಾಡಿದೆ ? ನನಗೆ, ತಂದೆ ತಾಯಿಗೆ, ನಿನ್ನನ್ನು ನಂಬಿದ ಇಡೀ ಊರವರಿಗೆಲ್ಲಾ ಯಾವ ಮುನ್ಸೂಚನೆಯೂ ಇಲ್ಲದೆ ಕೈಕೊಟ್ಟು ಕಣ್ಮರೆಯಾದೆಯಲ್ಲ? ನಾವೇನು ತಪ್ಪು ಮಾಡಿದ್ದೇವೆ? ನನ್ನನ್ನು ಬಿಟ್ಟು ಹೋಗುವುದು ನಿನಗೆ ಅಷ್ಟು ಸುಲಭವಾಯಿತೇ ? ಕಡು ಸುವಾಸನೆಯನ್ನು ಬೀರುವ ಕೆಂಡ ಸಂಪಿಗೆಯ ಹೂವು ನನಗಿಷ್ಟವೆಂದು ನನಗಾಗಿ ಅದರ ಗಿಡವನ್ನು ತಂದು ಅಂಗಳದಲ್ಲಿ ನೆಟ್ಟೆಯಲ್ಲ? ಅದರಲ್ಲಿ ಹೂ ಬಿಟ್ಟಾಗ ಅದನ್ನು ಕಿತ್ತು ತಂದು ನನ್ನ ಮುಡಿಯಲ್ಲಿ ಮುಡಿಸಲು ಆಮೇಲೆಂದೂ ನೀನು ಬರಲೇ ಇಲ್ಲವಲ್ಲ? ನಾವಿನ್ನು ಎಲ್ಲಿ ಭೇಟಿಯಾಗೋಣ ? ಕೊನೆಯ ದಿನವೇ? ಒಳಿತು ಕೆಡುಕುಗಳನ್ನು ತೂಕ ಮಾಡುವ ತಕ್ಕಡಿಯ ಬಳಿಯೇ ? ಅಥವಾ ಸ್ವರ್ಗಕ್ಕೆ ಹೋಗುವ ಸೇತುವೆಯ ಬಳಿಯೇ ?'' ಎಂದೆಲ್ಲ ಕೇಳುತ್ತೇನೆ. ಏನೇನೊ ಹುಚ್ಚು ಹುಚ್ಚು ಯೋಚನೆಗಳು ತಲೆಯೊಳಗೆ ಬರುತ್ತವೆ. ತುಟಿಯ ಕೊನೆಯಲ್ಲಿ ನೋವಿನ ನಗುವೊಂದು ಸುಳಿಯುತ್ತದೆ.
ಆ ಕಣ್ಣೀರು ಬತ್ತುತ್ತಾ ಬಂತು; ಇನ್ನೇನು ಹೃದಯದ ಗಾಯ ಮಾಗಿತು ಎನ್ನುವಾಗ ಭೀಕರವಾದ ಇನ್ನೊಂದು ಸಿಡಿಲು ಬಡಿಯಿತು. ಮಾತೃಭೂಮಿಯ ರಕ್ಷಣೆಗಾಗಿ ನನ್ನ ಕೊನೆಯ ತಮ್ಮನೂ ಪ್ರಾಣವನ್ನರ್ಪಿಸಿದನು.
1965 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಪ್ರಾರಂಭವಾದಾಗ, ಉತ್ತಮ ಸೇನಾಧಿಕಾರಿಯೊಬ್ಬನನ್ನು ಅಷ್ಟು. ಸುಲಭದಲ್ಲಿ ಕಳೆದುಕೊಳ್ಳಲಿಷ್ಟವಿಲ್ಲದ ಮೇಲಧಿಕಾರಿಯೊಬ್ಬರು ತನ್ನನ್ನು ದೆಹಲಿಗೆ ವರ್ಗಾಯಿಸಿದಾಗ, “ನಾನು ಸೇನೆಗೆ ಸೇರಿರುವುದು ತಾಯ್ನಾಡಿನ ರಕ್ಷಣೆಗಾಗಿ, ದೆಹಲಿಯಲ್ಲಿ ಅಡಗಿರುವುದಕ್ಕಲ್ಲ ನೀವು ಈಗ ನನ್ನನ್ನು ಗಡಿನಾಡಿಗೆ ವರ್ಗಮಾಡದೆ ಹೋದರೆ, ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ತೀಕರಿಸಿ'' ಎಂದು ಕೆಚ್ಚಿನಿಂದ ನುಡಿದು, ಮೇಲಧಿಕಾರಿಯ ಮೆಚ್ಚುಗೆ, ಒಪ್ಪಿಗೆ ಪಡೆದು ರಣರಂಗಕ್ಕೆ ಧುಮುಕಿ ಕೆಲವೇ ದಿನಗಳಲ್ಲಿ ಕಣ್ಮರೆಯಾದನು. ಅತ್ತು ಅತ್ತು ಕಣ್ಣೀರು ಬತ್ತಿ ಹೃದಯವೊಂದು ಮರುಭೂಮಿಯಾಯಿತು. ಆ ಅಣ್ಣನ ಪಾರ್ಥಿವ ಶರೀರವನ್ನು ಮದ್ರಾಸಿನಿಂದ ಊರಿಗೆ ತಂದು ಅದಕ್ಕೊಂದು ನಮಸ್ಕಾರವನ್ನಾದರೂ ಹೇಳುವುದು ನಮ್ಮಿಂದ ಅಸಾಧ್ಯವಾಯಿತು. ಭಾರತಮಾತೆಯ ರಕ್ಷಣೆಗಾಗಿ ಗಡಿನಾಡಿಗೆ ಹೋದ ತಮ್ಮನು ಎಲ್ಲಿ, ಯಾವಾಗ ಕೊನೆಯುಸಿರೆಳೆದನೆಂದು ತಿಳಿಯದೆ ಅವನ ಪಾರ್ಥೀವ ಶರೀರಕ್ಕಾದರೂ ಕೊನೆಯ ವಿದಾಯವನ್ನು ಹೇಳುವ ಭಾಗ್ಯ ನನಗಿಲ್ಲದೆ ಹೋಯಿತು.
ಇಂದು ಕೆಲವೊಮ್ಮೆ ಒಂಟಿಯಾಗಿದ್ದಾಗ, ಅಳಿದ ಈ ಸಹೋದರರ ಚಿತ್ರ ಕಣ್ಮುಂದೆ ಬರುತ್ತದೆ. ಅತ್ತಾಗ ಕಣ್ಣೊರೆಸಿ, ಎದೆಗುಂದಿದಾಗ ಹುರಿದುಂಬಿಸಿ, ಧೈರ್ಯ ತುಂಬಿ, ಮುಖ ಬಾಡಿದಾಗ ಬೆನ್ನು ತಟ್ಟಿ ನಗಿಸುತ್ತಿದ್ದ ನನ್ನಣ್ಣ ನನ್ನನ್ನು ಬಿಟ್ಟು ಅಗಲಿದನೆಂದರೆ, ಇಂದಿಗೂ ಕೆಲವೊಮ್ಮೆ ನಂಬಲಾರದ ಒಂದು ಸ್ಥಿತಿ ನನ್ನದಾಗುತ್ತದೆ. ಸುರುಗಿ ಹೂವನ್ನು ಪೈಪೋಟಿಯಿಂದ ನನಗಾಗಿ ಕಿತ್ತು ತರುತ್ತಿದ್ದ ಅಣ್ಣಂದಿರೆಲ್ಲರೂ ನೆನಪಾಗುತ್ತಾರೆ. ಒಂದು ಕ್ಷಣ ಹೊಡೆದಾಡಿ ಮರುಕ್ಷಣವೇ “ಬಾ ಅಕ್ಕ, ಪೇರಳೆ ಹಣ್ಣು ಕಿತ್ತುಕೊಡು'' ಎಂದು ಹಿಂದೆಯೇ ಓಡಿ ಬರುವ ತಮ್ಮಂದಿರು ನೆನಪಿನಲ್ಲಿ ಸುಳಿಯುತ್ತಾರೆ. ತಾನು ನೆಟ್ಟು ಬೆಳೆಸಿದ ವಿವಿಧ ಹೂಗಿಡಗಳ ಮಧ್ಯದಲ್ಲಿ ನನ್ನನ್ನು ನಿಲ್ಲಿಸಿ ವಿವಿಧ ಭಂಗಿಗಳಲ್ಲಿ ನನ್ನ ಫೋಟೋ ತೆಗೆಯುತ್ತಿದ್ದ ಈ ದೊಡ್ಮಣ್ಣನ ನೆನಪಾಗುತ್ತದೆ. ಅಂಬೆಗಾಲಿಕ್ಕುತ್ತ ಬಂದು ನನ್ನ ತಲೆಯಿಂದ ಹೂ ಕಿತ್ತು ತನ್ನ ಬಾಯೊಳಗೆ ತುರುಕಿಕೊಂಡ ತಮ್ಮನೂ ನೆನಪಾಗುತ್ತಾನೆ. ಹಿಂದುಗಳ ಮನೆಯಲ್ಲಿ ಕುಳಿತು ಖುರ್‌ಆನ್ ಓದಿದ ತಾಯಿಯೂ ನೆನಪಾಗುತ್ತಾರೆ. ಹೃದಯದ ಅಂತರಾಳದಲ್ಲಿ ನೋವಿನ ಬುಗ್ಗೆಯೊಂದು ಚಿಮ್ಮಿ ಕಣ್ಣೀರ ಕಾಲುವೆಯಾಗಿ ಹರಿಯುತ್ತದೆ.
ಯಾರಿಗಾಗಿ ಈ ಕಣ್ಣೀರು? ಅಳಿದ ಸಹೋದರರಿಗಾಗಿಯೇ ಅಥವಾ ಬಾಳಿನ ಸಂಧ್ಯೆಯಲ್ಲಿ ಆಸರೆಯಾಗಬೇಕಾಗಿದ್ದ ಗಂಡು ಮಕ್ಕಳನ್ನು ಕಳೆದುಕೊಂಡು, ಊರು ಗೋಲಾಗಿದ್ದ ಪತ್ನಿಯನ್ನು ಕಳೆದುಕೊಂಡು, ಒಂದು ಕಾಲನ್ನೂ ಕಳೆದುಕೊಂಡರೂ ಎಲ್ಲವನ್ನೂ ಧೈರ್ಯದಿಂದ ಎದುರಿಸಿ, ನಗುಮುಖದಿಂದ, "ಸಾರಾ, ಇಲ್ಲಿಂದ ಗಂಟು ಮೂಟೆ ಕಟ್ಟಿ ಹೊರಡುವುದಕ್ಕೆ ಮೊದಲು ನಿನ್ನ ಮಗನ ಮದುವೆ ನೋಡಬೇಕು,”' ಎಂದು ನನ್ನೊಡನೆ ತಮ್ಮ ಆಶಯವನ್ನು ವ್ಯಕ್ತಪಡಿಸುತ್ತಿರುವ, ಹಗಲಿರುಳೂ ಪುಸ್ತಕಗಳೇ ಸಂಗಾತಿಗಳಾಗಿ ಕಾಲ ಕಳೆಯುತ್ತಿರುವ, ನನ್ನ ಪ್ರೀತಿ ಪಾತ್ರರಾದ ತಂದೆಗಾಗಿಯೇ ಎಂದು ನನಗೆ ಅರ್ಥವಾಗುವುದಿಲ್ಲ. ತಂದೆ ಈ ಮಾತನ್ನೆಂದಾಗ ಒಂದು ಕ್ಷಣ ಕರುಳು "ಚುರುಕ್' ಎನ್ನುತ್ತದೆ. ಮರುಕ್ಟಣವೇ ಒಂದಲ್ಲ ಒಂದು ದಿನ ನಾನು ಕೂಡಾ ಗಂಟು ಮೂಟೆ ಕಟ್ಟಿಕೊಂಡು ಹೊರಡುವವಳೇ ಎಂದು ನೆನೆದಾಗ ಹೃದಯದ ಭಾರ ತುಸು ಕಮ್ಮಿಯಾಗುತ್ತದೆ. ಮುಸ್ಸಂಜೆಯ ನಮಾಜಿನ ವೇಳ ಮೀರುತ್ತಾ ಬಂದಿದ್ದರೂ ಹೊತ್ತಿನ ಪರಿವೆ ಇಲ್ಲದೆ ಹೀಗೆಯೇ ಮಲಗಿರುತ್ತೇನೆ. ದೂರವಾಣಿಯ ಗಂಟೆ ಬಾರಿಸುತ್ತದೆ.
ನೆನಪಿನ ಭಿತ್ತಿಯ ಮೇಲೆ ದಪ್ಪವಾದ ಪರದೆಯೊಂದನ್ನೆಳೆಯುತ್ತೇನೆ. ಮನೆಯಲ್ಲಿ ತುಂಬಿದ ಕತ್ತಲೆಯನ್ನೋಡಿಸಲು ದೀಪದ ಗುಂಡಿಯನ್ನೊತ್ತಿ ದೂರವಾಣಿಯನ್ನು ಕೈಗೆತ್ತಿಕೊಳ್ಳುತ್ತೇನೆ. “ಹಲೋ, ಯಾರು ? ಉಮ್ಮ? ಹೇಗಿದ್ದೀರಿ? ಚೆನ್ನಾಗಿದ್ದೀರಾ ಸ
ಸಾಗರದಾಚೆಯಿಂದ ಮಗನ ದನಿ ಕೇಳಿ ಬಂದಾಗ ಹೃದಯ ಹೂವಾಗಿ ಅರಳುತ್ತದೆ. ಅಮಾವಾಸ್ಯೆಯ ಕತ್ತಲನ್ನೋಡಿಸಿ ಹುಣ್ಣಿಮೆಯ ಚಂದ್ರನು ಮೂಡುತ್ತಾನೆ.
“ಉಮ್ಮ ಇಲ್ಲಿಂದ ಬರುವಾಗ ಬಣ್ಣದ ಟಿ.ವಿ. ತರಲೇ ? ಯಾವ ಕಂಪೆನಿಯ ಗ್ರೈಂಡರ್ ಬೇಕು ?'' ಮಗನ ನಗುಮುಖ ಕಣ್ಣೆದುರು ಸುಳಿಯುತ್ತದೆ. "ಏನೂ ತರದಿದ್ದರೂ ಪರವಾಗಿಲ್ಲ. ನೀನು ಬಂದು ಒಮ್ಮೆ ಮುಖ ತೋರಿಸು. ಆಗಲೇ ವರ್ಷವಾಗುತ್ತ ಬಂತಲ್ಲ ನೀನು ಹೋಗಿ ?'' ಎನ್ನುತ್ತೇನೆ. ಯಾರಿಂದಲೂ ಕೆಟ್ಟವರೆನಿಸಿಕೊಳ್ಳದೆ, ಅರಳಿದ ಮುಖದಿಂದ ಬಂದು ತಾಯಿಯ ಮುಂದೆ ನಿಂತು, "ಉಮ್ಮ ನಾನು ಸುಖವಾಗಿದ್ದೇನೆ,'' ಎಂದು ಹೇಳುವುದೇ ಮಕ್ಕಳು ತಾಯಿಗೆ ನೀಡುವ ಬಹುದೊಡ್ಡ ಬಹುಮಾನ ಎಂದು ಈ ಮಕ್ಕಳಿಗೆ ತಿಳಿಯದೆ ? “ಉಮ್ಮ ನಿಮ್ಮ ಕತೆಯನ್ನು ಸಿನಿಮಾ ಮಾಡುತ್ತಾರೆಂದು ಹೇಳಿದೆಯಲ್ಲ? ಎಲ್ಲಿಗೆ ಬಂತು? ಚಿತ್ರೀಕರಣ ಆರಂಭವಾಯಿತೇ ? ಚಂದ್ರಗಿರಿಯ ತೀರದಲ್ಲಿ ವಾಸಿಸುವವರು ಇಲ್ಲೆಲ್ಲ ಇದ್ದಾರಲ್ಲ? ಕತೆಯಲ್ಲಿ ನಮ್ಮನ್ನೆಲ್ಲ ಸೇರಿಸಿದ್ದಾರೆಯೆ? ಎಂದು ಅವರೆಲ್ಲಾ ಕೇಳುತ್ತಿದ್ದಾರೆ. ಲಂಕೇಶ್ ಅವರು ಮಾಡಿದ ಚಿತ್ರವಾದರೆ ಒಂದೆರಡು ಬಾರಿ ನೋಡಬಹುದು'' ಎಂದೆಲ್ಲಾ ಹೇಳುತ್ತಾನೆ. “ಹೌದಪ್ಪ, ನಾನೂ ಹಾಗೆಯೇ ಅಂದುಕೊಂಡಿದ್ದೇನೆ. ಅದಕ್ಕಾಗಿಯೇ ಅವರು ಕೇಳಿದ ತಕ್ಷಣ ಒಪ್ಪಿದೆ,'' ಎಂದು ಮಾತು ಮುಂದುವರಿಸುತ್ತಾ “ನೀನು ಯಾವಾಗ ಬರುತ್ತೀ ? ಬಂದು ಜೀವನದ ಜೊತೆಗಾತಿಯೊಬ್ಬಳನ್ನು ಆರಿಸಿಕೊಂಡು ಜೊತೆಯಲ್ಲೇ ಕರೆದುಕೊಂಡು ಹೋಗು” ಎನ್ನುತ್ತಾ ದೂರವಾಣಿಯನ್ನು ಕೆಳಗಿಡುತ್ತೇನೆ.
ಏನು, ಆಗಲೇ ಸೊಸೆಯನ್ನು ಹೊರಹಾಕುವ ಯೋಚನೆಯೇ ಎಂದು ಯಾರಾದರೂ ಕೇಳುತ್ತೀರಾ ? ಇಲ್ಲ. ಇಂತಹ ಕೆಲಸವೆಲ್ಲ ನಮ್ಮ ಪ್ರಧಾನಿಗೇ ಇರಲಿ. ಸೂಸೆಯೊಬ್ಬಳನ್ನು ತಂದು ಮಗಳಾಗಿ ಮನೆಯೊಳಗಿಟ್ಟುಕೊಳ್ಳಲು, ಹಬ್ಬದ ದಿನ ಹೆಣ್ಣು. ಮಗಳೊಬ್ಬಳು ಬಣ್ಣದ ಸೀರೆಯುಟ್ಟು ಮನೆ ತುಂಬ ಓಡಾಡುವುದನ್ನು ಕಾಣಲು ಹೃದಯ ಕಾತರಿಸುತ್ತಿದ್ದರೂ, ಅದಕ್ಕಿಂತಲೂ ಹೆಚ್ಚಾಗಿ ಆಕೆ ಮಗನ ಬಳಿ ಇದ್ದು ಇವನ ಮನೆ, ಮನವನ್ನು ಬೆಳಗಲಿ ಎಂದು ಆಶಿಸುತ್ತೇನೆ.
ಬಾಗಿಲ ಕರೆಗಂಟೆ ಬಾರಿಸುತ್ತದೆ. ಹೋಗಿ ಬಾಗಿಲು ತೆರೆಯುತ್ತೇನೆ. ಮುಖ ನೋಡಿ ಹೃದಯದ ಅಲೆಗಳನ್ನು ಗುರುತಿಸುತ್ತಾ, "ಮಗನು ಫೋನು ಮಾಡಿದನೇ?'' ಎಂದು ಕೇಳುತ್ತಾ ಒಳಬರುತ್ತಾರೆ ಬಾಳಸಂಗಾತಿ. ಮಗನ ನೆನಪಿನಿಂದ ಅವರ ಮುಖವೂ ಅರಳುತ್ತದೆ.
ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು. ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ.
ಎಂಜನಿಯರ್ ಆಗಿದ್ದ ಅಬೂಬಕ್ಕರ್ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾ ಅವರಲ್ಲಿ ಆಕರ್ಷಣೆ ಹುಟ್ಟಿಸಿದವು.
ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್ ಅವರ ಕಾದಂಬರಿಗಳ ಓದಿನ ಪ್ರಭಾವದಿಂದ ಅವರಲ್ಲಿ ಬರೆಯಬೇಕೆಂಬ ಅಂತರಾಳದ ಒತ್ತಡ ನಿರಂತರವಾಗಿ ಹೊರಹೊಮ್ಮುತ್ತಿತ್ತು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ ಎಂ.ಕೆ.ಇಂದಿರಾ ಅವರಂತೆ ನಲವತ್ತು ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ಧ್ವನಿಗಳು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಈ ಕಾದಂಬರಿ ಎಲ್ಲೆಡೆಯಿಂದ ಮೆಚ್ಚುಗೆ ಪಡೆಯಿತು.
ಆ ನಂತರದಲ್ಲಿ ಸಾರಾ ಅವರು ಬರೆದ ಇತರ ಹಲವಾರು ಕಾದಂಬರಿಗಳೆಂದರೆ ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-೨), ತಳ ಒಡೆದ ದೋಣಿ, ಪಂಜರ ಮುಂತಾದವು.
ಸಾರಾ ಅಬೂಬಕ್ಕರ್ ಅವರ ಕಥಾ ಸಂಕಲನಗಳು-ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ ಮುಂತಾದವು. ಬಾನುಲಿ ನಾಟಕಗಳು-ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಮುಂತಾದುವು.ಲೇಖನ ಮತ್ತು ಅನುವಾದಗಳು-ಲೇಖನ ಗುಚ್ಛ, ಮನೋಮಿ, ಬಲೆ, ನಾನಿನ್ನು ನಿದ್ರಿಸುವೆ (ಕಾದಂಬರಿಗಳು).
ಸಾರಾ ಅಬೂಬಕ್ಕರ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.
ಜನವರಿ 10, 2023ರಂದು ನಿಧನರಾದರು.
More About Author