ಲೇಖಕ ಹಾಗೂ ಛಾಯಾಚಿತ್ರಗ್ರಾಹಕ ಡಿ.ಜಿ. ಮಲ್ಲಿಕಾರ್ಜುನ ಅವರ ಕೃತಿ-ಅರೆಕ್ಷಣದ ಅದೃಷ್ಟ. ಸಾಹಿತಿ-ಚಿಂತಕ ಎ.ಕೆ.ರಾಮಾನುಜನ್ ಹೇಳಿದಂತೆ "ಕಣ್ಣೆದುರಿಗಿರುವುದನ್ನುಕಾಣುವುದಕ್ಕೂ ಅದೃಷ್ಟ ಬೇಕು". ಛಾಯಾಚಿತ್ರಗಾರನಿಗೆ ಈ ಮಾತು ಇನ್ನಷ್ಟು ಚೆನ್ನಾಗಿ ಒಪ್ಪುತ್ತದೆ. ಬದುಕಿನ ಅನಂತ ಕ್ಷಣಗಳಲ್ಲಿ ದಿಢೀರನೆ ಸಿಕ್ಕಿಬಿಡುವ ಕೆಲವು ಅಮೂಲ್ಯ ಹಾಗೂ ಸುಂದರ ಫ್ರೇಮ್ ಗಳನ್ನು ಸೆರೆಹಿಡಿಯಲು ಸಾಧ್ಯವಾಗುವುದು ಅಂಥ ಅದೃಷ್ಟದಿಂದಲೇ. ಇದು ಭಾವವಿನಯದ ರೂಪವೂ ಹೌದು. ನಿಸರ್ಗವೆಂಬುದು ಒಂದು ಅಕ್ಷಯ ಚಿತ್ರಕೂಟ. ತೆಗೆದಷ್ಟೂ ಕೌತುಕಮಯ ದೃಶ್ಯಗಳು ಮೂಡುತ್ತಲೇ ಇರುತ್ತವೆ. ಹವ್ಯಾಸಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನರಿಗೆ ಆ ಹಾದಿಯಲ್ಲಿ ಎದುರಾದ ಹಕ್ಕಿ, ಹೂವು, ಚಿಟ್ಟೆ, ಕೀಟಗಳೆಲ್ಲ ಈ ಪುಸ್ತಕದಲ್ಲಿ ನೀವು ಭೇಟಿಯಾಗಬಹುದು. ಅವುಗಳ ಕತೆಯನ್ನೂ ಕೇಳಬಹುದು. ಥಟ್ಟನೆ ಪ್ರತ್ಯಕ್ಷವಾಗಿ ಸಟ್ಟನೆ ಅಂತರ್ಧಾನವಾಗುವ ಈ ಅತಿಥಿಗಳ "ಚಿತ್ರಬಂಧನ" ಸುಲಭವಲ್ಲ. ಅವು ಸೂಕ್ತ ಬೆಳಕಿಲ್ಲದಾಗಲೋ, ಅಂದಗೆಡಿಸುವ ಹಿನ್ನೆಲೆಯಲ್ಲಿಯೋ, ಕ್ಯಾಮೆರಾದಲ್ಲಿ ಬ್ಯಾಟರಿ ಖಾಲಿಯಾದಾಗಲೋ ಮುಖ ತೋರಿ ಕಣ್ಣು ಮಿಟುಕಿಸುವುದೇ ಹೆಚ್ಚು. ತಾಳ್ಮೆಯಿಂದ ಇವನ್ನೆಲ್ಲ ಸಹಿಸಿಕೊಂಡು ಚೆಂದದ ಚಿತ್ರವೊಂದನ್ನು ಹಿಡಿಯುವುದು ಒಂದು ಪುಟ್ಟ ತಪಸ್ಸೆ! ಇದು ಮಲ್ಲಿಕಾರ್ಜುನರ ಕಣ್ಣು ಹಾಗೂ ಮನಸ್ಸಿಗೆ ಒಲಿದಿದ್ದನ್ನು ಮನವರಿಕೆ ಮಾಡಿಕೊಡುವ ಕೃತಿ ಇದು.
ಕಾಣಲು ಬರೀ ಕಣ್ಣು ತೆರೆದಿದ್ದರೆ ಸಾಲದು. ಕಾಣಲು ಮನಸ್ಸು ಬೇಕು. ಆಸಕ್ತಿ, ಕುತೂಹಲ, ಜೀವನಪ್ರೀತಿ ಎಲ್ಲವೂ ಬೇಕು. ಅಂತಹ ತೆರೆದ ಮನಸ್ಸಿನ "ಚಿತ್ರಕಾರ" ಮಲ್ಲಿಕಾರ್ಜುನ. ನಮ್ಮ ಸುತ್ತಮುತ್ತಲಿನ ಜೀವಜಗತ್ತಿಗೆ ಕಣ್ಣು ತೆರೆಸಿದ್ದಾರೆ. ಕಣ್ಣಿದ್ದರೂ ನಾವು ಕಾಣದಿದ್ದ ಈ ಜಗತ್ತಿನ ಬಣ್ಣಗಳಿಗೆ, ಸೋಜಿಗಗಳಿಗೆ, ಕೌತುಕಗಳಿಗೆ ಕನ್ನಡಿ ಹಿಡಿದಿದ್ದಾರೆ.
"ಅರೆಕ್ಷಣದ ಅದೃಷ್ಟ" ಓದುಗರಾದ, ಕಾಣುಗರಾದ ನಮ್ಮದು. ಇವು "ಅದೃಷ್ಟ" ಮಾತ್ರದಿಂದ ತೆಗೆದ ಚಿತ್ರಗಳಲ್ಲ. ಅದೃಷ್ಟ ಕೂಡ ಆಕಸ್ಮಿಕವಾಗಿ ಆಗಮಿಸುವುದಿಲ್ಲ. ಇಲ್ಲಿ ನಾವು ಕಾಣುವ "ಅದೃಷ್ಟ", ಸಿದ್ಧ ಮನಸ್ಸಿಗೆ ಧ್ಯಾನಸ್ಥ ಮನಸ್ಸಿಗೆ ಮಾತ್ರ ಸಿದ್ಧಿಸಬಲ್ಲದು. ಇವು ನಿರಾಯಾಸವಾಗಿ ತೆಗೆದ ಚಿತ್ರಗಳಲ್ಲ ಎಂದು ನೋಡಿದೊಡನೆ ಕಾಣಬಲ್ಲಿರಿ. ಇಲ್ಲಿಯ ಚಿತ್ರಗಳಲ್ಲಿ ಅವರ ಸಹನೆ, ಪರಿಶ್ರಮ, "ಕಾಣುವ" ಕಣ್ಣು, ಸೂಕ್ಷ್ಮ ಮನಸ್ಸು, ತಂತ್ರ, ಕೈಚಳಕ ಮಾತ್ರವಲ್ಲ, ಕಂಡ ಜಗತ್ತನ್ನು ಚಿತ್ರಗಳಲ್ಲಿ ಮತ್ತು ಆತ್ಮೀಯ ವಿವರಣೆಗಳ ಮೂಲಕ ನಮ್ಮ "ಅನುಭವ"ಕ್ಕೆ ತರುವ ಅದ್ಭುತ ಪರಿ ಇಲ್ಲಿದೆ.
ದಿಟವಾಗಿ ನೋಡಿದರೆ "ಅದೃಷ್ಟ" ಓದುಗರಾದ ನಮ್ಮದು. ಅವರ ಅಷ್ಟೆಲ್ಲ ಪರಿಶ್ರಮ, ಸೃಜನಶೀಲತೆ, ಚಿತ್ತೈಕಾಗ್ರತೆ, ತನ್ಮಯತೆಯ ಫಲವಾದ ಈ ಪುಸ್ತಕವನ್ನು ನಿರಾಯಾಸವಾಗಿ "ಕಾಣುವ-ಓದುವ" ಅದೃಷ್ಟ ನಮ್ಮದು. ಮಲ್ಲಿಕಾರ್ಜುನ ಅವರು ಈ ಪುಸ್ತಕದ ಮೂಲಕ ಹೊಸದೊಂದೇ ಚಿತ್ರಪ್ರಬಂಧ ಪ್ರಕಾರಕ್ಕೆ ಹುಟ್ಟುಹಾಕಿದ್ದಾರೆ. ಅದ್ಭುತ ಚಿತ್ರಗಳೊಡನೆ, ಲವಲವಿಕೆಯ ಅನುಭವ ಕಥನವಿದೆ, ಭಾರವಾಗದ ವೈಜ್ಞಾನಿಕ ವಿವರಗಳಿವೆ, ಕುತೂಹಲದ ಕಣ್ಣಿದೆ. ಈ ಪುಸ್ತಕವನ್ನು ಪ್ರತಿಯೊಬ್ಬ ಪ್ರಾಧ್ಯಾಪಕರೂ, ಪೋಷಕರೂ, ವಿದ್ಯಾರ್ಥಿಗಳೂ ಓದಬೇಕು ಎಂಬುದು ನನ್ನ ಆಸೆ. ನಮ್ಮ ಎಳೆಯ ಮಕ್ಕಳೆದುರು ಸುತ್ತಲಿನ ಜೀವಜಗತ್ತನ್ನು ತೆರೆದಿಡುವ ಪರಿಯನ್ನು ಕಲಿಸುತ್ತದೆ, ಪರಿಸರ ಪ್ರೀತಿಯನ್ನು ಕಲಿಸುತ್ತದೆ. ಕಲಿಯುವ ಕ್ರಿಯೆಯನ್ನು ಸಹಜ ಸಂತಸ ಅನುಭವವಾಗಿಸಬಲ್ಲ ಪುಸ್ತಕವಿದು.
- ನೇಮಿಚಂದ್ರ, ಸಾಹಿತಿ
©2025 Book Brahma Private Limited.