‘ಎಪ್ಪತ್ತು ತಿರುಗಾಟಗಳು’ ಕೃತಿಯು ಸೂರಿಕುಮೇರು ಕೆ. ಗೋವಿಂಧ ಭಟ್ ಅವರ ಯಕ್ಷಗಾನ ಕ್ಷೇತ್ರದ ಕುರಿತ ಬರವಣಿಗೆಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಲಕ್ಷ್ಮೀಶ ತೋಳ್ಪಾಡಿ ಅವರು, ಈ ಕಥನದ ಉದ್ದಕ್ಕೆ ತಾನು ಹೊಟ್ಟೆಪಾಡಿಗಾಗಿ ಯಕ್ಷಗಾನಕ್ಕೆ ಬಂದವನು ಎಂಬ ಮಾತನ್ನು ಗೋವಿಂದಣ್ಣ ಹೇಳುತ್ತಲೇ ಬಂದಿದ್ದಾರೆ, ಮರೆಯದೆ. ಇಷ್ಟು ದೊಡ್ಡ ಕಲಾವಿದ ಈ ಮಾತನ್ನು ಮತ್ತೆ ಮತ್ತೆ ಹೇಳುತ್ತಿರುವುದು ಅವರು ಕಲಿತ ಬದುಕಿನ ಪಾಠವೂ ಜೊತೆಗೆ ಕಲೆಯ ಪಾಠವೂ ಹೌದಾಗಿದೆ ಎಂದಿದ್ದಾರೆ. ಕಲೆಯ ಪಾಠ ಹೇಗೆಂದರೆ ಸದೃಶ್ಯವಾದದ್ದು ಭಾವದ ಉತ್ಕಟತೆಗೆ ನೆರವಾಗುವುದು ಮಾತ್ರವಲ್ಲ ವಿದೃಶ್ಯವಾದದ್ದು ತನ್ನದೇ ರೀತಿಯಲ್ಲಿ ನೆರವಾಗಬಲ್ಲುದು ಎಂಬ ಪಾಠ ಒಂದು ಉದಾಹರಣೆಯಾಗಿದೆ. ವಿದುರನಲ್ಲಿಗೆ ಕೃಷ್ಣ ಬಂದಿದ್ದಾನೆ. ತನ್ನ ಇಷ್ಟದೈವವೇ ತನ್ನಲ್ಲಿಗೆ ನಡೆದು ಬಂದುದನ್ನು ನೋಡಿ ವಿದುರ ಭಾವಸಮಾಧಿಯನ್ನು ಅನುಭವಿಸುತ್ತ ಆನಂದದ ಉತ್ಕಟತೆಯಲ್ಲಿ ಕೃಷ್ಣನನ್ನು ಬಗೆಬಗೆಯಾಗಿ ಸ್ತುತಿಸುತ್ತಾನೆ. ಹಾಡಿ ಹೊಗಳುತ್ತಾನೆ. ಆಗ ದೇವರ ದೇವ ಕೃಷ್ಣ ಮಾತನಾಡುವ ಪರಿ ಇದು; “ಹಸಿದು ನಾವೈತಂದರೀಪರಿ ಮಸಗಿ ಕುಣಿದಾಡಿದೊಡೆ ತನಗೆ ತಣಿವಹುದೆ?” ’ ಈ ಪರಿ ಸ್ತುತಿಸಿದರೆ ಹಸಿವಡಗುವುದೆ?’, ’ನಾಚಿಸದಿರೈ ವಿದುರ’- ಇಂಥಾ ಮಾತುಗಳು. ಇವು ಎಂಥಾ ಮಾತುಗಳು! ಭಕ್ತಿಯ ಆವೇಶಕ್ಕೆ ಭಗವಂತನು ಸ್ಪಂದಿಸುವ ಈ ರೀತಿ ಕಲೆಯ ಉಚ್ಚಾಂಕವೇ ಆಗಿದೆ. ಅಂದರೆ ಭಕ್ತನನ್ನು ಮೆಲ್ಲಗೆ ಇಲ್ಲಿನ ವಾಸ್ತವಕ್ಕೆ ಎಳೆಯುವಂಥಾ ಮಾತುಗಳು ಮತ್ತೆ ಪ್ರೀತಿಯ ಅಲೆಗಳನ್ನು ಹೆದ್ದೆರೆಗಳಾಗಿಸುತ್ತವೆ. ಆದುದರಿಂದಲೇ ಗೋವಿಂದ ಭಟ್ಟರು ತಮ್ಮದು ‘ಹೊಟ್ಟೆಯ ಪಾಡು’ ಎಂದರೆ ಅದು ಒಂದು ಮುಖ. ‘ಕಲೆ’ ಯೇ ತನ್ನ ಹಸಿವನ್ನು ತಣಿಯಿಸಲು ಇವರನ್ನು ಬಳಿಗೆ ಎಳೆದುಕೊಂಡಿತು ಎಂದರೆ ಅದು ಇನ್ನೊಂದು ಮುಖ ಎನ್ನುತ್ತಾರೆ.
©2025 Book Brahma Private Limited.