ಹೊಸ್ತೋಟ ಮಂಜುನಾಥ ಭಾಗವತರು 50 ವರ್ಷ ಕಲಿಸಿದ ಯಕ್ಷಗಾನ ಶಿಕ್ಷಣದ ಸಾರ ಸರ್ವಸ್ವವನ್ನು ಇಲ್ಲಿ ಪ್ರಕಟವಾಗುತ್ತಿದೆ. ಮದ್ದಲೆಯ ಹಳೆತು ಮತ್ತು ಹೊಸ ಹೊಳಹಿನ ಬಿಡ್ತಿಗೆಗಳು, ಪಟ್ಟು - ಪೆಟ್ಟನ್ನು ಹೊಸ್ತೋಟರು ಅಭ್ಯಾಸಕ್ಕೆ ಅನುವಾಗುವಂತೆ ದೊರಕಿಸಿದ್ದಾರೆ. ಇದು ಹೊಸ್ತೋಟದವರ ಕ್ರಮವಷ್ಟೇ ಆಗಬಾರದೆಂದು ಅವರು ಯಕ್ಷಗಾನವನ್ನು ಭಾಷಿಕವಾಗಿ ಅಂದರೆ ಕಲೆಯ ವ್ಯಾಕರಣದ ರೂಪದಲ್ಲಿ ಕಲಿಯಲು ಬರುವಂತೆ, ಆಕೃತಿಯ ನಿಯಮಗಳು, ರಂಗ ರೇಖೆಗಳು, ಚಲನೆ ಇತ್ಯಾದಿಗಳನ್ನು ಚಿತ್ರ ಸಹಿತ ವಿವರಿಸಿದ್ದಾರೆ.
ಲಯವನ್ನು ಲಯಗಣಿತದ ಮೂಲಕ ಕಲಿಸುವುದು ಹೊಸ್ತೋಟ ಭಾಗವತರ ವಿಶೇಷ. ಅದರ ಗತ್ತು-ಗೊತ್ತು ಈ ಪುಸ್ತಕದಲ್ಲಿದೆ. ಯಕ್ಷಗಾನ ಸಾಹಿತ್ಯದ ಮಟ್ಟು-ಗುಟ್ಟು ಮತ್ತು ಅವನ್ನು ಬಳಸುವ ವಿಧಾನ-ಛಂದಸ್ಸು ಇದರಲ್ಲಿ ಲಭ್ಯ. ಯಕ್ಷಗಾನದ 90 ರಾಗಗಳ ಸ್ವರ ಪ್ರಸ್ತಾಪಿಸಿ ಗುರು ಮುಖೇನ ಕಲಿಯಲು ಅಭ್ಯಾಸಕ್ಕೆ, ನೆನಪಿಗೆ ನೀಡಲಾಗಿದೆ. ಅರ್ಥಗಾರಿಕೆ ಹೇಗೆ ಔಚಿತ್ಯ ಹೇಗೆ ಎಂಬ ವಚನ ರಚನಾತಂತ್ರವೇ ಇಲ್ಲಿ ಅನಾವರಣಗೊಂಡಿದೆ. ಅಭಿನಯ-ಔಚಿತ್ಯವನ್ನು ಸೋದಾರಣ ಇಲ್ಲಿ ನೀಡಲಾಗಿದೆ. ಕೃಷ್ಣಯಾಜಿ ಇಡಗುಂಜಿ ಅವರು ಚಂಡೆಯ ವಿವರ ನುಡಿಸುವ ಕ್ರಮ ಇವೆಲ್ಲವನ್ನು ಈ ಗ್ರಂಥಕ್ಕಾಗಿ ಒದಗಿಸಿದ್ದಾರೆ. ಶಂಕರ ಭಾಗವತರು ಮತ್ತು ಅನಂತ ಪಾಠಕರು ಮದ್ದಲೆಯ ನುಡಿತ ಬಡಿತಗಳ ಬಿಂಬ ಒದಗಿಸಿದ್ದಾರೆ.
ದಶಮಾನೋತ್ಸವ ಆಚರಿಸಿದ ಭಾರತದ ಹೊರಗಿರುವ ಪ್ರಥಮ ಯಕ್ಷಗಾನ ಮೇಳ - ಯಕ್ಷಮಿತ್ರ ಟೊರಾಂಟೋ ಈ ಪುಸ್ತಕವನ್ನು ಸಂಪಾದಿಸಿ ಪ್ರಕಾಶಿಸುತ್ತಿದೆ. ಈ ಪುಸ್ತಕದಲ್ಲಿ ವಿವರಿಸಿದ ಪ್ರಾತ್ಯಕ್ಷಿಕೆಗಳ ವೀಡಿಯೋಗಳು ಕೆಲ ಕಾಲದ ನಂತರ www.yakshamitra.com/shikshana ಇಲ್ಲಿ ಲಭ್ಯವಾಗುತ್ತದೆ. ಇವಿಷ್ಟೇ ಅಲ್ಲದೇ, ಬೇರಾರಿಗೂ ನಿಲುಕದ ಹೊಸ್ತೋಟ ಮಂಜುನಾಥ ಭಾಗವತರ ಯಕ್ಷಗಾನದ ಬಗೆಗಿನ ಒಳನೋಟ ಇಲ್ಲಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತ 200ಕ್ಕೂ ಹೆಚ್ಚು ಪ್ರಸಂಗ ಬರೆದ ಈ ಕವಿ, ಛಂದಶಾಸ್ತ್ರಜ್ಞರೂ, ಯಕ್ಷಗಾನದ ಒಬ್ಬ ಶ್ರೇಷ್ಟ ಗುರುವೂ ಆದ ಹೊಸ್ತೋಟ ಮಂಜುನಾಥ ಭಾಗವತರು, ತ್ರಿಶಾಸ್ತ್ರ ಪಂಡಿತರಾದ ಒಬ್ಬ ಋಷಿ: ಇದು ಋಷಿ ಸಂಹಿತೆ ಎಂದರೆ ಅತಿಶಯೋಕ್ತಿಯಲ್ಲ. ಕಟು ಚಿಕಿತ್ಸೆಯ ಖಗ್ಣ ಶಯ್ಯೆಯಲ್ಲಿರುವ ಈ ಹಿರಿ ಚೇತನ ನಮಗೆಲ್ಲ ಕೊಡುತ್ತಿರುವ ಬಿಡುತ್ತಿರುವ ಸಂಪತ್ತು-ಸಂಹಿತೆ ಯಕ್ಷಗಾನ ಶಿಕ್ಷಣ-ಲಕ್ಷಣ ಎಂಬ ಈ ಗ್ರಂಥ.
ಯಕ್ಷಗಾನದ ವಿದ್ವಾಂಸ ಡಾ ಎಂ. ಪ್ರಭಾಕರ ಜೋಷಿ ಮುನ್ನುಡಿ ಬರೆದಿದ್ದಾರೆ. ರಾಗು ಕಟ್ಟಿನಕೆರೆ ಅವರ ಸಂಕಲನ/ಸಂಪಾದನವಿದೆ.
©2024 Book Brahma Private Limited.