ಜಕ್ಕಣ್ಣನ ಐತಿಹಾಸಿಕತೆ ಏನೇ ಇರಲಿ, ಬಹುತೇಕ ಶಿಲ್ಪಿಗಳು ‘ಆಚಾರ್ಯ’, ‘ಆಚಾರಿ’, ಮತ್ತು ‘ಓಜ’ ಎಂಬ ನಾಮಾಂತ್ಯವನ್ನು ಹೊಂದಿದ್ದರೆಂಬುದರಲ್ಲಿ ಅನುಮಾನವಿಲ್ಲ. ಪ್ರಾಕೃತ ಪದ ‘ಉಪಜ್ಝಾಯ’ ಸಂಸ್ಕೃತ ಪದ ‘ಉಪಾಧ್ಯಾಯ’ದಿಂದ ಬಂದ ಈ ‘ಓಜ’ ಪದದ ಅರ್ಥ ಮತ್ತು ‘ಆಚಾರ್ಯ’ ಪದದ ಅರ್ಥ ಒಂದೇ. ಅವು ‘ಅಧ್ಯಾಪಕ’, ‘ಗೌರವಾನ್ವಿತ’, ‘ಪೂಜಾರ್ಹ’ ಎಂಬುದನ್ನು ಸೂಚಿಸುವವು. ಈ ಜಗತ್ತನ್ನು ಸೃಷ್ಟಿಸಿದ ವಿಶ್ವಕರ್ಮನ(ಅಂದರೆ ಕೆಲವು ಗ್ರಂಥಗಳಲ್ಲಿ ಪ್ರತಿಪಾದಿಸಿರುವಂತೆ ಶಿವನ)ವಂಶವೆಂದೇ ಕಲಾಕಾರರೆಲ್ಲರೂ ಪ್ರತಿಪಾದಿಸಿಕೊಳ್ಳುವರು. ಶಿವ ‘ಪಂಚಾನನ’ ಅಥವಾ ಐದು ಮುಖದವನು (ಅವನ ಉಳಿದ ನಾಲ್ಕುಮುಖಗಳೆಂದರೆ ವಿಶ್ವಕರ್ಮ, ಮನು, ತ್ವಷ್ಟರ್, ಮತ್ತು ಮಯ) ಆದುದರಿಂದ ಅವನ ವಂಶಜರು ಪಾಂಚಾಳರೆಂದು ಪ್ರಸಿದ್ಧರಾದರು. ಶಿಲ್ಪವನ್ನೊಳಗೊಂಡ ಪಂಚಕಲೆಗಳಲ್ಲಿ ಇವರು ನಿಷ್ಣಾತರೆನಿಸಿದರು. ಮೂರ್ತಿಗಳನ್ನು ರೂಪಿಸುವುದರಲ್ಲಿ ಪರಿಣತಿ ಪಡೆದ ಇವರನ್ನು ‘ರೂಪಕಾರ’ ಎಂದೇ ಗುರುತಿಸಲಾಗಿದೆ. ಈ ಪದವೇ ‘ರೂವಾರಿ’ ಎಂದು ಮಾರ್ಪಾಟುಗೊಂಡಿತು. ಹಲವಾರು ಚಾಳುಕ್ಯ, ಹೊಯ್ಸಳ ಶಿಲ್ಪಿಗಳು ‘ಆಚಾರ್ಯ’, ‘ಆಚಾರಿ’, ‘ಓಜ’ ನಾಮಾಂತ್ಯಗಳನ್ನು ಹೊಂದಿರುವುದನ್ನು ನೋಡಬಹುದು.
©2025 Book Brahma Private Limited.