ಫೋಟೊಗ್ರಫಿ ಮಾಡಲು ಕ್ಯಾಮೆರ ಇರಲೇ ಬೇಕಂತಿಲ್ಲ. ಬರಿಗಣ್ಣಿನಲ್ಲಿಯೇ ಫೋಟೊ ಕ್ಲಿಕ್ಕಿಸಬಹುದು. ಹೀಗೆ ಸರಳವಾಗಿ ಸುಲಭವಾಗಿ ಆಡುಭಾಷೆಯಲ್ಲಿ ಫೋಟೊಗ್ರಫಿಯನ್ನು ಹೇಳಿಕೊಡುವ ಈ ಪುಸ್ತಕ ಕೊನೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಛಾಯಾಗ್ರಾಹಕರಾಗಲು ದಾರಿ ತೋರುತ್ತದೆ. ಫೋಟೊಗ್ರಫಿ ಕಲಿಕೆಯ ವಿಚಾರದಲ್ಲಿ ಕನ್ನಡದಲ್ಲಿ ಈ ರೀತಿಯ ಇದೇ ಮೊದಲನೆಯದು. ಈ ಕೃತಿಯು ಎರಡನೇ ಮುದ್ರಣ ಕಂಡಿದೆ.
ಅಲ್ಬ ಬೆಲೆಯ ಕ್ಯಾಮೆರಕ್ಕೂ ಅತಿ ದುಬಾರಿಯ ಕ್ಯಾಮೆರಕ್ಕೂ ಇರುವ ವ್ಯತ್ಯಾಸವನ್ನು ತೋರಿಸಲು ಶಿವು ಕೊಟ್ಟ ಉಪಮೆಯನ್ನು ಗಮನಿಸಬೇಕು. ಕಾರ್ಫೋರೇಟ್ ಕಛೇರಿಯ ಕಸಗುಡಿಸುವ ಸಿಬ್ಬಂದಿಯಾಗಲು ಯೋಗ್ಯರಾದವರು ಕ್ರಮೇಣ ಉನ್ನತ ದರ್ಜೆಯ ಅಧಿಕಾರಿಯಾಗುವ ಅರ್ಹತೆಯನ್ನು ಪಡೆಯುವುದು ಹೇಗೆಂದು ಹಂತಹಂತವಾಗಿ ಹೇಳುತ್ತಾ ಫೋಟೊಗ್ರಫಿಯ ಮಜಲುಗಳನ್ನು ವಿವರಿಸುತ್ತಾರೆ. ಇಲ್ಲಿ ನಮಗೆ ಕಾಣುವುದು ಶಿವು ಸಾಧಿಸಿದ ಕ್ಯಾಮೆರ ಪರಿಣತಿ ಅಷ್ಟೆ ಅಲ್ಲ, ಅದನ್ನು ಓದುಗರಿಗೆ ತಿಳಿಸಿ ಹೇಳುವ ನಿರೂಪಣ ವಿಧಾನದಲ್ಲೂ ಅವರ ಹಿಡಿತ ಮತ್ತು ಹೊಸತನ ಕಾಣುತ್ತದೆ.
"ಕಲಾತ್ಮಕ ಚಿತ್ರಗಳನ್ನು ಓದುವುದು ಹೇಗೆ" ಎಂಬ ಅಧ್ಯಾಯದಲ್ಲಿ ಇರವ ಕಥನ ಶೈಲಿ ಡಾಳಾಗಿ ಎದ್ದು ಕಾಣುತ್ತದೆ. ಇಲ್ಲಿನ ನಿರೂಪಣೆ ಹೇಗಿದೆಯೆಂದರೆ ಯಾವ ಚಿತ್ರವೂ ಇಲ್ಲದಿದ್ದರೂ ಈ ಪುಸ್ತಕ ಸೊಗಸಾಗಿ ಓದಿಸಿಕೊಂಡು ಹೋಗುತ್ತದೆ. ಚಿತ್ರಗಳಿಲ್ಲದ್ದರಿಂದಲೇ ಕೆಲವು ಪುಟಗಳಿಗೆ ಕಥಾ ಸ್ವರೂಪ ಬಂದಿದೆ. ಕ್ಯಾಮೆರಕ್ಕೇ ತೂರಿಸುವ ಮೆಮೆರಿ ಕಾರ್ಡುಗಳ ಗುಣಮಟ್ಟವನ್ನು ಹೇಳುವಾಗ ಇವರು ಓಟಗಾರರನ್ನು ಮತ್ತು ಪೆಲಿಕನ್ ಪಕ್ಷಿಯನ್ನು ಎಳೆದು ತರುತ್ತಾರಲ್ಲ, ಆಗ ಅಲ್ಲಿ ಚಿತ್ರಗಳು ಬೇಕಾಗಿಯೇ ಇಲ್ಲ. ಮುದ್ದಾದ ಈ ಪುಸ್ತಕದಲ್ಲಿ ನನಗೆ ತುಂಬಾ ಇಷ್ಟವಾಗಿದ್ದು "ನೇಚರ್ ಫೋಟೊಗ್ರಫಿ”.
ಅಧ್ಯಾಯ ರಾಬರ್ ಪ್ಲೈ ಎಂಬ ನೊಣವೊಂದು ರಾಮಚಿಟ್ಟೆಯನ್ನು ಹಿಡಿದು ಅದರ ಕತ್ತಿನೊಳಗೆ ಸೂಜಿಯಂಥ ಕೊಳವೆಯನ್ನು ತೂರಿಸಿ "ಟ್ರೂಟಿ-ಪ್ರೂಟಿಯಂತೆ’ ದೇಹದ್ರವವನ್ನು ಹೀರುವ ದೃಶ್ಯವನ್ನು ವರ್ಣಿಸುವಾಗ ಅಲ್ಲಿ ನಮಗೆ ಶಿವು ಎಂಬ ಫೋಟೊಗ್ರಾಫರ್ ಸಂಪೂರ್ಣ ಮರೆಯಾಗಿ ಯಾವುದೋ ನಿಸರ್ಜ ವಿಜ್ಞಾನಿಯೊಬ್ಬ ಪರಕಾಯ ಪ್ರವೇಶ ಮಾಡಿದ ಚಿತ್ರಣ ಸಿಗುತ್ತದೆ. ಜೀವ ವಿಜ್ಞಾನ ಪಠ್ಯಗಳಲ್ಲಿ ಇಂಥ ಸೊಗಸಾದ ವರ್ಣನೆಗಳು ಏಕಿರುವುದಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. -ನಾಗೇಶ್ ಹೆಗಡೆ
©2024 Book Brahma Private Limited.