ಡಾ. ಚನ್ನಪ್ಪ ಕಟ್ಟಿಯವರ ಪೂರ್ಣ ಹೆಸರು ಚನ್ನಪ್ಪ ಕನಕಪ್ಪ ಕಟ್ಟಿ. ಮೂಲತಃ ಗದಗ ಜಿಲ್ಲೆ, ರೋಣ ತಾಲ್ಲೂಕು ಹಿರೇಹಾಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಹಿರೇಹಾಳ ಗ್ರಾಮದಲ್ಲಿ ಮುಗಿಸಿದ ಅವರು ಮಾಧ್ಯಮಿಕ ಶಿಕ್ಷಣವನ್ನು ಶ್ರೀ ವೀರಪುಲಿಕೇಶಿ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಆನಂತರ ಶ್ರೀವೀರಪುಲಿಕೇಶಿ ಪದವಿ ಪೂರ್ವ ಮಹಾವಿದ್ಯಾಲಯ, ಬಾದಾಮಿಯಲ್ಲಿ ಪದವಿ ಪೂರ್ಣ ಶಿಕ್ಷಣ ಪಡೆದ ಅವರು, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡದಲ್ಲಿ ಇಂಗ್ಲಿಷ್ ನಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಆನಂತರ ಸಿಂದಗಿಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯ ಇಂಗ್ಲಿಷ್ ಪ್ರಾಧ್ಯಾಪಕನಾಗಿ 1929 ರಿಂದ ವೃತ್ತಿಜೀವನ ಆರಂಭಿಸಿದರು. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಪ್ರಕಟಿತ ಕೃತಿಗಳು- ‘ಎರಡು ಸೆಲೆ ಒಂದು ನೆಲೆ’ ( ಸ್ನೇಹಿತ ಪ್ರೊ.ನಾಗೇಶ ರಾಂಪುರ ಜೊತೆ), ‘ಇಂಡಿಯಾದಲ್ಲಿ’, ‘ನೆನಪುಗಳು ಸಾಯುವುದಿಲ್ಲ’, ‘ಸೂರ್ಯನಿಗೆ ಸಾವ ನೋಡಲು ಬೇಸರವಿಲ್ಲ’ ಮತ್ತು ‘ಮುಳುಗಡೆ ಮತ್ತು ಇತರ ಕತೆಗಳು’, ‘ಬೆಂಕಿ ಇರದ ಬೆಳಕು’, ‘ಏಕತಾರಿ’ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ‘ಬಬಲೇಶ್ವರ ಶಾಂತವೀರ ಪಟ್ಟಾಧ್ಯಕ್ಷರು’, ‘ಇಟಗಿ ಶ್ರೀ ಭೀಮಾಂಬಿಕೆ’ ಎಂಬ ಎರಡು ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ‘ಅರಕೇರಿ ಅಮೋಘಸಿದ್ದೇಶ್ವರ’, ‘ಅಮೋಘಸಿದ್ಧ ಪರಂಪರೆ’(ಮಹಾ ಪ್ರಬಂಧ), ‘ಕುರುಬ ಮಹಿಳೆ’ ಎಂಬ ಸಂಶೋದನಾ ಕೃತಿಗಳನ್ನು ರಚಿಸಿದ್ದಾರೆ. 'ಸಾರಣೆ' ಚನ್ನಪ್ಪ ಕಟ್ಟಿ ಅವರ ವಿಮರ್ಶಾ ಕೃತಿ.