ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು.
ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ವಿಮರ್ಶಾ ಕೃತಿ ಅಧ್ಯಯನಕ್ಕೆ 1987ರಲ್ಲಿ ಹಾಗೂ ಅಮೂರ್ತತೆ ಮತ್ತು ಪರಿಸರ (ವಿಮರ್ಶೆ-2003) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ.
ದೇಶೀವಾದ (1989), ಬೇಂದ್ರೆ ಕಾವ್ಯ ಸಂಪ್ರದಾಯ ಮತ್ತು ಸ್ವಂತಿಕೆ (1989), ಸಾಹಿತ್ಯ ವಿಮರ್ಶೆ (ಸಂಪಾದಿತ ಕೃತಿ-1989), ಮಾಸ್ತಿ ಕತೆಗಳು: ಒಂದು ಅಧ್ಯಯನ(1991), ದೊಡ್ಡ ಮರ (ಕಥಾ ಸಂಕಲನ-1991), ಕರುಳ ಬಳ್ಳಿಯ ಸೊಲ್ಲು (2011) ನಡುಹಗಲಿನಲ್ಲಿ ಕಂದೀಲುಗಳು (ವಿಮರ್ಶೆ -2004), ಜಾಗತೀಕರಣ: ಒಂದು ಸಮಗ್ರ ಮಂಥನ (ಎಸ್.ಸಿರಾಜ್ ಅಹಮದ್ ಅವರೊಂದಿಗೆ ಸಂಪಾದಿತ) (2014), ಮಳೆಯಲ್ಲಿ ಬಂದಾತ (ಕಥಾ ಸಂಕಲನ-1999), ಇಂಗ್ಲಿಶ್: ಸ್ಟೀಕಿಂಗ್ ಫಾರ್ ಸಮ್‌ಒನ್ (ವಿಮರ್ಶೆ- 2004, ಆಫ್ ಮೆನಿ ವಲ್ಡ್೯ (ವಿಮರ್ಶೆ- 2007), ಮಡ್ ಟೌನ್ (ಕಾದಂಬರಿ-2007), ಟ್ರೆಡಿಷನ್ಸ್ ಆಫ್ ಮಾಡರ್ನಿಟಿ: ಎ ಕಂಪಾರೇಟೀವ್ ಸ್ಟಡಿಸ್ ಆಫ್ ಟಿ.ಎಸ್. ಎಲಿಯೆಟ್ ಆಂಡ್ ಗೋಪಾಲಕೃಷ್ಣ ಅಡಿಗ (2011) ಇವರ ಪ್ರಮುಖ ಕೃತಿಗಳಾಗಿವೆ.
--