ವಿಷ್ಣು ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ 1944 ಜುಲೈ 1ರಂದು ಜನಿಸಿದರು. ತಾಯಿ ಬುದವಂತಿ, ತಂದೆ ನಾಗಪ್ಪ. ಅಂಬಾರಕೊಡ್ಲ ಹಾಗೂ ಅಂಕೋಲಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಜಾನಪದ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತಿ, ಸಂಪಾದಕ, ಪ್ರಕಾಶಕ, ಸಂಘಟಕ ಹೀಗೆ ಅನೇಕ ಕ್ಷೇತ್ರದಲ್ಲಿ ಕೃಷಿ ಸಾಧಿಸಿದ್ದಾರೆ.
ರಾಘವೇಂದ್ರ ಪ್ರಕಾಶನದ ಮಾಲೀಕರು ಆಗಿದ್ದ ಇವರು ಬರೆದ ಪ್ರಮುಖ ಕೃತಿಗಳೆಂದರೆ ಸುಮನ, ಆ ರೀತಿ ಈ ರೀತಿ, ನನ್ನ ಅಂಬಾರಕೊಡಲು, ವಾಸ್ತವ, ಹೊಸಭತ್ತ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ, ನೋವು ಪ್ರೀತಿಯ ಪ್ರಶ್ನೆ (ಕವನ ಸಂಗ್ರಹಗಳು) ಕಣ್ಣೀರ ಕತೆಗಳು (ಸಂಕಲನ) ಅಯ್ನೋರ ಪೂಜೆ; ಒಂದು ಹನಿ ಮತ್ತು ಇತರ ಬೀದಿನಾಟಕಗಳು; ಯುದ್ಧ (ನಾಟಕಗಳು) ಡಾ. ಗೌರೀಶ ಕಾಯ್ಕಿಣಿ ಸಮಗ್ರ ಸಂಪುಟಗಳು (ಸಂಪಾದನೆ) ದುಡಿಯುವ ಕೈಗಳ ಹೋರಾಟದ ಕತೆ (ಮಾನವಿಕ) ಮುಂತಾದವು.
ಕೆ.ಎಚ್. ಪಾಟೀಲರ ಸಂಪಾದಕತ್ವದಲ್ಲಿ ಹೊರ ತರುತ್ತಿದ್ದ ‘ವಿಶಾಲ ಕರ್ನಾಟಕ’ ದೈನಿಕ ಪತ್ರಿಕೆಯ ಪಾಕ್ಷಿಕ ಅಂಕಣಕಾರರಾಗಿ, ಮಂಗಳೂರಿನ ವಡ್ಡರ್ಸೆ ರಘುರಾಮ ಶೆಟ್ಟರ ಸಂಪಾದಕತ್ವದಲ್ಲಿ ತರುತ್ತಿದ್ದ ‘ಮುಂಗಾರು’ ದೈನಿಕ ಪತ್ರಿಕೆಯ ವರದಿಗಾರರಾಗಿ, ‘ಕರಾವಳಿ ಮುಂಜಾವು’, ‘ಕರಾವಳಿ ಸುಪ್ರಭಾತ’, ‘ಮುನ್ನಡೆ’, ‘ತೇಜಸ್ವಿ ಪ್ರಪಂಚ’, ಮುಂತಾದ ಪತ್ರಿಕೆಗಳ ಅಂಕಣಕಾರರಾಗಿ ಕಾರ್ಯನಿರ್ವಹಣೆ. ಇವರ ಸಾಹಿತ್ಯ ಕೊಡುಗೆಗಾಗಿ ಕರ್ನಾಟಕ ರಾಜೊತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಗ್ರಂಥ ಪ್ರಕಾಶಕ ಪ್ರಶಸ್ತಿ, ಎಸ್.ವಿ. ಪರಮೇಶ್ವರ ಭಟ್ಟರ ಕನ್ನಡ ಪರಿಚಾರಕ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ, ಚೌಡಯ್ಯ ಸಾಹಿತ್ಯ ಪ್ರಶಸ್ತಿಗಳು ಅವರನ್ನರಸಿವೆ. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ರಾಜ್ಯ ಹಲವಾರು ಸಾಹಿತ್ಯ ಗೋಷ್ಠಿಗಳ ಅಧ್ಯಕ್ಷತೆಯ ಹಾಗೂ ಮತ್ತಿತರ ಗೌರವ ಪುರಸ್ಕಾರಗಳು ಅವರಿಗೆ ಸಂದಿವೆ.