ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಚಂದ್ರಕಾಂತ ಕರದಳ್ಳಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1985) ಪದವಿ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ ನಿವೃತ್ತರಾದರು.
ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಿಸು ಸಂಗಮೇಶ ದತ್ತಿನಿಧಿ ಪ್ರಶಸ್ತಿ ದೊರೆತಿದೆ.
ನಲವತ್ತು ಕೃತಿಗಳನ್ನು ಪ್ರಕಟಿಸಿದ ಕರದಳ್ಳಿ ಅವರ 'ಕಾಡು ಕನಸಿನ ಬೀಡಿಗೆ' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಬಾಲಸಾಹಿತ್ಯ ಪುರಸ್ಕಾರ ಪ್ರಕಟಿಸಲಾಗಿದೆ.