ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು.
ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ಸದಸ್ಯರಾಗಿ, ಕರ್ನಾಟಕ ಸರಕಾರದ ಪದವಿ ಪೂರ್ವ ತರಗತಿಗಳಿಗೆ ಹಿಂದಿ ಪಠ್ಯಪುಸ್ತಕ ರಚನಾ ಸಮಿತಿ, ವಿಶ್ವವಿದ್ಯಾಲಯ ಶಿಕ್ಷಣ ಮಂಡಳಿ, ಸೆನೆಟ್, ವಿಶ್ವವಿದ್ಯಾಲಯ ಕಲಾ-ಸಂಕಾಯದ ವಿಶೇಷಜ್ಞರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆಥರ್ಸ್ ಗಿಲ್ಡ್ ಆಫ್ ಇಂಡಿಯಾ ದೆಹಲಿ, ಕರ್ನಾಟಕ ಲೇಖಕರ ಸಂಘ, ಅನುವಾದಕ ಪರಿಷತ್ ಹೊಸ ದೆಹಲಿ ಮುಂತಾದುವುಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ವ್ಯಾಕರಣ ಕೈಪಿಡಿ, ಕೋಡ್ಗಲ್ಲಿನ ಕೂಗು, ಮಿರ್ಚಿ ಬಾಬಾ ಮತ್ತು ಇತರ ಕಥೆಗಳು, ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಸ. ಖಾಂಡೇಕರ, ವಿಭೂತಿಯಾಂ, ಯುಗಾಂತ, ನಮ್ಮ ಮನೆ, ಚಿಂತನ-ಮಂಥನ, ಭಗತ್‌ಸಿಂಗ್, ಪ್ರಾಯೋಗಿನ ಕನ್ನಡ ವ್ಯಾಕರಣ, ಡಾ. ಸಿದ್ಧಲಿಂಗ ಸ್ವಾಮಿಗಳು ಮುಂತಾದುವು. ಕನ್ನಡದಿಂದ ಹಿಂದಿಗೆ-ಅನಂತ ಮೂರ್ತಿಯವರ ಭಾರತೀಪುರ, ಅವಸ್ಥೆ, ವೈಕುಂಟರಾಜುರವರ ಉದ್ಭವ, ಶ್ರೀಕೃಷ್ಣ ಆಲನಹಳ್ಳಿಯವರ ದುಃಖಭರಾ ರಾಗ, ಭೈರಪ್ಪನವರ ಛೋರಾ, ವೀಣಾಶಾಂತೇಶ್ವರರ ಮೋಡ್, ಹಿಂದಿಯಿಂದ ಕನ್ನಡಕ್ಕೆ-ಜೈನಾ ಪಾರಿಭಾಷಿಕ ಕೋಶ, ಕಾಗೆಗಳು ಮತ್ತು ಕಾಲಾಪಾನಿ. ವಿಭೂತಿಯಾಂ (ಹಿಂದಿ), ಮಿರ್ಚಿ ಬಾಬಾ ಮತ್ತು ಇತರ ಕಥೆಗಳು (ಕನ್ನಡ), ಭಾರತೀಯ ಕಾವ್ಯಮೀಮಾಂಸೆ (ಹಿಂದಿ), ಯುಗಾಂತ (ನಾಟಕ-ಕನ್ನಡ), ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ದುಃಖಭರಾ ರಾಗ (ಹಿಂದಿ) ಗುಲಬರ್ಗಾ ವಿ.ವಿ.ದ ಬಿ.ಎ, ಬಿ.ಎಸ್.ಸಿ, ಎಂ.ಎ. ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ. ಆಕಾಶವಾಣಿ ಗುಲಬರ್ಗಾದ ಕಾರ್ಯಕ್ರಮಗಳ ಅನುವಾದಕ್ಕಾಗಿ ಎರಡು ಬಾರಿ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದಾರೆ, ಉದಯೋನ್ಮುಖ ಬರಹಗಾರರ ಬಳಗ-ಗುಲಬರ್ಗಾದಿಂದ ಕಾರ್ಯ ಸಮ್ಮಾನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ.