About the Author

ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ.  ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ಶಿಕ್ಷಣ ಪಡೆದರು. ರಾಸಾಯನಿಕ ತಂತ್ರವಿಜ್ಞಾನದಲ್ಲಿ ಉಚ್ಚ ಶಿಕ್ಷಣವನ್ನು ಅಮೆರಿಕದ ನ್ಯೂಜರ್ಸಿಯಲ್ಲಿ ಪಡೆದರು.  ಈ ತಂತ್ರವಿಜ್ಞಾನದ ಶಾಖೆಯಾದ ಪೊಲಿಮರ್ ಟೆಕ್ನಾಲಜಿಯಲ್ಲಿ ವಿಶೇಷ ಪರಿಣತಿ, ಮನ್ನಣೆಗಳನ್ನು ಅವರು ಪಡೆದರು.

ಉಪಜೀವನಕ್ಕಾಗಿ ಮುಂಬೈ ಸೇರಿದ ಚಿತ್ತಾಲರು ತಮ್ಮ ಬಹುಪಾಲು ಕತೆ ಕಾದಂಬರಿಗಳನ್ನು ಕನ್ನಡ ನಾಡಿನ ಹೊರಗಿದ್ದೇ ಬರೆದಿದ್ದಾರೆ. ಹುಟ್ಟೂರು ಹನೇಹಳ್ಳಿ, ಕರ್ಮಭೂಮಿ ಮುಂಬೈ ದಟ್ಟವಾಗಿ ಅವರ ಕತೆ, ಕಾದಂಬರಿಗಳ ವಸ್ತು. ಕತೆಗಳ ಜೊತೆಯಲ್ಲಿ ಕಾದಂಬರಿಗಳ ರಚಿಸಿದ ಚಿತ್ತಾಲರ ಪ್ರಮುಖ ಕಾದಂಬರಿ 'ಶಿಕಾರಿ'. ಆಧುನಿಕ ಜಗತ್ತಿನ ಕ್ರೌರ್ಯವನ್ನು ತಣ್ಣಗೆ ಬಿಂಬಿಸುವ ಶಿಕಾರಿಯು ಪತ್ತೆದಾರಿ ಶೈಲಿಯ ಕಾದಂಬರಿಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ.

'ಚಿತ್ತಾಲ’ರ ಮುದ್ರೆ ಇರುವ ಅವರ ಬರವಣಿಗೆಯು ಕತೆ ಕಾದಂಬರಿಗಳಿಗೆ ಮಾತ್ರವಲ್ಲ. ಅವರ ಪ್ರಬಂಧ, ಲಬಸಾ (ಲಯಬದ್ದ ಸಾಲುಗಳು) ಕವಿತೆಗಳಲ್ಲಿಯೂ ಹರಡಿದೆ.  ಚಿತ್ತಾಲರ ಕತೆಯಂತಹ ಪ್ರಬಂಧಗಳು ಅಥವಾ ಪ್ರಬಂಧದಂತಹ ಕತೆಗಳು ವಿಶಿಷ್ಟ ಪ್ರಯೋಗ. 'ಸಾಹಿತ್ಯ, ಸೃಜನಶೀಲತೆ ಮತ್ತು ನಾನು', ’ಸಾಹಿತ್ಯದ ಸಪ್ತ ಧಾತುಗಳು' ಮತ್ತು 'ಅಂತಃಕರಣ' ಅವರ ಪ್ರಬಂಧ ಸಂಕಲನಗಳು. 'ಸಂದರ್ಶನ', 'ಆಬೋಲಿನ', 'ಆಟ', 'ಕತೆಯಾದಳು ಹುಡುಗಿ', 'ಬೇನ್ಯಾ', 'ಸಿದ್ಧಾರ್ಥ', 'ಕುಮಟೆಗೆ ಬಂದಾ ಕಿಂದರಜೋಗಿ', 'ಓಡಿ ಹೋದಾ ಮುಟ್ಟಿ ಬಂದಾ'- ಅವರ ಪ್ರಮುಖ ಕಥಾಸಂಕಲನಗಳು. 'ಮೂರು ದಾರಿಗಳು', 'ಛೇದ', 'ಪುರುಷೋತ್ತಮ', 'ಕೇಂದ್ರ ವೃತ್ತಾಂತ' ಅವರ ಕಾದಂಬರಿಗಳು.

ಯಶವಂತ ಚಿತ್ತಾಲ

(03 Aug 1928-22 Mar 2014)

Awards